ಪ್ರಶ್ನೆ: ಸದ್ಗುರು, ವಿಚ್ಛೇದನದ ನಂತರ ಜೀವನದಲ್ಲಿ ಹೇಗೆ ಮುಂದುವರಿಯುವುದು?

ಸದ್ಗುರು: ನಿಮ್ಮ ದೇಹವು ಅಪಾರ ಪ್ರಮಾಣದ ನೆನಪುಗಳನ್ನು ಹೊಂದಿದೆ. ಈ ನೆನಪುಗಳು ವಿವಿಧ ಹಂತಗಳಲ್ಲಿರುತ್ತದೆ. ನಿಮ್ಮ ಪೂರ್ವದ ವಿಕಸನದಿಂದಾದ ನೆನಪುಗಳು, ಆನುವಂಶಿಕ ನೆನಪುಗಳು, ಕರ್ಮದ ನೆನಪುಗಳು, ಪ್ರಜ್ಞಾಪೂರ್ವಕ ಮತ್ತು ಸುಪ್ತಾವಸ್ಥೆಯ ವಿವಿಧ ಮಟ್ಟದ ನೆನಪುಗಳು, ಸ್ಪಷ್ಟ ಹಾಗೂ ಅಸ್ಪಷ್ಟತೆಯ ವಿವಿಧ ಮಟ್ಟದ ನೆನಪುಗಳು. ನಿಮ್ಮ ಮುತ್ತಜ್ಜ ಹೇಗೆ ಕಾಣಿಸುತ್ತಿದ್ದರೆಂದು ನಿಮಗೆ ನೆನಪಿಲ್ಲದಿರಬಹುದು, ಆದರೆ ಅವರ ಮೂಗು ಈಗ ನಿಮ್ಮ ಮುಖದ ಮೇಲೆ ಕುಳಿತಿದೆ. ಆದ್ದರಿಂದ ನಿಸ್ಸಂಶಯವಾಗಿ ನಿಮ್ಮ ದೇಹವು ಅತ್ಯಂತ ಸಂಕೀರ್ಣ ಕಾರ್ಯವಿಧಾನದಲ್ಲಿ ನೆನಪುಗಳನ್ನು ಹೊಂದಿದೆ.

ಈ ದೇಹವು ಅಂತಹ ಸಂಕೀರ್ಣವಾದ ನೆನಪಿನ ಶಕ್ತಿಗೆ ಸಮರ್ಥವಾಗಿದೆ ಎಂದಮೇಲೆ, ನೀವು ಸ್ಪರ್ಶಿಸುವ ಮತ್ತು ಅನುಭವಿಸುವ ಯಾವುದೇ ವಿಷಯದ ಕುರಿತು ನಿಮ್ಮ ದೇಹವು ನೆನಪುಗಳನ್ನು ಸಂಗ್ರಹಿಸುವುದಿಲ್ಲ ಎಂದು ನೀವು ಭಾವಿಸುತ್ತೀರಾ? ಇದು ಎಲ್ಲೆಡೆಯಿಂದ ಅಪಾರ ಪ್ರಮಾಣದ ನೆನಪುಗಳನ್ನು ಸಂಗ್ರಹಿಸುತ್ತಲೇ ಇದೆ. ಉದಾಹರಣೆಗೆ, ಮೆಟ್ಟಿಲುಗಳ ಮೇಲೆ ಮತ್ತು ಕೆಳಕ್ಕೆ ಹೋಗುವುದು ತುಂಬಾ ಸರಳವಾಗಿ ಕಾಣುತ್ತದೆ, ಆದರೆ ಆ ಪ್ರಕ್ರಿಯೆ ತುಂಬಾ ಸಂಕೀರ್ಣವಾದದ್ದು. ನಿಮ್ಮ ದೇಹವು ಆ ಪ್ರಕ್ರಿಯೆಯ ಒಂದೊಂದು ಅಂಶವನ್ನೂ ನೆನಪಿಟ್ಟುಕೊಳ್ಳಬೇಕು, ಇಲ್ಲದಿದ್ದರೆ ಅದು ಸುಲಭವಾಗಿ ಮೇಲಕ್ಕೆ ಹತ್ತಲು ಸಾಧ್ಯವಿಲ್ಲ. ಈಗಿನ ದಿನಗಳಲ್ಲಿ ಕ್ರೀಡಾ ತಜ್ಞರು ‘ಸ್ನಾಯು ಸ್ಮರಣೆಯ’ ಬಗ್ಗೆ ಮಾತನಾಡುತ್ತಿದ್ದಾರೆ - ನೆನಪನ್ನು ಒಬ್ಬರ ವ್ಯವಸ್ಥೆಯಲ್ಲಿ ನಿರ್ಮಿಸುವುದರಿಂದ, ಅವರು ಕ್ರೀಡೆಯನ್ನು ನಿರ್ದಿಷ್ಟ ಮಟ್ಟದ ದಕ್ಷತೆಯಿಂದ ಆಡಬಹುದು. ಇದು ಕ್ರೀಡೆಗೆ ಅಥವಾ ನಿರ್ದಿಷ್ಟ ಚಟುವಟಿಕೆಗಷ್ಟೇ ಸೀಮಿತವಲ್ಲ; ನೀವು ಪ್ರತಿದಿನ ನಿಮ್ಮ ದೈಹಿಕ ವ್ಯವಸ್ಥೆಯಲ್ಲಿ ಹಲವು ರೀತಿಯ ನೆನಪುಗಳನ್ನು ತುಂಬುತ್ತಿದ್ದೀರಿ. ಈ ನೆನಪಿಗೆ ಒಂದು ನಿರ್ದಿಷ್ಟ ರೀತಿಯ ಹೊಂದಾಣಿಕೆ ಇದ್ದರೆ, ಅದು ಉತ್ಪಾದಕವಾಗುತ್ತದೆ. ಈ ನೆನಪಿನಲ್ಲಿ ಅವ್ಯವಸ್ಥೆ ಇದ್ದರೆ, ನೀವು ಎಲ್ಲವನ್ನೂ ತಿಳಿದಿದ್ದರೂ ಸಹ, ಈ ನೆನಪು ನಿಮ್ಮ ವಿರುದ್ಧ ಕೆಲಸ ಮಾಡುತ್ತದೆ, ಏಕೆಂದರೆ ಅದು ಸ್ವತಃ ವಿರೋಧಾತ್ಮಕ ಮತ್ತು ಸಂಘರ್ಷದಿಂದ ಕೂಡಿದೆ.

ನಿಮ್ಮ ಜೀವನದಲ್ಲಿ ಯಾವುದಾದರೂ ಕೆಟ್ಟ ಸಂಗತಿ ನಡೆದಿದ್ದರೆ, ಖಂಡಿತವಾಗಿಯೂ ಅದರ 50% ಕೊಡುಗೆ ನಿಮ್ಮದಾಗಿರುತ್ತದೆ, ಅಲ್ಲವೇ? ಆ 50% ಅನ್ನು ಸರಿಪಡಿಸಿಕೊಳ್ಳಲು ಈಗಿನ ಆರು ತಿಂಗಳು ಅಥವಾ ಒಂದು ವರ್ಷ ಬಳಸಿಕೊಳ್ಳಿರಿ.

ಆದ್ದರಿಂದ, ನಿಮಗೆ ಮುಖ್ಯವೆನಿಸುರುವುದರಿಂದಲೇ ಈ ಪ್ರಶ್ನೆ ಮೂಡಿದೆ. ನಿಮಗೇಕೆ ಇದು ಮುಖ್ಯವೆನಿಸಿದೆ? ಏಕೆಂದರೆ ನೀವು ನಿಮ್ಮ ಆಲೋಚನೆ ಮತ್ತು ಭಾವನೆಗಳನ್ನುಅದರಲ್ಲಿ ಹೂಡಿಕೆ ಮಾಡಿದ್ದೀರಿ ಅಥವಾ ನಿಮ್ಮ ದೇಹವನ್ನೂ ಸಹ ಈ ಸಂಬಂಧಕ್ಕೆ ಹೂಡಿರಬಹುದು. ಒಮ್ಮೆ ನೀವು ಈ ಮೂರು ವಿಷಯಗಳನ್ನು ಹೂಡಿಕೆ ಮಾಡಿದರೆ, ಅದರ ಬಗೆಗಿನ ಆಳವಾದ ನೆನಪಿನ ಪ್ರಜ್ಞೆ ನಿಮ್ಮ ವ್ಯವಸ್ಥೆಯಲ್ಲಿ ಇರುತ್ತದೆ. ನಿಮ್ಮ ವ್ಯವಸ್ಥೆಯಲ್ಲಿ ನೀವು ಈ ರೀತಿಯ ಸಾಕಷ್ಟು ವಿರೋಧಾಭಾಸದ ನೆನಪನ್ನು ರಚಿಸಿದರೆ, ನೀವು ಎಲ್ಲವನ್ನೂ ಹೊಂದಿದರೂ ಸಹ, ಗೊಂದಲ ಮತ್ತು ಸಂತೋಷವಿಲ್ಲದ ಕಾರಣ ನಿಮಲ್ಲಿ ಏನೂ ಇಲ್ಲ ಎಂಬ ಭಾವನೆ ಬರುತ್ತದೆ; ನಿಮ್ಮಲ್ಲಿ ಉತ್ಸಾಹವೇ ಇರುವುದಿಲ್ಲ. ತಮಗೆ ನೀಡಲಾಗಿರುವ ಕಾರ್ಯವಿಧಾನವನ್ನು ಯುವಕರು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಮಾನವ ವ್ಯವಸ್ಥೆಯು ಕೇವಲ ಮಾಂಸದ ಉಂಡೆಯಾಗಿದ್ದರೆ, ನೀವು ಅದರೊಂದಿಗೆ ಏನು ಬೇಕಾದರೂ ಮಾಡಬಹುದಿತ್ತು. ಆದರೆ ಇದು ಬಹಳ ಅತ್ಯಾಧುನಿಕ ಯಂತ್ರ. ನೀವು ಅದನ್ನು ಸೂಕ್ಷ್ಮವಾಗಿ ಪರಿಗಣಿಸಿದರೆ, ಅದು ಅದ್ಭುತ ರೀತಿಯ ಕೆಲಸಗಳನ್ನು ಮಾಡಬಹುದು. ಇಲ್ಲದಿದ್ದರೆ ಅದು ಸಾಧಾರಣ ಕೆಲಸಗಳಿಗಷ್ಟೇ ತೃಪ್ತವಾಗಬೇಕಾಗುತ್ತದೆ.

ನಿಮಗೆ ಕಂಪ್ಯೂಟರ್‌ಗಳ ಬಗ್ಗೆ ಏನೂ ತಿಳಿದಿಲ್ಲ ಎಂದುಕೊಳ್ಳೋಣ ನಾನು ನಿಮಗೆ ಒಂದು ‘ಆಪಲ್ ಮ್ಯಾಕ್‌ಬುಕ್ ಏರ್’ ಲ್ಯಾಪ್ ಟಾಪ್ ಅನ್ನು ಕೊಡುತ್ತೇನೆ. ಇದು ತುಂಬಾ ತೆಳುವಾಗಿ ಮತ್ತು ನೋಡುವುದಕ್ಕೆ ಹರಿತವಾಗಿರುತ್ತದೆ. ನೀವು ಅದನ್ನು ಮನೆಗೆ ತೆಗೆದುಕೊಂಡು ಸೌತೆಕಾಯಿಗಳನ್ನು ಕತ್ತರಿಸಲು ಪ್ರಾರಂಭಿಸುತ್ತೀರಿ. ಕಾಯಿ ಕತ್ತರಿಸುವ ನಿಟ್ಟಿನಲ್ಲಿಯೂ ಅದು ತುಂಬಾ ಚೆನ್ನಾಗಿಯೇ ಕೆಲಸ ಮಾಡುತ್ತದೆ. ಆದರೆ ನೀವು ಸೌತೆಕಾಯಿಯನ್ನು ಕತ್ತರಿಸಲು ಕಂಪ್ಯೂಟರ್‌ ಬಳಸುತ್ತಿರುವುದು ದುರಂತವಲ್ಲವೇ? ಸೌತೆಕಾಯಿಯಲ್ಲಿ ಏನೂ ತಪ್ಪಿಲ್ಲ, ಆದರೆ ಖಂಡಿತವಾಗಿಯೂ ನಿಮ್ಮಲ್ಲಿ ಏನೋ ತಪ್ಪಿದೆ! ನಿಮ್ಮ ಕೈಯಲ್ಲಿರುವ ‘ವಿಷಯದ’ ಮಹತ್ವವನ್ನು ನೀವು ಅರ್ಥಮಾಡಿಕೊಳ್ಳದಿದ್ದಾಗ ನಿಮ್ಮಲ್ಲಿ ಮೂಲಭೂತವಾಗಿ ಏನೋ ತಪ್ಪಾಗಿದೆ ಎಂದಾಗುತ್ತದೆ.

ನೀವು ಯಾವುದಾದರೂ ವಿಚಾರವನ್ನು ಸ್ಪರ್ಶಿಸುವ ಅಥವಾ ಅದರಲ್ಲಿ ತೊಡಗಿಸಿಕೊಳ್ಳುವ ಮೊದಲು, ನೀವು ಅದರೊಂದಿಗೆ ಯಾವ ಮಟ್ಟದ ಒಳಗೊಳ್ಳುವಿಕೆಯನ್ನು ಬಯಸುತ್ತೀರಿ ಮತ್ತು ಇದನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಲು ಬಯಸುತ್ತೀರಿ ಎಂಬುದನ್ನು ನೀವು ನೋಡಬೇಕು. ಅದು ನಿಮ್ಮ ಮೇಲೆ ಬೀರುವ ವಿಭಿನ್ನ ಪರಿಣಾಮಗಳು ಯಾವುವು ಎಂಬುದನ್ನು ಸಹ ನೀವು ಗಮನಿಸಬೇಕು. ಇದು ನನ್ನ ಜೀವನಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆಯೇ ಅಥವಾ ನನ್ನ ಜೀವನಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತದೆಯೇ ಎಂದು ನೀವು ಪರಿಗಣಿಸಬೇಕು. ಇಲ್ಲದಿದ್ದರೆ ನೀವು ಸಡಿಲವಾದ ಜೀವನವಾಗುತ್ತೀರಿ ಅಷ್ಟೇ. ನಾನು ನೈತಿಕತೆಯ ದೃಷ್ಟಿಯಿಂದ “ಸಡಿಲ” ಪದವನ್ನು ಬಳಸುತ್ತಿಲ್ಲ. ನಿಮ್ಮ ಜೀವನದಲ್ಲಿ ನೀವು ಮಾಡಲು ಬಯಸಿದ್ದನ್ನು ಪೂರೈಸಲು ಸಾಧ್ಯವಾಗದಿರುವ ದೃಷ್ಟಿಯಿಂದ ನಾನು ಸಡಿಲ ಎಂಬ ಪದವನ್ನು ಬಳಸುತ್ತಿದ್ದೇನೆ. ನಿಮ್ಮ ಜೀವನಕ್ಕೆ ಬೌದ್ಧಿಕ, ಭಾವನಾತ್ಮಕ ಮತ್ತು ದೈಹಿಕ ಮಟ್ಟದಲ್ಲಿ ಒಂದಿಷ್ಟು ಸಮಗ್ರತೆಯನ್ನು ತರುವುದು ಬಹಳ ಮುಖ್ಯ.

ಸಂಪೂರ್ಣವಾದ ಜೀವನವಾಗಿ

ನೀವು ಒಂದು ಸಂಬಂಧದಿಂದ ಬೇರ್ಪಟ್ಟರೆ, ಸಾಕಷ್ಟು ಸಮಯವನ್ನು ನಿಮಗಾಗಿ ನೀಡಿರಿ. ನೀವು ಕನಿಷ್ಟ ಆರು ತಿಂಗಳು ಅಥವಾ ಒಂದು ವರ್ಷದಲ್ಲಿ ನಿಮ್ಮಷ್ಟಕ್ಕೆ ನೀವೇ ಸರಿಪಡಿಸಬಹುದು. ನಿಮ್ಮ ಜೀವನದಲ್ಲಿ ಯಾವುದಾದರೂ ಕೆಟ್ಟ ಸಂಗತಿ ನಡೆದಿದ್ದರೆ, ಖಂಡಿತವಾಗಿಯೂ ಸಂಗತಿಯ 50% ಕೊಡುಗೆ ನಿಮ್ಮದಾಗಿರುತ್ತದೆ, ಅಲ್ಲವೇ? ಆ 50% ಅನ್ನು ಸರಿಪಡಿಸಿಕೊಳ್ಳಲು ಈ ಆರು ತಿಂಗಳು ಅಥವಾ ಒಂದು ವರ್ಷ ಬಳಸಿಕೊಳ್ಳಿರಿ.

ನಿಮ್ಮ ಭ್ರಮೆಗಳು ಮುರಿದುಹೋದರೆ, ಈ ಮೂಲಕ ಜೀವನವು ನಿಮ್ಮನ್ನು ವಾಸ್ತವಕ್ಕೆ ಹತ್ತಿರ ಕರೆದೊಯ್ಯುತ್ತಿದೆ ಎಂದರ್ಥ. ನೀವು ಕುಳಿತು "ನನ್ನ ಜೀವನದ ನಿಜ ಸ್ವರೂಪ ಏನು?" ಎಂದು ನೋಡಲು ಇದು ಒಂದು ಸದವಕಾಶ.

ಜೀವನವು ಈ ರೀತಿ ನಿಮ್ಮ ಬಾಗಿಲನ್ನು ತಟ್ಟಿದಾಗ, ಇದು ನೀವು ಆಳವಾಗಿ ನೋಡುವ ಸಮಯವಾಗಿರುತ್ತದೆ. ನಿಮ್ಮ ಭ್ರಮೆಗಳು ಮುರಿದುಕೊಂಡಾಗ ಮತ್ತು ನೀವು ಇದೀಗ ಭ್ರಮನಿರಸರಾದಾಗ, ಅದು ತುಂಬಾ ಒಳ್ಳೆಯ ವಿಷಯವೇ. ನಿಮ್ಮ ಭ್ರಮೆಗಳು ಮುರಿದುಹೋದರೆ, ಈ ಮೂಲಕ ಜೀವನವು ನಿಮ್ಮನ್ನು ವಾಸ್ತವಕ್ಕೆ ಹತ್ತಿರ ಕರೆದೊಯ್ಯುತ್ತಿದೆ ಎಂದರ್ಥ. ನೀವು ಕುಳಿತು "ನನ್ನ ಜೀವನದ ನಿಜ ಸ್ವರೂಪ ಏನು?" ಎಂದು ನೋಡಲು ಇದು ಒಂದು ಸದವಕಾಶ.

ಯಾರಾದರೂ ನಿಮ್ಮನ್ನು ಭ್ರಮೆಯ ಸ್ಥಿತಿಯಿಂದ ಪರಮ ವಾಸ್ತವದೆಡೆಗೆ ಒಯ್ಯುತ್ತಾರೆಂದರೆ, ಆ ವ್ಯಕ್ತಿಗೆ ನೀವು ಧನ್ಯವಾದ ಹೇಳಬೇಕು. ಈ ಎಲ್ಲ ವಿಷಯಗಳ ಸೂಕ್ಷ್ಮತೆಯನ್ನು ನಿಮಗೆ ತಿಳಿಸುವ ಮೂಲಕ ನಿಮಗಾಗಿ ಹೊಸದೊಂದು ಆಧ್ಯಾತ್ಮಿಕ ಆಯಾಮವನ್ನು ತೆರೆಯುತ್ತಿದ್ದಾರೆ. ಅವರು ನಿಮಗೆ ಮೋಸ ಮಾಡಿರಬಹುದು ಅಥವಾ ಓಡಿಹೋಗಿರಬಹುದು ಅಥವಾ ಮತ್ತೇನನ್ನೇ ಮಾಡಿದ್ದರೂ, ಮೂಲಭೂತವಾಗಿ ನೀವು ಅವರಿಂದ ನಿರಾಕರಿಸಲ್ಪಟ್ಟಿದ್ದೀರಿ ಎಂದೇ ಅರ್ಥ. ನಿಮ್ಮ ಜೀವನ ಪೂರ್ಣವಲ್ಲ, ಕೇವಲ ಅರ್ಧ ಮಾತ್ರ. ಜೀವನದ ಇನ್ನೊಂದು ಅರ್ಧ ಭಾಗವನ್ನು ಬೇರೆಡೆ ಪಡೆಯುಬೇಕೆಂಬ ಭಾವನೆ ನಿಮ್ಮಲ್ಲಿ ಇರುವುದರ ಕಾರಣ ನೀವು ನಿರಾಕರಿಸಲ್ಪಡುತ್ತೀರಿ. ಸೃಷ್ಟಿಕರ್ತ ಮತ್ತು ಸೃಷ್ಟಿಯ ಒಂದು ಅಧ್ಬುತ ಸಂಯೋಜನೆಯೊಂದಿಗೆ ತುಂಬಿರುವ ಇರುವ ಈ ಜೀವದ ತುಣುಕು ಸಂಪೂರ್ಣ ಜೀವದ ತುಣುಕು. ಹಾಗಾಗಿಯೂ ಅದು ಅಪೂರ್ಣವೆಂದು ಭಾವಿಸುವುದರಿಂದ ಈ ಜೀವವನ್ನು ತುಂಬಲು ಇನ್ನೊಬ್ಬ ವ್ಯಕ್ತಿಯ ಅಗತ್ಯ ಬರುತ್ತದೆ. ಎಲ್ಲೋ ಅದು ತನ್ನ ಸ್ವಭಾವದ ಪೂರ್ಣತೆಯನ್ನು ಅರಿತುಕೊಂಡಿಲ್ಲ. ಇದೀಗ, ನೀವು ಯಾವುದೋ ಒಂದು ವಿಷಯ ಇಲ್ಲದೆ, ನೀವು ಬದುಕಲಾರಿರಿ ಎಂಬಂತೆ ನಿಮ್ಮನ್ನು ರೂಪಿಸಿಕೊಂಡಿದ್ದೀರಿ . ನೀವು ಸಂಪೂರ್ಣ ಜೀವನವಾಗಿ ಅರಳಿದರೆಂದರೆ, ನಿಮ್ಮ ಸಂಬಂಧಗಳು ಸಂಪೂರ್ಣವಾಗಿ ವಿಭಿನ್ನ ಸ್ವರೂಪವನ್ನು ಪಡೆಯುವುದನ್ನು ಎಂದು ನೀವು ಕಾಣಬಹುದು. ಸಂಬಂಧಗಳು ಇರುವುದು ಒಟ್ಟು ಸೇರುವುದಕ್ಕೆ ಮತ್ತು ಹಂಚಿಕೊಳ್ಳುವುದಕ್ಕೆ ಅಷ್ಟೇ, ಮತ್ತೊಬ್ಬರಿಂದ ಏನನ್ನಾದರೂ ಪಡೆಯುವುದಕ್ಕಲ್ಲ

 

ಸಂಪಾದಕರ ಟಿಪ್ಪಣಿ:  ಭಾವನಾತ್ಮಕವಾಗಿ ಕಷ್ಟದ ಸಮಯವನ್ನು ಎದುರಿಸುತ್ತಿದ್ದೀರ? ಇನ್ನರ್ ಇಂಜಿನಿಯರಿಂಗ್ ಆನ್‌ಲೈನ್ ಮೂಲಕ ಜೀವನವನ್ನು ಉತ್ತಮ ರೀತಿಯಲ್ಲಿ ಎದುರಿಸಲು ನಿಮ್ಮನ್ನು ಸಜ್ಜುಗೊಳಿಸಿಕೊಳ್ಳಿರಿ.