ಯೋಗಾಭ್ಯಾಸದಲ್ಲಿ ಬಂಧಗಳ ನಿಜವಾದ ಮಹತ್ವ
ಯೋಗ ವ್ಯವಸ್ಥೆಯಲ್ಲಿ ಬಂಧಗಳ ಮಹತ್ವದ ಬಗ್ಗೆ ಸದ್ಗುರುಗಳು ಇಲ್ಲಿ ವಿವರಿಸುತ್ತಾರೆ ಮತ್ತು ಅವು ಹೇಗೆ ನಮ್ಮ ಪ್ರಾಣಶಕ್ತಿಯನ್ನು ಸಂಪೂರ್ಣವಾಗಿ ನಿಯಂತ್ರಿಸುವ ಕಡೆಗೆ ಒಂದು ಹೆಜ್ಜೆಯಾಗಿದೆ ಎಂಬುದನ್ನು ತಿಳಿಸಿಕೊಡುತ್ತಾರೆ.
ಪ್ರ: ನಮಸ್ಕಾರ ಸದ್ಗುರು. ಕೆಲವು ಆಸನಗಳು ಮತ್ತು ಕ್ರಿಯಾಗಳ ಕೊನೆಯಲ್ಲಿ ನಾವು ಮಾಡುವ ಬಂಧಗಳ ಮಹತ್ವವೇನು?
ಸದ್ಗುರು: ಮೊದಲಿಗೆ, ನಾವು ಬಂಧಗಳ ಬಗ್ಗೆ ಸಾಮಾನ್ಯವಾಗಿ ತಿಳಿದುಕೊಳ್ಳೋಣ. ನಿಜ ಹೇಳಬೇಕೆಂದರೆ, ನೀವು ಮಾಡುತ್ತಿರುವುದು ಮೊದಲ ಹೆಜ್ಜೆಗಳಷ್ಟೇ. ಮೂಲಭೂತವಾಗಿ, ಬಂಧಗಳು ನಿಮ್ಮ ಪ್ರಾಣಶಕ್ರಿಯ ಮೇಲೆ ನಿಧಾನವಾಗಿ ಹಿಡಿತವನ್ನು ಸಾಧಿಸುವುದು ಮತ್ತು ಅದನ್ನು ನಿಮಗೆ ಬೇಕಾದ ಹಾಗೆ ಬಂಧಿಸುವ ಬಗ್ಗೆಯಾಗಿವೆ. ನಿಮ್ಮ ಪ್ರಾಣಶಕ್ತಿ ವ್ಯವಸ್ಥೆಯ ಮೇಲೆ ಹಿಡಿತವನ್ನು ಸಾಧಿಸಲು ಬಂಧಗಳನ್ನು ಬಳಸಿಕೊಳ್ಳಲಾಗುತ್ತದೆ. ಮೊದಲಿಗೆ ನೀವದನ್ನು ಭೌತಿಕವಾಗಿ, ಅಂದರೆ, ನಿಮ್ಮ ಅಂಗಾಂಗಗಳ ಸಹಾಯದಿಂದ ಸ್ವಲ್ಪ ಸಮಯದವರೆಗೆ ಅಭ್ಯಾಸ ಮಾಡುತ್ತೀರಿ. ಹಾಗೇ ಒಂದು ದಿನ, ನಿಮ್ಮ ಸ್ನಾಯುಗಳು ಮತ್ತು ಮೂಳೆಗಳ ಸಹಾಯವಿಲ್ಲದೆಯೇ ನಿಮಗದನ್ನು ಮಾಡಲು ಸಾಧ್ಯವಾದರೆ, ಆಗ ನಿಮ್ಮ ಬಂಧಗಳು ಉತ್ತಮವಾಗಿವೆ ಎಂದರ್ಥ. ನಂತರ ನೀವು ಎಲ್ಲಿ ಬೇಕಾದರೂ ಅದನ್ನು ಬಂಧಿಸಬಹುದು ಮತ್ತು ನೀವು ನಿರ್ವಹಿಸಲು ಬಯಸುವ ಯಾವುದೇ ಕ್ರಿಯೆಗೆ ಅನುಗುಣವಾಗಿ ನೀವು ನಿಮ್ಮ ಪ್ರಾಣಶಕ್ತಿಯನ್ನು ಅದರೆಡೆಗೆ ನಿರ್ದೇಶಿಸಬಹುದು. ಕಾಲಾನಂತರ, ನೀವದನ್ನು ಬಂಧಿಸುವ ಬಗ್ಗೆ ಯೋಚಿಸುವ ಅಗತ್ಯವೂ ಇರುವುದಿಲ್ಲ, ಅದು ತಂತಾನೇ ಆಗುತ್ತದೆ. ನೀವು ಯಾವುದಾದರೂ ನಿರ್ದಿಷ್ಟ ಚಟುವಟಿಕೆಯನ್ನು ಮಾಡಬೇಕೆಂದುಕೊಂಡರೆ, ಅದಕ್ಕೆ ತಕ್ಕ ಹಾಗೇ ನಿಮ್ಮ ವ್ಯವಸ್ಥೆ ಪ್ರತಿಸ್ಪಂದಿಸುತ್ತಾ, ಅವಶ್ಯಕತೆಗೆ ತಕ್ಕಂತೆ ಅಳವಡಿಸಿಕೊಳ್ಳತೊಡಗುತ್ತದೆ.
ಯೋಗದ ಒಂದು ಪ್ರಮುಖ ಅಂಶವೆಂದರೆ, ಹೇಗೆ ನೀವು ನಿಮ್ಮ ಅನ್ನಮಯ ಕೋಶದ ಮೇಲೆ ನಿಯಂತ್ರಣವನ್ನು ಹೊಂದಿದ್ದೀರೋ ಅದೇ ರೀತಿ ನೀವು ನಿಮ್ಮ ಪ್ರಾಣಮಯ ಕೋಶ ಮತ್ತು ಮನೋಮಯ ಕೋಶದ ಮೇಲೂ ನಿಯಂತ್ರಣವನ್ನು ಸಾಧಿಸುವಂತೆ ಮಾಡುವುದಾಗಿದೆ. ಇದನ್ನು ಪ್ರಾಯೋಗಿಕವಾಗಿ ನಿಮ್ಮ ಕೈಗಳನ್ನು ಬಳಸಿ ಪ್ರಯತ್ನಿಸಬಹುದು. ಮೊದಲಿಗೆ, ಬಿಗಿಯಾಗಿ ಮುಷ್ಟಿ ಹಿಡಿಯಿರಿ ಮತ್ತು ತೆಗೆಯಿರಿ – ಹಾಗೆಯೇ ಮೂರು ಬಾರಿ ಮಾಡಿ. ನಂತರ ಇದನ್ನೇ ಮಾನಸಿಕವಾಗಿ ಪುನರಾವರ್ತಿಸಿ. ಈ ಕ್ರಿಯೆಯನ್ನು ಮಾಡುವಾಗ ಆಗುವ ಸಂವೇದನೆಗಳ ಬಗ್ಗ ನಿಮಗೆ ಜಾಗೃತವಾದ ಅರಿವಿರಬೇಕು. ನಿಮ್ಮಲ್ಲಾಗುವ ಸಂವೇದನೆಗಳಿಂದಷ್ಟೇ ನಿಮ್ಮ ಮುಷ್ಟಿ ಬಿಗಿ ಹಿಡಿದಿದೆ ಎಂದು ನಿಮಗೆ ತಿಳಿಯುವುದು – ಅದನ್ನು ತಿಳಿಯಲು ಬೇರೆ ಯಾವುದೇ ಮಾರ್ಗವಿಲ್ಲ. ನೀವು ಮಾನಸಿಕವಾಗಿ ಇದನ್ನು ಮಾಡುತ್ತಿರುವಾಗ, ಸ್ವಲ್ಪ ಮಟ್ಟಿಗಾದರೂ, ಮುಷ್ಟಿಯನ್ನು ಮುಚ್ಚುವ ಸಂವೇದನೆಗಳನ್ನು ನೀವು ಅನುಭವಿಸಬೇಕು. ಅಷ್ಟರ ಮಟ್ಟಿಗೆ ನಿಮ್ಮ ಭೌತಿಕ ಶರೀರದ ಮೇಲೆ ನಿಮಗೆ ನಿಯಂತ್ರಣ ಇದೆ ಎಂದಾಗುತ್ತದೆ. ಯೋಗ ಎಂದರೆ ಅನ್ನಮಯ, ಮನೋಮಯ ಮತ್ತು ಪ್ರಾಣಮಯ, ಈ ಮೂರೂ ಕೋಶಗಳನ್ನು ನಿಮ್ಮಿಚ್ಛೆಯಂತೆ ನಿಯಂತ್ರಿಸುವ ಸ್ಥಿತಿಯನ್ನು ನೀವು ತಲುಪುವುದಾಗಿದೆ. ನೀವು ನಿಮ್ಮ ಉತ್ಕೃಷ್ಟ ಮಟ್ಟದಲ್ಲಿ ಕಾರ್ಯನಿರ್ವಹಿಸಬೇಕೆಂದರೆ, ನಿಮ್ಮ ಪ್ರಾಣಮಯ ಮತ್ತು ಮನೋಮಯ ಕೋಶಗಳು ನಿಮ್ಮ ಅನ್ನಮಯ ಕೋಶದೊಂದಿಗೆ ಸಮರಸದಿಂದ ಕೆಲಸ ಮಾಡಬೇಕು. ಇಲ್ಲವಾದರೆ, ಘರ್ಷಣೆಯುಂಟಾಗುತ್ತದೆ.
ಸಂಘರ್ಷಗಳಿಲ್ಲದ ಬದುಕು
ನಿಮ್ಮ ಅನ್ನಮಯ ಕೋಶ, ಮನೋಮಯ ಕೋಶ ಮತ್ತು ಪ್ರಾಣಮಯ ಕೋಶ - ಎಲ್ಲವೂ ಹೊಂದಾಣಿಕೆಯಿಂದ ಒಂದೇ ಲಯದಲ್ಲಿ ಜೋಡಣೆಯಾಗಿಲ್ಲದಿದ್ದರೆ, ನಿಮ್ಮ ಕೆಲಸಗಳು ಸರಾಗವಾಗಿ, ಸುಲಭವಾಗಿ ಮತ್ತು ನಿರಾಯಾಸವಾಗಿ ನಡೆಯುವುದಿಲ್ಲ. ಒಂದು ಸಣ್ಣ ಕೆಲಸ ಮಾಡಲೂ ಸಹ ಬಹಳಾ ಪ್ರಯಾಸ ಪಡಬೇಕಾಗುತ್ತದೆ. ನಿಮಗೆ ಎಷ್ಟು ನಿದ್ರೆಯ ಅವಶ್ಯಕತೆಯಿದೆ ಎಂಬುದು ಈ ಮೂರು ಕೋಶಗಳ ಹೊಂದಾಣಿಕೆಯನ್ನು ಅವಲಂಬಿಸಿದೆ. ಯಾವುದೇ ವಿಶೇಷವಾದ ಶಾರೀರಿಕ ಚಟುವಟಿಕೆಯನ್ನು ಮಾಡದಿದ್ದರೂ ನಿಮಗೆ ಎಂಟು ಘಂಟೆಗಳ ನಿದ್ರೆಯ ಅಗತ್ಯವಿದೆ ಎಂದಾದರೆ, ನಿಮ್ಮ ಮೂರು ಕೋಶಗಳು ಸರಿಯಾದ ಹೊಂದಾಣಿಕೆಯಲಿಲ್ಲ ಎಂದರ್ಥ. ಅವು ಸಂಘರ್ಷದಲ್ಲಿವೆ. ನಿಮ್ಮೊಳಗಾಗುವ ಎಲ್ಲಾ ಸಂಘರ್ಷಗಳನ್ನು ಉಪಶಮನ ಮಾಡಲು ನಿಮಗೆ ಅಷ್ಟು ವಿಶ್ರಾಂತಿಯ ಅಗತ್ಯವಿರುತ್ತದೆ. ಒಂದು ವೇಳೆ ನಿಮ್ಮ ಈ ಮೂರೂ ಕೋಶಗಳು ಸಮನ್ವಯದಿಂದಿದ್ದರೆ, ನೀವು ಭೌತಿಕವಾಗಿ ಎಷ್ಟೇ ಚಟುವಟಿಕೆಯಿಂದಿದ್ದರೂ ಸಹ, ನಿಮಗೆ ಕೇವಲ ನಾಲ್ಕೂವರೆ ಘಂಟೆಯಿಂದ ಐದು ಘಂಟೆಗಳ ನಿದ್ರೆ ಸಾಕಾಗುತ್ತದೆ. ನೀವು ಕಡಿಮೆ ಚಟುವಟಿಕೆಯಿಂದಿದ್ದರೆ, ಮತ್ತೂ ಕಡಿಮೆ ನಿದ್ರೆ ಸಾಕಾಗುತ್ತದೆ, ಏಕೆಂದರೆ ನಿಮ್ಮೊಳಗೆ ಎಲ್ಲವೂ ಸರಿಯಾದ ಹೊಂದಾಣಿಕೆಯಲ್ಲಿರುತ್ತದೆ.
ನಾವು ಪ್ರಪಂಚಕ್ಕೆ ತರಲು ಬಯಸುತ್ತಿರುವುದು ಇದನ್ನೇ - ಮನುಷ್ಯರು ತಮ್ಮ ಗರಿಷ್ಠ ಮಟ್ಟದಲ್ಲಿ ಕಾರ್ಯ ನಿರ್ವಹಿಸುವಂತಾಗಬೇಕು. ಯಾವುದೇ ಯಂತ್ರದ ಕಾರ್ಯದಕ್ಷತೆಯು ಮೂಲಭೂತವಾಗಿ ಅದರಲ್ಲಿನ ಸಂಘರ್ಷದ ಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ. ನೀವು ಆ ಸಂಘರ್ಷವನ್ನು ಅತ್ಯಂತ ಕನಿಷ್ಠ ಮಟ್ಟದಲ್ಲಿರಿಸಿದರೆ, ಯಂತ್ರವು ಅತ್ಯುನ್ನತವಾಗಿ ಕಾರ್ಯನಿರ್ವಹಿಸುತ್ತದೆ. ಸಂಘರ್ಷವು ಕನಿಷ್ಟವಾಗಿದ್ದಾಗ, ಅಷ್ಟೇ ಶಕ್ತಿಯನ್ನು ಉಪಯೋಗಿಸಿಕೊಂಡು ಅದು ಹೆಚ್ಚು ಕೆಲಸವನ್ನು ಮಾಡುತ್ತದೆ. ಆದರೆ ಸಂಘರ್ಷ ಅಥವಾ ತಿಕ್ಕಾಟ ಜಾಸ್ತಿಯಾದಾಗ, ಆಂತರಿಕ ನಷ್ಟವು ಹೆಚ್ಚಾಗುತ್ತದೆ. ಈಗ ಬಹುತೇಕ ಜನರಲ್ಲಿ ಆಗುತ್ತಿರುವುದು ಇದೇ. ನಿಮಗೆ ಅಗತ್ಯವಾದ ಗ್ರಹಣಶಕ್ತಿಯಿದ್ದರೆ, ಯಾರ ಶರೀರವು ಹೊಂದಾಣಿಕೆಯಲ್ಲಿವೆ, ಯಾರದ್ದು ಇಲ್ಲ ಎಂಬುದನ್ನು ನೀವು ಸ್ಪಷ್ಟವಾಗಿ ಅರಿಯಬಲ್ಲಿರಿ. ನಿಮಗೆ ಜನರನ್ನು, ಅವರು ಯಾರೇ ಆಗಿರಲಿ, ಅವರ ಭೌತಿಕ ಶರೀರದ ದೃಷ್ಟಿಯಿಂದಲ್ಲದೆ, ಅವರ ಕೋಶಗಳಲ್ಲಿನ ಹೊಂದಾಣಿಕೆ ಮತ್ತು ಜಾಮಿತಿಗಳ ಆಧಾರದ ಮೇಲೆ ನೋಡಲು ಸಾಧ್ಯವಾಗಬೇಕು.
ಬಾಹ್ಯದ ಭೌತಿಕ ಆಕೃತಿ ಮತ್ತು ರಚನೆಗಿಂತ ದೇಹದ ಜಾಮಿತಿಯಲ್ಲಿ ಹೆಚ್ಚಿನ ಸೌಂದರ್ಯ ಇರುವುದನ್ನು ನೀವು ಕಾಣಬಹುದು. ಒಬ್ಬ ವ್ಯಕ್ತಿಯ ಜಾಮಿತಿಯಲ್ಲಿ ಅನೇಕ ಆಸಕ್ತಿಕರವಾದ ಮತ್ತು ವಿಸ್ಮಯಕಾರಿಯಾದ ವಿಷಯಗಳು ಸಂಭವಿಸುತ್ತಿರುತ್ತವೆ. ನೀವು ಹಾರ್ಮೋನುಗಳಿಂದ ಪ್ರಭಾವಿತರಾಗಿದ್ದರೆ ಮಾತ್ರ ನಿಮಗೆ ದೈಹಿಕ ಶರೀರ, ಅಂಗಾಂಗಗಳು, ಅದರ ಗಾತ್ರ, ಆಕಾರ, ಇವುಗಳೆಲ್ಲಾ ಆಸಕ್ತಿಕರವಾಗಿ ಕಾಣುತ್ತವೆ. ಹಾರ್ಮೋನುಗಳ ವಿಷ ಪ್ರಭಾವವಿಲ್ಲದಿದ್ದರೆ, ಯಾವುದೇ ರೀತಿಯ ಶರೀರವನ್ನು ನೋಡಿದರೂ ಏನೂ ಅನ್ನಿಸುವುದಿಲ್ಲ. ನಮಗದನ್ನು ಭೌತಿಕವಾಗಿ ಕಡೆಗಣಿಸಲು ಸಾಧ್ಯವಿಲ್ಲ, ಆದರೆ ಜಾಗೃತವಾದ ಅರಿವಿನಿಂದ ಹಾಗೆ ಮಾಡಲು ನಮಗೆ ಸಾಧ್ಯವಾಗಬೇಕು. ನೀವು ಏನನ್ನಾದರೂ ನೋಡಿದರೆ, ನಿಮ್ಮೊಳಗಾಗುವ ಆಂತರಿಕ ಧ್ವಂಧ್ವಗಳ ಪ್ರಭಾವಕ್ಕೆ ಒಳಗಾಗದಂತೆ ಸುಮ್ಮನೆ ನೋಡಿ. ಇರುವುದನ್ನು ಇರುವ ಹಾಗೆಯೇ ನೋಡಲು ಕಲಿಯಿರಿ.
ನಿಮ್ಮ ಪ್ರಾಣಶಕ್ತಿಯನ್ನು ನಿರ್ದೇಶಿಸುವುದು
ಇದು ಬಹಳ ಮುಖ್ಯವಾಗುತ್ತದೆ, ಏಕೆಂದರೆ, ಯೋಗ ಎಂದರೆ ಕೇವಲ 33 ಅಥವಾ 84 ಆಸನಗಳನ್ನು ಕಲಿಯುವುದಷ್ಟೇ ಅಲ್ಲ - ಅದು ಜೀವದ ವಿಜ್ಞಾನವನ್ನು ಅರಿತುಕೊಳ್ಳುವುದಾಗಿದೆ. ಈ ಕಾರ್ಯಶಾಸ್ತ್ರವು ಎಷ್ಟು ಆಳವಾಗಿದೆಯೆಂದರೆ, ನೀವು ನೂರು ಜನ್ಮವೆತ್ತಿ ಬಂದರೂ ಸಹ ಅದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಯಾರಿಗೇ ಆದರೂ ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡೆ ಎಂದು ಹೇಳಲು ಸಾಧ್ಯವಿಲ್ಲ. ನಿಮಗೆಷ್ಟು ಸಂಗತವೋ ಅಷ್ಟನ್ನು ನೀವು ಅರಿತುಕೊಳ್ಳುತ್ತೀರಿ. ಆದರೆ, ನೀವು ಮತ್ತಷ್ಟು ಆಳವಾದ ಸಂಗತಿಗಳನ್ನು ತಿಳಿಯಲು ಬಯಸುವುದಾದರೆ, ತಿಳಿದುಕೊಳ್ಳಲು ಬಹಳಷ್ಟಿದೆ.
ಬಂಧಗಳು ಯೋಗದ ಯಾವ ರೀತಿಯ ಆಯಾಮವೆಂಬುದನ್ನು ತಿಳಿದುಕೊಳ್ಳಲು ನಾವು ಮತ್ತೊಮ್ಮೆ ನಮ್ಮ ಮುಷ್ಟಿ ಹಿಡಿಯುವ ಉದಾಹರಣೆಯತ್ತ ಗಮನಹರಿಸೋಣ - ದೇಹದ ಸಹಾಯವಿಲ್ಲದೆ ಮುಷ್ಟಿ ಹಿಡಿಯುವುದನ್ನು ಕಲಿಯುವುದು! ಮೊದಮೊದಲು ನೀವು ದೇಹದ ಸಹಾಯವನ್ನು ಪಡೆಯುತ್ತೀರಿ ಆದರೆ ನಿಧಾನವಾಗಿ, ನಿಮ್ಮ ಶರೀರದ ಸಹಾಯವಿಲ್ಲದೆಯೇ ಯಾವುದೇ ಬಂಧವನ್ನು ಎಲ್ಲಿ ಬೇಕಾದರೂ ಅಳವಡಿಸಿಕೊಳ್ಳುವಂತಹ ಹಂತಕ್ಕೆ ನೀವು ತಲುಪಬೇಕು. ಯೋಗದಲ್ಲಿ ಎಂಟು ರೀತಿಯ ಬಂಧಗಳಿವೆ. ಆದರೆ ಸಾಮಾನ್ಯವಾಗಿ, ನಾವು ಮೂರನ್ನು ಮಾತ್ರ ಹೇಳಿಕೊಡುತ್ತೇವೆ. ಏಕೆಂದರೆ, ಸಾಕಷ್ಟು ಜನರಿಗೆ ಮೂರು ಬಂಧಗಳು ಮಾತ್ರ ಸಂಗತವಾಗಿವೆ. ನೀವು ಇತರ ಅಂಶಗಳನ್ನು ತಿಳಿದುಕೊಳ್ಳುವ ಮೊದಲು ಅದಕ್ಕೆ ಒಂದು ನಿರ್ದಿಷ್ಟ ಮಟ್ಟದ ಅಭ್ಯಾಸದ ಅಗತ್ಯವಿದೆ. ನಿಮ್ಮ ಪ್ರಾಣಮಯ ಕೋಶದಲ್ಲಿ ಸಾಕಷ್ಟು ಸುಲಲಿತವಾದ ಹರಿವಿದ್ದು, ಅದು ಸಾಕಷ್ಟು ಮೆತುವಾಗಿದ್ದರೆ, ನೀವು ಎಲ್ಲಾ ಎಂಟು ಬಂಧಗಳನ್ನೂ ಬಳಸಿಕೊಳ್ಳಬಹುದು. ಬೇರೆ ಮನುಷ್ಯರು ಊಹಿಸಲೂ ಸಾಧ್ಯವಿರದಂತಹ ಸಂಗತಿಗಳನ್ನು ಮಾಡಲು ಅದು ನಿಮಗೆ ಅನುವು ಮಾಡಿಕೊಡುತ್ತದೆ.
ನೀವು ಮಾಡುವ ಮೂರು ಬಂಧಗಳ ವಿಷಯದಲ್ಲೂ ಸಹ - ನಿಧಾನವಾಗಿ ನೀವು ನಿಮ್ಮ ಸ್ನಾಯುಗಳನ್ನು ಬಳಸದೆಯೇ ಅವುಗಳನ್ನು ಬಂಧಿಸುವ ಮಟ್ಟಕ್ಕೆ ನಾವು ನಿಮ್ಮನ್ನು ಕೊಂಡೊಯ್ಯಲು ಬಯಸುತ್ತೇವೆ. ಆದರೆ ಈಗಲೇ ಅದನ್ನು ಪ್ರಯತ್ನಿಸಬೇಡಿ - ಸುಮ್ಮನೆ ನಿಮ್ಮ ಸಮಯ ಮತ್ತು ಶ್ರಮ ವ್ಯರ್ಥವಾಗುತ್ತದೆ. ಮೊದಲಿಗೆ ದೈಹಿಕವಾಗಿ ನೀವದನ್ನು ಸರಿಯಾಗಿ ಮಾಡುವುದನ್ನು ಅಭ್ಯಸಿಸಬೇಕು. ನಂತರ ನೀವು ಭೌತಿಕ ಶರೀರದ ಸಹಾಯವಿಲ್ಲದೇ ಯಾವ ಬಂಧವನ್ನು ಎಲ್ಲಿ ಬೇಕಾದರೂ ಸಾಧಿಸಲು ಶಕ್ತರಾಗುತ್ತೀರಿ. ನೀವು ಮಾಡುವ ಒಂದು ನಿಗದಿತ ಕಾರ್ಯದತ್ತ ನಿಮ್ಮ ಶಕ್ತಿಯ ಹರಿವನ್ನು ಒಂದು ನಿಶ್ಚಿತವಾದ ಬಂಧದಿಂದ ಮಾಡಬಹುದು. ಆಗ ಆ ಕಾರ್ಯವು ಅದ್ಭುತವಾಗಿ ಸಿದ್ಧಿಸುತ್ತದೆ, ಏಕೆಂದರೆ, ಶಕ್ತಿ ಸಂಚಲನೆಯು ಬೇರೆಲ್ಲೂ ವ್ಯರ್ಥವಾಗದೆ ಸಂಪೂರ್ಣವಾಗಿ ಅಲ್ಲಿಯೇ ಕೇಂದ್ರೀಕೃತವಾಗಿರುತ್ತದೆ. ಹಾಗಾಗಿ ಬಂಧಗಳೆಂದರೆ ಮುಖ್ಯವಾಗಿ ನಿಮ್ಮ ಶಕ್ತಿಯನ್ನು ನಿಮ್ಮಿಚ್ಛೆಯಂತೆ ಬಂಧಿಸಿ, ನಿಮ್ಮ ಚಟುವಟಿಕೆಗೆ ತಕ್ಕಂತೆ ನಿರ್ವಹಿಸುವುದಾಗಿದೆ.
ಉದಾಹರಣೆಗೆ ನೀವು ಮಾತನಾಡಲು ಬಯಸುತ್ತೀರಿ ಎಂದಿಟ್ಟುಕೊಳ್ಳೋಣ - ನಿಮ್ಮ ಶಕ್ತಿಯು ಎಲ್ಲೆಡೆ ಹರಿದಾಡಬೇಕೆಂದೇನಿಲ್ಲ. ನಿಮ್ಮ ಶಕ್ತಿಯ ಹರಿವಿನ ಮೇಲೆ ನಿಮಗೆ ನಿಯಂತ್ರಣವಿದ್ದರೆ, ನಿಮ್ಮ ಚಟುವಟಿಕೆಯ ಅವಶ್ಯಕತೆಗೆ ತಕ್ಕಂತೆ ಅದನ್ನು ಬೇಕಾದ ಕಡೆ ಬಂಧಿಸಬಹುದು. ಅಗತ್ಯವಿಲ್ಲದ ಶಕ್ತಿಯ ಹರಿವು ನಿಮ್ಮನ್ನು ಅಸಮರ್ಥರನ್ನಾಗಿ ಮಾಡುತ್ತದೆ. ನೀವು ಹೋಗಬೇಕಾದ ದಿಕ್ಕು ಒಂದಾಗಿದ್ದು, ನಿಮ್ಮ ಶರೀರದ ಪ್ರತಿಕ್ರಿಯೆಯೇ ಇನ್ನೊಂದು ದಿಕ್ಕಿನಲ್ಲಿದ್ದರೆ, ಅದನ್ನು ಸಮರ್ಥತೆ ಎನ್ನಲು ಹೇಗೆ ಸಾಧ್ಯ? ಅಂತೆಯೇ, ನಿಮ್ಮ ಮನಸ್ಸು ಕೂಡ - ಚಂಚಲ ಚಿತ್ತವು ನಿಮ್ಮನ್ನು ಅಸಮರ್ಥರನ್ನಾಗಿಸುತ್ತದೆ. ನೀವು ಮಾಡಬೇಕಾದ ಕೆಲಸ ಒಂದು, ಆದರೆ ನಿಮ್ಮ ಮನಸ್ಸು ಇನ್ನೆಲ್ಲೋ ಯೋಚಿಸುತ್ತಿದ್ದರೆ ಏನೂ ಸರಿಯಾಗುವುದಿಲ್ಲ. ನಿಮ್ಮ ಶರೀರವು ನಿಮ್ಮ ನಿಯಂತ್ರಣದಲ್ಲಿಲ್ಲದಿದ್ದರೆ ನೀವು ಸಂಪೂರ್ಣವಾಗಿ ಅಸಮರ್ಥರು. ನಿಮ್ಮ ಮನಸ್ಸು ನಿಮ್ಮೆಚ್ಛೆಯಂತೆ ಕೆಲಸಮಾಡದಿದ್ದರೆ, ಆಗಲು ಒಂದು ರೀತಿಯ ಅಸಮರ್ಥತೆ ಇದ್ದೇ ಇರುತ್ತದೆ. ನೀವಿದನ್ನು ಗಮನಿಸಬಹುದು - ನಿಮ್ಮ ಚಟುವಟಿಕೆಗಳು ಪರಿಷ್ಕೃತವಾಗಿದ್ದಷ್ಟೂ ಸಹ, ನಿಮ್ಮ ಸಂಪೂರ್ಣ ಗಮನವನ್ನು ಅದರೆಡೆಗೆ ನೀಡದ ಹೊರತು ನಿಮಗದನ್ನು ಮಾಡಲು ಸಾಧ್ಯವಾಗುವುದಿಲ್ಲ. ಯೋಗವು ಅತ್ಯಂತ ಪರಿಷ್ಕೃತವಾದಂತಹ ಒಂದು ಚಟುವಟಿಕೆಯಾಗಿದೆ.
ವಿಕಸನದ ಪ್ರಶ್ನೆ
ನೀವು ನಿಮ್ಮ ಬದುಕಿನಲ್ಲಿ ಅರ್ಥಪೂರ್ಣವಾದ ಕೆಲಸವನ್ನು ಮಾಡಬೇಕೆಂದುಕೊಂಡರೆ, ಕೇವಲ ಶಕ್ತಿಯೊಂದೇ ಸಾಲದು, ನಿರಂತರ ಪರಿಶ್ರಮವೂ ಅಗತ್ಯ. ಆಗ ನಿಮ್ಮ ಶಕ್ತಿ-ಚೈತನ್ಯವು ಸಹಿಷ್ಣುತೆಯನ್ನು ಹೊಂದುತ್ತದೆ ಮತ್ತು ನಿಮ್ಮನ್ನು ಕೊನೆಯವರೆಗೆ ಬಿಟ್ಟುಕೊಡುವುದಿಲ್ಲ. ಪರಿಷ್ಕೃತವಾದ ಚಟುವಟಿಕೆಗಳಿಗೆ ನಿಮ್ಮ ಅನ್ನಮಯ ಕೋಶ, ಮನೋಮಯ ಕೋಶ ಮತ್ತು ಪ್ರಾಣಮಯ ಕೋಶಗಳು ನಿಮಗೆ ಬೇಕಾದ ಹಾಗೆ ಕೆಲಸ ಮಾಡಬೇಕು. ಉದಾಹರೆಣೆಗೆ, ನೀವು ನಿಮ್ಮ ಬೆರಳನ್ನು ಆಡಿಸುವಷ್ಟೇ ಸಲೀಸಾಗಿ ನಿಮ್ಮ ಪ್ರಾಣಮಯ ಕೋಶವನ್ನು ಪ್ರಚೋದಿಸಲು ಸಾಧ್ಯವಾಗುವಂತಿರಬೇಕು. ಆಗ ನಿಮ್ಮ ಕೆಲಸ ಮಾಡುವ ಸಾಮರ್ಥ್ಯವು ಬಹಳಷ್ಟು ಹೆಚ್ಚಾಗುತ್ತದೆ. ಸದ್ಯಕ್ಕಂತೂ ಮಾನವ ಜನಾಂಗವು ಬಹಳ ದುರ್ಬಲವಾಗಿದೆ ಎಂದೇ ಹೇಳಬಹುದು. ಅವರು ಏನಾಗಬಹುದಿತ್ತೋ ಅದಕ್ಕೂ ಮತ್ತು ಸದ್ಯಕ್ಕೆ ಅವರಾಗಿರುವುದಕ್ಕೂ ಅಜಗಜಾಂತರ ವ್ಯತ್ಯಾಸ ಏರ್ಪಟ್ಟಿದೆ. ಒಂದು ಹುಲಿ, ಮಂಗ ಅಥವಾ ಮತ್ತಿನ್ಯಾವುದೇ ಜೀವಿಯೂ ಸಹ ತನ್ನೆಲ್ಲಾ ಸಾಮರ್ಥ್ಯಕ್ಕನುಗುಣವಾಗಿ ಹುಟ್ಟುವಾಗ, ಮನುಷ್ಯನಿಗೆ ಮಾತ್ರ ಏಕಿಷ್ಟು ಹೆಣಗಾಟ. ಇದು ವಿಕಸನದ ಒಂದು ಸಮಸ್ಯೆ.
ನಿಮ್ಮ ಮತ್ತು ಚಿಂಪಾಂಜಿಗಳ DNAಯ ನಡುವೆ ಅಷ್ಟು ದೊಡ್ಡ ವ್ಯತ್ಯಾಸವೇನೂ ಇಲ್ಲ, ಆದರೆ ಜಾಗೃತಿ, ಅರಿವು, ಬುದ್ಧಿವಂತಿಕೆಗಳ ವಿಷಯದಲ್ಲಿ ನಮ್ಮ ಮತ್ತವುಗಳ ನಡುವೆ ಭೂಮಿ ಆಕಾಶದಷ್ಟು ವ್ಯತ್ಯಾಸವಿದೆ. ಭೌತಿಕ ಶರೀರವೂ ಸಹ ನಮ್ಮ ಅರಿವು ಮತ್ತು ಬುದ್ಧಿವಂತಿಕೆಗೆ ಸಮನಾಗಿ ವಿಕಸನಗೊಳ್ಳಲು ಪ್ರಯತ್ನಿಸಿದೆ ಆದರದು ದೊಡ್ಡ ಮಟ್ಟದಲ್ಲಿ ಸಾಧ್ಯವಾಗಿಲ್ಲ, ಏಕೆಂದರೆ ನಮ್ಮ ದೇಹವು ಸಂಪೂರ್ಣವಾಗಿ ನಾವು ಜೀವಿಸುತ್ತಿರುವ ಸೌರ ಮಂಡಲದಿಂದಾಗಿದೆ, ಆದರೆ ಮನುಷ್ಯನ ಪ್ರಜ್ಞೆಯು ಹಲವಾರು ಬೇರೆ ಸಂಗತಿಗಳಿಂದ ಪ್ರಭಾವಿತಗೊಂಡಿದೆ. ಸೌರ ಮಂಡಲದಲ್ಲಿ ಯಾವುದಾದರೊಂದು ನಾಟಕೀಯ ಬದಲಾವಣೆಯಾಗದ ಹೊರತು ನಮ್ಮ ದೈಹಿಕ ಶರೀರವು ಮತ್ತಷ್ಟು ವಿಕಸನಗೊಳ್ಳಲು ಸಾಧ್ಯವಿಲ್ಲ ಎಂದು ಲಕ್ಷಾಂತರ ವರ್ಷಗಳ ಹಿಂದೆಯೇ ಆದಿಯೋಗಿಯು ಹೇಳಿದ್ದಾನೆ. ಆದರೆ ನಾವದನ್ನು ಒಂದು ಸ್ಥಿರವಾದ, ಸಮತೋಲನವಾದ ವೇದಿಕೆಯನ್ನಾಗಿ ಮಾಡಿಕೊಳ್ಳುವ ಮೂಲಕ ನಮ್ಮ ಅರಿವು ಮತ್ತು ಬುದ್ಧಿವಂತಿಕೆಗಳು ಅಪ್ರಯೋಪಜಕವಾಗದಂತೆ ಖಚಿತಪಡಿಸಿಕೊಳ್ಳಬಹುದಾಗಿದೆ.
ಬಂಧಗಳಿಂದ ಆನಂದದೆಡೆಗೆ
ಬಂಧಗಳಿಗಿರುವ ಇನ್ನೊಂದು ಆಯಾಮವೆಂದರೆ - ನೀವೊಂದು ನಿಶ್ಚಿತ ಸಮಯದವರೆಗೆ ಒಂದೇ ಆಸನದಲ್ಲಿದ್ದರೆ, ಅದು ತನ್ನದೇ ರೀತಿಯಲ್ಲಿ ಒಂದು ಬಂಧವಾಗುತ್ತದೆ. ನೀವು ಒಂದು ಭಂಗಿಯಲ್ಲಿ ಇರುವ ಉದ್ದೇಶ - ನಿಮ್ಮ ಅನ್ನಮಯ ಕೋಶ, ಮನೋಮಯ ಕೋಶ ಮತ್ತು ಪ್ರಾಣಮಯ ಕೋಶಗಳು ಸರಿಯಾದ ಜಾಮಿತಿಯಲ್ಲಿ ಹೊಂದಾಣಿಕೆಗೆ ಬರಲಿ ಎಂಬ ಕಾರಣಕ್ಕೆ. ಈ ಮೂರೂ ಕೋಶಗಳು ಭೌತಿಕ ಸ್ವಭಾವದ್ದವಾಗಿವೆ. ನೀವು ಕೇವಲ ಭೌತಿಕತೆಯನ್ನು ಸರಿಹೊಂದಿಸಲು ಪ್ರಯತ್ನಿಸುತ್ತಿದ್ದೀರಿ ಅಷ್ಟೇ. ಇವುಗಳನ್ನು ಮೀರಿ ಇರುವುದೇ ಆನಂದಮಯ ಕೋಶ ಅಥವಾ ಇಂಗ್ಲೀಷಿನಲ್ಲಿ ಹೇಳುವ “bliss body” - ಅದಕ್ಕೆ ಯಾವುದೇ ರೀತಿಯ ಹೊಂದಾಣಿಕೆಯ ಅಗತ್ಯವಿಲ್ಲ, ನೀವದನ್ನು ಕೇವಲ ಅನುಭವಿಸಬೇಕಷ್ಟೆ. ಆದರೆ ಅದನ್ನು ತಲುಪಲು ನಿಮ್ಮ ಅನ್ನಮಯ, ಮನೋಮಯ ಮತ್ತು ಪ್ರಾಣಮಯ ಕೋಶಗಳು ಹೊಂದಾಣಿಕೆಯಲ್ಲಿರಬೇಕು. ನಮ್ಮ ಭಾವಸ್ಪಂದನ ಕಾರ್ಯಕ್ರಮಗಳಲ್ಲಿ ಸಾಕಷ್ಟು ಜನ ಆನಂದಮಯ ಸ್ಥಿತಿಯಲ್ಲಿರುವುದನ್ನು ನೀವು ನೋಡುತ್ತೀರಿ. ಏಕೆಂದರೆ, ನಾವು ಮೇಲೆ ಹೇಳಿರುವ ಮೂರೂ ಕೋಶಗಳು ಒಂದೇ ಲಯದಲ್ಲಿರುವಂತಹ ಸನ್ನಿವೇಶವನ್ನು ಅಲ್ಲಿ ಸೃಷ್ಟಿಸುತ್ತೇವೆ. ಹಾಗಾದ ತಕ್ಷಣ ಅವರೊಳಗೆ ಆನಂದದ ಆಸ್ಫೋಟವಾಗುತ್ತದೆ. ಆದರೆ ಆ ಆನಂದದ ಸ್ಥಿತಿಯನ್ನು ಸದಾಕಾಲ ಅನುಭವಿಸಲು ಮತ್ತು ಬೇಕೆಂದಾಗ ಅಲ್ಲಿಗೆ ತಲುಪಲು, ನಿಮ್ಮ ಮೂರೂ ಕೋಶಗಳನ್ನು ಹೊಂದಾಣಿಕೆಯಲ್ಲಿರುವಂತೆ ನೋಡಿಕೊಳ್ಳಬೇಕು.
ಹಠ ಯೋಗವು ಇದರ ಬಗ್ಗೆಯೇ ಆಗಿದೆ. ನೀವು ಆನಂದದ ಆಸ್ಫೋಟವನ್ನು ಯಾವುದೇ ಭಾವನೆಗಳ ಸಹಾಯವಿಲ್ಲದೆ ಅನುಭವಿಸುತ್ತೀರಿ. ಇದು ಬಹಳ ಮುಖ್ಯ, ಏಕೆಂದರೆ ನಿಮ್ಮ ಭಾವನೆಗಳನ್ನು ಒಂದು ಹಂತಕ್ಕಿಂತ ಜಾಸ್ತಿ ಹೆಚ್ಚಿಸಲು ಸಾಧ್ಯವಿಲ್ಲ. ಆದರೆ ನೀವು ನಿಮ್ಮ ಪ್ರಾಣಶಕ್ತಿಯನ್ನು ಹೆಚ್ಚೆಚ್ಚು ವೃದ್ಧಿಸಿಕೊಳ್ಳಬಹುದು. ಜೀವನವೆಂಬುದು ಬರೀ ಮನಸ್ಸಿಗಷ್ಟೇ ಸೀಮಿತವಲ್ಲ. ಯೋಗ ಎಂದರೆ ನೀವು ನಿಮ್ಮ ಆಲೋಚನೆಗಳು ಮತ್ತು ಭಾವನೆಗಳ ಪರಿಧಿಯೊಳಗೆ ಸೀಮಿತವಾಗದೆ ಅವುಗಳಿಂದಾಚೆಗೆ ಮೀರಿ ಹೋಗುವುದಾಗಿದೆ. ನಿಮ್ಮ ಭೌತಿಕ ಶರೀರ ಮತ್ತು ಮಾನಸಿಕ ಸೀಮಿತತೆಗಳು ನಿಮ್ಮ ಜೀವನದ ಚೌಕಟ್ಟನ್ನು ನಿರ್ಧರಿಸುವುದು ನಿಮಗೆ ಇಷ್ಟವಿರುವುದಿಲ್ಲ- ನೀವು ಅವನ್ನೆಲ್ಲಾ ಮೀರಿ ಹೋಗಲು ಬಯಸುತ್ತೀರಿ.
ಎಲ್ಲೆಗಳನ್ನು ಮೀರಿ ಮುಂದೆ ಸಾಗಿ
ನಿಮ್ಮ ಪ್ರಾಣಮಯ ಕೋಶವನ್ನು ನಿಮ್ಮ ಅನ್ನಮಯ ಕೋಶದಂತೆ ಬಳಸಲು ನಿಮಗೆ ಸಾಧ್ಯವಾದಾಗ, ಯಾವುದೇ ಎಲ್ಲೆಗಳು ಇರುವುದಿಲ್ಲ. ಭೌತಿಕತೆಗೆ ಸೀಮಿತತೆಯಿರುತ್ತದೆ. ಆದರೆ, ಅನುಭವ ಮತ್ತು ಪರಿಶೋಧನೆಗಳಿಗೆ ಯಾವುದೇ ಸೀಮಿತತೆ ಇಲ್ಲ. ಒಬ್ಬ ಯೋಗಿಯಾದವನು ಬಂಧಗಳ ಮೂಲಕ ಇದನ್ನೇ ಸಾಧಿಸಲು ಪ್ರಯತ್ನಿಸುತ್ತಿರುವುದು. ಭಾರತದ ಹಲವು ಯೋಗಿಗಳು ಕೈಯನ್ನು ಮೇಲೆತ್ತಿ ವರ್ಷಾನುಗಟ್ಟಲೆ ಕಾಲ ಸಾಧನೆ ಮಾಡಿರುವುದನ್ನು ನೀವು ಕೇಳಿರಬಹುದು. ಇದು ಬಂಧ. ಸ್ವಲ್ಪ ಕಾಲದ ನಂತರ, ಆ ಕೈಗಳು ಸುರುಟಿ ಹೋಗುತ್ತವೆ, ಏಕೆಂದರೆ, ಕೈಗಳನ್ನು ಮೇಲೆತ್ತಿದಾಗ ಹೃದಯವು ಅಲ್ಲಿಗೆ ರಕ್ತಚಲನೆಯನ್ನು ಮಾಡುವುದಿಲ್ಲ. ನಿಧಾನವಾಗಿ, ಪೂರ್ತಿ ಕೈ ಒಣಗಿ ಕಟ್ಟಿಗೆಯಂತಾಗುತ್ತದೆ. ಆದರೆ ಅವನು ಮಾತ್ರ ತನ್ನ ಕೈಯನ್ನು ಕೆಳಗಿಳಿಸುವುದಿಲ್ಲ, ಏಕೆಂದರೆ, ಬಂಧದ ಮೂಲಕ ತನ್ನ ಭೌತಿಕ ಮತ್ತು ಮಾನಸಿಕ ಸೀಮಿತತೆಗಳನ್ನು ಮೀರಿ ಹೋಗುವುದೇ ಅವನ ಉದ್ದೇಶವಾಗಿರುತ್ತದೆ.
ಭೌತಿಕ ಮತ್ತು ಮಾನಸಿಕ ಇತಿಮಿತಿಗಳನ್ನು ಮೀರಿದಾಗ, ನೀವು ಪರಿಶುದ್ಧ ಜೀವಶಕ್ತಿಯ ಒಂದು ಆಯಾಮಕ್ಕೆ ತಲುಪುತ್ತೀರಿ. ವಿಶ್ವದಿಂದ ಬೇರೆಯಾಗಿರದೆ ಅದರ ಜೀವಶಕ್ತಿಯ ಒಂದು ತುಣುಕಾಗಿ, ಅದರೊಂದಿಗೊಂದಾಗಿ, ಅದನ್ನು ಅನುಭವಿಸತ್ತಾ, ಅದರೊಂದಿಗೆ ಮಿಳಿತವಾಗಿ ಜೀವಿಸಿದಾಗ ಸೃಷ್ಟಿಯನ್ನು ಮತ್ತು ಸೃಷ್ಟಿಕರ್ತನನ್ನು ಅರಿಯುವುದು ಒಂದು ಸಾಧ್ಯತೆಯಾಗುತ್ತದೆ. ಬಂಧಗಳು ಇದರತ್ತ ನಿಮ್ಮ ಸಿದ್ಧತೆಗಳಾಗಿವೆ.
ಸಂಪಾದಕರ ಟಿಪ್ಪಣಿ: ಈಶ ಹಠ ಯೋಗ ಕಾರ್ಯಕ್ರಮಗಳು ಶಾಸ್ತ್ರೀಯ ಹಠ ಯೋಗದ ಒಂದು ವ್ಯಾಪಕ ಪರಿಶೋಧನೆಯಾಗಿವೆ. ಇಂದಿನ ದಿನಗಳಲ್ಲಿ ಕಾಣಸಿಗದ ಈ ಪ್ರಾಚೀನ ವಿಜ್ಞಾನದ ನಾನಾ ಆಯಾಮಗಳನ್ನು ಇದು ಪುನಃಶ್ಚೇತನಗೊಳಿಸುತ್ತದೆ. ಈ ಕಾರ್ಯಕ್ರಮಗಳು ಪ್ರಬಲವಾದ ಯೋಗಾಭ್ಯಾಸದ ಪ್ರಕ್ರಿಯೆಗಳಲ್ಲಿ ಕೆಲವು ಪ್ರಕ್ರಿಯೆಗಳಾದ ಉಪಯೋಗ, ಅಂಗಮರ್ದನ, ಸೂರ್ಯಕ್ರಿಯಾ, ಸೂರ್ಯಶಕ್ತಿ, ಯೋಗಾಸನ ಮತ್ತು ಭೂತಶುದ್ಧಿ ಮುಂತಾದ ಯೋಗ ಪ್ರಕ್ರಿಯೆಗಳನ್ನು ಅನ್ವೇಷಿಸಲು ಒಂದು ಅದ್ಭುತವಾದ ಅವಕಾಶವನ್ನು ಒದಗಿಸುತ್ತದೆ.
ನಿಮ್ಮ ಹತ್ತಿರದ ಹಠ ಯೋಗ ಕಾರ್ಯಕ್ರಮದ ಬಗ್ಗೆ ತಿಳಿದುಕೊಳ್ಳಿ
A version of this article was originally published in the January 2016 edition of Isha Forest Flower. Download as PDF on a “name your price, no minimum” basis or subscribe to the print version.