ಅರಿಶಿನದ ನಾಲ್ಕು ಗಮನಾರ್ಹ ಲಾಭಗಳು
ನಾವು ಇಲ್ಲಿ ಅರಿಶಿನದ ನಾಲ್ಕು ಗಮನಾರ್ಹ ಲಾಭಗಳನ್ನು ಪಟ್ಟಿ ಮಾಡಿದ್ದೇವೆ. ಪ್ರಕೃತಿ ಮಾತೆ ನಮಗೆ ನೀಡಿರುವ ಈ ಅದ್ಭುತವಾದ ಕೊಡುಗೆಯನ್ನು ದಿನಕ್ಕೆ ಕೇವಲ ಒಂದು ಚಿಟಿಕೆಯಷ್ಟು ಬಳಸುವುದರಿಂದ ಏನೇನು ಲಾಭಗಳಿವೆ ಎಂಬುದನ್ನು ವಿವರಿಸಿದ್ದೇವೆ.
#1 ಅರಿಶಿನದ ಶುದ್ಧಕಾರಕ ಆರೋಗ್ಯ ಲಾಭಗಳು
ಸದ್ಗುರು: ಅರಿಶಿನವು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ನಿಮ್ಮ ಚೈತನ್ಯಶಕ್ತಿಗಳಿಗೆ ಶುಭ್ರತೆಯನ್ನು ತರುತ್ತದೆ. ಅರಿಶಿನವು ದೇಹಕ್ಕೆ ಲಾಭದಾಯಕವಷ್ಟೇ ಅಲ್ಲದೇ ನಿಮ್ಮ ಪ್ರಾಣಮಯ ಕೋಶದ ಮೇಲೂ ದೊಡ್ಡ ಪರಿಣಾಮವನ್ನು ಹೊಂದಿದೆ. ಅದು ರಕ್ತ, ಶರೀರ ಮತ್ತು ಶಕ್ತಿ ವ್ಯವಸ್ಥೆಯನ್ನು ಶುದ್ಧೀಕರಿಸುತ್ತದೆ. ಬಾಹ್ಯ ಶುದ್ಧೀಕರಣಕ್ಕೆ ಸ್ನಾನದ ನೀರಿಗೆ ಒಂದು ಚಿಟಿಕೆ ಅರಿಶಿನವನ್ನು ಬೆರೆಸಿ ಸ್ನಾನ ಮಾಡಿ – ನಿಮ್ಮ ಶರೀರ ಚೈತನ್ಯಶೀಲವಾಗಿ ಹೊಳೆಯುವುದನ್ನು ನೀವು ಕಾಣುವಿರಿ.
#2 ಅರಿಶಿನದ ಕಫ ನಿರೋಧಕ ಆರೋಗ್ಯ ಲಾಭಗಳು
ಶೀತ ಸಂಬಂಧೀ ರೋಗಗಳಿಂದ ಬಳಲುತ್ತಿರುವವರು ಪ್ರತಿದಿನ ಮೂಗು ಕಟ್ಟಿದ ತೊಂದರೆಯನ್ನು ಅನುಭವಿಸುತ್ತಿರುತ್ತಾರೆ. ಅಂತಹವರು ಬೇವು, ಕಾಳು ಮೆಣಸು, ಜೇನು ತುಪ್ಪ ಮತ್ತು ಅರಿಶಿನದ ಬಳಕೆಯಿಂದ ಅಪಾರವಾದ ಲಾಭವನ್ನು ಪಡೆಯಬಹುದು. 10-12 ಕಾಳು ಮೆಣಸನ್ನು ಕುಟ್ಟಿ ಇಡೀ ರಾತ್ರಿ (8 ರಿಂದ 12 ಗಂಟೆಗಳ ಕಾಲ) ಜೇನು ತುಪ್ಪದಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ ಈ ಮಿಶ್ರಣವನ್ನು ಕಾಳು ಮೆಣಸಿನ ಸಮೇತ ಜಗಿದು ತಿನ್ನಬೇಕು. ಜೇನು ತುಪ್ಪದೊಂದಿಗೆ ಸ್ವಲ್ಪ ಅರಿಶಿನವನ್ನು ಬೆರೆಸಿ ಸೇವಿಸಿದರೂ ಲಾಭವಾಗುತ್ತದೆ. ಎಲ್ಲಾ ಡೈರಿ ಉತ್ಪನ್ನಗಳನ್ನು ತ್ಯಜಿಸಿದರೆ, ಕಫವು ಸಹಜವಾಗಿಯೇ ಕಡಿಮೆಯಾಗುತ್ತದೆ.
#3 ಅರಿಶಿನದ ಕ್ಯಾನ್ಸರ್ ನಿರೋಧಕ ಆರೋಗ್ಯ ಲಾಭಗಳು
ಕ್ಯಾನ್ಸರ್ ಒಂದು ಖಾಯಿಲೆಯಲ್ಲ. ಕ್ಯಾನ್ಸರ್ ಎಂದರೆ ನಿಮ್ಮ ಶರೀರ ನಿಮ್ಮ ವಿರುದ್ಧವೇ ಕೆಲಸ ಮಾಡುತ್ತಿದೆ ಎಂದರ್ಥ; ಕೆಲವು ಜೀವಕೋಶಗಳು ನಿಮ್ಮ ವಿರುದ್ಧ ತಿರುಗಿಬಿದ್ದಿವೆ. ಇದನ್ನು ತಡೆಗಟ್ಟಲು ಶರೀರವನ್ನು ನಿಯಮಿತವಾಗಿ ಶುದ್ಧೀಕರಿಸುವುದು ಒಳ್ಳೆಯದು. ಬರೀ ಹೊಟ್ಟೆಗೆ ಅರಿಶಿನವನ್ನು ಸೇವಿಸುವುದು ಒಂದು ಪರಿಣಾಮಕಾರಿ ಶುದ್ಧೀಕರಣದ ವಿಧಾನ. ಕ್ಯಾನ್ಸರ್ ಬಂದ ನಂತರ ಇದು ಅಷ್ಟು ಪರಿಣಾಮಕಾರಿ ಇಲ್ಲದಿರಬಹುದು. ಆದರೆ ಒಂದು ಗೋಲಿ ಗಾತ್ರದ ಅರಿಶಿನದ ಉಂಡೆ ಮತ್ತು ಬೇವಿನ ಪುಡಿಯ ಉಂಡೆಯನ್ನು ಮುಂಜಾನೆ ಬರೀ ಹೊಟ್ಟೆಯಲ್ಲಿ ಸೇವಿಸುವುದರಿಂದ ನಿಮ್ಮ ಶರೀರ ಶುದ್ಧೀಕರಣಗೊಂಡು, ಕ್ಯಾನ್ಸರ್ ಜೀವಕೋಶಗಳನ್ನು ನಾಶ ಮಾಡುತ್ತದೆ.
#4 ಯೋಗ ಸಾಧನೆಯಲ್ಲಿ ಅರಿಶಿನದ ಲಾಭಗಳು
ನಿಮ್ಮ ಶರೀರವನ್ನೊಳಗೊಂಡು, ಭೂಮಿಯಿಂದ ಎರವಲು ಪಡೆದ ಎಲ್ಲವೂ ನಿರ್ದಿಷ್ಟ ಒಂದು ಪ್ರಮಾಣದ ಜಡತೆಯನ್ನು ಹೊಂದಿರುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು, ಜಡತೆಯ ಮಟ್ಟವನ್ನು ಕನಿಷ್ಟ ಮಟ್ಟದಲ್ಲಿಟ್ಟುಕೊಳ್ಳುವುದು ಮುಖ್ಯ. ನಿಮ್ಮ ಆಧ್ಯಾತ್ಮಿಕ ಸಾಧನೆ ಪರಿಣಾಮಕಾರಿಯಾಗಿದೆಯೇ ಎಂಬುದನ್ನು, ನೀವು ಎಷ್ಟು ನಿದ್ರಿಸುತ್ತೀರಿ ಮತ್ತು ಎಷ್ಟು ಚುರುಕಾಗಿರುತ್ತೀರಿ ಎಂಬುದನ್ನು ಆಧರಿಸಿ ಅಳೆಯುವಾಗ, ನೀವು ಎಷ್ಟು ಜಡತೆಯನ್ನು ಉತ್ಪಾದಿಸುತ್ತಿದ್ದೀರಿ ಎನ್ನುವುದನ್ನು ಪರೀಕ್ಷಿಸುತ್ತೇವೆ. ಒಂದು ನಿರ್ದಿಷ್ಟ ಪ್ರಮಾಣದ ಶಕ್ತಿಯು ಜೀವಕೋಶಗಳ ಹಂತವನ್ನು ಪ್ರವೇಶಿಸಲು ಶರೀರವು ಅನುವು ಮಾಡಿಕೊಡದಿದ್ದರೆ, ಜಡತೆಯ ಪ್ರಮಾಣವು ವೃದ್ಧಿಸುತ್ತದೆ. ಬೇವು ಮತ್ತು ಅರಿಶಿನದ ಸಂಮಿಶ್ರಣವು ಶರೀರದ ಜೀವಕೋಶಗಳ ರಚನೆಯನ್ನು ಹಿಗ್ಗಿಸುವುದರ ಮೂಲಕ ಶಕ್ತಿಯು ಪ್ರತಿಯೊಂದು ಸೂಕ್ಷ್ಮ ಸಂದನ್ನೂ ಪ್ರವೇಶಿಸಿ ತುಂಬುವಂತಾಗುತ್ತದೆ. ಬೇವು ಮತ್ತು ಅರಿಶಿನ ಹೀಗೆ ಶರೀರಕ್ಕೆ ಬೆಂಬಲ ನೀಡುತ್ತವೆ, ಆದರೆ ಆಧ್ಯಾತ್ಮಿಕ ಸಾಧನೆಯು ತಾನಾಗಿಯೇ ಕೂಡ ಇದನ್ನು ಸಾಧ್ಯವಾಗಿಸುತ್ತದೆ.
ಆಧ್ಯಾತ್ಮಿಕ ಸಾಧನೆಯಲ್ಲದೇ, ಮತ್ತಿತರ ವಿಧಾನಗಳಿಂದಲೂ - ಉದಾಹರಣೆಗೆ ಕಾಫಿ ಅಥವಾ ನಿಕೋಟಿನ್ ಗಳಂತಹ ಉತ್ತೇಜಕಗಳು - ನೀವು ಅಪಾರ ಪ್ರಮಾಣದ ಶಕ್ತಿಯನ್ನು ಉತ್ಪತ್ತಿ ಮಾಡಲು ಸಾಧ್ಯವಿದೆ. ಆದರೆ ಅವು ಜೀವಕೋಶಗಳನ್ನು ಹಿಗ್ಗಿಸಿ ಅವುಗಳಲ್ಲಿ ಶಕ್ತಿಯನ್ನು ಸಂಚಯಿಸಿ ದೀರ್ಘಕಾಲದಲ್ಲಿ ಬಿಡುಗಡೆ ಆಗುವಂತೆ ಮಾಡಲಾರವು. ಶಕ್ತಿಯು ಶೇಖರಣೆಯಾಗುವ ಬದಲು ತಕ್ಷಣ ವ್ಯಕ್ತವಾಗುವುದರಿಂದ ಅದು ಶರೀರಕ್ಕಷ್ಟೇ ಅಲ್ಲದೇ, ಮನಸ್ಸಿಗೆ, ನೀವು ಮಾಡುವ ಚಟುವಟಿಕೆಗೆ ಮತ್ತು ನಿಮ್ಮ ಸುತ್ತಲಿನ ಪ್ರಪಂಚಕ್ಕೆ ಹಾನಿಕಾರವಾಗುತ್ತದೆ. ನಾವು ನಮ್ಮ ಶರೀರದಲ್ಲಿ ಶಕ್ತಿಯನ್ನು ಉತ್ಪಾದಿಸಿದಾಗ, ಅದು ಸುಮ್ಮನೆ ಒಮ್ಮೆಲೆ ಸ್ಫೋಟವಾಗದಂತೆ ಹಿಡಿದಿಟ್ಟು ಅಗತ್ಯವಿದ್ದಾಗ ಬಿಡುಗಡೆಯಾಗುವಂತೆ ಮಾಡುವುದು ಅತ್ಯಂತ ಮುಖ್ಯ.
ಬೇವು ಮತ್ತು ಅರಿಶಿನವನ್ನು ಬೆಚ್ಚಗಿನ ನೀರಿನೊಂದಿಗೆ, ಸ್ವಲ್ಪ ಜೇನು ತುಪ್ಪ ಬೆರೆಸಿ ಸೇವಿಸುವುದು ಜೀವಕೋಶಗಳನ್ನು ಹಿಗ್ಗಿಸಿ ಶಕ್ತಿಯನ್ನು ಹೀರಿಕೊಳ್ಳುವಂತೆ ಮಾಡುತ್ತದೆ. ಸಾಧನೆಯನ್ನು ಮಾಡುವಾಗ, ಈ ಹಿಗ್ಗುವಿಕೆಯು ಮಾಂಸಖಂಡಗಳಿಗೆ ನಮ್ಯತೆಯನ್ನು ತರುತ್ತದೆ. ನಮ್ಯತೆಯು ನಿಮ್ಮ ಶರೀರವನ್ನು ಹೆಚ್ಚು ಶಕ್ತಿಯುತ ಸಾಧ್ಯತೆಯನ್ನಾಗಿ ರೂಪಿಸಲು ಅನುವು ಮಾಡಿಕೊಡುತ್ತದೆ. ನೀವು ಆಸನಗಳನ್ನು ಮಾಡುವಾಗ ಅದನ್ನು ಅನುಭವಿಸುವಿರಿ – ಶರೀರವು ವಿಭಿನ್ನ ರೀತಿಯ ಶಕ್ತಿಯಿಂದ ಕಂಪಿಸುತ್ತದೆ.
ಸಂಪಾದಕರ ಟಿಪ್ಪಣಿ: ೧೦೦% ನೈಸರ್ಗಿಕ ಅರಿಶನದ ಪುಡಿ ಈಶ ಶಾಪ್ಪಿ ಆನ್ಲೈನ್ನಲ್ಲಿ ಖರೀದಿಸಬಹುದು. ಭಾರತ ಮತ್ತು ಅಮೇರಿಕಾದಲ್ಲಿ ಡೆಲಿವರಿ ಲಭ್ಯವಿದೆ.