ಮಕ್ಕಳಿಗೆ ಹೆತ್ತವರು ಎಷ್ಟು ಸ್ವಾತಂತ್ರ್ಯ ಕೊಡಬೇಕು?
“ತಂದೆ ತಾಯಿಗಳು ಅವರ ಮಕ್ಕಳಿಗೆ ಎಷ್ಟು ಸ್ವಾತಂತ್ರ್ಯ ಕೊಡಬೇಕು” ಎಂದು ಮಾಜಿ ಕ್ರಿಕೆಟ್ ಆಟಗಾರ ವಿ ವಿ ಎಸ್ ಲಕ್ಷಣ್ ಅವರು ಸದ್ಗುರುಗಳನ್ನು ಕೇಳುತ್ತಾರೆ.
ವಿವಿಎಸ್ ಲಕ್ಷ್ಮಣ್ : ಮಕ್ಕಳ ಪಾಲನೆಪೋಷಣೆ ಬಗ್ಗೆ ನಾನು ಸತ್ಯ ತಿಳಿದುಕೊಳ್ಳಬೇಕು. ಮಗುವಾಗಿ ಮತ್ತು ಯುವಕನಾಗಿ ನನಗೆ ಸ್ವಾತಂತ್ರ್ಯ ಬೇಕಾಗಿತ್ತು. ನನಗೆ ಬೇಕಾದದ್ದನ್ನು ನಾನು ಮಾಡಬೇಕು ಎನ್ನಿಸುತ್ತಿತ್ತು. ಬಹುಶಃ ಎಲ್ಲಾ ತಲೆಮಾರುಗಳಲ್ಲಿಯೂ ಅದು ಹಾಗೇ ಇದೆ ಎನ್ನಿಸುತ್ತೆ. ನಮ್ಮ ಮಕ್ಕಳಿಗೆ ಸ್ವಾತಂತ್ರ್ಯ ಕೊಟ್ಟು ಅವರ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳಲು ಬಿಡುವುದು ಒಳ್ಳೆಯದಾ ? ನಾವು ಅದಕ್ಕೆ ಎಲ್ಲಿ ಮಿತಿಯನ್ನು ಇಡಬೇಕು ? ಅಥವಾ ಮಿತಿ ಬೇಡವಾ ? ನಾವು ಒಳ್ಳೆಯ ತಂದೆ ತಾಯಿಗಳಾಗಲು ನಿಮ್ಮ ಸಲಹೆ ಏನು ?
ಸದ್ಗುರು: ನಮಸ್ಕಾರ ಲಕ್ಷ್ಮಣ್. ಕ್ರಿಕೆಟ್ ಆಟದಲ್ಲಿ ನಿಮ್ಮ ಬ್ಯಾಟಿಂಗ್ ಕೈಚಳಕವನ್ನು ನಾವು ಬಹಳವಾಗಿ ಆನಂದಿಸಿದ್ದೀವಿ. ಈ ಪಾಲನೆಪೋಷಣೆ (parenting) ವಿಷಯಕ್ಕೆ ಬಂದಾಗ, ನಾವು ಮಕ್ಕಳನ್ನು ಬೆಳೆಸಬೇಕು ಅನ್ನುವುದು ಸಂಪೂರ್ಣವಾಗಿ ಪಾಶ್ಚಿಮಾತ್ಯ ಕಲ್ಪನೆ. ಬೆಳೆಸುವುದು ದನಕರುಗಳನ್ನಷ್ಟೆ, ಮನುಷ್ಯರನ್ನಲ್ಲ. ಮಕ್ಕಳನ್ನು ಬೆಳೆಸಬಾರದು. ಅವರು ಬೆಳೆಯಲು ನಾವು ಅವಕಾಶ ಮಾಡಿಕೊಡಬೇಕಷ್ಟೆ.
ಪ್ರೀತಿ, ಸಂತೋಷ ಮತ್ತು ಜವಾಬ್ದಾರಿಯ ವಾತಾವರಣನ್ನು ಮಾತ್ರ ನೀವು ಒದಗಿಸಬೇಕು. ನಿಮ್ಮ ಪ್ರಶ್ನೆಯಲ್ಲಿ ನೀವು ಸ್ವಾತಂತ್ರ್ಯ ಅನ್ನುವ ಪದವನ್ನು ಬಳಕೆ ಮಾಡಿದಿರಿ. ಸ್ವಾತಂತ್ರ್ಯ ಎನ್ನುವುದು ಕೆಟ್ಟ ಪದ. ಆ ಪದವನ್ನು ನೀವು ಹೇಳಲೇಬಾರದು. ನಿಮ್ಮ ಮಕ್ಕಳೂ ಆ ಪದವನ್ನು ಅಭ್ಯಾಸ ಮಾಡಿಕೊಳ್ಳಬಾರದು. ನೀವು ಯಾವಾಗಲೂ ಅವರ ಜೀವನದಲ್ಲಿ ಅವರ ಸ್ವಾಸ್ಥ್ಯ, ಆರೋಗ್ಯ, ಬೆಳವಣಿಗೆ ಮತ್ತು ಜೀವನದ ಪ್ರತಿಯೊಂದು ಆಯಾಮಕ್ಕೆ ಪ್ರತಿಸ್ಪಂದಿಸುವ ಶಕ್ತಿ ಇವೆಲ್ಲವುಗಳತ್ತ ಅವರಿಗೆ ಜವಾಬ್ದಾರಿಯ ಅರಿವನ್ನು ತಂದುಕೊಡಬೇಕು. ಅವಶ್ಯಕವಿರುವ ಜವಾಬ್ದಾರಿ ಇದೆ ಎಂದಾದರೆ ಸ್ವಾತಂತ್ರ್ಯ ಎನ್ನುವುದು ಒಂದು ಪರಿಣಾಮ - ಫಲಿತಾಂಶ ಅಷ್ಟೇ.
ಜಗತ್ತಿನಲ್ಲಿ ನಮಗೀಗ ಇರುವ ಮೂಲಭೂತ ಸಮಸ್ಯೆ ಅಂದರೆ ನಾವು ವಿಪರೀತ ಗುರಿ ಆಧಾರಿತ ಆಗಿ ಬಿಟ್ಟಿದ್ದೀವಿ. ನಾವು ಪರಿಣಾಮದಲ್ಲಿ ಉತ್ಸುಕರಾಗಿದ್ದೀವಿ, ಪ್ರಕ್ರಿಯೆಯಲ್ಲಿ ಅಲ್ಲ. ತೋಟದಲ್ಲಿ ಹೂವು ಬೇಕು ಅಂದರೆ ನೀವು ಹೂವಿನ ಬಗ್ಗೆ ಮಾತಾಡಬಾರದು. ನೀವು ಒಬ್ಬ ಒಳ್ಳೆಯ ಮಾಲಿ ಆದರೆ, ನೀವು ಹೂವಿನ ಬಗ್ಗೆ ಯಾವತ್ತೂ ಮಾತಾಡುವುದಿಲ್ಲ; ನೀವು ಮಣ್ಣು, ಗೊಬ್ಬರ, ನೀರು, ಸೂರ್ಯನ ಬೆಳಕಿನ ಬಗ್ಗೆ ಮಾತನಾಡುತ್ತೀರ. ಇದನ್ನೆಲ್ಲ ನೀವು ನಿರ್ವಹಣೆ ಮಾಡಿದರೆ, ಅದ್ಭುತವಾದ ಹೂವುಗಳು ಬಂದೇ ಬರುತ್ತವೆ.
ಅದೇ ತರಹದಲ್ಲಿ ನಿಮ್ಮ ಮಕ್ಕಳು ಸುಂದರವಾಗಿ ಅರಳಲು ಬೇಕಾಗುವ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಣೆ ಮಾಡಿದರೆ, ಮಕ್ಕಳು ಅರಳಿಕೊಳ್ಳುತ್ತಾರೆ. ಅದರ ಬದಲು, ನಿಮ್ಮ ಮನಸ್ಸಿನಲ್ಲಿ ಸೃಷ್ಟಿಮಾಡಿಕೊಳ್ಳುವ “ಅಚ್ಚುಗಳ” ಪ್ರಕಾರ ನೀವು ಅವರನ್ನು ಬೆಳೆಸಲು ಪ್ರಯತ್ನ ಮಾಡಿದರೆ, ಆಗ ಪ್ರತಿಯೊಂದು ಮಗುವೂ ಬಂಡಾಯವೇಳತ್ತೆ. ಯಾಕಂದ್ರೆ, ಮನಸ್ಸಿನ ಚೌಕಟ್ಟು-ಅಚ್ಚಿಗೆ ಜೀವನ ಹೊಂದಿಕೊಂಡು ಕೂರುವುದಿಲ್ಲ; ಮನಸ್ಸು ನಮ್ಮ ಜೀವನಕ್ಕೆ ಹೊಂದಿಕೊಳ್ಳಬೇಕು.
ಆದ್ದರಿಂದ ಮಕ್ಕಳನ್ನು ಬೆಳೆಸುವುದು ಹೇಗೆ ಎಂಬ ನಿಮ್ಮ ಆಲೋಚನೆಗಳನ್ನು ಬದಿಗಿರಿಸಿ, ಮತ್ತು ಕೇವಲ ಪರಿಪೂರ್ಣ ಪ್ರೀತಿಯ, ಆನಂದದ ಮತ್ತು ಜವಾಬ್ದಾರಿಯ ವಾತಾವರಣವನ್ನು ಉಂಟುಮಾಡಿ. ಅದೆಲ್ಲಕ್ಕಿಂತ ಹೆಚ್ಚಾಗಿ ಮಕ್ಕಳು ಯಾವತ್ತೂ ಮುನಿಸು, ಅಸಮಾಧಾನ, ಖಿನ್ನತೆ ಮತ್ತು ಕೋಪಗಳನ್ನು ಅವರ ತಂದೆ ತಾಯಂದಿರಲ್ಲಿ ನೋಡದೇ ಇರಲಿ. ಮನೆಯಲ್ಲಿ ಯಾವತ್ತೂ ಇಂಥದ್ದನ್ನು ಮಕ್ಕಳು ನೋಡದೇ ಇರುವಂತೆ ಖಾತರಿ ಪಡಿಸಿಕೊಳ್ಳಿ. ಆಗ ನಿಮ್ಮ ಮಕ್ಕಳು ಅದ್ಭುತವಾಗಿ ಅಚ್ಚರಿ ಹುಟ್ಟಿಸುವಂತೆ ವಿಕಸಿಸುವುದನ್ನು ನೀವು ನೋಡುತ್ತೀರಿ. ಪ್ರಕ್ರಿಯೆಯ ಕಡೆಗೆ ಎಚ್ಚರಿಕೆ ತೆಗೆದುಕೊಳ್ಳದೇ ನೀವು ಕೇವಲ ಪರಿಣಾಮದತ್ತ ಗಮನ ಕೇಂದ್ರೀಕರಿಸಿದ್ದರೆ, ನೀವು ಅಪೇಕ್ಷಿಸುವ ಪರಿಣಾಮ-ಫಲಿತಾಂಶ ಕೇವಲ ಹಗಲುಗನಸು ಅಷ್ಟೇ. ಆದರೆ, ನೀವು ಪ್ರಕ್ರಿಯೆಯತ್ತ ಎಚ್ಚರಿಕೆ ವಹಿಸಿದರೆ, ಫಲಿತಾಂಶಗಳು ಬಂದೇ ಬರುತ್ತವೆ.
ಸಂಪಾದಕರ ಟಿಪ್ಪಣಿ: ನೀವು ಯಾವುದಾದರೂ ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವಾ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.