ಮಾನವ ಶರೀರದಲ್ಲಿ ಪ್ರಾಣಶಕ್ತಿಯ ಜ್ಯಾಮಿತಿ
ಮಾನವ ಶರೀರದಲ್ಲಿ ಪ್ರಾಣಶಕ್ತಿಯ ಜ್ಯಾಮಿತಿ ಮತ್ತು ಅದರ ನಿರ್ಣಯದಿಂದ ಹಿಡದು ಗೊಂದಲ ಮತ್ತು ಜಾಗೃತಿಯವರೆಗಿನ ಪಯಣ, ಇವುಗಳ ಬಗ್ಗೆ ಸದ್ಗುರುಗಳ ವಿಚಾರ
ನಿಮ್ಮ ಪ್ರಾಣಶಕ್ತಿಯ ವ್ಯವಸ್ಥೆ ಮತ್ತು ನಿಮ್ಮ ಕಲ್ಪನೆಗಳು ಹೇಗೆ ಸಮ್ಮಿಳಿತಗೊಂಡಿವೆ
ಸದ್ಗುರು: ಭೌತಿಕ ಅಸ್ತಿತ್ವ ಮತ್ತು ಪ್ರಾಣಶಕ್ತಿಯ ಅಸ್ತಿತ್ವಗಳ ನಡುವೆ ಒಂದು ವಿಶೇಷ ಜ್ಯಾಮಿತಿ ಇದೆ. ಈ ಜಗತ್ತಿನಲ್ಲಿ ಒಂದು ಅಣುವಿನಿಂದ ಬ್ರಹ್ಮಾಂಡದವರೆಗೂ ಎಲ್ಲವೂ ತಮ್ಮದೇ ರೀತಿಯಲ್ಲಿ ಕೆಲಸ ಮಾಡುವುದಕ್ಕೆ ಕಾರಣವೂ ಜ್ಯಾಮಿತಿಯ ಪರಿಪೂರ್ಣತೆಯೇ. ಜ್ಯಾಮಿತಿಯ ಒಂದು ಸುಸ್ಥಿರ ಮತ್ತು ಮೂಲ ರಚನೆ ತ್ರಿಕೋಣ. ಮಾನವ ಪ್ರಾಣಶಕ್ತಿ ವ್ಯವಸ್ಥೆಯಲ್ಲಿ ಎರಡು ಸಮಬಾಹು ತ್ರಿಕೋಣಗಳಿರುತ್ತವೆ -ಒಂದು ಕೆಳಭಾಗದಲ್ಲಿ ಮೇಲ್ಮುಖವಾಗಿ ಮತ್ತು ಇನ್ನೊಂದು ಮೇಲ್ಭಾಗದಲ್ಲಿ ಕೆಳಮುಖವಾಗಿ. ಈ ಎರಡೂ ತ್ರಿಕೋಣಗಳು ಸಾಮಾನ್ಯವಾಗಿ ಅನಾಹತದ ಸ್ವಲ್ಪ ಮೇಲ್ಭಾಗದ್ಲಲಿ ಸಂಧಿಸುತ್ತವೆ. ನಿಮ್ಮ ಮನಸ್ಸುಮತ್ತು ಕಲ್ಪನೆಗಳ ಜೊತೆ ವ್ಯವಹರಿಸಬೇಕೆಂದರೆ, ಸ್ವಲ್ಪ ಮಟ್ಟಿಗಾದರೂ ಈ ಎರಡೂ ತ್ರಿಕೋಣಗಳ ಸರಿಯಾದ ಜೋಡಣೆ ಬಹಳ ಮುಖ್ಯವಾಗುತ್ತದೆ. ಈ ಎರಡೂ, ಅಂದರೆ ಮೇಲ್ಮುಖ ತ್ರಿಕೋಣ ಮತ್ತು ಕೆಳಮುಖ ತ್ರಿಕೋಣದ ಜೋಡಣೆ ಹೇಗಿರಬೇಕೆಂದರೆ, ಅವುಗಳು ಸಂಧಿಸಿದಾಗ ಒಂದು ಸಮಗ್ರ ಆರು ಸಮಭುಜಗಳುಳ್ಳ ನಕ್ಷತ್ರ ರಚನೆಯಾಗಬೇಕು ಮತ್ತು ಹೊರಚಾಚಿಕೊಂಡಿರುವ ಆರು ತ್ರಿಕೋಣಗಳೂ ಸಮಬಾಹು ತ್ರಿಕೋಣಗಳಾಗಿರಬೇಕು.
ಸರಿಯಾದ ಜೋಡಣೆಯಿಂದ ನಿಮ್ಮ ಕಲ್ಪನೆಗಳನ್ನು ನಿಮ್ಮಿಚ್ಛೆಯಂತೆ ಪ್ರಕಟ ಪಡಿಸಬಹುದು. ನಿಮ್ಮ ಕಲ್ಪನಾ ಶಕ್ತಿಯನ್ನು ಹೆಚ್ಚಿಸಬೇಕೆಂದರೆ, ಶರೀರದ ಜ್ಯಾಮಿತಿಯ ಪ್ರಕಾರ ಬುನಾದಿ ಎನಿಸಿರುವ ಮೇಲ್ಮುಖ ತ್ರಿಕೋಣವನ್ನು ನಿಮ್ಮ ಕಲ್ಪನೆಗಳ ಮೂಲವಾದ ವಿಶುದ್ಧಿಯೂ ಸೇರುವಂತೆ ಮೇಲೆತ್ತಬೇಕು. ಅದನ್ನು ಮೇಲೆತ್ತಿ, ಸದಾ ಅಲ್ಲೇ ಹಿಡಿದಿಟ್ಟುಕೊಳ್ಳಲು ಯೋಗದಲ್ಲಿ ಒಂದು ನಿರ್ದಿಷ್ಟ ಸಾಧನೆ ಇದೆ. ಯಾವುದೇ ಸಾಧನೆಯಿಲ್ಲದೇ ಇದನ್ನು ಮಾಡುವ ಸುಲಭ ವಿಧಾನವೆಂದರೆ, ಸ್ವಲ್ಪ ಸಮಯದವರೆಗೂ ಆಹಾರ ಸೇವಿಸದೇ ಇರುವುದು. ಸಾಮಾನ್ಯವಾಗಿ ಹೊಟ್ಟೆ ಖಾಲಿಯಿದ್ದಾಗ, ಮೇಲ್ಮುಖ ತ್ರಿಕೋಣವು ತಂತಾನೇ ಮೇಲೇರುತ್ತದೆ. ಒಮ್ಮೆ ನೀವು ಆಹಾರ ಸೇವಿಸಿದರೆ, ಅದು ಮತ್ತೆ ಕೆಳಗಿಳಿಯುತ್ತದೆ.
ಚಕ್ರಗಳನ್ನು ಸಕ್ರಿಯವಾಗಿರಿಸಿಕೊಳ್ಳುವುದರ ಮಹತ್ವ
ನಮ್ಮ ದೇಹದಲ್ಲಿ ಒಂದು ನೂರಾ ಹದಿನಾಲ್ಕು ಚಕ್ರಗಳಿವೆ. ಎಪ್ಪತ್ತೆರಡು ಸಾವಿರ ನಾಡಿಗಳು ಅಥವಾ ದೇಹದ ಪ್ರಾಣಶಕ್ತಿ ಚಲನಾ ಪಥಗಳು, ಒಂದು ನೂರಾ ಹದಿನಾಲ್ಕು ಸಂಧಿಸ್ಥಾನಗಳನ್ನು ಹೊಂದಿವೆ, ಅಲ್ಲಿ ನಾಡಿಗಳು ಗಣನೀಯ ಸಂಖ್ಯೆಯಲ್ಲಿ ಸೇರಿ ಮತ್ತೆ ಪುನರ್ವಿತರಣೆಗೊಳ್ಳುತ್ತವೆ. ಈ ಸಂಧಿಸ್ಥಾನಗಳನ್ನು “ಚಕ್ರಗಳು” ಎನ್ನುತ್ತೇವೆ, ಅಂದರೆ ಅದರ ಅರ್ಥ “ಗಾಲಿಗಳು” ಅಥವಾ “ವೃತ್ತಗಳು” ಎಂದು ಆದರೆ ಅವು ತ್ರಿಕೋಣಗಳು. ಅವು ಚಲನೆಯನ್ನು ಹೊಂದಿವೆ -ಮುಂದಕ್ಕೆ ಚಲಿಸುವುದರಿಂದ ನಾವು ಅದನ್ನು “ಚಕ್ರ”ಗಳು ಎನ್ನುತ್ತೇವೆ. ಈ ನೂರಾ ಹದಿನಾಲ್ಕು ಚಕ್ರಗಳ ಪೈಕಿ ಎರಡು ಭೌತಿಕ ವ್ಯಾಪ್ತಿಯ ಹೊರಗೆ ಇವೆ. ಬಹಳಷ್ಟು ಜನರಿಗೆ ಅಗತ್ಯವಿರುವ ಸಾಧನೆ ಮಾಡದ ಹೊರತು, ಈ ಎರಡು ಚಕ್ರಗಳು ಬಹಳ ಕ್ಷೀಣಾಗಿರುತ್ತವೆ. ಉಳಿದ ನೂರ ಹನ್ನೆರಡು ಚಕ್ರಗಳಲ್ಲಿ, ಕೆಲವು ಶರೀರದ ನಿರ್ದಿಷ್ಟ ಭಾಗಗಳಲ್ಲಿ ಭೌತಿಕ ಮಟ್ಟದಲ್ಲಿಯೇ ಇರುತ್ತವೆ. ಉಳಿದ ಚಕ್ರಗಳು ತಕ್ಕಮಟ್ಟಿಗೆ ಸಕ್ರಿಯವಾಗಿರುತ್ತವೆ.
ನೀವು ನಿಮ್ಮೊಂದಿಗೆ ಏನು ಮಾಡುತ್ತಿರೋ ಅದರ ಮೇಲೆ ಚಕ್ರಗಳ ಚಲನೆ ಅವಲಂಬಿಸಿದೆ. ನೀವು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ವಿವಿಧ ರೀತಿಯ ಸನ್ನಿವೇಶಗಳಿಗೆ ಹೊಂದಿಕೊಳ್ಳಲು ಶಕ್ತರಾಗಬೇಕೆಂದರೆ, ನಿಮ್ಮ ಪ್ರಾಣಮಾಯ ಪ್ರಕ್ರಿಯೆ ಅಥವಾ ಭೌತಿಕ ಪ್ರಕ್ರಿಯೆಗಳು ಅದಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕು. ಚಕ್ರಗಳನ್ನು ಸಕ್ರಿಯವಾಗಿರಿಸಿಕೊಳ್ಳಲು ಅಗತ್ಯವಾದ ಕ್ರಮ ಬಹಳ ಮುಖ್ಯ, ಏಕೆಂದರೆ, ವಿಭಿನ್ನ ರೀತಿಯ ಅವಶ್ಯಕತೆಗಳನ್ನು ಪೂರೈಸಲು, ವಿಭಿನ್ನ ರೀತಿಯ ಸನ್ನಿವೇಶಗಳಲ್ಲಿ ನೀವು ಎಷ್ಟು ಸುಲಲಿತವಾಗಿ ಮತ್ತು ಪರಿಣಾಮಕಾರಿಯಾಗಿರುತ್ತೀರಿ ಎಂಬುದನ್ನು ಚಕ್ರಗಳ ಚಲನಶೀಲತೆ ನಿರ್ಧರಿಸುತ್ತದೆ. ಬಹಳಷ್ಟು ಜನರಲ್ಲಿ ಇರುವ ಸಮಸ್ಯೆಯೆಂದರೆ, ಕೆಲವೊಂದು ಸನ್ನಿವೇಶಗಳನ್ನು ಚೆನ್ನಾಗಿ ನಿಭಾಯಿಸುತ್ತಾರೆ, ಆದರೆ, ಮತ್ತೆ ಕೆಲವು ಸನ್ನಿವೇಶಗಳಲ್ಲಿ ಸಂಪೂರ್ಣ ಅವ್ಯವಸ್ಥೆಯಿಂದಿರುತ್ತಾರೆ. ಏಕೆಂದರೆ ಅವರು ಒಂದು ನಿರ್ದಿಷ್ಟ ರೀತಿಯಲ್ಲಿ ಮಾತ್ರ ಏನನ್ನಾದರೂ ಯೋಚಿಸಲು, ಅನುಭವಿಸಲು ಅಥವಾ ನಿರ್ವಹಿಸಲು ಸಾಧ್ಯ.
ಸ್ವಲ್ಪ ಅಭ್ಯಾಸದಿಂದ ನೀವು ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಬಹುದು. ಆದರೆ, ನಿಮ್ಮ ಪ್ರಾಣಶಕ್ತಿ ವ್ಯವಸ್ಥೆಯು ಬಿಗುವಾಗಿದ್ದರೆ ಇದು ಸಾಧ್ಯವಾಗುವುದಿಲ್ಲ. ಆದ್ದರಿಂದ ಬೇರೆ ಬೇರೆ ಕಾರ್ಯಗಳನ್ನು ನಿರ್ವಹಿಸುವುದಕ್ಕಷ್ಟೇ ಅಲ್ಲದೇ ನಿಮ್ಮ ವ್ಯವಸ್ಥೆಯನ್ನು ಸದಾ ಕಾಲ ಸಕ್ರಿಯವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಅದು ನಿಮಗೆ ಯಾವುದೇ ಸನ್ನಿವೇಶವನ್ನು ನಿರಾಯಾಸವಾಗಿ ಅನುಭವಿಸುವಂತೆ ಮಾಡುತ್ತದೆ. ನೀವು ಆರಾಮವಾಗಿರಲು ನಿಮ್ಮ ಪ್ರಾಣಶಕ್ತಿ ವ್ಯವಸ್ಥೆಯು ನಿರಾಯಾಸವಾಗಿರಬೇಕು. ಈ ನೂರಾ ಹನ್ನೆರಡು ಚಕ್ರಗಳು ನಿಮ್ಮನ್ನು ಪರಮಸತ್ಯದತ್ತ ನಡೆಸುವ ನೂರ ಹನ್ನೆರಡು ದ್ವಾರಗಳಾಗುತ್ತವೆ. ಆದ್ದರಿಂದಲೇ ಆದಿಯೋಗಿಯು ಪರಮಸತ್ಯವನ್ನು ತಲುಪಲು ನೂರಾ ಹನ್ನೆರಡು ಮಾರ್ಗಗಳನ್ನು ಸೂಚಿಸಿದ್ದಾನೆ.
ಈ ಕ್ಲಿಷ್ಟವಾದ ತ್ರಿಕೋಣವನ್ನು ನಿಮ್ಮ ಭೌತಿಕತೆಗೆ ತಕ್ಕಂತೆ ಅಳವಡಿಸಿಕೊಳ್ಳಲು, ಬೇರೆಯೇ ಹಂತದ ಸಾಧನೆಯ ಅಗತ್ಯವಿದೆ. ಆದರೆ ಮೂಲಭೂತವಾದ ವಿಷಯವೆಂದರೆ, ಈ ಎರಡೂ ತ್ರಿಕೋಣಗಳು ಒಂದನ್ನೊಂದು ಛೇದಿಸುವುದು. ಸಾಮಾನ್ಯವಾಗಿ ಮೇಲ್ಮುಖದ ತ್ರಿಕೋಣ ಕೆಳಗೆ, ಕೆಳಮುಖದ ತ್ರಿಕೋಣ ಮೇಲೆ ಇರುತ್ತದೆ. ಈ ಎರಡೂ ಸಮಭುಜದ ತ್ರಿಕೋಣಗಳು ಒಂದನ್ನೊಂದು ಛೇದಿಸಿಕೊಂಡು ಆರು ಸಮಭುಜ ತ್ರಿಕೋಣಗಳ ನಕ್ಷತ್ರ ರಚನೆಯಾಗುವಂತೆ ನೀವು ಮಾಡಿದರೆ, ಆಗ ನಿಮ್ಮ ವ್ಯವಸ್ಥೆಯು ಸಮತೋಲನದಲ್ಲಿದ್ದು ನೀವು ಶೀಘ್ರಗ್ರಾಹಿಗಳಾಗುತ್ತೀರಿ. ನನ್ನ ಕೆಲಸ ಇರುವಿಕೆಯ ಬಗ್ಗೆ ಮತ್ತು ಏನನ್ನಾದರೂ ತಲುಪಿಸುವುದು ಮಾತ್ರ, ಅದಕ್ಕೆ ನಿಮ್ಮ ಗ್ರಹಣಾ ಶಕ್ತಿ ಅತ್ಯಗತ್ಯ. ನನ್ನ ಮಾತುಗಳಿಂದ ನಿಮಗೆ ಜ್ಞಾನೋದಯವಾಗುವುದಿಲ್ಲ. ಮಾತುಗಳಿಂದಷ್ಟೇ ಯಾರಿಗಾದರೂ ಜ್ಞಾನವೋದಯವಾಗುವುದು ಸಾಧ್ಯವಿಲ್ಲ. ನಾನು ಹೇಳುವುದೆಲ್ಲಾ ಬರೀ ನಿಮಗೆ ಗಲಿಬಿಲಿ ಮಾಡಲು, ಏಕೆಂದರೆ ಮಾತುಗಳಿಂದ ಅರಿವುಂಟಾಗುವುದಿಲ್ಲ. ಪರಿವರ್ತನೆ ಸಾಧ್ಯವಾಗುವುದು ಉಪಸ್ಥಿತಿಯಿಂದಷ್ಟೇ.
ನಿರ್ಣಯಗಳಿಂದ ಗೊಂದಲಗಳು- ಗೊಂದಲಗಳಿಂದ ಜಾಗೃತಿ
ಮಾತನಾಡುವುದು ಜನರು ಮಾಡಿರುವ ಮೂರ್ಖ ನಿರ್ಣಯಗಳನ್ನು ನಾಶ ಮಾಡಲು ಒಂದು ಒಳ್ಳೆಯ ಸಾಧನ. ನಿರ್ಣಯಗಳು ನಾಶವಾದಾಗ ಗೊಂದಲವುಂಟಾಗುತ್ತದೆ. ಜಗತ್ತಿನ ಎಲ್ಲಾ ವಿಷಯಗಳ ಬಗ್ಗೆ ಸಂತಸದಿಂದ ಗೊಂದಲದಲ್ಲಿದ್ದರೆ, ಅದು ಒಳ್ಳೆಯ ಸ್ಥಿತಿಯಾಗುತ್ತದೆ. ಅಂದರೆ, ನೀವು ಯಾವಾಗಲೂ ಎಲ್ಲವನ್ನೂ ಗಮನಿಸುತ್ತಿದ್ದೀರಿ ಎಂದು ಅರ್ಥ. ಒಮ್ಮೆ ನಿಮಗೆ ಏನೂ ಗೊತ್ತಿಲ್ಲವೆಂದು ನಿಮಗೆ ಅರಿವಾದರೆ, ನೀವು ಶೀಘ್ರಗ್ರಹಿಗಳಾಗುತ್ತೀರಿ. ಅದೇ ನೀವು ಎಲ್ಲದರಲ್ಲೂ ನಿರ್ಣಾಯಕವಾಗಿದ್ದರೆ, ಏನೂ ಸಾಧ್ಯವಾಗುವುದಿಲ್ಲ, ಗ್ರಹಿಕೆಯೂ ಸಾಧ್ಯವಿಲ್ಲ. ನೀವು ನಿರ್ಣಾಯಕವಾಗಿದ್ದರೆ, ನೀವು ಎಲ್ಲವನ್ನೂ ಗಮನಿಸಬೇಕಾದ ಅವಶ್ಯಕತೆಯಿಲ್ಲ - ನೀವು ಜೀವನಪೂರ್ತಿ ನಿರ್ಜೀವವವಾಗಿಯೇ ಕಳೆಯಬಹುದು. ನೀವು ನಿರ್ಣಾಯಕವಾಗಿದ್ದಷ್ಟೂ ನಿಮ್ಮ ಮನಸ್ಸು, ದೇಹ ಎರಡೂ ನಿರ್ಜೀವವಾಗಿರುತ್ತದೆ.
ನೀವು ಹಠ ಯೋಗಳನ್ನು ಪ್ರತಿದಿನ ಅಭ್ಯಾಸ ಮಾಡುತ್ತಿದ್ದರೆ, ಯಾವಾಗ ನಿಮ್ಮ ನಿಲುವು ಕಠಿಣವಾಗಿರುತ್ತದೋ ಆಗ ನಿಮ್ಮ ಶರೀರವೂ ಬಗ್ಗುವುದಿಲ್ಲ ಎಂಬುದನ್ನು ಗಮನಿಸಿರಬಹುದು. ಅದೇ ನೀವು ಸಂತೋಷ ಮತ್ತು ಮಾನಸಿಕವಾಗಿ ಉಲ್ಲಾಸದಿಂದಿದ್ದಾಗ ನಿಮ್ಮಶರೀರವು ಸುಲಭವಾಗಿ ಬಾಗುತ್ತದೆ. ನಿಮ್ಮ ಅರಿವಿನ ಸ್ವರೂಪ, ನಿಮ್ಮ ದೇಹದ ಕಣ ಕಣದಲ್ಲೂ, ನಿಮ್ಮ ಜೀವನದ ಪ್ರತಿ ಕ್ಷಣದಲ್ಲೂ ಪ್ರಕಟವಾಗುತ್ತದೆ. ಆದ್ದರಿಂದಲೇ ಇಂದಿನ ಪ್ರಪಂಚದಲ್ಲಿ ಸ್ವಯಂ-ಪ್ರೇರಿತ ಖಾಯಿಲೆಗಳು ಹೆಚ್ಚಿರುವುದು. ಜನರಿಗೆ ಈಗಿರುವಷ್ಟು ಆಹಾರದ ಆಯ್ಕೆ ಹಿಂದೆಂದೂ ಇರಲಿಲ್ಲ. ಹಿಂದಿನ ಕಾಲದಲ್ಲಿ ಜನರು ಸ್ಥಳೀಯವಾಗಿ ಸಿಗುವ ಆಹಾರವನ್ನಷ್ಟೇ ಸೇವಿಸುತ್ತಿದ್ದರು. ಈಗ ಇಷ್ಟೆಲ್ಲಾ ಬಗೆಬಗೆಯ ಆಯ್ಕೆಗಳು ಲಭ್ಯವಿದ್ದರೂ ಅನಾರೋಗ್ಯವು ಹೆಚ್ಚುತ್ತಿದೆ. ನಿಜ ಹೇಳಬೇಕೆಂದರೆ, ಆಯ್ಕೆಗಳು ಹೆಚ್ಚಾದಷ್ಟೂ, ಅನಾರೋಗ್ಯವೂ ಹೆಚ್ಚಾಗುತ್ತದೆ.
ಅಮೇರಿಕವು ಅತಿ ಹೆಚ್ಚು ಬಗೆಯ ಆಹಾರ ಲಭ್ಯವಿರುವ ದೇಶ, ಆದರೆ ಅಷ್ಟೇ ಹೆಚ್ಚು ಹಣವನ್ನು ಆರೋಗ್ಯಕ್ಕಾಗಿ ಅಲ್ಲಿ ಖರ್ಚುಮಾಡುತ್ತಾರೆ - ವರ್ಷಕ್ಕೆ ಮುನ್ನೂರು ಸಾವಿರ ಕೋಟಿ ಡಾಲರ್. ಇದು ಮಾನವಕುಲಕ್ಕೆ ಮಾಡುತ್ತಿರುವ ಮಹಾ ಅಪರಾಧ. ಅಪೌಷ್ಟಿಕತೆಯಿಂದ ಅನಾರೋಗ್ಯವೆಂದರೆ, ಅರ್ಥಮಾಡಿಕೊಳ್ಳಬಹುದು. ಆದರೆ ಅಚ್ಚುಕಟ್ಟಾಗಿ ತಿಂದುಣ್ಣುವವರೂ ಅನಾರೋಗ್ಯದಿಂದಿದ್ದಾರೆ ಎಂದರೆ, ಮೂಲತಃ ಏನೋ ದೋಷವಿದೆಯೆಂದು ಅರ್ಥ. ನಿಮ್ಮ ದೇಹದ ಪ್ರತಿಯೊಂದು ಜೀವಕೋಶದ ರಚನೆ ನಿಮ್ಮ ಅರಿವಿನ ಸ್ವಭಾವದಿಂದಲೇ ಆಗಿರುವುದು ಎಂಬ ವಿಚಾರವನ್ನು ನಾವು ಅರ್ಥ ಮಾಡಿಕೊಂಡಿಲ್ಲ. ನಿಮ್ಮ ಜಾಗೃತಿಯ ಸ್ವರೂಪವನ್ನು ಅಚ್ಚುಕಟ್ಟಾಗಿ ಇರಿಸಿಕೊಳ್ಳುವುದು ನಿಮಗೆ ಗೊತ್ತಿಲ್ಲದೇ ಹೋದರೆ, ನಿಮ್ಮ ಶಾರೀರಿಕ ವ್ಯವಸ್ಥೆಯನ್ನು ಕಾಪಾಡಿಕೊಳ್ಳುದು ಹೇಗೆಂದು ನಿಮಗೆ ತಿಳಿಯುವುದಿಲ್ಲ. ಹಾಗಾದಾಗ ನೀವು ಅಕಸ್ಮಾತ್ತಾಗಿ ಕಾರ್ಯ ನಿರ್ವಹಿಸುತ್ತಿದ್ದೀರಿ ಎಂದಾಗುತ್ತದೆ - ಖಂಡಿತ ಹಾಗಾಗಬಾರದು.
ಮನುಷ್ಯರಾಗಿ ನಾವು ಬೇರೆ ಜೀವಿಗಳು ಮಾಡುವ ಎಲ್ಲವನ್ನೂ ಮಾಡುತ್ತೇವೆ - ತಿನ್ನುವುದು, ಕುಡಿಯುವುದು, ಸಂತಾನೋತ್ಪತ್ತಿ, ಮತ್ತು ಸಾಯುವುದು ಕೂಡ. ನಮ್ಮನ್ನು ಅವುಗಳಿಂದ ಪ್ರತ್ಯೇಕಿಸುವ ಒಂದು ವಿಷಯವೆಂದರೆ, ಪ್ರತಿಯೊಂದನ್ನೂ ಅಬ್ಬರದಿಂದ, ಗಡಿಬಿಡಿಯಿಂದ ಮಾಡುವುದು. ಆದರೆ, ಎಲ್ಲಕ್ಕಿಂತ ಮುಖ್ಯ ವಿಶೇಷತೆಯೆಂದರೆ, ಮಾನವರಾದ ನಾವು ಎಲ್ಲವನ್ನೂ ಅರಿವಿನಿಂದ ಮಾಡುವುದು. ಉದಾಹರಣೆಗೆ, ನೀವು ಸಂಪೂರ್ಣ ಅರಿವಿನಿಂದ ಆಹಾರ ಸೇವಿಸಬಹುದು. ನಿಮಗೆ ಹಸಿವಾಗಿದೆ ಎಂದಿಟ್ಟುಕೊಳ್ಳೋಣ, ನೀವು ಬೇರೆ ಜೀವಗಳಂತೆಯೇ ಆಗಿದ್ದರೆ, ನಿಮಗೆ ಸೂಕ್ತವಾದದ್ದನ್ನು ತೆಗೆದುಕೊಂಡು ಕಬಳಿಸುತ್ತಿದ್ದಿರಿ. ಆದರೆ ಒಬ್ಬ ಮನುಷ್ಯನಾಗಿ, ನೀವು ಊಟದ ಸಮಯದವರೆಗೂ ಕಾದು, ಊಟದ ಮೇಜಿನ ಮುಂದೆ ಕುಳಿತು, ಪ್ರಾರ್ಥನೆ ಮಾಡಿ, ಎರಡೂ ಕೈಗಳಿಂದ ತುರುಕಿಕೊಳ್ಳುವ ಬದಲು ಬಲಗೈಯಿಂದ ಅಚ್ಚುಕಟ್ಟಾಗಿ ತಿನ್ನುತ್ತೀರಿ. ಇದೇ ಅರಿವಿನಿಂದ ಇರುವುದೆನ್ನುವುದು. ಕೇವಲ ಶಾರೀರಿಕತೆಯಿಂದ ನೋಡುವುದಾದರೆ, ನೀವು ತಕ್ಷಣವೇ ತಿನ್ನಲು ಬಯಸುತ್ತೀರಿ. ನಿಮ್ಮ ಶಾರೀರಿಕ ಒತ್ತಡಗಳನ್ನು ನಿಯಂತ್ರಿಸುವ ಬುದ್ಧಿಶಕ್ತಿ ಮತ್ತು ಅರಿವು ನಿಮಗೆ ಇರುವುದರಿಂದ, ನೀವು ಎದುರಿಸುವ ಸನ್ನಿವೇಶಗಳಿಗೆ ಜಾಗೃತವಾಗಿ ಪ್ರತಿಕ್ರಿಯಿಸುತ್ತೀರಿ. ಯಾರಾದರೂ ಪ್ರಚೋದಕವಾಗಿ ವರ್ತಿಸಿದರೆ, ಅವರನ್ನು ಪಶುಗಳಿಗೆ ಹೋಲಿಸುತ್ತೇವೆ. ಆದ್ದರಿಂದ ಇದು ನಿರ್ಬಂಧಗಳಿಂದ ಜಾಗೃತಿಯೆಡೆಗಿನ ಪ್ರಯಾಣ.
ಜಾಗೃತಾವಸ್ಥೆಯು ನಿಮ್ಮ ಎಲ್ಲಾ ಪ್ರವೃತ್ತಿಗಳಿಂದ ನಿಮನ್ನು ಮುಕ್ತವಾಗಿಸುತ್ತದೆ. ಇಲ್ಲಿಯವರೆಗೂ ಎಲ್ಲಾ ಪ್ರವೃತ್ತಿಗಳು ನಿಮ್ಮನ್ನು ನಿಯಂತ್ರಿಸುತ್ತಿದ್ದರೂ, ಈ ಕ್ಷಣ ನೀವು ಜಾಗೃತರಾಗಿ ಪ್ರತಿಕ್ರಿಯಿಸಿದರೆ, ಎಲ್ಲ ಸಂಚಿತ ಪ್ರವೃತ್ತಿಗಳಿಂದ ದೂರವಾಗಬಹುದು. ನೀವು ಜೀವನದ ಎಲ್ಲಾ ಅಂಶಗಳನ್ನೂ ಜಾಗೃತರಾಗಿ ನೋಡಿದರೆ, ನಿಮ್ಮ ಕಾರ್ಯಗಳಲ್ಲಷ್ಟೇ ಅಲ್ಲದೇ ಆಲೋಚನಗಳಲ್ಲಿ, ಭಾವನೆಗಳಲ್ಲಿ ಮತ್ತು ಪ್ರಾಣಶಕ್ತಿಯಲ್ಲಿ - ಆಗ ನೀವು ಪ್ರಪಂಚದಲ್ಲೇ ಉನ್ನತ ಸ್ಥಾನದಲ್ಲಿರುತ್ತೀರಿ.
ಸಂಪಾದಕರ ಟಿಪ್ಪ: ಸದ್ಗುರುಗಳ ಇನ್ನಷ್ಟು ಒಳನೋಟಗಳನ್ನು ಅವರ ““ಆಫ್ ಮಿಸ್ಟಿಕ್ಸ್ ಆಂಡ್ ಮಿಸ್ಟೇಕ್ಸ್” ”ಎಂಬ ಈ-ಪುಸ್ತಕದಲ್ಲಿ ಕಾಣಬಹುದು. ಇಲ್ಲಿ ಸದ್ಗುರು ಸರಿಯಾದ ಆಯ್ಕೆ ಮಾಡಿಕೊಂಡರೆ, ಹೇಗೆ ನಮ್ಮಲ್ಲಿನ ಪ್ರತಿಯೊಬ್ಬರು ಗೊಂದಲಗಳಿಂದ ಸ್ಪಷ್ಟತೆಯೆಡೆಗೆ, ತಪ್ಪುಗಳಿಂದ ಜ್ಞಾನದೆಡೆಗೆ, ಸ್ವಯಂ- ವಂಚನೆಯಿಂದ ಸ್ವಯಂ-ಅನ್ವೇಷಣೆ ಎಡೆಗೆ ಸಾಗಬಹುದು ಎಂದು ನಮಗೆ ಜ್ಞಾಪಿಸುತ್ತಾರೆ.
ಇದರ ಒಂದು ಆವೃತ್ತಿಯು ಮೂಲತಃ ಈಶ ಫಾರೆಸ್ಟ್ ಫ್ಲವರ್ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಇದನ್ನು PDF ಆಗಿ ಡೌನ್ ಲೋಡ್ ಮಾಡಿಕೊಳ್ಳಿ “ನಿಮ್ಮ ದರವನ್ನು ನಮೂದಿಸಿ, ಯಾವುದೇ ಕನಿಷ್ಠ ದರ ಇಲ್ಲ”, ಅಥವಾ ಮುದ್ರಿತ ಆವೃತ್ತಿಗಾಗಿ ಚಂದಾದಾರರಾಗಿ