ಮಾನವ ಬುದ್ಧಿಮತ್ತೆಯನ್ನು ಇಂದು ಬಹಳ ಕುಂಟಿತವಾದ ರೀತಿಯಲ್ಲಿ ಬಳಸಲಾಗುತ್ತಿದ್ದು, ಸ್ಮೃತಿಕೋಶದಲ್ಲಿ ಸಂಗ್ರಹವಾದ ಸಂಗತಿಗಳಿಂದ ನಿರಂತರವಾಗಿ ಅದು ನಿರ್ದೇಶಿಸಲ್ಪಡುತ್ತಿದೆ. ನೀವು ಶೇಕರಿಸಿಕೊಂಡಂತಹ ನೆನಪುಗಳಿಂದಷ್ಟೆ ನಿಮ್ಮ ಬುದ್ಧಿಮತ್ತೆಯು ಕಾರ್ಯನಿರ್ವಹಿಸುತ್ತಿದ್ದರೆ ನೀವು ಕೇವಲ ಒಂದು ರೀಸೈಕಲ್ ಬಿನ್ ಆಗಿರುತ್ತೀರಿ. ಅದದೇ ವಿಷಯಗಳು ಅನೇಕ ಮಾರ್ಪಾಡು ಮತ್ತು ಸಂಯೋಜನೆಗಳಲ್ಲಿ ನಡೆಯುತ್ತಿರುತ್ತವೆ ಅಷ್ಟೆ.

ಆಧ್ಯಾತ್ಮಿಕ ಪ್ರಕ್ರಿಯೆಯ ಒಂದು ಪ್ರಮುಖ ಅಂಶವೆಂದರೆ ನಿಮ್ಮನ್ನು ನೀವು ಸ್ಮೃತಿಕೋಶದಿಂದ ಹೊರಗಿಡುವುದಾಗಿದೆ. ಕರ್ಮವೆಂದರೆ ನೆನಪುಗಳು. ನಾವು ಕರ್ಮದ ಬಗ್ಗೆ, ಅದರಿಂದ ಹೊರಬರುವುದುರ ಬಗ್ಗೆ ಏಕಷ್ಟೊಂದು ಮಾತನಾಡುತ್ತೇವೆಂದರೆ, ನೀವದರಲ್ಲಿ ಬಿದ್ದ ತಕ್ಷಣ, ನಿಮ್ಮ ಜೀವನವು ಆವರ್ತಗಳಲ್ಲಿ ಘಟಿಸಲು ಪಾರಂಭಿಸುತ್ತದೆ. ನಿಮ್ಮ ಜೀವನವು ಆವರ್ತಕವಾದರೆ, ನೀವು ಕೇವಲ ವೃತ್ತಾಕಾರದಲ್ಲಿ ಹೋಗುತ್ತಿದ್ದೀರಿ ಎಂದು, ಮತ್ತು ಅದರರ್ಥ ನೀವು ಎಲ್ಲಿಯೂ ಹೋಗುತ್ತಿಲ್ಲ ಎಂದು. ಈ ಚಕ್ರವನ್ನು ಮುರಿಯಬೇಕು. ಚಕ್ರವು ಮುರಿಯಬೇಕಾದರೆ, ನಿಮ್ಮ ಬುದ್ಧಿಮತ್ತೆಯು ಶೇಕರಿಸಿದ ನೆನಪಿನಿಂದ ಮುಕ್ತವಾಗಬೇಕು, ಇಲ್ಲದಿದ್ದರೆ ಚಕ್ರಗಳು ಮುರಿಯುವುದಿಲ್ಲ; ಬದಲಿಗೆ ಚಕ್ರಗಳು ಸೃಷ್ಟಿಯಾಗುತ್ತವೆ. ಈ ಸ್ಮೃತಿಕೋಶದೊಳಗೆ ನೀವು ಹೆಚ್ಚು ಆಳವಾಗಿ ಮುಳುಗಿದಷ್ಟೂ, ಆವರ್ತಗಳು ತೀರ ಚಿಕ್ಕ ಚಿಕ್ಕವಾಗಿ ನಿಮ್ಮನ್ನು ಮತಿಭ್ರಮಣೆಯ ಕಡೆಗೆ ತಳ್ಳುತ್ತವೆ.

ಸಂದರ್ಭಗಳು ಯಾವುದೇ ರೀತಿಯಲ್ಲೂ ಬಲವಂತವಾಗಿ ಒಳ ನುಗ್ಗದಿರುವಂತಹ ಅಥವಾ ಜೀವನ ಪ್ರಕ್ರಿಯೆಗೆ ಅಡ್ಡಿಯಾಗದಂತಹ ಸ್ತರಕ್ಕೆ ನಿಮ್ಮನ್ನು ಕೊಂಡೊಯ್ಯಲು ಸೂರ್ಯ ಕ್ರಿಯಾ ನಿಮ್ಮನ್ನು ಸಶಕ್ತರನ್ನಾಗಿಸುತ್ತದೆ.

ಸದ್ಯಕ್ಕೆ ನಾವು ಶಾರೀರಿಕ ಅಭ್ಯಾಸದ ಒಂದು ನಿರ್ದಿಷ್ಟ ಆಯಾಮವನ್ನು ಹೊರತರುವ ಪ್ರಕ್ರಿಯೆಯಲ್ಲಿದ್ದೇವೆ. ಮೇಲ್ನೋಟಕ್ಕೆ ಶಾರೀರಿಕ, ಆದರೆ ಆಧ್ಯಾತ್ಮಿಕ ಪ್ರಕ್ರಿಯೆಯ ಒಂದು ನಿರ್ದಿಷ್ಟ ಆಯಾಮವಿರುವ ಇದನ್ನು ನಾವು ಸೂರ್ಯ ಕ್ರಿಯಾ ಎಂದು ಕರೆಯುತ್ತಿದ್ದೇವೆ. ಕೆಲ ಸಮಯದಿಂದ ನಮ್ಮ ಎಲ್ಲಾ ಬ್ರಹ್ಮಚಾರಿಗಳು ಸೂರ್ಯ ಕ್ರಿಯಾವನ್ನು ಮಾಡುತ್ತಿದ್ದಾರೆ, ಮತ್ತು ಅವರಿನ್ನೂ ತಮ್ಮ ಅಭ್ಯಾಸವನ್ನು ಸರಿಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿದ್ದಾರೆ. ಅಭ್ಯಾಸವು ಉತ್ತಮವಾದಾಗ, ಜ್ಯಾಮಿತೀಯವಾಗಿ ಅದು ನೂರು ಪ್ರತಿಶತದಷ್ಟು ಸರಿಯಾದ ರೀತಿಯಲ್ಲಿ ಆದಾಗ, ನಾವು ಸೂರ್ಯ ಕ್ರಿಯಾದ ದೀಕ್ಷೆಯನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ನೀಡುತ್ತೇವೆ, ಮತ್ತು ಆಗ ಅದು ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೆ ಒಂದು ಅತ್ಯಂತ ಶಕ್ತಿಯುತ ಪ್ರಕ್ರಿಯೆಯಾಗುವುದರ ಜೊತೆಗೆ ಒಂದು ಮಹತ್ತರವಾದ ಆಧ್ಯಾತ್ಮಿಕ ಸಾಧ್ಯತೆಯಾಗಿಯೂ ಪರಿಣಮಿಸುತ್ತದೆ. ಆ ಪರಿಪೂರ್ಣತೆಯ ಸ್ಥಿತಿಗೆ ಬರಲು ಒಂದಷ್ಟು ಸಮಯ ಮತ್ತು ಶ್ರದ್ಧೆ ಮತ್ತು ನಿರಂತರ ತಿದ್ದುಪಡಿ ಬೇಕಾಗುತ್ತದೆ. ಆಗ ಮಾತ್ರ ಅದಕ್ಕೆ ದೀಕ್ಷೆಯನ್ನು ನೀಡುವುದು ಉಪಯುಕ್ತ, ಏಕೆಂದರೆ ಅದೊಂದು ಪ್ರಬಲವಾದ ಪ್ರಕ್ರಿಯೆ. ಅದನ್ನು ಒಂದು ನಿರ್ದಿಷ್ಟ ಮಟ್ಟದ ಸಾಮರ್ಥ್ಯದಿಂದ ಮಾಡಬೇಕಾಗುತ್ತದೆ.

ಸೂರ್ಯ ಕ್ರಿಯಾ ಸೂರ್ಯ ನಮಸ್ಕಾರಕ್ಕಿಂತ ಭಿನ್ನವಾಗಿದ್ದು, ಮೂಲ ಅಭ್ಯಾಸ ಅಥವಾ ನಿಜವಾದ ಅಭ್ಯಾಸ ಸೂರ್ಯ ಕ್ರಿಯಾ ಆಗಿದೆ. ನಿಮ್ಮನ್ನು ನೀವು ಸೂರ್ಯನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಂತಹ ಒಂದು ಮಾರ್ಗ ಇದಾಗಿದ್ದು, ಇದು ಹೆಚ್ಚು ಪರಿಷ್ಕೃತವಾದ ಪ್ರಕ್ರಿಯೆಯಾಗಿದೆ ಮತ್ತು ದೇಹದ ಜ್ಯಾಮಿತಿಯ ದೃಷ್ಟಿಯಿಂದ ಇದಕ್ಕೆ ಅಪಾರವಾದ ಗಮನ ಬೇಕಾಗುತ್ತದೆ. ಸೂರ್ಯ ನಮಸ್ಕಾರ ಸೂರ್ಯ ಕ್ರಿಯಾದ “ದೇಸೀ ಸಂಬಂಧಿ”ಯಾಗಿದ್ದು, ಮತ್ತೊಂದು ಪ್ರಕ್ರಿಯೆಯಾದ ಸೂರ್ಯ ಶಕ್ತಿ ಅದರ “ದೂರದ ಸಂಬಂಧಿ”ಯಾಗಿದೆ. ನೀವು ಈ ಪ್ರಕ್ರಿಯೆಯನ್ನು ಕೇವಲ ದೈಹಿಕ ವ್ಯಾಯಾಮವಾಗಿ, ಸ್ನಾಯುಗಳನ್ನು ಪಡೆಯಲು ಮತ್ತು ಬಲಶಾಲಿಯಾಗಲು ಬಳಸಬೇಕೆಂದು ಬಯಸಿದರೆ, ನೀವು ಸೂರ್ಯ ಶಕ್ತಿಯನ್ನು ಅಭ್ಯಾಸಿಸಿ. ನೀವು ದೈಹಿಕವಾಗಿ ಸದೃಢವಾಗಿ, ಏರೋಬಿಕ್ ವ್ಯಾಯಾಮವನ್ನೂ ಮಾಡುತ್ತಾ, ಹೃದಯವನ್ನೂ ಬಲಗೊಳಿಸಬೇಕೆಂದಾದರೆ, ಮತ್ತು ಅದರ ಜೊತೆ ಒಂದು ಆಧ್ಯಾತ್ಮಿಕ ಅಂಶವನ್ನೂ ಸೇರಿಸಬೇಕೆಂದುಕೊಂಡರೆ, ನೀವು ಸೂರ್ಯ ನಮಸ್ಕಾರವನ್ನು ಮಾಡಿ. ಆದರೆ ನೀವು ಮಾಡುವ ಶಾರೀರಿಕ ಪ್ರಕ್ರಿಯೆಯಲ್ಲಿ ಒಂದು ಪ್ರಬಲವಾದ ಆಧ್ಯಾತ್ಮಿಕ ಪ್ರಕ್ರಿಯೆಯೂ ಬೇಕೆಂದು ನೀವು ಬಯಸುವುದಾದರೆ ನೀವು ಸೂರ್ಯ ಕ್ರಿಯಾವನ್ನು ಮಾಡಿ.

ನಾವು ಸೂರ್ಯ ಎಂದು ಹೇಳಿದಾಗ ನಾವು ಈ ಭೂಮಿಯ ಮೂಲ ಶಕ್ತಿಕೇಂದ್ರದ ಬಗ್ಗೆ ಮಾತನಾಡುತ್ತಿದ್ದೇವೆ. ಈ ಭೂಮಿಯ ಮೇಲಿನ ಎಲ್ಲವೂ ಸಹ ಸೌರಶಕ್ತಿಯಿಂದಲೇ ಕಾರ್ಯನಿರ್ವಹಿಸುತ್ತವೆ. ನಿಮ್ಮನ್ನೂ ಸೇರಿದಂತೆ ಈ ಗ್ರಹದಲ್ಲಿನ ಎಲ್ಲಾ ಜೀವಗಳೂ ಸೌರಶಕ್ತಿಯಿಂದಲೇ ಕಾರ್ಯನಿರ್ವಹಿಸುತ್ತವೆ. ಸೂರ್ಯನ ಆವರ್ತಗಳ ಅವಧಿ ಹನ್ನೆರಡು ಕಾಲು ಅಥವಾ ಹನ್ನೆರಡುವರೆ ವರ್ಷಗಳಾಗಿವೆ. ನಿಮಗೆ ಈ ಆವರ್ತಗಳೊಂದಿಗೆ ಸಾಗಲು ಸಾಧ್ಯವಾಗುವುದು ನಿಮ್ಮ ಯೋಗಕ್ಷೇಮವನ್ನು ನಿರ್ಧರಿಸುವ ಒಂದು ಅಂಶವಾಗಿದೆ. ನೀವು ಆ ಚಕ್ರಗಳನ್ನೇರಿ ಸವಾರಿಮಾಬಹುದು ಅಥವಾ ನೀವವುಗಳಿಂದ ನಜ್ಜುಗುಜ್ಜಾಗಿ ಹೋಗಬಹುದು.

ಮಾನವನ ದೇಹವನ್ನು ರೂಪಿಸುವಲ್ಲಿ ಸೂರ್ಯ, ಭೂಮಿ ಮತ್ತು ಚಂದ್ರ ಮಹತ್ವದ ಪಾತ್ರವನ್ನು ವಹಿಸುತ್ತವೆ. ಸೂರ್ಯ ಕ್ರಿಯಾ ಸೂರ್ಯನ ಆವರ್ತವನ್ನು ಬಳಸುವ ಒಂದು ವಿಧಾನವಾಗಿದ್ದು, ಇದರಿಂದ ನೀವು ನಿಮ್ಮ ಭೌತಿಕ ಶರೀರವನ್ನು ಹನ್ನೆರಡು ಕಾಲು ಅಥವಾ ಹನ್ನೆರಡುವರೆ ವರ್ಷದ ಆವರ್ತಕ್ಕೆ ತರಲು ಸಾಧ್ಯವಾಗುತ್ತದೆ. ನಿಮ್ಮ ಜೀವನವನ್ನು ನೀವು ಎಚ್ಚರಿಕೆಯಿಂದ ಗಮನಿಸಿದರೆ, ಕೆಲ ಅವಧಿಗಳಲ್ಲಿ, ಉದಾಹರಣೆಗೆ ಪ್ರೌಢಾವಸ್ಥೆಯ ಆರಂಭದಿಂದಲೂ ನೀವು ಎದುರಿಸುತ್ತಿರುವ ಸಂದರ್ಭಗಳು ಪುನಾರವರ್ತಿಸುತ್ತಿವೆ ಎಂಬುದನ್ನು ನೀವು ನೋಡುತ್ತೀರಿ. ನಿಮ್ಮ ಮಾನಸಿಕ ಅನುಭವಗಳು, ನೀವು ಅನುಭವಿಸುವ ಭಾವನಾತ್ಮಕ ಸಂದರ್ಭಗಳು ಆವರ್ತಕವಾಗಿವೆ. ಕೆಲವರು ಹನ್ನೆರಡು ವರ್ಷಗಳ ಚಕ್ರದಲ್ಲಿ ಇರಬಹುದು; ಇನ್ನು ಕೆಲವರು ಆರು ವರ್ಷಗಳ ಚಕ್ರ ಅಥವಾ ಮೂರು ವರ್ಷಗಳು, ಹದಿನೆಂಟು ತಿಂಗಳುಗಳು, ಒಂಬತ್ತು ತಿಂಗಳುಗಳು ಅಥವಾ ಆರು ತಿಂಗಳ ಚಕ್ರದಲ್ಲಿ ಇರಬಹುದು. ಯಾರಿಗಾದರೂ ಇದು ಮೂರು ತಿಂಗಳ ಚಕ್ರಕ್ಕಿಂತ ಕಡಿಮೆಯಾದರೆ, ಅವರು ಮಾನಸಿಕವಾಗಿ ಎಂತಹ ಸ್ಥಿತಿಯಲ್ಲಿರುತ್ತಾರೆಂದರೆ ಅವರಿಗೆ ಖಂಡಿತವಾಗಿಯೂ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ.

ನಮ್ಮೊಳಗೆ ನಡೆಯುತ್ತಿರುವ ಆವರ್ತದ ಅವಧಿಯನ್ನು ಅವಲಂಬಿಸಿ ಸಂಪೂರ್ಣ ಆರೋಗ್ಯ ಮತ್ತು ಸಮತೋಲನದಿಂದ ತೀರ ಹದಗೆಡುವ ಕಡೆಗಿನ ಬದಲಾವಣೆಯನ್ನು ನಾವು ಗಮನಿಸಬಹುದು. ಮಹಿಳೆಯರು ಚಂದ್ರನೊಂದಿಗೆ ಸ್ವಲ್ಪ ಹೆಚ್ಚಾಗಿ ಲಯಬದ್ಧರಾಗಿರುತ್ತಾರೆ. ಪರಿಣಾಮವಾಗಿ, ಅವರು ಸೂರ್ಯನ ಆವರ್ತವನ್ನು ಅಷ್ಟು ಗಮನಿಸದೆ ಇರಬಹುದು, ಏಕೆಂದರೆ ಅವರು ಚಂದ್ರನ ಆವರ್ತವನ್ನು ಹೆಚ್ಚು ಗಮನಿಸುತ್ತಾರೆ. ಮೇಲ್ನೋಟಕ್ಕೆ, ಮಹಿಳೆಯರಲ್ಲಿ ಚಂದ್ರನ ಆವರ್ತವು ಸೂರ್ಯನ ಆವರ್ತಕ್ಕಿಂತ ಹೆಚ್ಚಿನ ಮಹತ್ವದ ಪಾತ್ರವನ್ನು ವಹಿಸುತ್ತಿದೆ ಎಂದು ತೋರುತ್ತದೆ. ಆದರೆ ಮಾನವ ದೇಹದ ಮೂಲಭೂತ ಸ್ವರೂಪವು ಮೂಲಭೂತವಾಗಿ ಸೂರ್ಯನ ಆವರ್ತದೊಂದಿಗೆ ಲಯಬದ್ಧವಾಗಿದೆ. ಆದ್ದರಿಂದ, ಸಂದರ್ಭಗಳು ಯಾವುದೇ ರೀತಿಯಲ್ಲೂ ಬಲವಂತವಾಗಿ ಒಳ ನುಗ್ಗದಿರುವಂತಹ ಅಥವಾ ಜೀವನ ಪ್ರಕ್ರಿಯೆಗೆ ಅಡ್ಡಿಯಾಗದಂತಹ ಸ್ತರಕ್ಕೆ ನಿಮ್ಮನ್ನು ಕೊಂಡೊಯ್ಯಲು ಸೂರ್ಯ ಕ್ರಿಯಾ ನಿಮ್ಮನ್ನು ಸಶಕ್ತರನ್ನಾಗಿಸುತ್ತದೆ.

ನಾಲ್ಕು ತಿಂಗಳುಗಳ ಕಾಲ ತಮ್ಮ ಅಭ್ಯಾಸಗಳನ್ನು ಬಹಳ ಎಚ್ಚರಿಕೆಯಿಂದ ಸರಿಪಡಿಸಿಕೊಂಡ ನಂತರ, ಪ್ರತಿದಿನ ಎಂಟರಿಂದ ಹತ್ತು ಗಂಟೆ, ಹದಿನೈದು ವರ್ಷಗಳಿಂದ ಸಾಧನೆ ಮಾಡುತ್ತಾ ಬಂದಿರುವಂತಹ ನಮ್ಮ ಬ್ರಹ್ಮಚಾರಿಗಳು, ದೇಹದ ಜ್ಯಾಮಿತಿಯನ್ನು ಸರಿಹೊಂದಿಸಲು ಏನು ಬೇಕು ಎಂಬುದನ್ನು ಈಗೀಗ ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಹದಿನೈದು ವರ್ಷಗಳಿಂದ ಅವರು ಸೂರ್ಯ ನಮಸ್ಕಾರವನ್ನು ಮಾಡುತ್ತಾ ಬಂದಿದ್ದಾರೆ ಮತ್ತವರು ಅದನ್ನು ಸರಿಯಾಗಿ ಮಾಡುತ್ತಿದ್ದೇವೆಂದು ನಂಬಿದ್ದಾರೆ. ನಿಜ, ಅದನ್ನವರು ಬಹುತೇಕ ಸರಿಯಾಗಿಯೇ ಮಾಡುತ್ತಿದ್ದಾರೆ, ಆದರೆ ದೇಹದ ಜ್ಯಾಮಿತಿಯನ್ನು ಸರಿಯಾಗಿಸುವುದು ಅಷ್ಟು ಸರಳವಾದ ವಿಷಯವಲ್ಲ. ನೀವದನ್ನು ಸರಿಹೊಂದಿಸಿಕೊಂಡರೆ, ಅದು ಇಡೀ ಬ್ರಹ್ಮಾಂಡವನ್ನೇ ನಿಮ್ಮ ಅರಿವಿಗೆ ತರಬಹುದು. ಇದಕ್ಕೆ ಬಹಳಷ್ಟು ಶ್ರಮಿಸಬೇಕಾಗುತ್ತದೆ - ಅದು ಪರಿಪೂರ್ಣವಾದ ಹಂತಕ್ಕೆ ಬರಲು ಹೊಂದಾಣಿಕೆ ಮತ್ತು ಮರು ಹೊಂದಾಣಿಕೆ ಮಾಡುತ್ತಿರಬೇಕಾಗುತ್ತದೆ. ನೀವು ಆ ಹಂತಕ್ಕೆ ತಲುಪಿದರೆ, ನಾವದಕ್ಕೆ ದೀಕ್ಷೆ ಎನ್ನುವ ಕಿಡಿಯನ್ನು ಹೊತ್ತಿಸುತ್ತೇವೆ. ನಾವು ಆ ಪ್ರಕ್ರಿಯೆಗೆ ಕಿಡಿ ಹಚ್ಚಿದ್ದಾಗ, ಒಂದೆಡೆ ಅದು ಶಾರೀರಿಕ ಮತ್ತು ಮಾನಸಿಕ ಸೌಖ್ಯವನ್ನು ತರುವ ಒಂದು ಅದ್ಭುತವಾದ ಅಭ್ಯಾಸವಾಗುತ್ತದೆ ಮತ್ತು ಇನ್ನೊಂದೆಡೆ ಅದು ಸೂರ್ಯನ ಆವರ್ತಗಳನ್ನು ಸವಾರಿ ಮಾಡುವಂತಹ ಒಂದು ಶಕ್ತಿಯುತವಾದ ವ್ಯವಸ್ಥೆಯಾಗುತ್ತದೆ.

Love & Grace

 

ಈ ಲೇಖನವು ಜನವರಿ 13, 2013ರಲ್ಲಿ ಮುಂಬೈನಲ್ಲಿ ನಡೆದ ಸತ್ಸಂಗದಿಂದ ಆಯ್ದ ತುಣುಕಾಗಿದೆ.

ಸೂರ್ಯ ಕ್ರಿಯಾ, ಸೂರ್ಯ ನಮಸ್ಕಾರ ಮತ್ತು ಸೂರ್ಯ ಶಕ್ತಿ ಬಗ್ಗೆ ಮತ್ತೊಂದು ಬರಹವನ್ನು ಇಲ್ಲಿ ಓದಿ.

ಸಂಪಾದಕರ ಟಿಪ್ಪಣಿ: ಈಶ ಹಠ ಯೋಗ ಕಾರ್ಯಕ್ರಮಗಳು ಶಾಸ್ತ್ರೀಯ ಹಠ ಯೋಗದ ವ್ಯಾಪಕ ಪರಿಶೋಧನೆಯಾಗಿದ್ದು, ಇಂದು ಜಗತ್ತಿನಲ್ಲಿ ಹೆಚ್ಚಾಗಿ ಇಲ್ಲವೇ ಆಗಿರುವ ಪ್ರಾಚೀನ ವಿಜ್ಞಾನದ ವಿವಿಧ ಆಯಾಮಗಳನ್ನು ಇದು ಪುನರುಜ್ಜೀವನಗೊಳಿಸುತ್ತದೆ. ಈ ಕಾರ್ಯಕ್ರಮಗಳು ಉಪ-ಯೋಗ, ಅಂಗಮರ್ದನ, ಸೂರ್ಯ ಕ್ರಿಯಾ, ಸೂರ್ಯ ಶಕ್ತಿ, ಯೋಗಾಸನಗಳು ಮತ್ತು ಭೂತಶುದ್ಧಿ ಮತ್ತಿತರ ಪ್ರಬಲ ಯೋಗಾಭ್ಯಾಸಗಳನ್ನು ಪರಿಶೋಧಿಸಲು ಸಾಟಿಯಿಲ್ಲದ ಅವಕಾಶವನ್ನು ನೀಡುತ್ತವೆ.

ನಿಮ್ಮ ಹತ್ತಿರದ ಹಠಯೋಗ ಕಾರ್ಯಕ್ರಮಗಳನ್ನು ಇಲ್ಲಿ ಹುಡುಕಿ