ಒಳಗಿನ ಸೂರ್ಯನನ್ನು ಸಚೇತನಗೊಳಿಸುವುದು ಎಂದರೆ ನಿಜವಾಗಿಯೂ ಏನು?
ಒಳಗಿನ ಸೂರ್ಯನನ್ನು ಸಚೇತನಗೊಳಿಸುವುದು ಎಂದರೆ ನಿಜವಾಗಿಯೂ ಏನು? ಸದ್ಗುರುಗಳು ತಮ್ಮ ಯೌವನದಲ್ಲಿ ತಾವು ಸೂರ್ಯಕ್ರಿಯೆಯನ್ನು ಕಲಿಯುವಾಗ ತಮ್ಮಲ್ಲಾದ ಪರಿವರ್ತನೆಯ ಕಥೆಯನ್ನು ವಿವರಿಸುತ್ತಾರೆ. ಒಂದು ಕ್ರಿಯೆಯನ್ನು ಅಭ್ಯಾಸ ಮಾಡುವ ಮೂಲಭೂತ ಉದ್ಧೇಶ, ಅಸ್ತಿತ್ವದ ಎಲ್ಲದರೊಂದಿಗೆ ನಿಮ್ಮನ್ನು ನೀವು ಹೊಂದಿಸಿಕೊಳ್ಳುವುದು ಎನ್ನುವುದನ್ನು ಅವರು ವಿವರಿಸುತ್ತಾರೆ.
ಪ್ರಶ್ನೆ: ಸದ್ಗುರು, ನೀವು ಹಠಯೋಗವನ್ನು ಬಾಲಕನಾಗಿದ್ದಾಗಿನಿಂದ ಅಭ್ಯಾಸ ಮಾಡಲು ಪ್ರಾರಂಭಿಸಿದಿರಿ ಎಂದು ಹೇಳಿದ್ದೀರಿ. ಅದರಲ್ಲಿ ಸೂರ್ಯಕ್ರಿಯೆಯೂ ಸೇರಿದ್ದಿತಾ? ಮತ್ತು ಹೌದಾದರೆ, ಆ ವಿಷಯದಲ್ಲಿ ನಿಮ್ಮ ಅನುಭವವೇನು?
ಸದ್ಗುರು: ನಾನು ಬಾಲಕನಾಗಿದ್ದಾಗ, ನನ್ನನ್ನು ಬೆಳಿಗ್ಗೆ ಏಳಿಸುವುದು ಒಂದು ಮಹತ್ಕಾರ್ಯವಾಗಿತ್ತು. ನಾವು ಬೆಳಿಗ್ಗೆ 8.30ಕ್ಕೆ ಶಾಲೆಗೆ ಹೊರಡಬೇಕಾಗಿತ್ತು, ಹಾಗಾಗಿ, 6.30 ರಿಂದಲೇ ನನ್ನ ಕುಟುಂಬದವರು ತಮ್ಮ ಪ್ರಯತ್ನವನ್ನು ಪ್ರಾರಂಭಿಸುತ್ತಿದ್ದರು. ಮೊದಲು, ನನ್ನ ಇಬ್ಬರು ಅಕ್ಕಂದಿರು ತಮ್ಮ ಕೈಯಲ್ಲಾದಷ್ಟು ಪ್ರಯತ್ನ ಮಾಡುತ್ತಿದ್ದರು. ನಾನು ನಿದ್ರಿಸುತ್ತಲೇ ಇರುತ್ತಿದ್ದೆ. ಆನಂತರ ಅವರು ತಣ್ಣೀರನ್ನು ತಂದು ನನ್ನ ಮುಖಕ್ಕೆ ಸಿಂಪಡಿಸುತ್ತಿದ್ದರು – ನಾನು ಪುನಃ ನಿದ್ದೆ ಮಾಡಿಬಿಡುತ್ತಿದ್ದೆ. ಆಮೇಲೆ ನನ್ನ ತಾಯಿ ಬರುತ್ತಿದ್ದರು ಮತ್ತು ನನ್ನನ್ನು ಎಬ್ಬಿಸಿ ಕುಳ್ಳಿರಿಸುತ್ತಿದ್ದರು. ಅವಳು “ಹಾಸಿಗೆಯಿಂದ ಎದ್ದೇಳು, ಎದ್ದು ಬಾ” ಎಂದು ಹೇಳುತ್ತಿದ್ದರು, ನಾನು “ಸರಿ, ಸರಿ” ಎನ್ನುತ್ತಿದ್ದೆ. ಅವರು ಹೊರಟು ಹೋದ ಕೂಡಲೇ ನಾನು ಪುನಃ ನಿದ್ರೆ ಮಾಡಿಬಿಡುತ್ತಿದ್ದೆ.
ಆಮೇಲೆ ಅವರು ನನ್ನನ್ನು ಹಾಸಿಗೆಯಿಂದ ಹೇಗೋ ಹೊರತಂದು ಸ್ನಾನದ ಕೋಣೆಯ ಹತ್ತಿರ ನನ್ನ ಸರದಿಗಾಗಿ ಕಾದು ನಿಲ್ಲುವಂತೆ ಮಾಡುತ್ತಿದ್ದರು. ಮನೆಯಲ್ಲಿ ಕೇವಲ ಎರಡು ಸ್ನಾನದ ಕೋಣೆಗಳಿದ್ದವು. ಅವುಗಳಲ್ಲಿ ಒಂದು ಮಾತ್ರ ನಿಜವಾದ ಸ್ನಾನದ ಕೋಣೆಯಾಗಿತ್ತು, ಮತ್ತೊಂದು ಸಣ್ಣ ಬಚ್ಚಲಾಗಿತ್ತು. ನಾವು ನಾಲ್ಕು ಜನರು ಶಾಲೆಗೆ ಹೋಗುವವರಾಗಿದ್ದೆವು ಮತ್ತು ನಮ್ಮ ತಂದೆಯವರು ಆಸ್ಪತ್ರೆಗೆ ಹೋಗಬೇಕಾಗಿತ್ತು, ಹಾಗಾಗಿ ಸ್ನಾನದ ಕೋಣೆಯಲ್ಲಿ ನಿರ್ದಿಷ್ಟವಾದ ಸಮಯವನ್ನು ಕಳೆಯಬೇಕಾಗಿತ್ತು. ನನ್ನ ತಾಯಿ ಬ್ರಷ್ಗೆ ಟೂತ್ಪೇಸ್ಟ್ ಹಾಕಿ ಕೊಡುತ್ತಿದ್ದರು. ನಾನು ಅದನ್ನು ಬಾಯಲ್ಲಿ ತೂರಿಸಿಕೊಂಡು ನಿದ್ದೆ ಮಾಡಿಬಿಡುತ್ತಿದ್ದೆ. ನನ್ನ ಸ್ನಾನದ ಸರದಿ ಬಂದಾಗ, ನಾನು ಒಳಗೆ ಹೋಗಿ ಅಲ್ಲೇ ಮಲಗಿ ನಿದ್ರಿಸಿ ಬಿಡುತ್ತಿದ್ದೆ. ನನ್ನನ್ನು ಯಾರೂ ಎಬ್ಬಿಸದಿದ್ದರೆ ನಾನು ಮಧ್ಯಾಹ್ನ ಹನ್ನೆರಡು ಅಥವಾ ಒಂದು ಗಂಟೆಯಾದರೂ ಮಲಗೇ ಇರುತ್ತಿದ್ದೆ. ನನಗೆ ತುಂಬಾ ಹಸಿವಾದರೆ ಮಾತ್ರ ಏಳುತ್ತಿದ್ದೆ. ನಾನು ಸುಮ್ಮನೆ ನೆಪ ಹೂಡುತ್ತಿದ್ದೆ ಎಂದಲ್ಲ – ನನಗೆ ಅಷ್ಟು ನಿದ್ರೆ ಬರುತ್ತಿತ್ತು. ನಾನು ಎಚ್ಚರವಾಗಿದ್ದಾಗ, ವಿಪರೀತ ಚಟುವಟಿಕೆಯಿಂದ ಕೂಡಿರುತ್ತಿದ್ದೆ. ಇಲ್ಲವಾದರೆ, ನಾನು ನಿದ್ರೆ ಮಾಡಿದರೆ, ನಾನು ಪೂರ್ತಿ ಇಲ್ಲವಾಗಿರುತ್ತಿದ್ದೆ.
ಆನಂತರ ನಾನು ಯೋಗಾಭ್ಯಾಸ ಪ್ರಾರಂಭಿಸಿದೆ. ಮೂಲಭೂತವಾಗಿ, ನಾನು ಸೂರ್ಯಕ್ರಿಯೆಯನ್ನು ಮಾಡುತ್ತಿದ್ದೆ, ಆದರೆ ಅದು ನೀವೀಗ ಮಾಡುತ್ತಿರುವುದಕ್ಕಿಂತ ಸಂಪೂರ್ಣ ವಿಭಿನ್ನವಾಗಿತ್ತು. ನಾನು ಅಭ್ಯಾಸ ಪ್ರಾರಂಭಿಸಿದ ಸುಮಾರು ಆರರಿಂದ ಎಂಟು ತಿಂಗಳ ಸಮಯದಲ್ಲಿ, ನಾನು ಎಲ್ಲಿದ್ದರೂ, ಬೆಳಗ್ಗಿನ ಜಾವ 3.30 ಅಥವಾ 3.40 ರ ಹೊತ್ತಿಗೆ ಎದ್ದಿರುತ್ತಿದ್ದೆ. ನಾನು ಏಳಲೇಬೇಕಾಗುತ್ತಿತ್ತು – ಅದರಲ್ಲೇನೂ ಸಂಶಯವಿರಲಿಲ್ಲ. ನನ್ನ ನಿದ್ರೆಯ ಅವಧಿ ಕಡಿಮೆಯಾಗತೊಡಗಿತ್ತು. ನನಗೆ ಹದಿಮೂರು ಅಥವಾ ಹದಿನಾಲ್ಕು ವಯಸ್ಸಾಗುವ ವೇಳೆಗೆ, ನಾನು ಎಲ್ಲರೂ ಏಳುವ ಮೊದಲೇ ಎದ್ದಿರುತ್ತಿದ್ದೆ.
ಬ್ರಹ್ಮ ಮುಹೂರ್ತ ಮತ್ತು ಸೂರ್ಯ
ಸೂರ್ಯೋದಯಕ್ಕೆ ಮೊದಲು, ಸುಮಾರು 3.20 ರಿಂದ 3.40 ರ ಒಳಗೆ, ಸೂರ್ಯನ ಶಕ್ತಿ ನಮ್ಮನ್ನು ತಲುಪಲು ಪ್ರಾರಂಭಿಸುತ್ತದೆ. ಬೆಳಕು ಬರುವುದಿಲ್ಲವಾದರೂ, ಭೂಮಿಯ ಮೇಲೆ ಸೌರಶಕ್ತಿಯು ಮಹತ್ವ ಪೂರ್ಣವಾಗಿ ವೃದ್ಧಿಸಲು ಪ್ರಾರಂಭಿಸುತ್ತದೆ. ರಾತ್ರಿಯಲ್ಲಿ, ವಾಸ್ತವವಾಗಿ ಸೂರ್ಯಾಸ್ತದ ಮೊದಲೇ ಸೌರಶಕ್ತಿ ಕಡಿಮೆಯಾಗುತ್ತದೆ. ಜಗತ್ತಿನ ವಿವಿಧ ಭಾಗಗಳಲ್ಲಿ, ಸೂರ್ಯನು ಬೇರೆ ಬೇರೆ ಸಮಯಗಳಲ್ಲಿ ಮತ್ತು ವರ್ಷದ ಬೇರೆ ಬೇರೆ ಸಮಯಕ್ಕನುಗುಣವಾಗಿ ಮುಳುಗುತ್ತಾನೆ. ನೀವು ಸಮಭಾಜಕ ವೃತ್ತಕ್ಕೆ ಹತ್ತಿರವಾದಂತೆಲ್ಲಾ, ಸೂರ್ಯಸ್ತವು 6.00 ರಿಂದ 6.30ರ ನಡುವೆ ಇರುತ್ತದೆ.
ಭಾರತದಲ್ಲಿ, ಸಂಜೆ ಆರು ಗಂಟೆಗೆ ಸೂರ್ಯಾಸ್ತವಾಗುತ್ತದೆ ಎಂದುಕೊಳ್ಳೋಣ. ಸುಮಾರು 5.20ರ ಹೊತ್ತಿಗೆ ಸೌರಶಕ್ತಿಯು ತನ್ನ ತೀಕ್ಷ್ಣತೆಯನ್ನು ಕಳೆದುಕೊಳ್ಳುತ್ತದೆ. ಬೆಳಕು ಇದ್ದರೂ, ಶಕ್ತಿ ಕಡಿಮೆಯಾಗುತ್ತದೆ. ಭೂಮಿಯ ಪರಿಭ್ರಮಣೆಯ ಕಾರಣದಿಂದ, ಸೂರ್ಯನು ನಮ್ಮಿಂದ ದೂರ ಹೋಗುತ್ತಿರುತ್ತಾನೆ ಮತ್ತು ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಶಕ್ತಿಯ ಆ ಹಿಂತೆಗೆದುಕೊಳ್ಳುವಿಕೆಯೇ ಜನರು ಅನುಭವಿಸುವ ಒಂದು ರೀತಿಯ ಮನೋಹರವಾದ ಘಟನೆ. ನೀವು ನಿಜವಾಗಿಯೂ ಸೂರ್ಯಾಸ್ತದ ಕಡೆಗ ಮನಕೊಟ್ಟರೆ, ಅದಕ್ಕೊಂದು ಅತೀಂದ್ರಿಯ ಸ್ವರೂಪವಿರುವುದನ್ನು ನೀವು ಕಾಣುವಿರಿ, ಏಕೆಂದರೆ ಮಧ್ಯಾಹ್ನದ ಹೊತ್ತು ಇದ್ದ ಪ್ರಖರ ಶಕ್ತಿ ಇದ್ದಕ್ಕಿದ್ದಂತೆಯೇ ಮಾಯವಾಗಿರುತ್ತದೆ. ಬಹುತೇಕ ಅದು ನಿಮ್ಮ ಉಸಿರನ್ನೇ ನಿಲ್ಲುವಂತೆ ಮಾಡುತ್ತದೆ.
ಬೆಳಗ್ಗಿನ ಜಾವ ಸುಮಾರು 3.20ರ ನಂತರ, ಸೌರಶಕ್ತಿಯು ಏರಲು ಪ್ರಾರಂಭಿಸುತ್ತದೆ. ನಾವಿದನ್ನು ಬ್ರಹ್ಮ ಮುಹೂರ್ತ ಎನ್ನುತ್ತೇವೆ. ಬ್ರಹ್ಮನ್ ಎನ್ನುವುದು ಸೃಷ್ಟಿಯ ಅಮೂರ್ತ ರೂಪವಾಗಿದೆ. ನಮಗೆ ತಿಳಿದಿರುವಂತೆ, ಈ ಸೌರವ್ಯೂಹದಲ್ಲಿ, ಸೂರ್ಯನೇ ನಮ್ಮ ಮತ್ತು ಸೃಷ್ಟಿಯ ಶಕ್ತಿಯ ಮೂಲಭೂತವಾದ ಸ್ರೋತಸ್ಸಾಗಿದ್ದಾನೆ. ಪ್ರತಿ ಕ್ಷಣವೂ ನಮ್ಮ ಶರೀರದಲ್ಲಿ ನಡೆಯುವ ಕೋಟ್ಯಾಂತರ ರಾಸಾಯನಿಕ ಕ್ರಿಯೆಗಳು ಸೌರಶಕ್ತಿಯಿಲ್ಲದೇ ನಡೆಯುವುದಿಲ್ಲ. ಬ್ರಹ್ಮಮಹೂರ್ತ ಪ್ರಾರಂಭವಾದ ಕ್ಷಣದಿಂದ, ನಿಮ್ಮ ಶರೀರ ನಿಮ್ಮೊಳಗಿನಿಂದ ಅತ್ಯಂತ ಆಳವಾದ ಹಂತದಿಂದ ಎಚ್ಚರಗೊಳ್ಳುತ್ತದೆ. ಸೂರ್ಯ ಕ್ರಿಯೆಯನ್ನು ಅಭ್ಯಾಸ ಮಾಡಲಾರಂಭಿಸಿದ ಕೇವಲ ಆರರಿಂದ ಎಂಟು ತಿಂಗಳಲ್ಲಿ, ನಾನು ಎಲ್ಲರಿಗಿಂತ ಮೊದಲು ಏಳ ತೊಡಗಿದ್ದೆ. ನಾನು ಹೀಗೆ ಏಳುತ್ತಿದ್ದೇನೆ ಎನ್ನುವುದನ್ನು ನನ್ನ ಕುಟುಂಬಕ್ಕೆ ನಂಬಲಾಗುತ್ತಿರಲಿಲ್ಲ.
ಅಂತಿಮವಾಗಿ ಕ್ರಿಯೆಗಳೆಂದರೆ ಏನು?
ಸೂರ್ಯ ಕ್ರಿಯೆಯು ನನ್ನನ್ನು ಸಿದ್ಧಗೊಳಿಸಿತು. ಅದೊಂದು ವ್ಯಾಯಾಮವಾಗಿರಲಿಲ್ಲ. ನೀವು ಆ ಶಕ್ತಿಯೊಡನೆ ತಾದಾತ್ಮ್ಯ ಹೊಂದಿದಿರಿ ಅಷ್ಟೆ, ಮತ್ತು ಅದು ಇದ್ದಕ್ಕಿದ್ದಂತೆಯೇ ಜಾಗೃತ ಆಯಿತು ಅಷ್ಟೆ. ಕ್ರಿಯೆಗಳೆಂದರೆ ಹೀಗೆಯೇ. ಕ್ರಿಯೆ ಎಂದರೆ ನಿಮ್ಮನ್ನು ಒಂದು ದಿಕ್ಕಿನಲ್ಲಿ ಓಡಿಸುವುದಲ್ಲ – ಅದು ಎಲ್ಲದರೊಂದಿಗೆ ಸರಿಯಾದ ಹೊಂದಾಣಿಕೆಯನ್ನು ಮಾಡಿಕೊಳ್ಳುವ ಕುರಿತಾದದ್ದು. ಎಲ್ಲವೂ ಒಂದು ಹೊಂದಾಣಿಕೆಯಲ್ಲಿದ್ದಾಗ, ಅದು ಸಲೀಸಾಗಿರುತ್ತದೆ, ಎಲ್ಲೂ ಘರ್ಷಣೆಯಿರುವುದಿಲ್ಲ.ಘರ್ಷಣೆಯಿಲ್ಲದಿದ್ದಾಗ, ಸವೆತವಿರುವುದಿಲ್ಲ, ಒತ್ತಡವಿರುವುದಿಲ್ಲ. ಘರ್ಷಣೆಯಿಲ್ಲದಿದ್ದಾಗ, ಅದು ಅಡೆತಡೆಯಿಲ್ಲದೆ ಕೆಲಸ ಮಾಡಬಲ್ಲದು. ಘರ್ಷಣೆಯಿದ್ದಾಗ, ಅದಕ್ಕೆ ಹೆಚ್ಚು ಹೆಚ್ಚು ವಿರಾಮಗಳು ಬೇಕಾಗುತ್ತವೆ.
ಯೋಗದ ಪ್ರಕ್ರಿಯೆಯೆಂದರೆ ಇದೇ – ಹಲವಾರು ಹಂತಗಳಲ್ಲಿ ಉಳಿದ ಅಸ್ತಿತ್ವದೊಂದಿಗೆ ಹೊಂದಾಣಿಕೆಯನ್ನು ಸೃಷ್ಟಿಸುವುದು. ನೀವು ಪರಿಪೂರ್ಣವಾದ ಹೊಂದಾಣಿಕೆಯಲ್ಲಿದ್ದಾಗ ಮಾತ್ರ ಯೋಗವನ್ನು ತಿಳಿಯುತ್ತೀರಿ. ನೀವು ಹೊರಗಿರುವ ಏನೋ ಒಂದರೊಂದಿಗೆ ಹೊಂದಾಣಿಕೆಯನ್ನು ಸೃಷ್ಟಿಸಿಕೊಳ್ಳಬೇಕಾಗಿಲ್ಲ. ನೀವು ನಿಮ್ಮ ಶರೀರ ವ್ಯವಸ್ಥೆಯೊಂದಿಗೆ ಪರಿಪೂರ್ಣವಾದ ಹೊಂದಾಣಿಕೆಯನ್ನು ಸಾಧಿಸಿದರೆ, ಸಹಜವಾಗಿಯೇ, ಎಲ್ಲದರೊಂದಿಗೂ ಪರಿಪೂರ್ಣವಾದ ಹೊಂದಾಣಿಕೆ ಸಾಧ್ಯವಾಗುತ್ತದೆ. ಇದು ಸಾಧ್ಯವಾದಾಗ, ಎಲ್ಲವೂ ಪ್ರಾಕೃತಿಕ ವ್ಯವಸ್ಥೆಯಂತೆ ಆಗುತ್ತದೆ.
ಎಷ್ಟು ತಿನ್ನಬೇಕು, ಎಷ್ಟು ಕ್ಯಾಲೋರಿಗಳನ್ನು ತಿನ್ನಬೇಕು, ಎಷ್ಟು ವ್ಯಾಯಾಮ ಮಾಡಬೇಕು, ಏನು ಮಾಡಬೇಕು – ಈ ಎಲ್ಲಾ ಅಸಂಬದ್ಧಗಳೂ ಮಾಯವಾಗುತ್ತವೆ. ನೀವು ನಿಮ್ಮ ಜೀವನದೊಂದಿಗೆ ಏನು ಮಾಡಬೇಕು ಎನ್ನುವುದು ಸಹಜವಾಗಿಯೇ ನಿಮಗೆ ತಿಳಿಯುತ್ತದೆ, ಯಾವುದೇ ಆಲೋಚನೆಯಿಲ್ಲದೆ ತಿಳಿಯುತ್ತದೆ, ಏಕೆಂದರೆ ಅಗತ್ಯವಾದ ಬುದ್ಧಿಶಕ್ತಿಯನ್ನು ಈ ಜೀವದಲ್ಲಿ ಅಡಕಗೊಳಿಸಲಾಗಿದೆ. ನಿಮ್ಮ ಶರೀರ ಮತ್ತು ನಿಮ್ಮ ಮೆದುಳನ್ನು ಒಳಗಿನಿಂದ ತಯಾರಿಸಿದ ಬುದ್ಧಿ ಶಕ್ತಿಯೇ ಅದು.
ಸಂಪಾದಕರ ಟಿಪ್ಪಣಿ: ಈಶ ಹಠ ಯೋಗ ಕಾರ್ಯಕ್ರಮಗಳು ಶಾಸ್ತ್ರೀಯ ಹಠ ಯೋಗದ ವಿಸ್ತೃತ ಅನ್ವೇಷಣೆಯಾಗಿದ್ದು, ಇಂದಿನ ಪ್ರಪಂಚದಲ್ಲಿ ಕಣ್ಮರೆಯಾಗಿರುವ ಈ ಪ್ರಾಚೀನ ವಿಜ್ಞಾನದ ಅನೇಕ ಆಯಾಮಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನವಾಗಿದೆ. ಈ ಕಾರ್ಯಕ್ರಮಗಳು ಉಪ-ಯೋಗ, ಅಂಗಮರ್ದನ, ಸೂರ್ಯಕ್ರಿಯಾ, ಸೂರ್ಯಶಕ್ತಿ, ಯೋಗಾಸನಗಳು ಮತ್ತು ಭೂತಶುದ್ಧಿ, ಮುಂತಾದ ಶಕ್ತಿಯುತ ಯೋಗಾಭ್ಯಾಸಗಳನ್ನು ಅನ್ವೇಷಿಸುಲು ಅತ್ಯುತ್ತಮ ಅವಕಾಶವಾಗಿದೆ.
Find Hatha Yoga Program Near You
A version of this article was originally published in Isha Forest Flower May 2017.