ಸದ್ಗುರುಗಳು, ಮಾನವ ವ್ಯವಸ್ಥೆಯಲ್ಲಿರುವ ಮೂರು ಮೂಲಭೂತ ನಾಡಿಗಳಾದ ಇಡಾ, ಪಿಂಗಲಾ ಹಾಗೂ ಸುಷುಮ್ನಾ ನಾಡಿಗಳ ಬಗ್ಗೆ ಮಾತಾಡುತ್ತಾರೆ.

ಸದ್ಗುರು: ಬೆನ್ನು ಮೂಳೆಯ ದೈಹಿಕ ರಚನೆಯು ಬಗ್ಗೆ ನಿಮಗೆ ತಿಳಿದಿದ್ದರೆ, ಅದರೊಳಗೆ ಎಲ್ಲಾ ನರಗಳು ಹಾದು ಹೋಗಲು ಕೊಳವೆಗಳಂತಿರುವ ಎರಡು ರಂಧ್ರಗಳಿವೆ ಎಂದು ಗೊತ್ತಿರಬಹುದು. ಇದೇ ಇಡಾ ಹಾಗೂ ಪಿಂಗಳಾ, ಎಡ ಮತ್ತು ಬಲ ಶಕ್ತಿ ವಾಹಿನಿಗಳು. 

ಪ್ರಾಣಾಯಾಮಕೋಶ ಅಥವಾ ಪ್ರಾಣಶಕ್ತಿ ಶರೀರದಲ್ಲಿ ೭೨,೦೦೦ ನಾಡಿಗಳಿವೆ. ಈ ೭೨,೦೦೦ ನಾಡಿಗಳು, ಮೂರು ಮೂಲಭೂತ ನಾಡಿಗಳಿಂದ ಉದ್ಭವಿಸುತ್ತದೆ - ಎಡ, ಬಲ ಮತ್ತು ಮಧ್ಯ - ಇಡಾ, ಪಿಂಗಳಾ ಮತ್ತು ಸುಷುಮ್ನಾ. "ನಾಡಿ" ಎಂಬ ಪದದ ಅರ್ಥ ನರ ಎಂದಲ್ಲ. ನಾಡಿಗಳು ದೇಹದಲ್ಲಿ ಪ್ರಾಣಶಕ್ತಿ ಸಂಚರಿಸುವ ಮಾರ್ಗ ಅಥವಾ ಕಾಲುವೆಗಳಾಗಿವೆ. ಈ ೭೨,೦೦೦ ನಾಡಿಗಳಿಗೆ ಭೌತಿಕ ಅಭಿವ್ಯಕ್ತಿ ಇಲ್ಲ. ನೀವು ದೇಹವನ್ನು ಕತ್ತರಿಸಿ ನೋಡಿದರೆ, ಅದು ನಿಮಗೆ ಕಾಣುವುದಿಲ್ಲ. ಆದರೆ ನಿಮ್ಮ ಅರಿವು ಹೆಚ್ಚಾದಂತೆ, ಶಕ್ತಿಯು ಗೊತ್ತುಗುರಿಯಿಲ್ಲದೆ ಚಲಿಸುತ್ತಿಲ್ಲ, ಬದಲಾಗಿ ಸ್ಥಾಪಿತ ಮಾರ್ಗಗಳಲ್ಲಿ ಸಂಚರಿಸುತ್ತಿದೆ ಎಂಬುದನ್ನು ಗಮನಿಸುತ್ತೀರಿ. ಶಕ್ತಿ ಅಥವಾ ಪ್ರಾಣ ಸಂಚರಿಸಲಿಕ್ಕಾಗಿ ೭೨,೦೦೦ ವಿಧಾನಗಳಿವೆ.

ಯಾವಾಗ ಪ್ರಾಣಶಕ್ತಿಯು ಸುಷುಮ್ನಾ ನಾಡಿಯ ಒಳಗೆ ಪ್ರವೇಶಿಸುತ್ತದೆಯೋ, ಜೀವನ ನಿಜವಾಗಿಯೂ ಪ್ರಾರಂಭವಾಗುತ್ತದೆ.

ಇಡಾ ಮತ್ತು ಪಿಂಗಳಾ ಅಸ್ತಿತ್ವದಲ್ಲಿರುವ ಮೂಲ ದ್ವೈತವನ್ನು ಪ್ರತಿನಿಧಿಸುತ್ತವೆ. ಈ ದ್ವೈತತೆಯನ್ನೇ ನಾವು ಸಾಂಪ್ರದಾಯಿಕವಾಗಿ ಶಿವ ಹಾಗೂ ಶಕ್ತಿ ಎಂದು ವರ್ಣಿಸುತ್ತೇವೆ. ನೀವು ಇದನ್ನು ಪುರುಷ ಹಾಗೂ ಸ್ತ್ರೀ ಎಂದೂ ಕೆರೆಯಬಹುದು, ಅಥವಾ ಇದು ನಿಮ್ಮ ತಾರ್ಕಿಕ ಹಾಗೂ ಸೃಜನಶೀಲತೆಯ ಅಂಶವಾಗಿದೆ. ಇದನ್ನು ಆಧರಿಸಿಯೇ ಈ ಅಸ್ತಿತ್ವವನ್ನು ಸೃಷ್ಟಿಸಿರುವುದು. ಈ ದ್ವಂದ್ವಗಳಿಲ್ಲದೆಯೇ ಜೀವನವು ಈಗಿರುವ ರೀತಿಯಲ್ಲಿ ಅಸ್ತಿತ್ವದಲ್ಲಿರುತ್ತಿರಲಿಲ್ಲ. ಆರಂಭದಲ್ಲಿ, ಎಲ್ಲವೂ ಆದಿಸ್ವರೂಪದ್ದಾಗಿರುತ್ತದೆ, ಯಾವುದೇ ಉಭಯತ್ವವಿರುವುದಿಲ್ಲ. ಆದರೆ ಸೃಷ್ಟಿಯು ಸಂಭವಿಸಿದ ನಂತರ ದ್ವೈತತೆಯು ಬರುತ್ತದೆ.

ನಾನು ಪುರುಷ ಹಾಗೂ ಸ್ತ್ರೀ ಎಂದು ಹೇಳಿದಾಗ, ನಾನು ಲಿಂಗಗಳ ಬಗ್ಗೆ ಮಾತನಾಡುತ್ತಿಲ್ಲ – ಗಂಡು ಅಥವಾ ಹೆಣ್ಣಾಗಿರುವ ಬಗ್ಗೆ ಅಲ್ಲ, ಬದಲಾಗಿ, ಪ್ರಕೃತಿಯ ಕೆಲವು ನಿರ್ದಿಷ್ಟ ಗುಣಗಳ ಬಗ್ಗೆ ಮಾತನಾಡುತ್ತಿದ್ದೇನೆ. ಪ್ರಕೃತಿಯಲ್ಲಿ ಕಂಡುಬರುವ ಕೆಲವು ಗುಣಗಳನ್ನು ಪುರುಷ ಗುಣಗಳೆಂದು ಗುರುತಿಸಲಾಗಿದೆ. ಇನ್ನು ಕೆಲವು ಗುಣಗಳನ್ನು ಸ್ತ್ರೀ ಗುಣಗಳೆಂದು ಗುರುತಿಸಲಾಗಿದೆ. ನೀವು ಗಂಡಸಾಗಿರಬಹುದು, ಆದರೆ, ನಿಮ್ಮ ಇಡಾ ಬಲವಾಗಿದ್ದರೆ, ನಿಮ್ಮಲ್ಲಿ ಸ್ತ್ರೀ ಗುಣಗಳು ಪ್ರಬಲವಾಗಿರಬಹುದು. ನೀವು ಹೆಣ್ಣಾಗಿರಬಹುದು, ಆದರೆ, ನಿಮ್ಮ ಪಿಂಗಳಾ ಬಲವಾಗಿದ್ದರೆ, ನಿಮ್ಮಲ್ಲಿ ಪುರುಷ ಗುಣಗಳು ಪ್ರಬಲವಾಗಿರಬಹುದು. 

ಇಡಾ ಮತ್ತು ಪಿಂಗಳಾ ನಾಡಿಗಳ ನಡುವೆ ಸಮತೋಲನವನ್ನು ತಂದರೆ, ನೀವು ಜಗತ್ತಿನಲ್ಲಿ ಪ್ರಭಾವಶಾಲಿಯಾಗಬಹುದು - ನಿಮ್ಮ ಜೀವನದ ಅಂಶಗಳನ್ನು ಉತ್ತಮವಾಗಿ ನಿರ್ವಹಿಸುವಂತೆ ಅದು ಮಾಡುತ್ತದೆ. ಹೆಚ್ಚಿನ ಜನರು, ಇಡಾ ಅಥವಾ ಪಿಂಗಳಾದಲ್ಲಿ ಬದುಕಿದ್ದೇ ಸಾಯುತ್ತಾರೆ; ಮಧ್ಯದ ಭಾಗವಾದ ಸುಷುಮ್ನಾ, ಸುಪ್ತವಾಗಿಯೇ ಉಳಿದಿರುತ್ತದೆ. ಆದರೆ, ಸುಷುಮ್ನಾ ನಾಡಿಯು, ಮಾನವ ಶರೀರದ ಅತ್ಯಂತ ಮಹತ್ವದ ಅಂಶ. ಯಾವಾಗ ಪ್ರಾಣಶಕ್ತಿಯು ಸುಷುಮ್ನಾ ನಾಡಿಯ ಒಳಗೆ ಪ್ರವೇಶಿಸುತ್ತದೆಯೋ, ಜೀವನ ನಿಜವಾಗಿಯೂ ಪ್ರಾರಂಭವಾಗುತ್ತದೆ.

ವೈರಾಗ್ಯ

ಮೂಲಭೂತವಾಗಿ, ಸುಷುಮ್ನಾ ನಾಡಿಯು ಗುಣಾತೀತವಾಗಿದೆ. ಅದಕ್ಕೆ ತನ್ನದೇ ಆದ ಗುಣಗಳಿಲ್ಲ. ಅದು ಬರಿದಾದ ಆಕಾಶದಂತೆ. ಜಾಗವು ಖಾಲಿಯಿದ್ದಲ್ಲಿ, ನಿಮಗೆ ಬೇಕಾದನ್ನು ಸೃಷ್ಟಿಸಬಹುದು. ಪ್ರಾಣಶಕ್ತಿಯು ಸುಷುಮ್ನಾ ನಾಡಿಯೊಳಗೆ ಪ್ರವೇಶಿಸಿದಾಗ, ನೀವು ವೈರಾಗ್ಯದ ಸ್ಥಿತಿಯನ್ನು ತಲುಪಿದ್ದೀರ ಎಂದು ಹೇಳಲಾಗುತ್ತದೆ. "ರಾಗ," ಎಂದರೆ ಬಣ್ಣ ಎಂದರ್ಥ. "ವಿರಾಗ"ಎಂದರೆ  “ಬಣ್ಣರಹಿತ” ಎಂದು, ನೀವು ಪಾರದರ್ಶಕರಾಗಿದ್ದೀರಿ ಎಂದರ್ಥ. ನೀವು ಪಾರದರ್ಶಕರಾದರೆ ನಿಮ್ಮ ಹಿಂದಿರುವುದು ಕೆಂಪಾಗಿದ್ದರೆ, ನೀವು ಕೂಡ ಕೆಂಪು ಬಣ್ಣಕ್ಕೆ ಬದಲಾಗುವಿರಿ. ನಿಮ್ಮ ಹಿಂದಿರುವುದು ನೀಲಿಯಾಗಿದ್ದರೆ, ನೀವೂ ನೀಲಿ ಬಣ್ಣಕ್ಕೆ ಬದಲಾಗುವಿರಿ. ನಿಮ್ಮ ಹಿಂದಿರುವುದು ಹಳದಿಯಾಗಿದ್ದರೆ, ನೀವು ಕೂಡ ಹಳದಿಬಣ್ಣಕ್ಕೆ ಬದಲಾಗುವಿರಿ. ನೀವು ನಿಷ್ಪಕ್ಷಪಾತಿಗಳಾಗುವಿರಿ. ನೀವೆಲ್ಲಿದ್ದರೂ, ಅದಕ್ಕೆ ಅಂಟುಗೊಳ್ಳದೆ, ಅದರ ಒಂದು ಭಾಗವಾಗುವಿರಿ. ಈ ರೀತಿಯಲ್ಲಿದ್ದರೆ ಮಾತ್ರ, ನೀವು ವಿರಾಗದ ಸ್ಥಿತಿಯಲ್ಲಿದ್ದರೆ ಮಾತ್ರ, ಇಲ್ಲಿ ಬದುಕಿರುವಾಗ ಜೀವನದ ಎಲ್ಲಾ ಆಯಾಮಗಳನ್ನು ಪರಿಶೋಧಿಸಲು ಧೈರ್ಯ ಮಾಡುವಿರಿ.

ಈಗ, ನೀವು ಹೆಚ್ಚು ಕಡಿಮೆ ಸಮತೋಲನದಲ್ಲಿರುವಿರಿ, ಆದರೆ, ಯಾವುದೇ ಕಾರಣದಿಂದ, ಹೊರಗಿನ ಪರಿಸ್ಥಿತಿಯು ಹುಚ್ಚುತನಕ್ಕೆ ತಿರುಗಿದರೆ, ಅದಕ್ಕೆ ಪ್ರತಿಕ್ರಯಿಸಿ, ನೀವು ಹುಚ್ಚಾರಾಗುವಿರಿ - ಏಕೆಂದರೆ ಇದೇ ಇಡಾ ಮತ್ತು ಪಿಂಗಳಾ ನಾಡಿಗಳ ಸ್ವಭಾವವಾಗಿದೆ. ಅವುಗಳು ಹೊರಗಿನ ಪರಿಸ್ಥಿತಿಗಳಿಗೆ ಪ್ರತಿಕ್ರಿಯಾತ್ಮಕವಾಗಿವೆ. ಆದರೆ ಒಮ್ಮೆ ಪ್ರಾಣಶಕ್ತಿಯು ಸುಷುಮ್ನಾ ನಾಡಿಯೊಳಗೆ ಪ್ರವೇಶಿಸಿದ ನಂತರ, ನೀವು ಒಂದು ಹೊಸ ರೀತಿಯ ಸಮತೋಲನವನ್ನು ಸಾಧಿಸುವಿರಿ – ಹೊರಗಡೆ ಏನಾದರೂ, ನಿಮ್ಮೊಳಗಿರುವ ಒಂದು ವಿಶೇಷವಾದ ಜಾಗವು ಯಾವತ್ತೂ ಕ್ಷೋಭೆಗೊಳಗಾಗದಂತಹ, ಪ್ರಕ್ಷುಬ್ಧತೆಗೆ ಒಳಪಡದಂತಹ, ಹೊರಗಿನ ಪರಿಸ್ಥಿತಿಗಳು ಮುಟ್ಟಲಾಗದಂತಹ ಆಂತರಿಕ ಸಮತೋಲನ. ನಿಮಗಾಗಿ ಇಂತಹ ಸ್ಥಿರವಾದ ಪರಿಸ್ಥಿತಿಯನ್ನು ನಿರ್ಮಿಸಿಕೊಂಡರೆ ಮಾತ್ರ, ನೀವು ಪ್ರಜ್ಞೆಯ ಶಿಖರಗಳನ್ನು ಏರುವ ಧೈರ್ಯ ಮಾಡುವಿರಿ.

ಸಂಪಾದಕರ ಟಿಪ್ಪಣಿ: "Mystic’s Musings" ತಂತ್ರ, ಚಕ್ರ ಮತ್ತು ಕುಂಡಲಿನಿಯ ಕುರಿತಾದ ಸದ್ಗುರು ಅವರ ಹೆಚ್ಚಿನ ಒಳನೋಟಗಳನ್ನು ಒಳಗೊಂಡಿದೆ. ಉಚಿತ ನಮೂನೆಯನ್ನು ಓದಿ (pdf ಪ್ರತಿ) ಅಥವಾ E-book ಖರೀದಿಸಿ