ಧ್ಯಾನ ಎಂದರೇನು

ಸದ್ಗುರು: ಧ್ಯಾನ ಎಂದರೆ ಭೌತಿಕ ದೇಹ ಮತ್ತು ಮನಸ್ಸಿನ ಮಿತಿಗಳನ್ನು ಮೀರಿ ಸಾಗುವುದು ಎಂದರ್ಥ. ದೇಹ ಮತ್ತು ಮನಸ್ಸಿನ ಜೊತೆಗಿರುವ ಸೀಮಿತ ದೃಷ್ಟಿಕೋನವನ್ನು ಮೀರಿದರಷ್ಟೇ ನಿಮ್ಮೊಳಗಿನ ಜೀವನದ ಪರಿಪೂರ್ಣ ಆಯಾಮವನ್ನು ತಲುಪಲು ಸಾಧ್ಯ.

ದೇಹ ಎಂದರೆ ಅದು ಕೇವಲ ನೀವು ಸೇವಿಸಿರುವ ಆಹಾರದ ರಾಶಿ. ಮನಸ್ಸು ಎಂದರೆ ನೀವು ಈವರೆಗೂ ಬಾಹ್ಯ ಪ್ರಪಂಚದಿಂದ ಸಂಗ್ರಹಿಸಿರುವ ಅಭಿಪ್ರಾಯಗಳ ರಾಶಿ

ನೀವು ನಿಮ್ಮ ದೇಹದೊಂದಿಗೆ ಗುರುತಿಸಿಕೊಂಡರೆ, ನಿಮ್ಮ ಜೀವನ ಕೇವಲ ಬದುಕುಳಿಯುವುದರ ಕುರಿತು ಚಿಂತಿಸುವುದರಲ್ಲೇ ಸಾಗುತ್ತದೆ. ನೀವು ಮನಸ್ಸಿನೊಂದಿಗೆ ಗುರುತಿಸಿಕೊಂಡರೆ, ನಿಮ್ಮ ಸಂಪೂರ್ಣ ದೃಷ್ಟಿಕೋನ ಸಾಮಾಜಿಕ, ಮತೀಯ ಮತ್ತು ಕುಟುಂಬದ ವಿಚಾರಗಳ ಚಿಂತನೆಯಲ್ಲೇ ಸಾಗುತ್ತದೆ. ನೀವು ಅದನ್ನು ಮೀರಿ ಸಾಗುವುದಕ್ಕಾಗುವುದಿಲ್ಲ. ನಿಮ್ಮ ಸ್ವಂತ ಮನಸ್ಸಿನ ಚಿಂತನೆಗಳ ಮಾರ್ಪಾಡುಗಳಿಂದ ಮುಕ್ತರಾದರಷ್ಟೇ ನೀವು ಈ ಎಲ್ಲ ಆಯಾಮಗಳನ್ನು ಮೀರಿ ಸಾಗಲು ಸಾಧ್ಯ.

ದೇಹ ಮತು ಮನಸ್ಸು ನಿಮ್ಮದಲ್ಲ. ಅದು ಒಂದು ನಿರ್ದಿಷ್ಟ ಅವಧಿಯಲ್ಲಿ ನೀವು ಸಂಗ್ರಹಿಸಿಕೊಂಡಿರುವ ವಿಷಯಗಳು ಅಷ್ಟೇ. ನಿಮ್ಮ ದೇಹ ಎಂದರೆ ನೀವು ಸೇವಿಸಿದ ಆಹಾರದ ಸಂಗ್ರಹ. ನಿಮ್ಮ ಮನಸ್ಸು ಅಂದರೆ ಹೊರಜಗತ್ತಿನಿಂದ ಸಂಗ್ರಹಿಸಿದಂತಹ ನಿಮ್ಮ ಅಭಿಪ್ರಾಯಗಳು.

ನೀವು ಸಂಗ್ರಹಿಸಿರುವುದು ನಿಮ್ಮ ಆಸ್ತಿ. ನಿಮಗೆ ಸ್ವಂತ ಮನೆ, ಬ್ಯಾಂಕ್ ಬ್ಯಾಲನ್ಸ್ ಇರುವ ಹಾಗೆಯೇ ನಿಮ್ಮ ಮನಸ್ಸು ಮತ್ತು ದೇಹ. ಉತ್ತಮವಾದ ಬ್ಯಾಂಕ್ ಬ್ಯಾಲನ್ಸ್, ದೇಹ ಮತ್ತು ಮನಸ್ಸನ್ನು ಹೊಂದಿರುವುದರಿಂದ ಉತ್ತಮ ಜೀವನವನ್ನು ಸಾಗಿಸಬಹುದು. ಆದರೇ, ಅವುಗಳೇ ಸರ್ವಸ್ವವಲ್ಲ. ಕೇವಲ ಇವುಗಳನ್ನು ಪಡೆದುಕೊಳ್ಳುವುದರಿಂದ ಯಾರೂ ಪೂರ್ಣ ತೃಪ್ತರಾಗುವುದಿಲ್ಲ. ಅವುಗಳು ಅವರ ಜೀವನವನ್ನು ಸ್ವಲ್ಪ ಆರಾಮದಾಯಕ ಮತ್ತು ಅನುಕೂಲಕರವಾಗಿಸುತ್ತದೆಯಷ್ಟೇ. ಒಂದು ಪೀಳಿಗೆಯಾಗಿ ಗಮನಿಸಿದಾಗ, ಹಿಂದಿನ ಯಾವುದೇ ಪೀಳಿಗೆ ತಮ್ಮ ಕನಸಿನಲ್ಲಿಯೂ ಸಹ ನೆನೆಸದಂತಹ ಅನುಕೂಲಕರ ಮತ್ತು ಆರಾಮದಾಯಕವಾಗಿದೆ ನಮ್ಮ ಈಗಿನ ಪೀಳಿಗೆ. ಆದರೆ, ಇವನ್ನೆಲ್ಲ ಪಡೆದಿರುವ ನಾವು ಹೆಚ್ಚಿನ ಆನಂದದಾಯಕ ಮತ್ತು ಪ್ರೀತಿಪೂರ್ಣ ಬದುಕು ನಡೆಸುತ್ತಿದ್ದೇವೆ ಎಂದು ಖಂಡಿತವಾಗಿಯೂ ಹೇಳಿಕೊಳ್ಳಲು ಸಾಧ್ಯವಿಲ್ಲ. 

ಧ್ಯಾನ – ದೇಹ ಮತ್ತು ಮನಸ್ಸನ್ನು ಮೀರಬಹುದಾದ ವೈಜ್ಞಾನಿಕ ಸಾಧನ.

ನಿಮ್ಮ ದೇಹ ಮತ್ತು ಮನಸ್ಸು ಎಂಬುದು ನಿಮ್ಮ ಬದುಕುಳಿಯುವಿಕೆಗೆ ಬೇಕಾದ ಸಾಮಗ್ರಿಗಳು, ಆದರೆ, ಅದರಿಂದ ನಿಮಗೆ ಪರಿಪೂರ್ಣ ತೃಪ್ತಿ ಸಿಗುವುದಿಲ್ಲ. ಯಾಕಂದರೆ ಅವೆಲ್ಲವನ್ನೂ ಮೀರಿದ ಒಂದನ್ನು ಅರಸುವುದು ಮನುಷ್ಯನ ವಿಶಿಷ್ಟ ಗುಣ. ಸ್ವತಃ ನೀವು ಯಾರು ಎಂಬುದನ್ನೇ ನೀವು ಅರಿಯದೇ ಹೋದರೆ, ಈ ಜಗತ್ತನ್ನು ನೀವು ಯಾವ ರೀತಿ ತಾನೇ ಅರಿಯಬಲ್ಲಿರಿ? ನೀವು ನಿಮ್ಮ ದೇಹ ಮತ್ತು ಮನಸ್ಸಿನ ಮಿತಿಗಳನ್ನು ಮೀರಿ ಹೋದರಷ್ಟೇ ನಿಮ್ಮ ನಿಜ ಸ್ವರೂಪದ ಅನುಭವ ಪಡೆಯಬಹುದು. ಯೋಗ ಮತ್ತು ಧ್ಯಾನ ಇದಕ್ಕೆ ಪೂರಕವಾದ ಸಾಧನಗಳು.

ನೀವು ನಿಮ್ಮ ದೇಹ ಮತ್ತು ಮನಸ್ಸಿನ ಮಿತಿಗಳನ್ನು ಮೀರಲು ಸಾಧ್ಯವಾದರೆ, ನಿಮ್ಮ ಜೀವನ ಕೇವಲ ತಿನ್ನುವುದು, ಮಲಗುವುದು, ಸಂತಾನೋತ್ಪತ್ತಿ ಮತ್ತು ಸಾಯುವುದರಲ್ಲಿ ಪೂರ್ಣತ್ವ ಕಾಣುವುದಿಲ್ಲ. ಈ ಎಲ್ಲ ವಿಷಯಗಳು ನೆರವೇರಿದರೂ ಸಹ ಒಬ್ಬರು ತಮ್ಮ ಜೀವನದ ಪೂರ್ಣತ್ವ ಕಾಣಲಸಾಧ್ಯ. ಏಕೆಂದರೆ, ಮಾನವ ಜ್ಞಾನದ ಸ್ವರೂಪ ಎಂತಹದ್ದೆಂದರೆ ಅದು ಕೆಲವು ನಿರ್ದಿಷ್ಟ ಎಲ್ಲೆಗಳನ್ನು ಮೀರಿದುದ್ದಾಗಿದೆ. ನೀವು ಎಷ್ಟೇ ಅರಿತರೂ, ಅದು ತೃಪ್ತಿ ಕಾಣುವುದಿಲ್ಲ. ಅದು ಎಲ್ಲವನ್ನೂ ಮೀರಿದ ಅನಂತತೆಯನ್ನು ಕಾಣಬೇಕು – ನಮ್ಮ ನಿಜ ಸ್ವರೂಪವಾದ ಅನಂತತೆಯ ಈ ಆಯಾಮದೆಡೆ ಸಾಗುವುದಕ್ಕೆ ಧ್ಯಾನ ಪ್ರಮುಖ ದಾರಿಯಾಗಿದೆ.

ಪ್ರಶ್ನೆ: ಆದರೆ ಸದ್ಗುರುಗಳೇ, ಯಜ್ಞ, ಯಾಗಾದಿಗಳಂತಹ ಕೆಲವು ಆಚರಣೆಗಳ ಮೂಲಕ ಒಬ್ಬ ಮನುಷ್ಯ ಅಮಿತತೆಯ ಆಯಾಮವನ್ನು ಮುಟ್ಟಬಹುದೇ? ಅಥವಾ ಧ್ಯಾನವೊಂದೇ ಮಾರ್ಗವೇ?

ಸದ್ಗುರು: ಈಶಾದಲ್ಲಿ ನಾವು ಆಚರಣಾ ಪದ್ದತಿಯನ್ನು ಆದಷ್ಟು ಕಡಿಮೆಯಾಗಿರಿಸಿ, ಧ್ಯಾನವನ್ನು ಮುಖ್ಯವಾಗಿ ತೆಗೆದುಕೊಂಡಿರುವುದಕ್ಕೆ ಕಾರಣ ಧ್ಯಾನ ಒಂದು ಪ್ರತ್ಯೇಕ ಪ್ರಕ್ರಿಯೆ. ಆಧುನಿಕ ಸಮಾಜದಲ್ಲಿ ಪ್ರತ್ಯೇಕತೆಯೇ ಶಾಪವಾಗಿ ಹೊರಹೊಮ್ಮಿದೆ. ಆಧುನಿಕ ಶಿಕ್ಷಣವನ್ನು ಹೆಚ್ಚು ಪಡೆದಷ್ಟೂ ಜನರು ಹೆಚ್ಚು ಹೆಚ್ಚು ಪ್ರತ್ಯೇಕವಾಗಿರಲು ಬಯಸುತ್ತಿದ್ದಾರೆ. ಮನೆಯಲ್ಲಿ ಇಬ್ಬರು ಹೊಂದಾಣಿಕೆಯಿಂದ ಇರಲು ಸಾಧ್ಯವಾಗುತ್ತಿಲ್ಲ ಎನ್ನುವಷ್ಟು ಪರಿಸ್ಥಿತಿ ಹದಗೆಟ್ಟಿದೆ. ಇಂದಿಗೂ ಸಹ ದಕ್ಷಿಣ ಭಾರತದಲ್ಲಿ ಒಂದೇ ಕುಟುಂಬದಲ್ಲಿ ನೂರಾರು ಜನರು ಒಂದಾಗಿ ವಾಸಿಸುವುದನ್ನು ಕಾಣಬಹುದು. ಅದು ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ, ದೊಡ್ಡಮ್ಮ, ಅಜ್ಜ, ಅಜ್ಜಿ ಎಲ್ಲರನ್ನೂ ಒಳಗೊಂಡಂತಹ ತುಂಬು ಕುಟುಂಬವಾಗಿರುತ್ತದೆ.

ಕುಟುಂಬದಲ್ಲಿ ಒಬ್ಬರು ಮುಖ್ಯಸ್ಥರಿರುತ್ತಾರೆ ಮತ್ತು ಮಿಕ್ಕ ಎಲ್ಲರಿಗೂ ವಹಿಸಲು ತಮ್ಮದೇ ಪಾತ್ರವಿರುತ್ತದೆ. ಕನಿಷ್ಟ 70-80 ಮಕ್ಕಳು ಮನೆಯಲ್ಲಿ ವಾಸವಿರುತ್ತಾರೆ. ಆ ಮಕ್ಕಳಿಗೆ ಸ್ವಲ್ಪ ವಯಸ್ಸಾಗುವ ತನಕ, ಅವರಿಗೆ ತಮ್ಮ ನಿಜವಾದ ತಂದೆ ತಾಯಿ ಯಾರು ಎಂಬುದೇ ತಿಳಿಯುವುದಿಲ್ಲ. ಏಕೆಂದರೆ, 8-10 ಮಹಿಳೆಯರು ಎಲ್ಲ ಮಕ್ಕಳನ್ನೂ ಕಾಳಜಿವಹಿಸಿ ಬೆಳೆಸಿರುತ್ತಾರೆ. ಅವರು 12-13 ವರ್ಷ ವಯಸ್ಸಾಗುವ ತನಕ, ಆ ಮಕ್ಕಳು ತಮ್ಮ ನಿಜವಾದ ತಂದೆ ತಾಯಿ ಯಾರು ಎಂಬುದನ್ನು ಅರಿತಿರುವುದಿಲ್ಲ. ಅವರಿಗೆ ಗೊತ್ತಿದ್ದರೂ ಸಹ, ಅವರು ಶಾಲೆಯನ್ನು ಪ್ರವೇಶಿಸಿ ಸ್ವಲ್ಪ ಮಟ್ಟದ ಆಲೋಚನೆ ಮಾಡುವುದನ್ನು ಪ್ರಾರಂಭಿಸುವ ತನಕ ಅವರೊಂದಿಗೆ ಆ ರೀತಿಯ ಸಂಬಂಧ ಹೊಂದಿರುವುದಿಲ್ಲ.

ಆದರೆ, ಆಧುನಿಕ ಶಿಕ್ಷಣ ಪದ್ದತಿಯು ಹರಡುತ್ತಿರುವುದರಿಂದ, ಬಹಳಷ್ಟು ಜನರಿಗೆ ಕೂಡಿ ಬದುಕಲು ಸಾಧ್ಯವಾಗುತ್ತಿಲ್ಲ. ಇನ್ನೂ ಹೇಳಬೇಕೆಂದರೆ, ಇಬ್ಬರು ವ್ಯಕ್ತಿಗಳು ಕೂಡ ಒಂದಾಗಿ ಬದುಕಲಾಗುತ್ತಿಲ್ಲ ಎಂಬಂತೆ ಎಲ್ಲವೂ ಶರವೇಗದಲ್ಲಿ ಸಾಗುತ್ತಿದೆ. ಆಧುನಿಕ ಶಿಕ್ಷಣ ಪದ್ದತಿ ಪ್ರತ್ಯೇಕತೆಯನ್ನು ಕಲಿಸಿಕೊಡುತ್ತಿದೆ, ಆದರೆ ಪೂರ್ಣ ಅಸ್ಥಿತ್ವ ಏಕತೆ ಅಥವಾ ಒಳಗೊಳ್ಳುವಿಕೆಯ ಪ್ರಕ್ರಿಯೆಯಾಗಿ ನಡೆಯುತ್ತಿದೆ.

ಧ್ಯಾನ – ಪ್ರತ್ಯೇಕತೆಯಿಂದ ಒಳಗೊಳ್ಳುವಿಕೆಯೆಡೆಗೆ

ಧ್ಯಾನ ಪ್ರತ್ಯೇಕವಾಗಿ ಮಾಡುವ ಒಂದು ಪ್ರಕ್ರಿಯೆಯಾದರೂ, ಅದು ನಂತರದಲ್ಲಿ ನಮ್ಮನ್ನು ಏಕತೆಯೆಡೆಗೆ ಒಯ್ಯುತ್ತದೆ. ಆದರೆ, ಪ್ರಾರಂಭದಲ್ಲಿ ನೀವು ಕಣ್ಣನ್ನು ಮುಚ್ಚಿ ಕುಳಿತಿರುತ್ತೀರಿ. ಆಧ್ಯಾತ್ಮಿಕದ ಆರಂಭದ ಹಂತದಲ್ಲಿ ಜನರು ಹೆಚ್ಚು ಪ್ರತ್ಯೇಕವಾಗಿರುತ್ತಾರೆ – ಯಾರೊಬ್ಬರೊಂದಿಗೂ ಬೆರೆಯಲು ಬಯಸುವುದಿಲ್ಲ. ಇದರಿಂದಲೇ ತುಂಬಾ ಜನರಿಗೆ “ನಾನು ಅಧ್ಯಾತ್ಮ ಪಥದಲ್ಲಿ ಮುಂದುವರಿದರೆ, ಸಮಾಜದೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗದಿರಬಹುದು” ಎಂಬ ಭಯ ಕಾಡುತ್ತಿರುತ್ತದೆ ಎಂದು ನಾನು ಭಾವಿಸುತ್ತೇನೆ

ಧ್ಯಾನ ಪ್ರಕ್ರಿಯೆಯ ದುರ್ಬಳಕೆ ಯಾರೂ ಮಾಡಲಾಗದು. ಏಕೆಂದರೆ ಅದು ಒಬ್ಬ ವ್ಯಕ್ತಿಯ ಪ್ರತ್ಯೇಕವಾದ ಪ್ರಕ್ರಿಯೆಯಾಗಿದೆ.

ನಾವು ಈ ಪಥವನ್ನು ಏಕೆ ಆಯ್ಕೆ ಮಾಡಿದ್ದೇವೆ ಎಂದರೆ ಒಳಗೊಳ್ಳುವಿಕೆಯ ಮಾರ್ಗ ಇಂದಿನ ಸಮಾಜದಲ್ಲಿ ಕಷ್ಟ. ನೀವು ಒಂದು ಧಾರ್ಮಿಕ ಆಚರಣೆಯನ್ನು ಮಾಡಿದರೆ, ಎಲ್ಲರೂ ಸಹ ಅದನ್ನು ಒಪ್ಪಿ ಆಚರಿಸಲು ಸಿದ್ಧರಿರಬೇಕು. ಯಾವುದಾದರೂ ಒಂದು ನಿರ್ದಿಷ್ಟ ಆಚರಣೆಯಲ್ಲಿ ಪಾಲ್ಗೊಳ್ಳಲು ಒಬ್ಬರಲ್ಲಿ ಗಾಡವಾದ ಐಕ್ಯತಾ ಭಾವವಿರಬೇಕು. ಮತ್ತೊಂದು ಅಂಶವೆಂದರೆ, ನೀವು ಅದಕ್ಕೆ ಪೂರಕವಾದ ವಾತಾವರಣವನ್ನು ಹೊಂದಿಸದಿದ್ದರೆ, ಅದರ ದುರ್ಬಳಕೆಯಾಗಬಹುದು. ಆಚರಣೆಯಲ್ಲಿ ಪಾಲ್ಗೊಳ್ಳುವ ಜನರು ಆ ಆಚರಣೆಯನ್ನು ತಮ್ಮ ಜೀವಕ್ಕೂ ಹೆಚ್ಚು ಎಂದು ನೋಡದಿದ್ದರೆ, ಯಾವುದೇ ಆಚರಣೆಯನ್ನು ಮಾಡಲಸಾಧ್ಯ. ಏಕೆಂದರೆ, ಆಚರಣೆಯ ದುರ್ಬಳಕೆಯಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಆದರೆ, ಧ್ಯಾನ ಪ್ರಕ್ರಿಯೆಯ ದುರ್ಬಳಕೆ ಯಾರೂ ಮಾಡಲಾಗದು. ಏಕೆಂದರೆ ಅದು ಒಬ್ಬ ವ್ಯಕ್ತಿ ಪ್ರತ್ಯೇಕವಾಗಿ ಮಾಡುವಂತಹ ಪ್ರಕ್ರಿಯೆಯಾಗಿದೆ.

ಯಾವುದೇ ವಿಷಯದಲ್ಲಿ “ನೀವು ಮತ್ತು ನಾನು” ಎಂಬ ಪೈಪೋಟಿ ಮನೋಭಾವ ಇರುತ್ತದೆಯೋ, ಅಂತಹ ಪರಿಸ್ಥಿತಿಯಲ್ಲಿ ಯಾವುದೇ ಒಂದು ನಿರ್ದಿಷ್ಟ ಆಚರಣೆಯನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ. ಎಲ್ಲೆಲ್ಲಿ “ನಾವೆಲ್ಲರೂ ಒಂದೇ” ಎಂಬ ಐಕ್ಯತಾ ಮನೋಭಾವ ಇರುವುದೋ, ಅಂತಹ ಪರಿಸ್ಥಿತಿಯಲ್ಲಿ ಆಚರಣೆಗಳು ಯಶಸ್ಸು ಕಾಣುತ್ತವೆ. ಆದರೆ, ಇಂದು ನಾವಿರುವ ಜಗತ್ತಿನಲ್ಲಿ, ಅಂತಹ ಐಕ್ಯತಾ ಮನೋಭಾವ ಸ್ಥಾಪಿಸುವುದು ಕಷ್ಟ ಮತ್ತು ಕೇಲವೇ ಕೆಲವು ಸಮುದಾಯ ಇದನ್ನು ಉಳಿಸಿಕೊಂಡು ಬಂದಿದೆ. ಅದನ್ನು ಹೊರತು ಪಡಿಸಿ, ಎಲ್ಲರೂ ಪ್ರತ್ಯೇಕವಾದಿಗಳೇ. ಹೀಗಿರುವಾಗ ಧ್ಯಾನ ಪ್ರಮುಖ ಪಾತ್ರವಹಿಸುತ್ತದೆ. 

 

ಸಂಪಾದಕರ ಟಿಪ್ಪಣಿ: ಧ್ಯಾನದ ಬಗ್ಗೆ ಬಹಳ ಕಾಲದಿಂದ ಆಸಕ್ತರಿದ್ದು ಎಲ್ಲಿಂದ ಆರಂಭಿಸುವುದು ತಿಳಿಯ ಬಯಸುತ್ತಿದ್ದೀರಿಯೇ? ಇನ್ನರ್ ಇಂಜಿನಿಯರಿಂಗ್ ಆನ್‍ಲೈನ್ ಈಗ ಕನ್ನಡದಲ್ಲೂ ಲಭ್ಯ. ಈಗಲೇ ನೋಂದಾಯಿಸಿ!