ಹಣ್ಣುಗಳಿಂದ ಕೂಡಿದ ಆಹಾರಕ್ರಮ ನಿಮಗೆ ಮತ್ತು ಭೂಮಿಗೆ ಏಕೆ ಉತ್ತಮ?
ಸಾಕಷ್ಟು ಪ್ರಮಾಣದಲ್ಲಿ ಹಣ್ಣುಗಳನ್ನು ಸೇವಿಸುವುದು ನಿಮ್ಮ ಜೀವವ್ಯವಸ್ಥೆಗೆ ಅದ್ಭುತಗಳನ್ನು ಉಂಟುಮಾಡಬಹುದು ಎಂಬ ವಿಷಯವನ್ನು ಸದ್ಗುರುಗಳು ಇಲ್ಲಿ ವಿವರಿಸುತ್ತಾರೆ. ಹೆಚ್ಚು ಹಣ್ಣುಗಳನ್ನು ನಮ್ಮ ಆಹಾರಕ್ರಮದಲ್ಲಿ ಸೇರಿಸುವ ಅಥವಾ ಪ್ರಧಾನವಾಗಿ ಅಥವಾ ಸಂಪೂರ್ಣವಾಗಿ ಹಣ್ಣು-ಆಧಾರಿತ ಆಹಾರಕ್ರಮವನ್ನು ಅನುಸರಿಸುವ ಪ್ರಯೋಜನಗಳನ್ನು, ಹಾಗೆಯೇ ನಾವು ತೆಗೆದುಕೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆಗಳನ್ನೂ ಅವರಿಲ್ಲಿ ಚರ್ಚಿಸುತ್ತಾರೆ.
ಪ್ರಶ್ನೆ: ಸದ್ಗುರುಗಳೇ, ನಾವು ಏನು ತಿನ್ನುತ್ತೇವೆ ಎನ್ನವುದು ನಮ್ಮ ಮಾನಸಿಕ ಪರಿಸ್ಥಿತಿಯ ಮೇಲೆ ಪ್ರಭಾವ ಬೀರಬಹುದು ಎಂದು ನೀವು ಹೇಳಿದ್ದೀರಿ. ಹಣ್ಣಿನ ಆಹಾರಕ್ರಮ ನಮ್ಮ ಮಾನಸಿಕ ಆರೋಗ್ಯವನ್ನು ಹೇಗೆ ವರ್ಧಿಸುತ್ತದೆ ಎಂಬುದರ ಬಗ್ಗೆ ವೈದ್ಯಕೀಯ ವಿಜ್ಞಾನವು ಇಂದು ಮಾತನಾಡುತ್ತಿದೆ. ಇದಕ್ಕೆ ಏನಾದರೂ ಮಹತ್ವವಿದೆಯೇ? ಕೆಲಸ, ಕುಟುಂಬ ಅಥವಾ ಅತಿಯಾದ ದೈಹಿಕ ಚಟುವಟಿಕೆಗಳನ್ನೊಳಗೊಂಡ ನಿಯಮಿತವಾದ ಸನ್ನಿವೇಶಗಳಲ್ಲಿರುವ ಜನರು ಪ್ರಧಾನವಾಗಿ ಹಣ್ಣಿನ ಆಹಾರಕ್ರಮವನ್ನು ಅನುಸರಿಸುವುದು ಸರಿಯೇ?
ಸದ್ಗುರು: ಯಾವುದೇ ಒಂದು ಯಂತ್ರದಲ್ಲಿ, ನಾವು ಬಳಸುವ ಯಾವುದೇ ಇಂಧನದ ಪರಿಣಾಮಕಾರಿತ್ವವು ಮೂಲಭೂತವಾಗಿ ಅದು ಎಷ್ಟು ಸುಲಭವಾಗಿ ದಹಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಉದಾಹರಣೆಗೆ, ನೀವು ಒಂದು ರೇಸ್ ಕಾರಿನಲ್ಲಿ ಅಥವಾ ವಿಮಾನದಲ್ಲಿ ಬಳಸುವಂತಹ ಇಂಧನವು ನೀವು ನಿಯಮಿತವಾಗಿ ಬಳಸುವ ವಾಹನದಲ್ಲಿ ಹಾಕುವ ಇಂಧನಕ್ಕಿಂತ ಬೇರೆಯೇ ಆಗಿರುತ್ತದೆ, ಏಕೆಂದರೆ ಒಂದು ಇಂಧನವು ಎಷ್ಟು ಸುಲಭವಾಗಿ ಉರಿಯುತ್ತದೆ ಎನ್ನುವುದರ ಮೇಲೆ ಅದರ ಆಯ್ಕೆ ನಿರ್ಧಾರವಾಗುತ್ತದೆ. ಪೆಟ್ರೋಲ್ ಬಂಕ್‌ಗಳಲ್ಲಿ ಆಕ್ಟೇನ್ ಮಟ್ಟಗಳನ್ನು ಪ್ರಕಟಿಸಿರುವುದನ್ನು ನೀವು ಗಮನಿಸಿರಬಹುದು - ಎಂಬತ್ತೇಳು, ಎಂಬತ್ತೊಂಬತ್ತು, ತೊಂಬತ್ತು, ತೊಂಬತ್ತೊಂದು, ತೊಂಬತ್ತಮೂರು, ತೊಂಬತ್ತಾರು ಎಂದು. ನಾವು ಮೋಟಾರ್ ಸೈಕಲ್ ಸವಾರಿ ಮಾಡುತ್ತಿದ್ದ ಕಾಲದಲ್ಲಿ, ಮೂರು ಪಟ್ಟಿನಷ್ಟು ಹಣ ತೆತ್ತು ನೂರು ಆಕ್ಟೇನಿನ ಇಂಧನವನ್ನು ಖರೀದಿಸುತ್ತಿದ್ದೆವು, ಏಕೆಂದರೆ ಇದನ್ನು ಹಾಕಿದಾಗ ನಮ್ಮ ಮೋಟಾರ್ ಸೈಕಲ್‌ಗಳು ಇದ್ದಕ್ಕಿದಂತೆ ಬೇರೆ ವಾಹನಗಳಿಗೆ ಸಾಧ್ಯವಾಗದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು.
ಹಣ್ಣುಗಳನ್ನೊಳಗೊಂಡ ಆಹಾರಕ್ರಮ ಜೀರ್ಣಿಸಿಕೊಳ್ಳಲು ಸುಲಭ
ಮೇಲೆ ಹೇಳಿದ ಇಂಧನದ ಉದಾಹರಣೆಯಂತೆಯೇ, ನಮ್ಮ ದೇಹದಲ್ಲಿ ಅತ್ಯಂತ ಸುಲಭವಾಗಿ ಜೀರ್ಣವಾಗುವ ಆಹಾರ ಹಣ್ಣು. ಜೀರ್ಣಕ್ರಿಯೆ ಎಂದರೆ ಜಟರಾಗ್ನಿ, ಈ ಅಗ್ನಿಯು ಹೆಚ್ಚು ಪರಿಣಾಮಕಾರಿಯಾಗಿ ಉರಿಯಬೇಕೆಂದರೆ, ಹಣ್ಣು ಖಂಡಿತವಾಗಿಯೂ ಉತ್ತಮವಾದ ಇಂಧನ. ದುರದೃಷ್ಟವಶಾತ್, ಬಹಳಷ್ಟು ಜನ ಆಲಸ್ಯ ಮತ್ತು ಜಡತ್ವವನ್ನು ಆನಂದಿಸುತ್ತಾರೆ. ಜೀವನವು ಅವರನ್ನು ಸ್ಪರ್ಶಿಸಿಲ್ಲವಾದ್ದರಿಂದ, ಅವರ ಒಂದು ಭಾಗ ಸತ್ತಿರುವಂತಹ ಸ್ಥಿತಿಯನ್ನು ಅವರು ಆನಂದಿಸುತ್ತಾರೆ. ನಿದ್ದೆ, ಅಮಲು, ಅತಿಯಾಗಿ ತಿನ್ನುವುದು ಮತ್ತು ಮಲಗಿರುವುದು ಅವರಿಗೆ ಜೀವಂತ, ಸಕ್ರಿಯ ಮತ್ತು ಕ್ರಿಯಾತ್ಮಕವಾಗಿರುವುದಕ್ಕಿಂತಲೂ ಉತ್ತಮವೆಂದೆನಿಸುತ್ತದೆ. ಹಣ್ಣು ಅಂತಹ ವ್ಯಕ್ತಿಗಳಿಗೆ ಮಾತ್ರ ಸಮಸ್ಯೆಯಾಗಬಹುದು ಏಕೆಂದರೆ ಅದು ನಿಮ್ಮನ್ನು ಚುರುಕು ಮತ್ತು ಎಚ್ಚರವಾಗಿರಿಸುತ್ತದೆ. ಅವುಗಳು ಹುಳಿಯಾಗದ ಹೊರತು ಅವು ನಿಮ್ಮನ್ನು ಅಮಲಿನಲ್ಲಿರಿಸುವುದಿಲ್ಲ. ಅರಿವಿನ ಉತ್ತುಂಗದ ಸ್ಥಿತಿಯನ್ನು ತಲುಪುವುದರಿಂದಲೂ ಸಹ ಅತೀವವಾದ ಆನಂದ, ಅಮಲು ಮತ್ತು ಆಳವಾದ ಸಂತೋಷದ ಭಾವನೆಗಳನ್ನು ನೀವು ಅನುಭವಿಸಬಹುದು. ಆದರೆ ಸದ್ಯದಲ್ಲಿ ನಿಮ್ಮ ಪ್ರಶ್ನೆ, “ನಾನು ಹಣ್ಣನ್ನು ತಿಂದು ನನ್ನ ದಿನಚರಿಗಳನ್ನು ಎಂದಿನಂತೆ ಮಾಡಬಹುದೆ?” ಎನ್ನುವುದಾಗಿದೆ.
ಹಣ್ಣುಗಳಿಂದ ಕೂಡಿದ ಆಹಾರಕ್ರಮವು ಪ್ರಕೃತಿ ಉದ್ದೇಶಿತವಾದದ್ದು
ನಿಮ್ಮ ಪ್ರಶ್ನೆಗೆ ಸರಳವಾದ ಉತ್ತರವು ನಿಮ್ಮ ಜೀವನದ ಸಾಮಾನ್ಯ ಅಭ್ಯಾಸಗಳಲ್ಲಿಯೇ ಅಡಗಿದೆ. ನೀವು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದರೆ ಯಾರೂ ಸಹ ನಿಮಗೆ ಚಿಕನ್ ಬಿರಿಯಾನಿಯನ್ನು ತಂದುಕೊಡುವುದಿಲ್ಲ. ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರು ನಿಮಗೆ ಹಣ್ಣುಹಂಪಲುಗಳನ್ನು ತರುತ್ತಾರೆ, ಏಕೆಂದರೆ "ಅಂತದ್ದನ್ನೆಲ್ಲಾ ತಿಂದೇ ನಿಮ್ಮ ಆರೋಗ್ಯ ಹಾಳಾಗಿರುತ್ತದೆ, ಈಗಲಾದರೂ ವಿವೇಚನೆಯಿಂದ ತಿನ್ನಲಿ." ಎಂದು ಅವರಿಗೆ ಅರ್ಥವಾಗಿರುತ್ತದೆ.
ಆಡಮ್ ಕೂಡ ಅರಂಭದಲ್ಲಿ ಹಣ್ಣನ್ನೇ ತಿಂದನು ಎಂದು ನಿಮಗೆ ತಿಳಿದಿದೆಯಲ್ಲವೇ? ಹಣ್ಣು ಪ್ರಕೃತಿಯೇ ಆಹಾರವೆಂದು ಸಂಕಲ್ಪಿಸಿದ ಒಂದು ಅಂಶ. ಮಾವಿನಹಣ್ಣಿನಲ್ಲಿ ಅದರ ಬೀಜವೇ ಪ್ರಮುಖವಾದ ಭಾಗ. ಹಣ್ಣಿನ ತಿರುಳೇನಿದ್ದರೂ ಪ್ರಾಣಿ ಮತ್ತು ಪಕ್ಷಿಗಳನ್ನು ಸೆಳೆಯಲು ಕೇವಲ ಒಂದು ಆಕರ್ಷಣೆಯಷ್ಟೆ. ಅವುಗಳು ಹಣ್ಣನ್ನು ತಿಂದು ಬೀಜವನ್ನು ದೂರ ದೂರಕ್ಕೆ ಸಾಗಿಸಲಿ ಎಂಬುದೇ ಅದರ ಉದ್ದೇಶ.
ಋತುಗಳನ್ನವಲಂಬಿಸಿ, ಅನೇಕ ಪ್ರಕಾರದ ಹಣ್ಣುಗಳಿವೆ. ಒಂದು ನಿರ್ದಿಷ್ಟ ಸಮಯದಲ್ಲಿ ಭೂಮಿಯುಲ್ಲಿ ಬೆಳೆದು ಬರುವಂತಹ ಹಣ್ಣುಗಳು ನಮ್ಮ ಜೀವವ್ಯವಸ್ಥೆಗೆ ಅತ್ಯಂತ ಸೂಕ್ತವಾಗಿರುತ್ತವೆ ಎನ್ನುವುದು ಸೋಜಿಗದ ವಿಷಯವೇ ಸರಿ. ಈ ಬಗ್ಗೆ ಬಹಳಷ್ಟು ಅಧ್ಯಯನಗಳು ನಡೆದಿವೆ - ಚಳಿಗಾಲದಲ್ಲಿ, ಬೇಸಿಗೆಯಲ್ಲಿ, ತೇವಾಂಶವು ಅಧಿಕವಾಗಿದ್ದಾಗ, ಅದಕ್ಕನುಸಾರವಾಗಿ ಸರಿಯಾದ ಹಣ್ಣುಗಳ ಫಲವನ್ನು ನೀವಿರುವ ಭೂಮಿ ನೀಡುತ್ತದೆ. ನೀವು ಅದನ್ನು ತಿಂದರೆ ಅದು ನಿಮ್ಮ ಜೀವವ್ಯವಸ್ಥೆಗೆ ತಕ್ಕುದಾಗಿರುತ್ತದೆ. ಆದರೆ, ನೀವೀಗ ನ್ಯೂಜಿಲೆಂಡ್-ನಿಂದ ಬರುತ್ತಿರುವ ಹಣ್ಣುಗಳನ್ನು ತಿನ್ನುತ್ತಿದ್ದೀರಿ, ಅದು ಬೇರೆ ವಿಷಯ. ನಿಮ್ಮ ಸುತ್ತಲಿನ ಪ್ರದೇಶದಲ್ಲಿ ಬೆಳಯುವ ಹಣ್ಣಗಳನ್ನು ನೀವು ತಿನ್ನುತ್ತಿದ್ದರೆ, ಆಯಾ ಕಾಲಕ್ಕೆ ಸರಿಹೊಂದುವಂತಹ ಹಣ್ಣುಗಳು ನಿಮಗೆ ಸಿಗುತ್ತಿರುತ್ತವೆ ಎನ್ನುವುದನ್ನು ನೀವೇ ನೋಡುವಿರಿ. ಆ ಋತುವಿನಲ್ಲಿ ತಿನ್ನಲು ಅದೇ ಉತ್ತಮವಾದ ಆಹಾರವಾಗಿರುತ್ತದೆ.
ಹಣ್ಣಿನ ಆಹಾರಕ್ರಮವನ್ನು ಅನುಸರಿಸುವಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು
ಹಣ್ಣು ದೇಹಕ್ಕೆ ಪವಾಡಸದೃಶವಾಗಬಹುದು. ನಿಮ್ಮ ಜೀವನಶೈಲಿ ಏನೇ ಇರಲಿ, ನೀವು ಬಹಳ ಜೀವಂತ ಮತ್ತು ಸಕ್ರಿಯರಾಗಬಹುದು. ಆದರೆ, ನೀವು ಬಹಳ ದೈಹಿಕ ಪರಿಶ್ರಮದ ಕೆಲಸವನ್ನು ಮಾಡುತ್ತಿದ್ದರೆ, ಉದಾಹರಣೆಗೆ, ಪ್ರತಿದಿನ ನೀವು ನೆಲವನ್ನು ಅಗೆಯುತ್ತಿದ್ದರೆ, ಯಂತ್ರದಿಂದಲ್ಲ, ನೀವೇ ದೈಹಿಕ ಪರಿಶ್ರಮದಿಂದ ಮಾಡುತ್ತಿದ್ದರೆ ಮತ್ತು ಬಹಳ ಶ್ರಮದಾಯಕವಾದ ಕೆಲಸವನ್ನು ಮಾಡುತ್ತಿದ್ದರೆ, ನಿಮಗೆ ಪ್ರತಿ ಎರಡು ಗಂಟೆಗೊಮ್ಮೆ ಹಸಿವಾಗಬಹುದು. ನೀವು ಒಂದು ಬಾರಿಗೆ ಒಂದಿಷ್ಟು ಪ್ರಮಾಣದ ಹಣ್ಣನ್ನು ಮಾತ್ರ ತಿನ್ನಬಹುದು, ಆದರೆ ಅದು ಎಷ್ಟು ಶೀಘ್ರವಾಗಿ ಜೀರ್ಣವಾಗುತ್ತದೆಂದರೆ, ನಿಮ್ಮ ಹೊಟ್ಟೆ ಖಾಲಿಯಾಗಿದೆ ಎಂದೆನಿಸಬಹುದು.
ನೀವು ಸಂಪೂರ್ಣವಾದ ಹಣ್ಣು-ಆಧಾರಿತ ಆಹಾರಕ್ರಮವನ್ನು ಅನುಸರಿಸಲು ಆರಂಭಿಸಿದರೆ, ಸಾಕಷ್ಟು ಪ್ರಮಾಣದಲ್ಲಿ ಹಣ್ಣುಗಳನ್ನು ತಿನ್ನವ ಸಲುವಾಗಿ ನೀವು ನಿಮ್ಮ ಊಟದ ಅವಧಿಯನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ನಿಧಾನವಾಗಿ ತಿನ್ನಬೇಕು. ಹಣ್ಣು ಸಾಮಾನ್ಯವಾಗಿ ಸಿಹಿಯಾಗಿರುವ ಕಾರಣ, ಒಂದಿಷ್ಟನ್ನು ತಿಂದರೂ ನಿಮಗೆ ಹೊಟ್ಟೆ ತುಂಬಿದಂತೆ ಅನಿಸುತ್ತದೆ. ಹಾಗಾಗಿ, ನೀವು ಕಾದು, ನಿಧಾನವಾಗಿ ತಿನ್ನಬೇಕು. ನಮ್ಮೊಳಗೊಂದು ಜೈವಿಕ ಗಡಿಯಾರವೂ ಇದೆ. ಬೇಯಿಸಿದ ಆಹಾರವನ್ನು ತಿನ್ನಲು ನೀವು ಹತ್ತರಿಂದ ಹನ್ನೆರಡು ನಿಮಿಷಗಳನ್ನು ತೆಗೆದುಕೊಳ್ಳುತ್ತಿದ್ದೀರಿ ಎಂದಿಟ್ಟುಕೊಳ್ಳೋಣ. ನೀವು ಹಣ್ಣನ್ನು ತಿಂದರೂ, ಹತ್ತು ಹನ್ನೆರಡು ನಿಮಿಷಗಳಲ್ಲಿ ನಿಮ್ಮ ದೇಹ ನೀವು ಸಾಕಷ್ಟು ತಿಂದಿದ್ದೀರಿ ಎಂದು ಹೇಳುತ್ತದೆ. ಹಾಗಾಗಿ, ನೀವು ಹಣ್ಣನ್ನು ತಿನ್ನುವಾಗ ಪ್ರಜ್ಞಾಪೂರ್ವಕವಾಗಿ ಹೆಚ್ಚಿಗೆ ತಿನ್ನಬೇಕು, ಏಕೆಂದರೆ, ದೇಹವು ನೀವು ಎಷ್ಟು ತಿನ್ನುತ್ತಿದ್ದೀರಿ ಎಂದು ನೋಡುವುದಿಲ್ಲ, ಅದು ಸಮಯವನ್ನು ಮಾತ್ರ ಪರಿಗಣಿಸುತ್ತದೆ.
ನೀವು ದೈಹಿಕವಾಗಿ ಬಹಳ ಸಕ್ರಿಯರಾಗಿದ್ದು, ಕೇವಲ ಹಣ್ಣು-ಆಧಾರಿತ ಆಹಾರವನ್ನು ಸೇವಿಸುತ್ತಿದ್ದರೆ, ನೀವು ದಿನದಲ್ಲಿ ಮೂರು ಬಾರಿ ಊಟವನ್ನು ಮಾಡಬೇಕಾಗಬಹುದು. ನೀವು ಆರರಿಂದ ಎಂಟು ಗಂಟೆಗಳವರೆಗೆ ನಿದ್ರಿಸಿ, ಮಿಕ್ಕ ಹದಿನಾರರಿಂದ ಹದಿನೆಂಟು ಗಂಟೆಗಳಿಗೆ ಮೂರು ಬಾರಿ ಹಣ್ಣುಗಳನ್ನು ತಿನ್ನುವುದು ಸಾಕಾಗುತ್ತದೆ. ಆದರೆ, ಎರಡು ಗಂಟೆಯೊಳಗೆಲ್ಲ ನಿಮ್ಮ ಹೊಟ್ಟೆ ಖಾಲಿಯಾದಂತೆ ಭಾಸವಾಗುತ್ತದೆ. ಆದ್ದರಿಂದ, ಅಧಿಕ ಶಕ್ತಿ ಆದರೆ ಖಾಲಿ ಹೊಟ್ಟೆಯ ಸ್ಥಿತಿಯಲ್ಲಿರುವುದನ್ನು ನೀವು ಅಭ್ಯಾಸಮಾಡಿಕೊಳ್ಳಬೇಕಾಗುತ್ತದೆ. ಈ ಸಮಯದಲ್ಲಿ ನಿಮ್ಮ ಮೆದುಳು ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ ಮತ್ತು ನೀವು ಒಬ್ಬ ಮನುಷ್ಯನಾಗಿ ಅತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತೀರಿ.
ನೀವು ನಿಮ್ಮ ಮೆದುಳಿನ ಶಕ್ತಿಯನ್ನು ಬಳಸಬೇಕೆಂದಿದ್ದರೂ ಅಥವಾ ದೈಹಿಕ ಚಟುವಟಿಕೆಯಲ್ಲಿ ತೊಡಗಬೇಕೆಂದಿದ್ದರೂ, ಹಣ್ಣು-ಆಧಾರಿತ ಆಹಾರವು ಬಹಳ ಉತ್ತಮವಾಗಿ ಕೆಲಸ ಮಾಡುತ್ತದೆ. ಆದರೆ, ಮಾರುಕಟ್ಟೆಯಲ್ಲಿ ದೊರಕುವ ಹಣ್ಣುಗಳಲ್ಲಿ ಏನೇನಿರುತ್ತದೆಯೋ ಎಂದು ನಿಮಗೆ ತಿಳಿದಿಲ್ಲದಿರುವುದು ಸಣ್ಣದೊಂದು ಸಮಸ್ಯೆ. ನನಗಿದು ಸ್ಪಷ್ಟವಾಗಿ ತಿಳಿಯುತ್ತಿದೆ: ಇಂದು ಸಿಗುತ್ತಿರುವ ತೋಟದ ಹಣ್ಣಗಳು ನಾವು ಚಿಕ್ಕವರಿದ್ದಾಗ ತಿನ್ನುತ್ತಿದ್ದ ದೇಶೀಯ ಹಣ್ಣುಗಳಂತಿಲ್ಲ. ಅವುಗಳು ಹೆಚ್ಚು ದೊಡ್ಡಗೆ, ದುಂಡಗೆ ಮತ್ತು ಚೆಂದ ಕಾಣುವ ಹಣ್ಣುಗಳು, ಆದರೆ ಇದು ಬೋಟಾಕ್ಸ್-ನ ತರಹ!
ಅವುಗಳಲ್ಲಿ ಅದೇ ಮಟ್ಟದ ಶಕ್ತಿ ಮತ್ತು ಜೀವಂತಿಕೆಯಿಲ್ಲ ಎಂದು ನನಗೆ ಸ್ಪಷ್ಟವಾಗಿ ಅನುಭವವಾಗುತ್ತಿದೆ. ಮೂಲತಃ, ಈ ಹಣ್ಣುಗಳನ್ನು ಮಾರಲು ಬೆಳೆಯಲಾಗುತ್ತಿದೆಯೆ ವಿನಃ ಮನುಷ್ಯರಿಗಾಗಲ್ಲ. ಇದರರ್ಥ ಅವು ಸಂಪೂರ್ಣವಾಗಿ ವ್ಯರ್ಥವೆಂದೇನಲ್ಲ. ಅವುಗಳಲ್ಲಿ ಹಿಂದೆ ಇರುತ್ತಿದ್ದ ಮಟ್ಟದಲ್ಲಿ ಪೋಷಕಾಂಶಗಳಿಲ್ಲದಿರುವ ಕಾರಣ ನಾವು ಬೇರೆ ರೀತಿಯ ಆಹಾರವನ್ನು ಸೇವಿಸುವ ಮೂಲಕ ಪೌಷ್ಟಿಕಾಂಶವನ್ನು ಪಡೆದುಕೊಳ್ಳಬೇಕಾಗಬಹುದು.
ಹಣ್ಣುಗಳಿಂದ ಕೂಡಿದ ಆಹಾರಕ್ರಮ ನಮ್ಮ ಭೂಮಿಗೆ ಉತ್ತಮ
ಎಲ್ಲಕ್ಕಿಂತ ಹೆಚ್ಚಾಗಿ, ಪರಿಸರ ಸಂರಕ್ಷಣೆಯ ವಿಷಯದಲ್ಲಿ ಇದು ಅತ್ಯಂತ ವಿವೇಚನಾಯುಕ್ತ ರೀತಿ. ಎಲ್ಲರ ಆಹಾರದಲ್ಲಿ ಕನಿಷ್ಟ ಮೂವತ್ತು ಪ್ರತಿಶತದಷ್ಟು ಹಣ್ಣಗಳಿರಬೇಕು. ನಿಮ್ಮ ಆಹಾರದ ಮೂರನೇ ಒಂದು ಭಾಗ ಬೇಸಾಯ ಮಾಡಿದ ಭೂಮಿಯಿಂದ ಮತ್ತು ಬೆಳಗಳಿಂದ ಬಾರದೆ, ಮರಗಳಿಂದ ಬಂದರೆ, ಅದು ಜಗತ್ತಿನ ಪರಿಸರಕ್ಕೆ ದೊಡ್ಡ ವ್ಯತ್ಯಾಸವನ್ನು ಉಂಟುಮಾಡುತ್ತದೆ.
ನೀವು ಮಾಂಸಾಹಾರ ಪದ್ಧತಿಯಿಂದ ಹಣ್ಣನ್ನು ಸೇವಿಸುವ ಆಹಾರ ಪದ್ಧತಿಗೆ ಬದಲಾಗಲು ಪ್ರಯತ್ನಿಸುತ್ತಿದ್ದರೆ, ಹಣ್ಣುಗಳನ್ನು ತಿಂದ ಮೇಲೂ ನೀವೇನೂ ತಿಂದಿಲ್ಲವೆಂದು ನಿಮಗನ್ನಿಸಬಹುದು, ಏಕೆಂದರೆ, ಭಾರಿ ಆಹಾರವನ್ನು ತಿಂದು ನೆಲಕ್ಕೆ ಬೀಳುವುದು ನಿಮಗೆ ಅಭ್ಯಾಸವಾಗಿಬಿಟ್ಟಿರುತ್ತದೆ. ಸತ್ತ ಮೇಲೆ ಹೇಗೂ ನೀವು ಭೂಮಿಗೇ ಸೇರುತ್ತೀರಿ. ಆದರೆ, ಈಗ, ನಾವು ಬದುಕಿರುವಾಗ ಭೂಮಿಗೆ ಸೇರಿಲ್ಲವೇನೋ ಎಂಬಂತೆ ನಾವು ಚಿಮ್ಮಿ ಹೊರಬಂದಾಗ ಅದನ್ನು ಜೀವವೆಂದು ಕರೆಯುತ್ತೇವೆ. ಬಾನಿನಲ್ಲಿ ಹಾರುವ ಹಕ್ಕಿಯೂ ಭೂಮಿಯಿಂದಲೇ ಮಾಡಲ್ಪಟ್ಟಿದ್ದು, ಆದರದು ಎತ್ತರದಲ್ಲಿ ಹಾರುತ್ತಿರುವಾಗ ಭೂಮಿಯಂತೆ ಕಾಣುವುದಿಲ್ಲ. ಪ್ರತಿಯೊಂದು ಜೀವಿಯೂ, ಹೊರಕ್ಕೆ ಚಿಮ್ಮಿದಾಗ ಅದು ಭೂಮಿಯ ಭಾಗವಾಗಿದ್ದರೂ, ಅದು ಭೂಮಿಯಂತೆ ಕಾಣಬಾರದು.
ನಾವು ಚಿಮ್ಮಿ ಹೊರ ಹೊಮ್ಮಬೇಕಿದ್ದರೆ, ನಾವು ಸೇವಿಸುವ ಇಂಧನವು ಬಹು ಬೇಗ ಉರಿಯುವಂತದ್ದು ಮತ್ತು ಸುಲಭವಾಗಿ ದಹಿಸುವಂತದ್ದಾಗಿರಬೇಕು. ಉತ್ತಮ ಆಹಾರವೆಂದರೆ ಅದು. ನಮ್ಮ ಹೊಟ್ಟೆಯಲ್ಲಿ ಹಣ್ಣು ನಿಸ್ಸಂಶಯವಾಗಿ ಬಹುಬೇಗ ಜೀರ್ಣವಾಗುತ್ತದೆ. ಇದರರ್ಥ ಹಣ್ಣಿನಲ್ಲಿ ಅತಿ ಕಡಿಮೆ ಶೇಷ ಭಾಗವಿರುತ್ತದೆ ಮತ್ತು ಅದು ನಮ್ಮ ಜೀವವ್ಯವಸ್ಥೆಯ ಮೇಲೆ ಅತಿ ಕಡಿಮೆ ಶ್ರಮ ಮತ್ತು ಒತ್ತಡವನ್ನು ಉಂಟುಮಾಡುತ್ತದೆ ಎಂದು.
ಸಂಪಾದಕರ ಟಿಪ್ಪಣಿ: "ಫುಡ್ ಬಾಡಿ" ಎಂಬ ಇಪುಸ್ತಕ ದೇಹ ಹೆಚ್ಚು ಆರಾಮದಾಯಕವಾಗಿರುವಂತಹ ಆಹಾರಗಳನ್ನು ಮತ್ತು ಅವುಗಳನ್ನು ಸೇವಿಸುವ ಸೂಕ್ತ ವಿಧಾನಗಳನ್ನು ಪರಿಶೋಧಿಸುತ್ತದೆ. 33-ಪುಟಗಳ ಈ ಕಿರುಪುಸ್ತಕವು ನಿಮ್ಮ ದೇಹಕ್ಕೆ ಸರಿಯಾಗಿ ಹೊಂದಿಕೊಳ್ಳಲು ಮತ್ತು ಅದಕ್ಕೆ ಯಾವ ಆಹಾರ ಸೂಕ್ತವಾದದ್ದು ಎಂಬುದನ್ನು ಅರಿಯಲು ಮೊದಲ ಹೆಜ್ಜೆಯಾಗಿದೆ. ಅದನ್ನು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ. Name your price and download.