ಸದ್ಗುರು: ಯಾರಿಗಾದರೂ ದೂರದೃಷ್ಟಿ ಇದೆ ಎಂದು ನೀವು ಹೇಳಿದರೆ, ಈ ದಿನಗಳಲ್ಲಿ, "ದೂರದೃಷ್ಟಿ" ಎನ್ನುವ ಪದದ ಅರ್ಥ ಸಾಮಾಜಿಕ ಬಳಕೆಯಲ್ಲಿ “ಒಂದು ದೊಡ್ಡ ಕನಸು” ಎಂದು ರೂಪಾಂತರವಾಗಿದೆ. ಇಲ್ಲ. ದೂರದೃಷ್ಟಿ ಎಂದರೆ ಕನಸಲ್ಲ. ದೂರದೃಷ್ಟಿಯೆಂದರೆ ನಿಮ್ಮ ನೋಡುವ ಸಾಮರ್ಥ್ಯ. ಬೇರೆಯವರು ನೋಡದಿರುವುದನ್ನು ನೀವು ನೋಡಿದರೆ, "ಓ, ಅವನೊಬ್ಬ ದಾರ್ಶನಿಕ." ಎಂದು ನಾವು ಹೇಳುತ್ತೇವೆ. ಆದರೆ ಯಾರಾದರೂ ನಿಮ್ಮ ಕನಸಿಗಿಂತ ದೊಡ್ಡ ಕನಸನ್ನು ಇಟ್ಟುಕೊಂಡಿದ್ದರೆ, ಅದು ಅವರನ್ನು ದಾರ್ಶನಿಕರಾಗಿಸುವುದಿಲ್ಲ, ಬದಲಿಗೆ ಅವರೊಂದು ದೊಡ್ಡ ಸಮಸ್ಯೆಯಾಗುತ್ತಾರೆ.

ಮುಜಫರ್ ಅಲಿ: ಅವರು ನಿಮ್ಮನ್ನು ದುರುಪಯೋಗಪಡಿಸಿಕೊಳ್ಳುವವರಾಗುತ್ತಾರೆ.

ಸದ್ಗುರು: ನನ್ನ ಮತ್ತು ಬೇರೆಲ್ಲರ ಕನಸುಗಳು ಒಂದೇ ಆಗಿರದ ಪಕ್ಷದಲ್ಲಿ, ನಾನು ಎಲ್ಲರನ್ನೂ ನನ್ನ ಕನಸಿನ ಕಡೆಗೇ ತಳ್ಳುತ್ತೇನೆ. ಇಂತಹ ಕನಸಿದ್ದೇನು ಪ್ರಯೋಜನ?

ಮುಜಫರ್ ಅಲಿ: ಹಾಗಾದರೆ, ನಿಮ್ಮ ಕನಸೇನು?

ಸದ್ಗುರು: ನಾನು ಕನಸು ಕಾಣುವುದಿಲ್ಲ. ನಾನು ಜೀವಿಸುತ್ತೇನೆ. ನಾನು ಪರಿಪೂರ್ಣವಾಗಿ ಜೀವಿಸುತ್ತೇನೆ ಅಷ್ಟೆ.

ಮುಜಫರ್ ಅಲಿ: ಆದರೆ ಕನಸು ಕಾಣುವುದು ಒಳ್ಳೆಯದು, ಅಲ್ಲವೆ? ಸುಮ್ಮನೆ ಕನಸು ಕಾಣಬೇಡಿ, ಬೆಳೆಯಿರಿ, ಕಲಿಯಿರಿ, ಜೀವಿಸಿರಿ ಎಂದು ಪ್ರತಿಯೊಬ್ಬರು ಹೇಳುತ್ತಾರೆ. ಆದರೆ, ನಮ್ಮನ್ನು ಪರಿಶುದ್ಧವಾಗಿರಿಸುವುದು ನಮ್ಮ ಕನಸುಗಳೇ ಅಲ್ಲವೇ?

ಸದ್ಗುರು: ಸಾಮಾನ್ಯವಾಗಿ ಹೆಚ್ಚಿನ ಜನರಿಗೆ ಅವರ ಕನಸುಗಳು ಅಸಹ್ಯವಾಗಿರುತ್ತವೆ! ಎಲ್ಲರಿಗೂ ಪರಿಶುದ್ಧವಾದ ಕನಸುಗಳಿರುತ್ತವೆ ಎಂದು ನೀವು ಭಾವಿಸಿದ್ದೀರ? ಕಳೆದ ಇಪ್ಪತ್ತೈದು ವರ್ಷಗಳಲ್ಲಿ ನಾನು ಒಂದೇ ಒಂದು ಕನಸನ್ನೂ ಕಂಡಿಲ್ಲ. ನಾನು ಸತ್ತಂತೆ ನಿದ್ದೆ ಮಾಡುತ್ತೇನೆ. ನಾನು ಎಚ್ಚರಗೊಂಡಾಗ, ನಾನು ಸಂಪೂರ್ಣವಾಗಿ ಎಚ್ಚರವಾಗಿರುತ್ತೇನೆ. ನಾನು ರಾತ್ರಿಯಲ್ಲಿ ಕನಸು ಕಂಡು ನನ್ನ ಸಮಯವನ್ನು ವ್ಯರ್ಥ ಮಾಡದೇ ಇರುವುದರಿಂದ,  ನನ್ನ ಜೀವನದ ಸುಮಾರು ಇಪ್ಪತ್ತೈದು ವರ್ಷಗಳು, ನಾನು ಪ್ರತಿದಿನ ಕೇವಲ ಎರಡೂವರೆ-ಮೂರು ಗಂಟೆಗಳ ಕಾಲ ಮಾತ್ರವೇ ಮಲಗಿದ್ದೇನೆ. ಇತ್ತೀಚೆಗೆ, ನಾನು ಸ್ವಲ್ಪ ಸೋಮಾರಿಯಾಗಿ ನಾಲ್ಕು-ನಾಲ್ಕೂವರೆ ಗಂಟೆಗಳ ಕಾಲ ನಿದ್ರಿಸುತ್ತಿದ್ದೇನೆ.

ಮನಸ್ಸಿನಿಂದಾಚೆಗೆ

ಕನಸುಗಳು ಪ್ರಜ್ಞಾರಹಿತವಾದ ಕಲ್ಪನೆಗಳು. ಕೆಲವು ಜನರು ಸಾಮಾನ್ಯವಾಗಿ ಪ್ರವೇಶಿಸಲು ಸಾಧ್ಯವಾಗದಂತಹ ತಮ್ಮ ಮನಸ್ಸಿನ ವಿಭಿನ್ನ ಆಯಾಮಗಳನ್ನು ಪ್ರವೇಶಿಸಲು ಕನಸುಗಳನ್ನು ಕೆಲವು ಬಾರಿ ಬಳಸಿಕೊಂಡಿದ್ದಾರೆ. ಆದ್ದರಿಂದ, ಆ ಆಯಾಮಗಳನ್ನು ಪ್ರವೇಶಿಸಲು ಅವರು ಕನಸುಗಳನ್ನು ಉಪಯುಕ್ತ ಸಾಧನವಾಗಿ ಕಾಣುತ್ತಾರೆ. ವಿಶೇಷವಾಗಿ, ಆಸ್ಟ್ರೇಲಿಯಾ ಮತ್ತು ಉತ್ತರ ಅಮೇರಿಕಾದ ಬುಡಕಟ್ಟು ಜನಾಂಗಗಳಲ್ಲಿನ ಆದಿವಾಸಿಗಳಂತಹ ಕೆಲವು ಸಂಸ್ಕೃತಿಗಳು ಕನಸುಗಳನ್ನು ದೊಡ್ಡ ರೀತಿಯಲ್ಲಿ ಬಳಸಿಕೊಂಡಿವೆ, ಆದರೆ ಆ ಕನಸುಗಳ ಮೂಲಕ ಅವರು ಸಾಧಿಸಿದ್ದು ಕೇವಲ ಮಾಟಮಂತ್ರಗಳನ್ನಷ್ಟೆ. ಅಲ್ಲಿ ನಿಜವಾದ ಆಧ್ಯಾತ್ಮ ಹುಟ್ಟಲಿಲ್ಲ. ಭಾರತದಲ್ಲಿ ಮಾಟಮಂತ್ರದ ಪ್ರಕ್ರಿಯೆಗಳು ಕೆಲ ಸಂಗತಿಗಳನ್ನು ಸೃಷ್ಟಿಸಲು ಕಲ್ಪನಾಶಕ್ತಿಯನ್ನು ಒಂದು ಪ್ರಬಲವಾದ ರೀತಿಯಲ್ಲಿ ಬಳಸಿಕೊಳ್ಳುತ್ತವೆ. ಬಹಳಷ್ಟು ಜನರು ಇತರರಿಗೆ ಹಾನಿಯನ್ನು ಉಂಟುಮಾಡಲು ಮಾಟಮಂತ್ರಗಳನ್ನು ಬಳಸುತ್ತಾರೆ.  ಆದರೆ ಮಾಂತ್ರಿಕ ಪ್ರಕ್ರಿಯೆಗಳು ಅದ್ಭುತವಾದ ವಿಷಯಗಳನ್ನೂ ಸಹ ಮಾಡಬಹುದು.

ಕನಸು ನಿಮ್ಮ ಮನಸ್ಸಿನ ಮತ್ತೊಂದು ಆಯಾಮವಷ್ಟೆ. ನೀವು ಅದನ್ನು ಮೀರಿದಾಗ ಮಾತ್ರ, ಇಂದು ಆಧ್ಯಾತ್ಮಿಕತೆ ಎಂದು ಕರೆಯಲ್ಪಡುತ್ತಿರುವ ಒಂದು ಆಯಾಮವನ್ನು ನೀವು ಸ್ಪರ್ಶಿಸುತ್ತೀರ. ಯಾವುದನ್ನು ನಿಮ್ಮ ದೇಹ ಮತ್ತು ಮನಸ್ಸಿನಿಂದ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲವೋ, ಅದೇ ಆಧ್ಯಾತ್ಮ. ಅದನ್ನು ಅರ್ಥ ಮಾಡಿಕೊಳ್ಳಲು ನಿಮ್ಮ ದೇಹ ಮತ್ತು ಮನಸ್ಸುಗಳು ಅಸಮರ್ಥವಾಗಿವೆ. ಆ ಆಯಾಮವನ್ನು ಸ್ಪರ್ಶಿಬೇಕಾದರೆ ನಿಮ್ಮೊಳಗೆ ಮತ್ತೊಂದು ಆಯಾಮವು ಎಚ್ಚರಗೊಳ್ಳಬೇಕಾಗುತ್ತದೆ. ನಾವದನ್ನು ಹಾಗೆ ವ್ಯಾಖ್ಯಾನಿಸುವುದು ಉತ್ತಮ. ಇಲ್ಲದಿದ್ದರೆ, ಜನರ ಪ್ರತಿಯೊಂದು ಕನಸು ಮತ್ತು ಕಲ್ಪನೆಗಳು ಆಧ್ಯಾತ್ಮವಾಗಿಬಿಡುತ್ತವೆ.

ಒಳಗೊಂದು ಮಿಥ್ಯ ಜಗತ್ತು

ಕನಸುಗಳು ಒಂದು ರೀತಿಯ ಸಾಧನ, ಆದರವುಗಳನ್ನು ನೆಚ್ಚಿಕೊಳ್ಳಲಾಗದು. ಉಪಯೋಗಿಸಲು ಬೇರೆ ಉತ್ತಮ ರೀತಿಯ ಸಾಧನಗಳಿವೆ, ಆದರೆ ಕನಸುಗಳನ್ನು ಬಳಸಲು ಮಾನವರೊಳಗೆ ಹೆಚ್ಚಿನ ಸಂಯೋಜನೆಯ ಅಗತ್ಯವಿರುತ್ತದೆ. ಉದಾಹರಣೆಗೆ, ನಾನಿರುವುದು ಈ ರೀತಿಯಾಗಿ: ನಾನು ಕಣ್ಣು ಮುಚ್ಚಿದರೆ, ನನಗೆ ಜಗತ್ತು ಮಾಯವಾಗಿಬಿಡುತ್ತದೆ. ಇದು ಹೇಗೆ ಸಾಧ್ಯ ಎಂದು ಜನರು ಕೇಳುತ್ತಾರೆ. ಕಣ್ಣುರೆಪ್ಪೆಗಳ ಕೆಲಸವೇ ಅದು. ನಿಮಗೆ ಕಣ್ಣುರೆಪ್ಪೆಗಳನ್ನು ಕೊಟ್ಟಿರುವುದು ಆ ಕಾರಣಕ್ಕಾಗಿಯೇ. ನೀವದನ್ನು ಮುಚ್ಚಿದರೆ, ಜಗತ್ತು ಇಲ್ಲವಾಗಬೇಕು. ನಿಮ್ಮ ಮನೆಯಲ್ಲೊಂದು ಕಿಟಕಿಯಿರುತ್ತದೆ ಮತ್ತು ನೀವದನ್ನು ಮುಚ್ಚಿದಾಗ ಅಂತಹ ಬೃಹತ್ ಸೂರ್ಯನೇ ಮರೆಯಾಗುತ್ತಾನೆ. ಒಂದು ಕಿಟಕಿಗೆ ಅದನ್ನು ಮಾಡಲು ಸಾಧ್ಯವಿದೆ ಎಂದಾದರೆ, ನಿಮ್ಮ ಕಣ್ಣುರೆಪ್ಪೆಗಳಿಗೇಕೆ ಅದು ಸಾಧ್ಯವಿಲ್ಲ?

ನೀವು ನಿಮ್ಮೊಳಗೊಂದು ಸುಳ್ಳು ಜಗತ್ತನ್ನು ನಿರ್ಮಿಸಿಕೊಂಡಿರುವುದರಿಂದ ಅದು ಹಾಗೆ ಮಾಡುತ್ತಿಲ್ಲ. ನಿಮ್ಮ ಕಣ್ಣುಗಳನ್ನು ಮುಚ್ಚಿದಾಗ ಹೊರಗಿನ ಜಗತ್ತು ಇಲ್ಲವಾಗುತ್ತದೆ. ಆದರೆ, ನಿಮ್ಮೊಳಗೆ ನಿಮ್ಮದೇ ಆದ ಒಂದು ಜಗತ್ತು ಸದಾ ನಡೆಯುತ್ತಿರುತ್ತದೆ. ನಿಮ್ಮೊಳಗೊಂದು ಸುಳ್ಳು ಜಗತ್ತನ್ನು ಸೃಷ್ಟಿಸಿಕೊಳ್ಳದೇ ನೀವು ಈ ಜಗತ್ತಿನಲ್ಲಿ ಜೀವಿಸಿದರೆ, ನೀವು ಕಣ್ಣು ಮುಚ್ಚಿದರೆ ಸಾಕು, ಉಫ್ ಎಂದು ಈ ಜಗತ್ತು ಮಾಯವಾಗಿಬಿಡುತ್ತದೆ. ನಾನು ಐದಾರು ದಿನಗಳ ಕಾಲ ಒಂದು ಕಡೆ ಕಣ್ಣುಮುಚ್ಚಿ ಕುಳಿತುಕೊಂಡರೆ, ಕನಸಿರಲಿ, ನನಗೆ ಒಂದೇ ಒಂದು ಯೋಚನೆಯೂ ಸಹ ಬರುವುದಿಲ್ಲ. ಒಂದೇ ಒಂದು ಯೋಚನೆಯೂ ಇಲ್ಲ, ಏಕೆಂದರೆ ನನ್ನ ತಲೆ ಸದಾ ಖಾಲಿಯಿರುತ್ತದೆ. ಹಾಗಾಗಿಯೇ ಅದು ತುಂಬಾ ಹಗುರವಾಗಿದೆ, ಬಹಳ ಹಗುರವಾಗಿ!

https://www.youtube.com/watch?v=tZcA5UCYwJ0