ನಮ್ಮ ಆಂತರಿಕ ಹಾಗೂ ಬಾಹ್ಯ ಪರಿಸರದ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳುವುದು
ಇಂದಿನ ಜಗತ್ತಿನಲ್ಲಿ, ಹೆಚ್ಚಿನ ಜನರು ತಮ್ಮ ಹಾಗೂ ತಮ್ಮ ಸುತ್ತಲಿರುವ ಎಲ್ಲದರ ನಡುವಿನ ಸಂಬಂಧವನ್ನು ಮರೆತಿದ್ದಾರೆ ಎಂದು ಸದ್ಗುರುಗಳು ಹೇಳುತ್ತಾರೆ. ಮನುಷ್ಯ ಮತ್ತು ವಿಶ್ವದ ನಡುವಿನ ಪರಸ್ಪರ ಅವಲಂಬನೆಯನ್ನು ನಾವು ಮನಗಂಡರೆ, ನಮ್ಮ ಭೂಮಿಯನ್ನು ಸನ್ನಿಹಿತವಾದ ದುರಂತದಿಂದ ರಕ್ಷಿಸುವ ಸಲುವಾಗಿ ಎಚ್ಚೆತ್ತುಕೊಂಡು, ಅದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಹೊರತಾಗಿ ನಮಗೆ ಬೇರಿನ್ಯಾವ ಆಯ್ಕೆಗಳೂ ಇಲ್ಲ ಎಂದವರು ವಿವರಿಸುತ್ತಾರೆ.
ಸದ್ಗುರು: ನೀವು ನಿಮ್ಮ ಸುತ್ತಲಿನ ಎಲ್ಲದರೊಂದಿಗೆ ಬೇರ್ಪಡಿಸಲಾಗದಂತಹ ಒಂದು ಭಾಗವಾಗಿದ್ದೀರಿ. ಮನುಷ್ಯ ಮತ್ತು ವಿಶ್ವದ ರಚನೆಗಳೆರಡೂ ಸಹ ಐದು ಮೂಲಧಾತುಗಳಿಂದ ಮಾಡಲ್ಪಟ್ಟಿದೆ. ಯೋಗ ಪದ್ಧತಿಯಲ್ಲಿ, ಈ ಐದು ಮೂಲಾಂಶಗಳ ಮೇಲಿನ ಪಾಂಡಿತ್ಯದಿಂದ, ನೀವು ನಿಮ್ಮ ಆಂತರಿಕ ಮತ್ತು ಬಾಹ್ಯ ಪರಿಸರದ ನಿರ್ವಹಣೆಯನ್ನು ವಹಿಸಿಕೊಳ್ಳುತ್ತೀರಿ; ಅವೆರಡೂ ಬೇರ್ಪಡಿಸಲಾಗದಂತವುಗಳು. ಆದರೆ ಮನುಷ್ಯರ ಪ್ರಜ್ಞೆ ಎಷ್ಟರ ಮಟ್ಟಿಗೆ ವಿಭಜನೆಯಾಗಿದೆಯೆಂದರೆ, ಹೆಚ್ಚಿನ ಜನರು ಪರಸ್ಪರ ಅವಲಂಬನೆ ಎಂಬುದು ಒಂದು ಸಿದ್ಧಾಂತವಲ್ಲ, ಬದಲಿಗೆ ಅದೊಂದು ನಿಜಸ್ಥಿತಿ ಎಂಬುದನ್ನು ಮರೆತೇಹೋಗಿದ್ದಾರೆ. ಯೋಗದಲ್ಲಿನ ಅನುಭವ ಸ್ಥಿತಿ ಎಂದರೆ, ನೀವು ನಿಮ್ಮ ಕಿರುಬೆರಳನ್ನು ನಿಮ್ಮ ಭಾಗವಾಗಿ ಅನುಭವಿಸುವ ರೀತಿಯಲ್ಲೇ ಈ ಭೂಮಿಯನ್ನೂ ಸಹ ನಿಮ್ಮದೇ ಒಂದು ಅವಿಭಾಜ್ಯ ಅಂಗವಾಗಿ ಅನುಭವಿಸುವುದಾಗಿದೆ.
ಈಶ ಫೌಂಡೇಶನ್-ನ ’ರ್ಯಾಲಿ ಫಾರ್ ರಿವರ್ಸ್’ ಒಬ್ಬ ವ್ಯಕ್ತಿ ಮತ್ತು ಭೂಮಿ – ಎರಡನ್ನೂ ಒಂದರಿಂದ ಒಂದು ಬೇರ್ಪಡಿಸಲಾಗದಂತಹ ಸಜೀವ ದೃಷ್ಟಿಕೋನದಿಂದ ಆರಂಭವಾಗಿರುವ ಒಂದು ಅಭಿಯಾನ. ನೀರು ಮತ್ತು ಮಣ್ಣಿನ ತೀವ್ರವಾದ ಕ್ಷೀಣತೆಯ ಕುರಿತಾದ ಚಿಂತನೆಯು ಸೈದ್ಧಾಂತಿಕ ಅಥವಾ ರಾಜಕೀಯ ತಿಳಿವಳಿಕೆಯನ್ನು ತೋರಿಸಿಕೊಳ್ಳುವ ಬಗ್ಗೆಯಾಗಿಲ್ಲ; ಪರಿಸರದ ಮೇಲಿನ ಕಾಳಜಿಯು ನಮ್ಮ ಅಸ್ತಿತ್ವದ ಬಗ್ಗೆಯ ಕಾಳಜಿಯೇ ಆಗಿದೆ. ಮಣ್ಣು ಮತ್ತು ನೀರು ಬಳಕೆಯ ವಸ್ತುಗಳಲ್ಲ, ಅವು ನಮಗೆ ಜೀವ ನೀಡುವ ದ್ರವ್ಯಗಳಾಗಿವೆ. ಮಾನವ ಶರೀರದ ಮೂಲಭೂತ ಸಂಯೋಜನೆಯು ಶೇಕಡ 72 ರಷ್ಟು ನೀರು ಮತ್ತು ಶೇಕಡ 12 ರಷ್ಟು ಭೂಮಿಯಿಂದಾಗಿದೆ.
ಒಂದು ಭದ್ರವಾದ ಬುನಾದಿ
ಪರಿಸರದೊಂದಿಗಿನ ನಮ್ಮ ಮೂಲಭೂತ ಸಂಬಂಧವನ್ನು ನಾವು ನಿಜವಾಗಿಯೂ ಅರ್ಥಮಾಡಿಕೊಂಡಾಗ ಮಾತ್ರ ಜೀವನದ ಹೆಚ್ಚಿನ ಸಾಧ್ಯತೆಗಳನ್ನು ಅನ್ವೇಷಿಸಲು ನಮಗೆ ಶಕ್ತಿ ನೀಡುವಂತಹ ಸ್ಥಿರವಾದ ತಳಹದಿಯನ್ನು ನಮಗಾಗಿ ನಾವು ನಿರ್ಮಿಸಿಕೊಳ್ಳಲು ಸಾಧ್ಯ. ಶರೀರದ ಸೂಕ್ಷ್ಮ ಹಂತದ ರಚನೆಯಲ್ಲಿನ ಮೂಲಾಧಾರ ಚಕ್ರದ ಪ್ರಾಮುಖ್ಯತೆಯೆಂದರೆ - ಸ್ಥಿರವಾದ ಅಡಿಪಾಯವಿಲ್ಲದೆ ನಾವು ನಮ್ಮ ಮಿತಿಗಳನ್ನು ಮೀರಿ ಬೆಳೆಯಲು ಸಾಧ್ಯವಿಲ್ಲ ಎಂಬುದಾಗಿದೆ. ಆದರೆ ನಾವದನ್ನು ಕಡೆಗಣಿಸಿ, ನಮ್ಮ ಭೌತಿಕ ಮತ್ತು ಅಸ್ತಿತ್ವದ ವಾಸ್ತವತೆಯಿಂದ ಸಂಪೂರ್ಣವಾಗಿ ಬೇರ್ಪಟ್ಟಿರುವಂತಹ ಮಾನಸಿಕ ಸ್ಥರದಲ್ಲಿ ಜೀವಿಸಲು ಆಯ್ಕೆಮಾಡಿಕೊಂಡಿದ್ದೇವೆ. ಪ್ರಕೃತಿಯು ಮನುಷ್ಯನನ್ನು ಸ್ವಯಂ-ಅರಿವಿನ ಅತ್ಯುನ್ನತ ಮಟ್ಟಕ್ಕೆ ವಿಕಸನಗೊಳಿಸಿದ್ದರೂ ಸಹ, ನಾವು ಆ ಮುಂಬಡ್ತಿಯನ್ನು ಸ್ವೀಕರಿಸಲು ನಿರಾಕರಿಸುತ್ತಿದ್ದೇವೆ!
ನಾವು ಸದ್ಯದಲ್ಲಿರುವ ಪರಿಸರದ ಪರಿಸ್ಥಿತಿಯು ತೀರಾ ಚಿಂತಾಜನಕವಾಗಿದೆ. ಪ್ರಕೃತಿಯು ಲಕ್ಷಾಂತರ ವರ್ಷಗಳಿಂದ ಉತ್ಪಾದಿಸಿರುವುದನ್ನು, ನಾವು ಒಂದೇ ತಲೆಮಾರಿನಲ್ಲಿ ನಿರ್ನಾಮಮಾಡಲು ಸಿದ್ಧರಿದ್ದೇವೆಂದು ತೋರುತ್ತಿದೆ. 2030 ರ ಹೊತ್ತಿಗೆ ಈ ದೇಶದಲ್ಲಿ ನಮ್ಮ ಬದುಕುಳಿಯುವಿಕೆಗೆ ಅವಶ್ಯವಿರುವ 50% ನಷ್ಟು ನೀರು ಮಾತ್ರ ಇರುತ್ತದೆ ಎಂದು ಅಂದಾಜಿಸಲಾಗಿದೆ.
ವಿಪತ್ತಿನ ಕಡೆಗೆ ನಡಿಗೆ
ನಮ್ಮ ನದಿಗಳಲ್ಲಿ ಹೆಚ್ಚಿನವುಗಳಿಗೆ ಕಾಡುಗಳೇ ನೀರಿನ ಮೂಲವಾಗಿರುವ ಕಾರಣ, ಅವುಗಳನ್ನು ಪುನರುಜ್ಜೀವನಗೊಳಿಸುವ ಉತ್ತಮ ಮಾರ್ಗವೆಂದರೆ ಹೆಚ್ಚು ಸಸ್ಯರಾಶಿಗಳನ್ನು ಬೆಳೆಸುವುದಾಗಿದೆ. ಆದರೆ, ಮಣ್ಣಿನಲ್ಲಿನ ಸಾವಯವ ಅಂಶ ತೀವ್ರವಾಗಿ ಕುಸಿದುಹೋಗಿದೆ ಮತ್ತು ಮರುಭೂಮೀಕರಣದ ವೇಗವು ಅಪಾಯಕಾರಿ ಹಂತವನ್ನು ತಲುಪಿದೆ. ಈ ದೇಶದಲ್ಲಿ ಮಣ್ಣಿನ ಸವಕಳಿ ಎಷ್ಟು ತೀವ್ರವಾಗಿದೆ ಎಂದರೆ, ಮುಂದಿನ ಮೂರರಿಂದ ಐದು ವರ್ಷಗಳಲ್ಲಿ, ಸುಮಾರು 25% ರಷ್ಟು ಕೃಷಿ ಭೂಮಿಯಲ್ಲಿ ಏನನ್ನೂ ಬೆಳೆಯಲಾಗುವುದಿಲ್ಲ. ಮತ್ತು ನಲವತ್ತು ವರ್ಷಗಳ ಸಮಯದಲ್ಲಿ, 60% ಕ್ಕೂ ಹೆಚ್ಚಿನಷ್ಟು ಭೂಮಿ ಕೃಷಿ ಮಾಡಲು ಯೋಗ್ಯವಾಗಿರುವುದಿಲ್ಲ ಎಂದು ಅಂದಾಜಿಸಲಾಗಿದೆ.
ಮಣ್ಣಿನಲ್ಲಿನ ಸಾವಯವ ಅಂಶವನ್ನು ಹೆಚ್ಚಿಸಲು ಇರುವ ಒಂದೇ ಒಂದು ಮಾರ್ಗವೆಂದರೆ ಮರಗಳ ಕೃಷಿ ಮಾಡುವುದು ಮತ್ತು ಪ್ರಾಣಿ ತ್ಯಾಜ್ಯಗಳನ್ನು ಮಣ್ಣಿಗೆ ಸೇರಿಸುವುದು. ಆಹಾರವನ್ನು ಉತ್ಪಾದಿಸುವ ನಮ್ಮ ಸಾಮರ್ಥ್ಯವನ್ನು ನಾವು ನಾಶಮಾಡಿದರೆ, ನಾವು ದುರಂತದತ್ತ ಸಾಗುತ್ತೇವೆ. ಮರಗಿಡಗಳ ಕೊರತೆ ಹಾಗೂ ವಿವೇಚನಾರಹಿತವಾದ ನಗರ ವಿಸ್ತರಣೆಯ ಕಾರಣದಿಂದಾಗಿ, ನಾವು ಪ್ರವಾಹ ಮತ್ತು ಬರಗಾಲಗಳ ಅಪಾಯಕಾರಿ ಆವರ್ತಗಳನ್ನು ನೋಡುತ್ತಿದ್ದೇವೆ. ಕಳೆದ 12 ವರ್ಷಗಳಲ್ಲಿ ಸುಮಾರು ಮೂರು ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿಯೆನ್ನುವುದು ನಿಜವಾಗಿಯೂ ಹೃದಯಾಘಾತದ ಪ್ರಕ್ರಿಯೆಯಾಗಿಹೋಗಿದೆ.
ಎಚ್ಚೆತ್ತುಕೊಳ್ಳುವ ಸಮಯ
ಆದರೆ ಭರವಸೆ ಇದೆ. ಈ ಭೂಮಿಯು ಇನ್ನೂ ಅಸಾಧಾರಣವಾದ ಸಂವೇದನಾಶೀಲತೆ ಮತ್ತು ಜೀವಂತಿಕೆಯಿಂದ ತುಂಬಿದ್ದು, ನಂಬಲಾಗದ ಜೀವವೈವಿಧ್ಯತೆಯಿಂದ ಕೂಡಿದೆ. ನಮ್ಮ ಪ್ರಾಚೀನ ಋಷಿಗಳು ಇದನ್ನು 'ಪವಿತ್ರ ಭೂಮಿ' ಎಂದು ಕರೆದಾಗ, ಅದು ಕೇವಲ ಅತಿಶಯೋಕ್ತಿ ಆಗಿರಲಿಲ್ಲ. ಸ್ವಲ್ಪವೇ ಕಾಳಜಿ ಮತ್ತು ಸಕಾಲಿಕ ಕ್ರಮಗಳಿಂದಾಗಿ, ನಮ್ಮೀ ಭೂಮಿಯು ಎಲ್ಲಕ್ಕಿಂತ ವೇಗವಾಗಿ ಪುನಶ್ಚೇತನಗೊಳ್ಳುತ್ತದೆ.
ಸಂಕುಚಿತವಾದ, ನಿರ್ಬಂಧಿತ ಸಮಾಜಗಳ ಅನಿಸಿಕೆ-ಅಭಿಪ್ರಾಯಗಳನ್ನು ಮೀರಿ ನಾವು ಮೇಲಕ್ಕೇರೋಣ. ನಮ್ಮ ದೇಹದ ಕಣ ಕಣಗಳೂ ಬ್ರಹ್ಮಾಂಡದೊಂದಿಗೆ ನಿರಂತರವಾದ ಸಂಭಾಷಣೆಯಲ್ಲಿವೆ ಎಂಬುದನ್ನು ನಾವು ನಿಜವಾಗಿಯೂ ಕಂಡುಕೊಂಡರೆ, ನಾವೆಲ್ಲರೂ ಎಚ್ಚೆತ್ತುಕೊಳ್ಳುವ ಸಮಯ ಇದಾಗಿದೆ ಎಂಬುದು ನಮಗೆ ಸ್ಪಷ್ಟವಾಗುತ್ತದೆ. ನಮ್ಮ ನದಿಗಳು ನಮ್ಮ ಜೀವನಾಡಿಗಳು. ಅವುಗಳ ಆಪತ್ತಿನ ಪರಿಸ್ಥಿತಿ ನಮಗೆ ಸಾಮೂಹಿಕ ಗಡುವೊಂದನ್ನು ನೀಡುತ್ತಿದೆ. ನಮ್ಮ ಹೊಣೆಗಾರಿಕೆಯನ್ನು ನಾವಿನ್ನು ಮುಂದೂಡುವಂತಿಲ್ಲ. ಜವಾಬ್ದಾರಿಯುತವಾದ ಕ್ರಮಗಳೊಂದಿಗೆ ನಾವು ಈ ಪರಿಸ್ಥಿತಿಯನ್ನು ತಲೆಕೆಳಗಾಗಿಸಬಹುದು.
ಸಂಪಾದಕರ ಟಿಪ್ಪಣಿ: ’ರ್ಯಾಲಿ ಫಾರ್ ರಿವರ್ಸ್’ ಅಭಿಯಾನಕ್ಕೆ ನೀವು ಹೇಗೆ ಬೆಂಬಲಿಸಬಹುದು ಎಂಬುದರ ಕುರಿತು ಇನ್ನಷ್ಟು ಮಾಹಿತಿಯನ್ನು Rallyforrivers.org ನಲ್ಲಿ ತಿಳಿಯಿರಿ.
ಈ ಲೇಖನದ ಒಂದು ಆವೃತ್ತಿಯನ್ನು ಮೂಲತಃ ಸ್ಪೀಕಿಂಗ್ ಟ್ರೀ Speaking Tree ಯಲ್ಲಿ ಪ್ರಕಟಿಸಲಾಗಿತ್ತು.