ಯಶಸ್ಸಿನ ರಹಸ್ಯವನ್ನು ಭೇದಿಸುವ ಕೀಲಿಕೈ
ನಿಜವಾದ ಅರ್ಥದಲ್ಲಿ ಯಶಸ್ಸನ್ನು ಪಡೆಯಲು ಏನು ಬೇಕು ಮತ್ತು ನಮ್ಮ ಮನಸ್ಸಿನಲ್ಲಿರುವ ಯಶಸ್ಸಿನ ಕಲ್ಪನೆಯೇ ಸೀಮಿತವಾಗಿರಬಹುದೆಂದು ಸದ್ಗುರುಗಳು ಅವಲೋಕಿಸುತ್ತಾರೆ.
ನಿಮಗೆ ಕಾಣುವುದೇನು?
ಒಮ್ಮೆ, ಷೆರ್ಲಾಕ್ ಹೋಮ್ಸ್ ಮತ್ತು ವ್ಯಾಟ್ಸನ್, ಬೆಟ್ಟಗಾಡಿನಲ್ಲಿ ಕ್ಯಾಂಪಿಂಗ್ ಮಾಡಲು ಹೋದರು. ರಾತ್ರಿಯಾದಾಗ ಅಲ್ಲೇ ಮಲಗಿ ನಿದ್ರೆಗೆ ಜಾರಿದರು. ಮಧ್ಯರಾತ್ರಿಯಲ್ಲಿ, ಷೆರ್ಲಾಕ್ ಹೋಮ್ಸ್, ವ್ಯಾಟ್ಸನ್-ಅನ್ನು ತಿವಿದು ಎಬ್ಬಿಸಿದನು. ವ್ಯಾಟ್ಸನ್ ಕಣ್ಣು ತೆರೆದಾಗ, ಷೆರ್ಲಾಕ್ ಹೋಮ್ಸ್ ಅವನನ್ನು, "ನಿನಗೇನು ಕಾಣಿಸುತ್ತಿದೆ?" ಎ೦ದು ಕೇಳಿದನು
ವ್ಯಾಟ್ಸನ್ ಮೇಲೆ ನೋಡಿ ಹೇಳಿದ, "ಶುಭ್ರವಾದ ಆಕಾಶ ಮತ್ತು ನಕ್ಷತ್ರಗಳು, ಅನೇಕಾನೇಕ ನಕ್ಷತ್ರಗಳು."
ಷೆರ್ಲಾಕ್ ಹೋಮ್ಸ್ ಕೇಳಿದ, "ಅದರಿಂದ ನಿನಗೇನು ಅರ್ಥವಾಯಿತು?"
ವ್ಯಾಟ್ಸನ್ ಉತ್ತರಿಸಿದ, "ನಾಳೆ ಮತ್ತೊಂದು ಬಿಸಿಲುಕಾಯುವ, ಸುಂದರವಾದ ದಿನವಾಗಿರುತ್ತದೆ ಎಂದದರ್ಥ. ನಿನಗೇನನಿಸುತ್ತದೆ?"
ಷೆರ್ಲಾಕ್ ಹೋಮ್ಸ್ ಹೇಳಿದ, "ನಮ್ಮ ಟೆಂಟನ್ನು ಯಾರೋ ಕದ್ದಿದ್ದಾರೆಂದು ಅನ್ನಿಸುತ್ತಿದೆ."
ನೀವು ಜೀವನವನ್ನು ಅದು ಇರುವ ಹಾಗೆಯೇ ನೋಡಿದರೆ ಮಾತ್ರ ಜೀವನದ ಪ್ರತಿಯೊಂದು ಮಗ್ಗುಲಿನಲ್ಲಿ ಯಶಸ್ವಿಯಾಗಿ ನಡೆಯಬಹುದು. ಇಲ್ಲದಿದ್ದರೆ, ಅದೊಂದು ಮುಗ್ಗರಿಸಿ ಬಿದ್ದೇಳುವ ಪ್ರಕ್ರಿಯೆಯಾಗಿರುತ್ತದೆ. ಯಶಸ್ಸು ಎಂದರೆ ನೀವು ಇತರರಿಗಿಂತ ವೇಗವಾಗಿ ನಡೆಯುತ್ತಿದ್ದೀರಿ ಎಂದರ್ಥ. ನೀವು ವೇಗವಾಗಿ ನಡೆಯುತ್ತಿರುವಾಗ ನಿಮ್ಮ ಗ್ರಹಿಕೆಯು ಸ್ಪಷ್ಟವಾಗಿಲ್ಲದ್ದಿದ್ದರೆ, ನಿಸ್ಸಂಶಯವಾಗಿ, ನಿಮಗೆ ಅಡ್ಡ ಬಂದಿದ್ದಕ್ಕೆಲ್ಲ ಢಿಕ್ಕಿ ಹೊಡೆದು ಬೇರೆಲ್ಲರಿಗಿ೦ತ ಹೆಚ್ಚು ಒತ್ತಡ ಮತ್ತು ಉದ್ವೇಗಕ್ಕೆ ಒಳಗಾಗುತ್ತೀರಿ.
ನೀವು ಯಶಸ್ವಿಯಾಗಿ ಏನನ್ನಾದರೂ ಮಾಡಬೇಕೆ೦ದರೆ, ಗಣನೆಗೆ ಬರುವುದು, ನಿಮ್ಮ ಅರ್ಹತೆಯಲ್ಲ. ಅದು ನಿಮ್ಮ ಸುತ್ತಲಿನ ವಾಸ್ತವತೆಗಳ ಬಗ್ಗೆ ನಿಮಗಿರುವ ಗ್ರಹಿಕೆಯ ಸ್ಪಷ್ಟತೆಯ ಮೇಲಷ್ಟೆ ಅವಲಂಬಿತವಾಗಿರುತ್ತದೆ. ನೀವು "ಇವತ್ತಿನ ದಿನ"ವನ್ನು ಬಹಳ ಸ್ಪಷ್ಟವಾಗಿ ನೋಡಿದರೆ, ನೀವು ಲಾಟರಿ ಟಿಕೆಟೊಂದನ್ನು ಮಾರಿ ಹಣ ಸಂಪಾದಿಸಬಹುದು. ನೀವು "ನಾಳೆ"ಯನ್ನು ಬಹಳ ಸ್ಪಷ್ಟವಾಗಿ ನೋಡಿದರೆ, ಆ ಲಾಟರಿಯನ್ನು ಮಾರಲು ಉಪಾಯ ಮಾಡುತ್ತಿರಬಹುದು. ನೀವು "ಐವತ್ತು ವರ್ಷಗಳ ನಂತರ ಏನು" ಅನ್ನುವುದನ್ನು ಬಹಳ ಸ್ಪಷ್ಟವಾಗಿ ನೋಡಿದರೆ, ನೀವು ಸಂಪೂರ್ಣವಾಗಿ ಬೇರೆಯದನ್ನೇ ಮಾಡುತ್ತಿರಬಹುದು.
ತಪ್ಪಾದ ಸಮಯದಲ್ಲಿ ತಪ್ಪಾದ ಸಂಗತಿ
ಸೋತವರು ಕೂಡ, ಬುದ್ಧಿವಂತರು, ಸಮರ್ಥರು ಮತ್ತು ಉತ್ತಮವಾದ ಅರ್ಹತೆಯನ್ನು ಹೊಂದಿದ್ದವರೇ. ಆದರೆ, ತಮ್ಮ ಜೀವನದ ಕೆಲ ಕ್ಷಣಗಳಲ್ಲಿ ಕೆಲವು ವಿಷಯಗಳನ್ನು ಗ್ರಹಿಸುವುದರಲ್ಲಿ ಅವರು ವಿಫಲರಾದರು - ತಪ್ಪಾದ ಸಮಯದಲ್ಲಿ ತಪ್ಪಾದ ಆಸ್ತಿಯೊ೦ದನ್ನು ಖರೀದಿಸಿದಿರಿ. ತಪ್ಪಾದ ಸಮಯದಲ್ಲಿ ತಪ್ಪಾದ ವ್ಯವಹಾರವೊ೦ದಕ್ಕೆ ಕೈ ಹಾಕಿದಿರಿ. ಯೋಗ್ಯವಲ್ಲದ ವ್ಯಕ್ತಿಗೆ ಯೋಗ್ಯವಲ್ಲದ ವಿಚಾವನ್ನು ನಿಭಾಯಿಸಲು ಬಿಟ್ಟಿರಿ. ಸೋಲು ಎಂದರೆ ಅಷ್ಟೆ. ಗೆಲುವು ಅ೦ದರೂ ಅಷ್ಟೆ.
ಯಶಸ್ವಿಯಾದವರೆಲ್ಲ, ಯಾವೊ೦ದು ವಿಷಯದಲ್ಲಿ ಅಸಾಧಾರಣ ಪ್ರತಿಭಾವಂತರಲ್ಲದಿರಬಹುದು, ಆದರೆ ಅವರು ತಮ್ಮ ಗ್ರಹಿಕೆಯಲ್ಲಿ ಸ್ಪಷ್ಟತೆಯನ್ನು ಇಟ್ಟುಕೊಂಡಿರುತ್ತಾರೆ.. ನೀವು ಮಾತನಾಡುತ್ತಿರುವುದನ್ನು ತಕ್ಷಣವೇ ಗ್ರಹಿಸಿಕೊ೦ಡು, ಇರುವುದನ್ನು ಇಲ್ಲದಿರುವುದನ್ನು ನಿಮ್ಮ ತಲೆಯ ಮೇಲೆ ಹೊಡೆದ ಹಾಗೆ ಹೇಳುತ್ತಾರೆ.
ಹಾಗಾಗಿ, ಯಶಸ್ಸನ್ನು ಅರಸಬೇಡಿ, ಸಾಮರ್ಥ್ಯವನ್ನು ಅರಸಿ, ಅಷ್ಟೆ – ನಿಮ್ಮನ್ನು ನೀವು ಉನ್ನತ ಮಟ್ಟಕ್ಕೆ ವರ್ಧಿಸಿಕೊಳ್ಳುವುದು ಹೇಗೆ೦ದು ನೋಡಿ. ನಿಮ್ಮ ಸಾಮರ್ಥ್ಯವು ಉನ್ನತ ಮಟ್ಟದ್ದಾಗಿದ್ದರೆ, ನೀವು ಯಾವ ಪರಿಸ್ಥಿತಿಯಲ್ಲಿಯೂ ಯಶಸ್ವಿಯಾಗುತ್ತೀರಿ. ನಿಮ್ಮಲ್ಲಿ ಅಪಾರವಾದ ಸಾಮರ್ಥ್ಯವಿದ್ದರೆ, ಒಂದು ಸಾಮರ್ಥ್ಯದ ಆಯಾಮಕ್ಕೆ ನಿಮ್ಮನ್ನು ನೀವು ಬೆಳಸಿಕೊಂಡರೆ, ಯಶಸ್ಸೆನ್ನುವುದು ನಿಮ್ಮ ಜೀವನದ ಗುರಿಯಾಗಿ ಉಳಿಯುವುದಿಲ್ಲ. ನೀವು ಹೋದಕಡೆಯೆಲ್ಲಾ ನಿಮ್ಮನ್ನು ಹಿಂಬಾಲಿಸುವಂತದ್ದಾಗಿರುತ್ತದೆ.
ವ್ಯಕ್ತಿಯೊಬ್ಬನು ಸಂಪೂರ್ಣ ಅಂತಃಶಕ್ತಿ ಮತ್ತು ಮಹಾನ್ ಸಾಮರ್ಥ್ಯಕ್ಕೆ ಬೆಳೆದರೆ, ಇಡೀ ಪ್ರಪಂಚವೇ ಅವನನ್ನು ಅಥವಾ ಅವಳನ್ನು ಅರಸುತ್ತದೆ. ನಿಮ್ಮಲ್ಲಿರುವ ಅಂತಃಶಕ್ತಿ ಮತ್ತು ಸಾಮರ್ಥ್ಯಗಳ ಕಾರಣದಿಂದ ನೀವು ಪ್ರಪಂಚವನ್ನು ಅರಸುವ ಬದಲು ಜನರು ನಿಮ್ಮನ್ನು ಅರಸಿ ಬರುತ್ತಾರೆ.
ಸಂಪಾದಕರ ಟಿಪ್ಪಣಿ: ನೀವು ಯಾವುದಾದರು ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.