ನಿಮ್ಮ ಕನಸುಗಳನ್ನು ನನಸಾಗಿಸುವುದು ಹೇಗೆ?
ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಸದ್ಗುರುಗಳು ಉತ್ತರಿಸುತ್ತಾ, ನಮ್ಮ ಆಕಾಂಕ್ಷೆಗಳ ಸ್ವರೂಪವನ್ನು ವಿಶ್ಲೇಷಿಸುತ್ತಾರೆ, ಮತ್ತು ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ಕಂಡುಕೊಳ್ಳಲು ನಾವೇನು ಮಾಡಬೇಕೆಂದು ವಿವರಿಸುತ್ತಾರೆ.
ಪ್ರಶ್ನೆ: ನಮಸ್ಕಾರ. ನಾನು ದೊಡ್ಡ ಕನಸುಗಳನ್ನು ಇಟ್ಟುಕೊಂಡಿದ್ದೇನೆ, ಮತ್ತು ಅವೆಲ್ಲ ನನಸಾಗುತ್ತದೆ ಎಂದು ಆಶಿಸುತ್ತೇನೆ. ಆದರೆ, ನಾನು ಜನರೊಂದಿಗೆ ಸುಲಭವಾಗಿ ಬೆರೆಯುವ ವ್ಯಕ್ತಿಯಲ್ಲದ ಕಾರಣ, ಜಗತ್ತನ್ನು ಎದುರಿಸಲು ಹೆದರುತ್ತೇನೆ. ಕಾಲೇಜಿನ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ, ತಿರಸ್ಕಾರದ ಭಯವಿಲ್ಲದೆ, ನನ್ನ ಕನಸುಗಳ ಬೆನ್ನು ಹತ್ತುವುದು ಹೇಗೆ?
ಸದ್ಗುರು: ನಿದ್ದೆ ಮಾಡುವಾಗ ಜನರು ಕನಸು ಕಾಣುತ್ತಾರೆ. ಆದರೆ ನಾನು ಹೇಳುತ್ತೇನೆ, ಸ್ವಲ್ಪ ಸಮಯದವರೆಗೆ ನಿಮ್ಮ ಕನಸನ್ನು ಮಲಗಿಸಿ. ಈಗಲೇ ಕನಸು ಕಂಡು, ನೀವು ಜಗತ್ತಿನಲ್ಲಿ ಮುಂದೇನಾಗುವಿರಿ ಎಂಬುದನ್ನು ನಿಶ್ಚಯಿಸಿಬಿಡಬೇಡಿ. ಇದು ತುಂಬ ಮುಂಚಿತ ಅದೆಲ್ಲ ಮಾಡಲು.ಮುಂದಿನ ೩-೫ ವರ್ಷಗಳ ಅವಧಿಯಲ್ಲಿ, ನೀವು ಪೂರ್ತಿಯಾಗಿ ಬೇರೆಯೇ ವ್ಯಕ್ತಿಯಾಗಿರುತ್ತೀರಿ. ವಾಸ್ತವದಲ್ಲಿ, ಇಂದಿನಿಂದ ನಾಳೆಯೊಳಗೆ ಕೂಡ, ಗಮನಾರ್ಹವಾದ ಬದಲಾವಣೆ ಅಲ್ಲವಾದರೂ, ಏನಾದರೂ ಬದಲಾಗಿರುತ್ತದೆ. ಆದ್ದರಿಂದು ನೀವು, "ನನ್ನ ಜೀವನದಲ್ಲಿ ನಾನೇನು ಮಾಡಲಿ?” ಎಂದು ಇವತ್ತು ಯೋಚಿಸಬೇಕಿಲ್ಲ. ಹಾಗೆ ಮಾಡಿದರೆ, ನೀವೊಂದು ಚಿಕ್ಕದಾದ ಹಾಗೂ ಪರಿಣಾಮಕಾರಿಯಲ್ಲದ ಕನಸನ್ನು ಕಾಣುವಿರಿ ಅಷ್ಟೆ. ಸದ್ಯಕ್ಕೆ, ನಿಮಗೆಷ್ಟಾಗುವುದೋ ಅಷ್ಟನ್ನು ಗ್ರಹಿಸಿ ಜೀರ್ಣಿಸಿಕೊಳ್ಳುವುದೇ ನಿಮ್ಮ ಕೆಲಸ. ಪೂರ್ಣವಾಗಿ ವಿಕಸಿತರಾದ ಮನುಷ್ಯರಾಗಿ ಬೆಳೆಯಿರಿ - ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಭೌದ್ಧಿಕವಾಗಿ. ಎಲ್ಲಾ ಹಂತಗಳಲ್ಲೂ, ನೀವು ವಿಕಸಿತರಾಗಬೇಕು, ನಿಮಗೆಷ್ಟು ಸಾಧ್ಯವೋ ಅಷ್ಟು.
ಸ್ಪರ್ಧೆಗೆ ಸನ್ನದ್ಧ
ಹಾಗೆ ನೋಡಿದರೆ, ಕನಸು ಅಥವಾ ಮಹತ್ವಾಕಾಂಕ್ಷೆ ಎಂದು ಹೇಳಿದಾಗ, ನೀವು ಒಂದು ಸ್ಪರ್ಧೆಯ ಬಗ್ಗೆ ಯೋಚಿಸುತ್ತಿದ್ದೀರಿ ಎಂದು ಅರ್ಥ. ಇಂದಿನ ದಿನಗಳಲ್ಲಿ ಇದನ್ನು “rat race” (ಪೈಪೋಟಿ) ಎಂದು ಕರೆಯತ್ತಾರೆ. ನೀವು ಪೈಪೋಟಿಗೆ ನಿಂತರೆ, ಇದು “ಯಾರಿಗಂತ ಯಾರು ಉತ್ತಮರು” ಎಂಬುದರ ಬಗ್ಗೆಯಾಗುತ್ತದೆ. ಅರ್ಹತೆ ಪಡೆಯಲು ನೀವೊಬ್ಬ ಇಲಿಯಾಗಿರಬೇಕು! ವಿಕಸನ ಕ್ರಿಯೆಯಲ್ಲಿ ಇದೊಂದು ಭಾರಿ ಹಿನ್ನಡೆಯ ಹೆಜ್ಜೆ. ಗೆದ್ದರೆ, ನೀವೊಬ್ಬ ಸೂಪರ್ ಇಲಿಯಾಗುತ್ತೀರೇನೋ, ಆದರೂ ಒಂದು ಇಲಿಯಷ್ಟೇ. “ನಾನು ಮುಂದೆ ಎಲ್ಲಿರುತ್ತೇನೆ, ಬೇರೆಯವರಿಗಿಂತ ಎಷ್ಟು ಮುಂದೆ ಅಥವಾ ಹಿಂದೆ ಇರುತ್ತೇನೆ” ಎಂಬ ರೀತಿಯಲ್ಲಿ ಯೋಚಿಸಬೇಡಿ. ನಿಮಗೆಷ್ಟಾಗುವುದೋ ಅಷ್ಟನ್ನು ಗ್ರಹಿಸಿ ಜೀರ್ಣಿಸಿಕೊಳ್ಳುವ ಸಮಯವಿದು. ಇದು ಮಾವಿನ ಹಣ್ಣುಗಳನ್ನು ಕೊಯ್ಯುವ ಸಮಯವಲ್ಲ. ಚಿಗುರುತ್ತಿರುವ ಹೂವುಗಳನ್ನು ಕಿತ್ತು, ಸೊಂಪಾಗಿ ಬೆಳೆಯುವ ಸಮಯ.
ನೀವೊಂದು ಸ್ಪರ್ಧೆಯನ್ನು ಗೆಲ್ಲಬೇಕಾದರೆ, ಅದು ಬರೀ ನೀವು ಆಸೆ ಪಟ್ಟಿರಿ ಎಂಬ ಕಾರಣಕ್ಕೆ ಆಗಿಬಿಡುವುದಿಲ್ಲ. ನೀವು ಅದಕ್ಕಾಗಿ ಸೂಕ್ತವಾದ ವಾಹನವನ್ನು ನಿರ್ಮಿಸಬೇಕು. ನಿಮ್ಮ ಬಳಿಯಿರುವುದು ಮಾರುತಿ ೮೦೦ ಕಾರ್, ಆದರೆ, ನಿಮಗೆ ಫಾರ್ಮುಲಾ ಒನ್ ಗೆಲ್ಲುವ ಆಲೋಚನೆ! ಎಷ್ಟು ಬೇಕಾದರೂ ಕನಸು ಕಾಣಿ - ಹೇಗೆ ಲೂಯಿಸ್ ಹಾಮಿಲ್ಟನ್ (ರೇಸ್ ಕಾರ್ ಚಾಲಕ) ನಿಮ್ಮನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿದ್ದ, ಹೇಗೆ ನೀವು ನಿಮ್ಮ ಮಾರುತಿ ೮೦೦ನಲ್ಲಿ ಅವನಿಗಿಂತ ಮುಂದೆ ಹೋದಿರಿ ಇತ್ಯಾದಿ. ಅದರ ಬಗ್ಗೆಯೆಲ್ಲಾ ಕನಸು ಕಾಣಬಹುದು. ಆದರೆ, ಟ್ರ್ಯಾಕ್-ಗೆ ಹೋಗಿ, ನೀವೇನಾದರೂ ಇದನ್ನು ಪ್ರಯತ್ನಿಸಿದರೆ, ನಿಮ್ಮ ಮಾರತಿ ಕಾರ್-ನ ನಾಲ್ಕು ಚಕ್ರಗಳು ನಾಲ್ಕು ದಿಕ್ಕಿನಲ್ಲಿ ಹಾರಿಹೋಗುತ್ತವೆ ಅಷ್ಟೆ.
ಸ್ಪರ್ಧೆಯನ್ನು ಗೆಲ್ಲಲು ಪ್ರಯತ್ನಿಸಬೇಡಿ. ಅದಕ್ಕಾಗಿ ಸಾಕಷ್ಟು ಉತ್ತಮವಾದ ವಾಹನವನ್ನು ನಿರ್ಮಿಸಿ – ಇದೇ ಅತ್ಯಂತ ಮುಖ್ಯವಾದ ವಿಷಯ. ಸ್ಪರ್ಧೆಯನ್ನು ಗೆಲ್ಲುವ ಚಿಂತನೆಯ ಅರ್ಥ - ನೀವು ಹಿಂದಕ್ಕೆ ತಿರುಗಿ "ನನ್ನ ಹಿಂದೆ ಇನ್ಯಾರೋ ಇರುವರು" ಎಂದು ನೋಡುವುದು. ನಿಮ್ಮ ಸುತ್ತಲೂ ಮೂರ್ಖರ ಹಿಂಡಿದ್ದು, ನೀವು ಸ್ಪರ್ಧೆಯನ್ನು ಗೆಲ್ಲುತ್ತಿದ್ದರೆ, ನೀವು ಸ್ವಲ್ಪ ಲೇಸಾದ ಮೂರ್ಖರಾಗಿರುತ್ತೀರಿ, ಅಷ್ಟೆ. ಎಂದಿಗೂ ಈ ರೀತಿಯಲ್ಲಿ ವಿಚಾರಮಾಡಬೇಡಿ. ಇಂದು ಇಡೀ ಮಾನವತೆಯೇ “ಬೇರೆಯವರಿಗಿಂತ ಉತ್ತಮವಾಗಿರಬೇಕು” ಎಂಬ ಹಂಬಲದ ತಪ್ಪಾದ ದಿಕ್ಕಿನಲ್ಲಿ ಓಡುತ್ತಿದೆ. ಇದು ನಿಮ್ಮನ್ನು ಸದಾಕಾಲ ಸಂಘರ್ಷದ ಸ್ಥಿತಿಯಲ್ಲಿಟ್ಟಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಬೇರೆಯವರ ವಿಫಲತೆಯನ್ನು ನೋಡಿ ಸಂತೋಷ ಪಟ್ಟರೆ, ಅದೊಂದು ರೋಗವೇ ಸರಿ.
ನಿಮ್ಮ ಕನಸುಗಳ ಆಚೆ
ಜಗತ್ತಿನಲ್ಲಿ ನೀವು ಮಾಡಬೇಕಾದದ್ದು ಏನು? ಅತ್ಯಂತ ಅಗತ್ಯವಾದದ್ದನ್ನು ನೀವು ಮಾಡಬೇಕು, ಜಗತ್ತಿನ ಪ್ರಸ್ತುತ ಪರಿಸ್ಥಿತಿಗೆ ಸಂಬಂಧವೇ ಇಲ್ಲದ ನಿಮ್ಮ ಯಾವುದೋ ಶೋಕಿಯ ಕೆಲಸವನ್ನಲ್ಲ. ಹಾಗಾದರೆ, ಅದನ್ನು ಮಾಡುವುದರಿಂದ ಆಗುವ ಪ್ರಯೋಜನವೇನು? ಬಹಳ ಮಂದಿ, ತಮ್ಮ ಶೋಕಿ ಕೆಲಸವನ್ನು ಮಾಡಿ, ಜಗತ್ತನ್ನು ಅನೇಕ ರೀತಿಯಲ್ಲಿ ಆಗಲೇ ನಾಶಪಡಿಸಿದ್ದಾರೆ. ಅಗತ್ಯವಾದದ್ದನ್ನು ನಾವು ಸಂತೋಷದಿಂದ ಮಾಡಬಹುದಾದರೆ, ನಾವು ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತೇವೆ; ಮತ್ತು ಜನರು ಒಟ್ಟಾಗಿ ಸೇರಿ ಆ ಚಟುವಟಿಕೆಯನ್ನು ಬೆಂಬಲಿಸುತ್ತಾರೆ – ನಂತರ, ಬೇರೆಲ್ಲವೂ ನಡೆಯುತ್ತದೆ.
ನಿಮ್ಮ ಕನಸುಗಳು ಗತಕಾಲದ ಜೀವನದ ಅನುಭವದಿಂದ ಬರುವುದರಿಂದ, ಸ್ವಲ್ಪ ಸಮಯದವರೆಗೆ ನಿಮ್ಮ ಕನಸನ್ನು ಮಲಗಿಸಿ. ಗತಿಸಿ ಹೋದ ಕಾಲವು ನಮ್ಮ ಭವಿಷ್ಯದ ಮೇಲೆ ಯಾವ ಪರಿಣಾಮವನ್ನೂ ಬೀರಬಾರದು. ಇಲ್ಲವಾದಲ್ಲಿ, ನಾವು ಗತಿಸಿ ಹೋದದ್ದನ್ನೇ ಮರುಬಳಕೆ ಮಾಡಿ, ಅದನ್ನೇ ಭವಿಷ್ಯವೆಂದು ಭಾವಿಸುತ್ತೇವೆ. ಬಹುಪಾಲು ಜನರ “ಭವಿಷ್ಯ”ದ ಕಲ್ಪನೆಯೆಂದರೆ, ಗತಿಸಿ ಹೋದ ಕಾಲದ ತುಂಡೊಂದನ್ನು ತೆಗೆದುಕೊಂಡು, ಅದನ್ನು ಚೆಂದಗೊಳಿಸಿ, ಅದನ್ನೇ ಸ್ವಲ್ಪ ಸುಧಾರಿಸಿದ “ಭವಿಷ್ಯ”ವೆಂದು ಭಾವಿಸುವುದು.
ಭವಿಷ್ಯವು ಹೊಸದಾಗಿ ಸಂಭವಿಸಬೇಕು. ನಿಮಗೆ ಯಾವುದರ ಬಗ್ಗೆ ಕನಸು ಕಾಣಲು ಸಾಧ್ಯವಾಗಲಿಲ್ಲವೋ, ಅಂತಹದೇನಾದರು ನಿಮ್ಮ ಜೀವನದಲ್ಲಿ ನಡೆಯಲಿ – ಅದು ನಿಮಗೆ ನನ್ನ ಆಶೀರ್ವಾದ. ನೀವು ಊಹಿಸಲಸಾಧ್ಯವಾದದ್ದು ನಡೆಯಬೇಕು. ನೀವು ಕಂಡಿರುವ ಕನಸು ನನಸಾದರೆ, ಅದರಲ್ಲೇನಿದೆ? ನಿಮಗೇನು ತಿಳಿದಿದೆಯೋ, ಅದೇ ಆದರೆ, ಅದೊಂದು ಸಾಧಾರಣ ಜೀವನ. ನಿಮಗೆ ಕಲ್ಪಿಸಿಕೊಳ್ಳಲಾಗದಂತಹದೇನಾದರೂ ನಿಮ್ಮ ಜೀವನದಲ್ಲಿ ಸಂಭವಿಸಲಿ - ಆವಾಗ ಮಾತ್ರ, ನಿಮ್ಮ ಜೀವನವು ಸಡಗರಭರಿತವಾಗಿರುತ್ತದೆ.
ನಿಮ್ಮ ಕನಸುಗಳನ್ನು ಇಲ್ಲವಾಗಿಸಿ. ನಿಮ್ಮ ಕನಸುಗಳು ನುಚ್ಚುನೂರಾಗಲಿ. ಹಾಗಾದಾಗ, ನಿಮ್ಮ ಸಂಪೂರ್ಣ ಸಾಮರ್ಥ್ಯಕ್ಕೆ ಬೆಳೆಯಲು ನೀವು ಹಂಬಲಿಸುವಿರಿ.
ಸಂಪಾದಕರ ಟಿಪ್ಪಣಿ: ನೀವು ಯಾವುದಾದರು ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.