Read in Telugu: జీవితమనే నాటకానికి మీరే దర్శకులుగా ఉండండి..!!

ಒಂದು ನಾಟಕ ನಡೆಯಬೇಕೆಂದರೆ, ಅಲ್ಲಿ ಮೂರು ರೀತಿಯ ಜನರ ಗುಂಪಿರುತ್ತದೆ. ಒಬ್ಬರು ಪ್ರೇಕ್ಷಕರು, ಇನ್ನೊಬ್ಬರು ನಟನೆ ಮಾಡುವವರು, ಮತ್ತೊಬ್ಬರು ನಾಟಕವನ್ನು ಮುನ್ನಡೆಸುವ ನಿರ್ದೇಶಕರು ಹಾಗೂ ವೇದಿಕೆಯ ವಿನ್ಯಾಸಗಾರರು. ಇವರಲ್ಲಿ, ನಿರ್ದೇಶಕ ಈ ನಾಟಕವನ್ನು ಬಹಳ ಚೆನ್ನಾಗಿ ಅರ್ಥಮಾಡಿಕೊಂಡಿರುತ್ತಾನೆ ಮತ್ತು ಬೇರೆ ಎಲ್ಲರಿಗಿಂತಲೂ ಅದರಲ್ಲಿ ಹೆಚ್ಚು ತೊಡಗಿಸಿಕೊಂಡಿರುತ್ತಾನೆ. ಅವನು ನಾಟಕವನ್ನು ಕಲ್ಪಿಸಿಕೊಂಡ ಕಾರಣ, ಅದನ್ನು ಸೃಷ್ಟಿಸುತ್ತಾನೆ, ಮತ್ತು ಅದು ನಡೆಯುವಂತೆ ಮಾಡುತ್ತಾನೆ. ಇದರಲ್ಲಿ ನಿರ್ದೇಶಕನ ಪಾಲ್ಗೊಳ್ಳುವಿಕೆ ಬಹಳ ದೊಡ್ಡದಿರುತ್ತದೆ. ನಟರು ತಮ್ಮ ತಮ್ಮ ಪಾತ್ರಗಳನ್ನು ಮಾತ್ರ ಚೆನ್ನಾಗಿ ತಿಳಿದಿರುತ್ತಾರೆ - ಅವರು ನಾಟಕದ ಉಳಿದ ಭಾಗಗಳ ಬಗ್ಗೆ ತಿಳಿದಿರುವುದಿಲ್ಲ. ಪ್ರೇಕ್ಷಕರು ಆ ನಾಟಕದಲ್ಲಿನ ಯಾವುದನ್ನೂ ಸಹ ತಿಳಿದಿರುವುದಿಲ್ಲ. ಅವರು ಕೇವಲ ನಾಟಕದಲ್ಲಿ ಉಂಟಾಗುವ ಭಾವನೆಗಳು ಮತ್ತು ಇತರೆ ವಿಷಯಗಳನ್ನು ಮಾತ್ರ ಅರಿಯುತ್ತಾರೆ.

ನಾಟಕವು ನಡೆಯುತ್ತಿರುವಾಗ, ಬಹಳವಾಗಿ ಮೋಸಕ್ಕೊಳಗಾಗುವವರು ಪ್ರೇಕ್ಷಕರಾಗಿರುತ್ತಾರೆ, ಏಕೆಂದರೆ ಕೆಲವು ಸಮಯದ ನಂತರ, ಅವರು ಅದರಲ್ಲಿ ಯಾವ ರೀತಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆಂದರೆ, ಅಲ್ಲಿ ನಡೆಯುವುದೆಲ್ಲಾ ನಿಜವೆಂದು ನಂಬಲಾರಂಭಿಸುತ್ತಾರೆ.

ನಾಟಕವು ನಡೆಯುತ್ತಿರುವಾಗ, ಬಹಳವಾಗಿ ಮೋಸಕ್ಕೊಳಗಾಗುವವರು ಪ್ರೇಕ್ಷಕರಾಗಿರುತ್ತಾರೆ, ಏಕೆಂದರೆ ಕೆಲವು ಸಮಯದ ನಂತರ, ಅವರು ಅದರಲ್ಲಿ ಯಾವ ರೀತಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆಂದರೆ, ಅಲ್ಲಿ ನಡೆಯುವುದೆಲ್ಲಾ ನಿಜವೆಂದು ನಂಬಲಾರಂಭಿಸುತ್ತಾರೆ. ಅವರಿಗೆ ನಾಟಕವು ಅವರ ಮಾನಸಿಕ ಮಟ್ಟದಲ್ಲಿ ಜರುಗುತ್ತಿರುತ್ತದೆ. ಅವರು ನಗುತ್ತಾರೆ, ಅಳುತ್ತಾರೆ ಮತ್ತು ವಿಭಿನ್ನ ರೀತಿಗಳಲ್ಲಿ ಪ್ರತಿಕ್ರಿಯಿಸುತ್ತಾರೆ. ಯಾವುದೇ ನಾಟಕದಲ್ಲಾಗಲಿ, ಕನಿಷ್ಠ ಮಟ್ಟದಲ್ಲಿ ತೊಡಗಿಸಿಕೊಂಡು ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಸಿಕ್ಕಿಹಾಕಿಕೊಳ್ಳುವವರು ಪ್ರೇಕ್ಷಕರೇ ಆಗಿರುತ್ತಾರೆ. ಅವರು ನಾಟಕದ ಮೂಲಕ ಹಾದುಹೋಗುವ ಮತ್ತು ಅದನ್ನು ಅನುಭವಿಸುವ ರೀತಿಯಿಂದಾಗಿ ಅವರ ಸಿಲುಕಿಕೊಳ್ಳುವಿಕೆ ಅತಿಯಾಗಿರುತ್ತದೆ. ನಟರ ಸಂಗತಿ ಬೇರೆ. ಅವರು ಇಂದು ಒಂದು ಪಾತ್ರವನ್ನು ನಿರ್ವಹಿಸಬಹುದು, ನಾಳೆ ಮತ್ತೊಂದನ್ನು ಮಾಡಬಹುದು – ಅವರು ನಾಟಕದಲ್ಲಿ ತೊಡಗಿಸಿಕೊಳ್ಳುತ್ತಾರೆ ನಿಜ ಆದರೆ ಕಡಿಮೆ ಸಿಕ್ಕಿಹಾಕಿಕೊಳ್ಳುತ್ತಾರೆ. ಅದೇ ಒಬ್ಬ ನಿರ್ದೇಶಕ, ಅತ್ಯಂತ ಹೆಚ್ಚು ತೊಡಗಿಸಿಕೊಂಡಿರುತ್ತಾನೆ ಆದರೆ ಕನಿಷ್ಠ ಸಿಕ್ಕಿಹಾಕಿಕೊಂಡಿರುತ್ತಾನೆ. ಅವನು ನಾಟಕವನ್ನು ನಡೆಸುತ್ತಿರುತ್ತಾನೆಯೇ ಹೊರತು ಅದಕ್ಕೆ ಅಂಟಿಕೊಳ್ಳುವುದಿಲ್ಲ.

ಹೇಗಿದ್ದರೂ ಈ ಜೀವನವೆನ್ನುವುದು ಒಂದು ನಾಟಕವೇ ಸರಿ. ಇದರಲ್ಲಿ ನೀವು ಹೊಂದಿರುವ ಅವಕಾಶಗಳು ಹೀಗಿವೆ – ನೀವೊಬ್ಬ  ನಟನಾಗಿರಬಹುದು. ನಾಟಕದಲ್ಲಿ ಸಂಪೂರ್ಣವಾಗಿ ಮಗ್ನರಾದ ಪ್ರೇಕ್ಷಕರಲ್ಲೊಬ್ಬರಾಗಿರಬಹುದು. ಅಥವಾ ನೀವು ನಾಟಕವನ್ನು ರಚಿಸುತ್ತಿರುವ ಒಬ್ಬ ನಿರ್ದೇಶಕರಾಗಿರಬಹುದು. ಅಥವಾ, ನಿಮ್ಮ ಬಳಿ ಸಾಕಷ್ಟು ಜನ ಸಿಬ್ಬಂದಿ ಮತ್ತು ಪ್ರೇಕ್ಷಕ ವರ್ಗದವರು ಇಲ್ಲದೇ ಹೋದಲ್ಲಿ, ನೀವೇ ಎಲ್ಲಾ ಮೂರು ಪಾತ್ರಗಳನ್ನೂ ನಿರ್ವಹಿಸಬಹುದು. ಆದರೆ ನಿಮ್ಮೊಳಗಿನ ನಿರ್ದೇಶಕನ ಪಾತ್ರವು ಜೀವಂತವಾಗಿರುವುದಾದರೆ ಮಾತ್ರ, ನಿಮ್ಮ ನಾಟಕ ನಿಮಗೆ ಬೇಕಾದ ರೀತಿಯಲ್ಲಿ ಸಾಗುತ್ತದೆ - ಇಲ್ಲದಿದ್ದರೆ ಅದು ಅಂತ್ಯವಿಲ್ಲದ ಹಾಗೂ ನಿಯಂತ್ರಣವಿಲ್ಲದ ಒಂದು ನಾಟಕವಾಗುತ್ತದೆ ಅಷ್ಟೆ.

ಒಬ್ಬ ನಿರ್ದೇಶಕ, ಅತ್ಯಂತ ಹೆಚ್ಚು ತೊಡಗಿಸಿಕೊಂಡಿರುತ್ತಾನೆ ಆದರೆ ಕನಿಷ್ಠ ಸಿಕ್ಕಿಹಾಕಿಕೊಂಡಿರುತ್ತಾನೆ.

ನಿಮ್ಮ ಬಾಹ್ಯ ಪ್ರಪಂಚದಲ್ಲಿ ನಡೆಯುವ ನಾಟಕವನ್ನು ನೂರಕ್ಕೆ ನೂರರಷ್ಟು ನಿರ್ದೇಶಿಸಲು ನಿಮ್ಮಿಂದ ಸಾಧ್ಯವಿಲ್ಲ. ನಿಮ್ಮ ಸ್ಕ್ರಿಪ್ಟ್ ಪ್ರಕಾರವಾಗಿ ನಟಿಸುವ ಆಜ್ಞಾಧಾರಕ ನಟರು ನಿಮ್ಮ ಬಳಿ ಇಲ್ಲದೇ ಇರಬಹುದು. ಸದ್ಯದಲ್ಲಿ, ಹೊರಗೆ ನಡೆಯುವ ನಾಟಕ ನೀವಂದುಕೊಂಡಂತೆ ನಡೆಯದಿದ್ದಾಗ, ಮುಂದಿನ ಹಂತದ ನಾಟಕ - ಅಂದರೆ ನಿಮ್ಮ ಮನಸ್ಸಿನಲ್ಲಿ ಶುರುವಾಗುವ ನಾಟಕ ನಿಯಂತ್ರಣವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. ಈ ಕಾರಣಕ್ಕಾಗಿಯೇ ನೀವು ನಿಮ್ಮ ಮಾನಸಿಕ ಸ್ಥರದಲ್ಲಿ ನಡೆಯುವ ನಾಟಕಕ್ಕೆ ಏಕಮಾತ್ರ ನಿರ್ದೇಶಕರಾಗಬೇಕು. ಹೊರಗೆ ನಡೆಯುವ ನಾಟಕ ಹೇಗಿದ್ದರೂ ತನ್ನದೇ ಆದ ರೀತಿಯಲ್ಲಿ ನಡೆಯುತ್ತಲೇ ಇರುತ್ತದೆ.

ನಮ್ಮಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಬಾಹ್ಯ ನಾಟಕಗಳು ನಡೆಯುತ್ತಿರುತ್ತವೆ. ಇದರಲ್ಲಿ ಎಲ್ಲವೂ ನೀವು ಬಯಸಿದ ರೀತಿಯಲ್ಲೇ ನಿಖರವಾಗಿ ನಡೆಯುವುದಿಲ್ಲ. ಆದರೆ ನಿಮ್ಮ ಮನಸ್ಸಿನಲ್ಲಿ ನಡೆಯುವ ನಾಟಕ 100% ನಿಮ್ಮದೇ ರೀತಿಯಲ್ಲಿ ನಡೆಯಬೇಕು. ನಿಮ್ಮ ಮನಸ್ಸಿನಲ್ಲಿ ನಡೆಯುವ ನಾಟಕ ಹತೋಟಿಯಲ್ಲಿದ್ದರೆ, ಹೊರಗಿನ ಸನ್ನಿವೇಶ, ಸಂದರ್ಭಗಳು ಹತೋಟಿಗೆ ಬರುತ್ತವೆ. ಜೀವನದಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿರುವಾಗ, ಈ ಬದುಕೆನ್ನುವುದು ಕೇವಲ ಒಂದು ನಾಟಕ ಎನ್ನುವ ಸತ್ಯವನ್ನು ಅರ್ಥಮಾಡಿಕೊಂಡು, ಅದನ್ನು ಚೆನ್ನಾಗಿ ನಿರ್ವಹಿಸಬೇಕು. ಆದರೆ ನಿಮಗೆ ಈ ಬದುಕೆಂಬ ಸ್ಕ್ರಿಪ್ಟ್‌‌ನ ಮೇಲೆ ಯಾವುದೇ ನಿಯಂತ್ರಣವಿಲ್ಲದೇ ಹೋದರೆ, ಈ ನಾಟಕ ಯಾವುದೋ ಒಂದು ಹಂತದಲ್ಲಿ, ಒಂದಲ್ಲಾ ಒಂದು ರೀತಿಯಲ್ಲಿ ಅಸಹ್ಯಕ್ಕೆ ತಿರುಗುತ್ತದೆ – ಅದು ದುರ್ವರ್ತನೆಯಿಂದಾಗಬಹುದು, ರೋಗ, ಸಾವು, ಅಥವಾ ಇನ್ನಿತರ ವಿಕೋಪಗಳಿಂದ ಆಗಬಹುದು.
 

ನಿಮ್ಮ ಮನಸ್ಸಿನಲ್ಲಿ ನಡೆಯುವ ನಾಟಕವನ್ನು ಈಗಲೇ ನಿಮ್ಮ ಹಿಡಿತಕ್ಕೆ ತೆಗೆದುಕೊಳ್ಳಿ.

ಈ ಬದುಕೆಂಬ ನಾಟಕವು ವಿಕಾರಕ್ಕೆ ತಿರುಗುವ ತನಕ ಕಾಯಬೇಡಿ. ನಿಮ್ಮ ಮನಸ್ಸಿನಲ್ಲಿ ನಡೆಯುವ ನಾಟಕವನ್ನು ಈಗಲೇ ನಿಮ್ಮ ಹಿಡಿತಕ್ಕೆ ತೆಗೆದುಕೊಳ್ಳಿ. ನಿಮ್ಮೊಳಗಿರುವ ನಿಮ್ಮ ಸ್ವಂತ ನಟರು ನೀವು ಹೇಳಿದಂತೆ ಕೇಳಬೇಕು. ಇದನ್ನು ನೀವು ನಿರ್ವಹಿಸಿದ್ದೇ ಆದರೆ, ಆಧ್ಯಾತ್ಮಿಕ ಪ್ರಕ್ರಿಯೆಯು ಅನಾಯಾಸವಾಗಿ ನಡೆಯುತ್ತದೆ. ಎಲ್ಲಿಯವರೆಗೆ ನೀವು, ನಿಮ್ಮ ಮನಸ್ಸಿನಲ್ಲಿ ನಡೆಯುವ ನಾಟಕದ ಮೇಲೆ ಹೊರಗಿನ ನಾಟಕಕ್ಕೆ ಪ್ರಭಾವವನ್ನು ಬೀರಲು ಅನುಮತಿ ಕೊಡುವಿರೋ ಅಲ್ಲಿಯವರೆಗೆ, ನೀವು ಆಧ್ಯಾತ್ಮಿಕತೆಯ ಕಡೆಗೆ ಹೋಗಲು ಸಾಧ್ಯವಾಗುವುದಿಲ್ಲ. ಆಧ್ಯಾತ್ಮಿಕರಾಗುವುದು ಎಂದರೆ ಆಂತರ್ಯದ ಕಡೆಗೆ ತಿರುಗುವುದು. ನೀವು ಆಂತರ್ಯದ ಕಡೆಗೆ ತಿರುಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ನೀವು ಕೇವಲ ಬಾಹ್ಯದಲ್ಲಿ ನಡೆಯುವ ನಾಟಕವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಿರಿ ಎನ್ನುವುದನ್ನಷ್ಟೇ ಖಚಿತಪಡಿಸಿಕೊಳ್ಳಿ. ನೀವು ಸದಾಕಾಲ ಧ್ಯಾನದಲ್ಲಿ ಕುಳಿತುಕೊಂಡರೆ, ನಿಮ್ಮ ಗಂಡ ಅಥವಾ ಹೆಂಡತಿ ಈ ಹೊಸ ನಾಟಕ ಏನೆಂದು ಅಚ್ಚರಿ ವ್ಯಕ್ತಪಡಿಸುತ್ತಾರೆ. ಅವರಿಗದು ಇಷ್ಟವಾಗದಿದ್ದರೆ, ನಿಮ್ಮನ್ನು ಅದರಿಂದ ವಿಮುಖಗೊಳಿಸಲು ಅವರು ಬೇರೆಯದ್ದೇ ರೀತಿಯ ನಾಟಕವನ್ನಾಡಲು ಆರಂಭಿಸುತ್ತಾರೆ.

ನೀವು ಆಂತರ್ಯದ ಕಡೆಗೆ ತಿರುಗಿದ್ದೀರಿ ಎಂಬ ವಿಷಯ ಯಾರಿಗೂ ತಿಳಿಯಬೇಕಾದ ಅವಶ್ಯಕತೆಯಿಲ್ಲ. ಅದನ್ನು ರಹಸ್ಯವಾಗಿಡಬೇಕು ಎಂಬ ಕಾರಣಕ್ಕಾಗಲ್ಲ – ಆದರೆ ಅದು ಬೇರೆ ಇನ್ಯಾರ ವ್ಯವಹಾರವೂ ಅಲ್ಲದಿರುವ ಕಾರಣದಿಂದ ಅಷ್ಟೆ. ಹಾಗಾಗಿ ನಿಮ್ಮ ಸಂಗಾತಿ, ನಿಮ್ಮ ಕುಟುಂಬ, ಮತ್ತು ಸಮಾಜದೊಂದಿಗೆ, ಅವರು ಬಯಸಿದ ರೀತಿಯಲ್ಲಿ ಐವತ್ತು ಶೇಕಡದಷ್ಟು ನಾಟಕವನ್ನು ನೀವು ಆಡಬಹುದು ಮತ್ತು ನೀವು ಬಯಸುವ ರೀತಿಯಲ್ಲಿ ಐವತ್ತು ಶೇಕಡದಷ್ಟು ನಾಟಕವನ್ನು ನೀವು ಆಡಬಹುದು. ಆದರೆ ನಿಮ್ಮ ಮನಸ್ಸಿನಲ್ಲಿ ನಡೆಯುವ ನಾಟಕ ನೂರಕ್ಕೆ ನೂರರಷ್ಟು ನೀವು ಬಯಸುವ ರೀತಿಯಲ್ಲೇ ನಡೆಯಬೇಕು. ಆಧ್ಯಾತ್ಮಿಕ ವಿಚಾರದಲ್ಲೂ ಸಹ ಇದು ಅನ್ವಯಿಸುತ್ತದೆ - ಅದು ನೂರು ಪ್ರತಿಶತ ನಿಮ್ಮ ರೀತಿಯಲ್ಲೇ ಜರುಗಬೇಕು. ಹೊರಗೆ ಮಾತ್ರ, ನೀವು ಐವತ್ತು ಪ್ರತಿಶತದಷ್ಟು ಹೊಂದಾಣಿಕೆಗಳನ್ನು ಮಾಡಿಕೊಳ್ಳಬಹುದು. ಆದರೆ ನಿಮ್ಮ ಮನಸ್ಸಿನ ನಾಟಕ ಮತ್ತು ನಿಮ್ಮ ಆಂತರಿಕ ಪರಿಸ್ಥಿತಿ 100% ನಿಮ್ಮದಾಗಿರಬೇಕು.
 

Love & Grace