ಒಂದು ಪ್ರಶ್ನೆಯ ಶಕ್ತಿ : ಏತಕ್ಕಾಗಿ "ಯುವಜನರೇ, ಸತ್ಯವು ನಿಮ್ಮದಾಗಲಿ" ಅಭಿಯಾನ?
ತಮ್ಮ ಕಾಲೇಜು ದಿನಗಳ ಕಥೆಯೊ೦ದನ್ನು ವಿವರಿಸುತ್ತಾ, ಹೇಗೆ ಒಂದು ಹುಡುಗಾಟದ ಪ್ರಶ್ನೆಯು ಅವರನ್ನು ತರಗತಿಯಿಂದ ಹೊರದೂಡುವ೦ತೆ ಮಾಡಿತು ಎ೦ಬುದನ್ನು ನೆನೆಯುತ್ತ, ಸದ್ಗುರುಗಳು "ಯುವಜನರೇ, ಸತ್ಯವು ನಿಮ್ಮದಾಗಲಿ" ಅಭಿಯಾನದ ಮಹತ್ವದ ಬಗ್ಗೆ ತಮ್ಮ ಒಳನೋಟವನ್ನು ನೀಡುತ್ತಿದ್ದಾರೆ. ನಮಗೆ ಕೇವಲ ಪ್ರಶ್ನೆಗಳನ್ನು ಕೇಳಲು ಧೈರ್ಯವಿರುವ ಯುವಜನರಷ್ಟೆ ಅಲ್ಲ, ಪರಿಹಾರಗಳನ್ನು ಕಂಡುಹಿಡಿಯುವಲ್ಲಿ ತಮ್ಮ ಜೀವನವನ್ನು ವಿನಿಯೋಗಿಸಲು ಸಿದ್ಧರಿರುವ ಯುವಜನರು ಸಹ ಬೇಕಾಗಿದ್ದಾರೆ ಎಂದವರು ಹೇಳುತ್ತಾರೆ.
ನಾನು ಹಾಗೆ ಮಾಡಿದ್ದು ಸೂಕ್ತವಲ್ಲ ಮತ್ತು ಖಂಡಿತವಾಗಿಯೂ ನಾನದನ್ನು ಶಿಫಾರಸು ಮಾಡುತ್ತಿಲ್ಲ. ಏನೆ೦ದರೆ, ಆಗ ನನಗೆ ತರಗತಿ ಎಂದರೆ ನೋಟ್ಸ್-ಗಳನ್ನು ಬರೆದುಕೊಳ್ಳುವ ಪರ್ಯಾಯ ಪದವಾಗಿದ್ದಿತು ಮತ್ತು ನಾನು ಸ್ಟೆನೊಗ್ರಾಫರ್ ಆಗವ ಪೂರ್ವಸಿದ್ಧತೆಯನ್ನೇನು ಮಾಡಿಕೊಳ್ಳುತ್ತಿರಲಿಲ್ಲ!
ತರಗತಿಯಿ೦ದ ಹೊರಹಾಕಿಸಿಕೊಳ್ಳುತ್ತಿದ್ದುದು ನನಗೆ ಹೊಸ ಅನುಭವವೇನು ಆಗಿರಲಿಲ್ಲ. ಹೇಗೂ ಶಾಲೆಯೆ೦ದರೆ ನನಗೆ ನೀರಸವೆನಿಸಲು ಶುರುವಾಗಿತ್ತು – ಶಿಕ್ಷಕರು ಹೇಳಿಕೊಡುತ್ತಿದ್ದದ್ದಾವುದು ಅವರ ಜೀವದಲ್ಲಿ ಯಾವ ಅರ್ಥವನ್ನಾದರು ತರುತ್ತಿತ್ತು ಎಂದು ನನಗೆ ಅನ್ನಿಸುತ್ತಿರಲಿಲ್ಲ. ನಾನು ಚಿಕ್ಕವನಿದ್ದಾಗ, ನನ್ನ ದಿನದ ಬಹು ಭಾಗವನ್ನು, ಶಾಲೆಯ ಹೊರಗಿದ್ದ ಒಂದು ಕಣಿವೆಯಲ್ಲಿನ ಅದ್ಭತ ಮತ್ತು ವೈವಿಧ್ಯಮಯವಾದ ಜಲಜೀವನವನ್ನು ತಲ್ಲೀನನಾಗಿ ನೋಡುತ್ತಾ ಕಳೆಯುತ್ತಿದ್ದೆ. ನಂತರ, ನನ್ನ ತಂದೆತಾಯಿಗಳಿಗೆ ಇದು ಗೊತ್ತಾದಾಗ, ನನ್ನ ಜೈವಿಕ ಪರಿಶೋಧನೆಗಳನ್ನೆಲ್ಲಾ “ಮಳೆನೀರಿನ ಚರ೦ಡಿ”ಯಲ್ಲಿ ಆಟವಾಡುತ್ತಿದ್ದೀಯೆ೦ದು ತಳ್ಳಿಹಾಕಿ, ತಕ್ಷಣವೇ ನನ್ನನ್ನು ಮರಳಿ ತರಗತಿಗೆ ಕಳುಹಿಸಲಾಯಿತು.
ಪ್ರಶ್ನೆಗಳಿಗೆ ಬರವಿಲ್ಲ
ನಾನು ಶಾಲೆಗೆ ಚಕ್ಕರ್ ಹೊಡೆಯುವಂತೆ ಸಲಹೆ ನೀಡುತ್ತಿದ್ದೇನೆಯೇ? ಖಂಡಿತವಾಗಿಯೂ ಇಲ್ಲ. ಯುವಜನರಲ್ಲಿ ಬಹಳಷ್ಟು ಪ್ರಶ್ನೆಗಳಿರುತ್ತವೆ ಮತ್ತವುಗಳು ಎಲ್ಲೋ ಒಮ್ಮೊಮ್ಮೆ ಮಾತ್ರ ಉತ್ತರಿಸಲ್ಪಡುತ್ತವೆ ಎನ್ನುವುದರ ಬಗ್ಗೆ ಗಮನ ಸೆಳೆಯುತ್ತಿದ್ದೇನೆ. ಕಲ್ಪನಾರಹಿತ ವಯಸ್ಕರ ಪ್ರಪಂಚವು, ಯುವಕರಿಗೆ ಸದಾ ಶ್ರೇಣಿಗಳು, ವೃತ್ತಿಗಳು ಮತ್ತು ಹಣದ ಬಗ್ಗೆಯೇ ಉಪದೇಶ ಕೊಡುವಲ್ಲಿ ನಿರತವಾಗಿದೆ. ನನ್ನ ತಲೆಯಲ್ಲಿ ಲಕ್ಷಗಟ್ಟಲೆ ಪ್ರಶ್ನೆಗಳನ್ನು ಇಟ್ಟುಕೊಂಡಿದ್ದು ನನಗೆ ನೆನಪಿದೆ. ನನ್ನ ತಂದೆ, ಅನೇಕ ಬಾರಿ ಹತಾಶರಾಗಿ ಕೈಚೆಲ್ಲಿ, “ಈ ಹುಡುಗ ತನ್ನ ಜೀವನದಲ್ಲೇನು ಮಾಡುವನೋ?” ಎಂದೆನ್ನುತ್ತಿದ್ದರು. ಅವರಿಗೆ ತಿಳಿಯದಿದ್ದುದ್ದೇನೆಂದರೆ, ನನಗೆ ಜೀವನದಲ್ಲಿ ಮಾಡಬೇಕಾದ೦ತಹ ವಿಷಯಗಳು ಕಡಿಮೆ ಏನಿರಲಿಲ್ಲ ಎ೦ದು. ನನಗೆ ತರಗತಿಗಳು ಬೋರ್ ಹೊಡೆಯುತ್ತಿದ್ದವು, ಆದರೆ ಬೇರೆಲ್ಲದರ ಬಗ್ಗೆ ನಾನು ಅಪಾರವಾದ ಆಸಕ್ತಿಯನ್ನು ಹೊಂದಿದ್ದೆ – ಪ್ರಪಂಚವು ರಚನೆಗೊ೦ಡ ರೀತಿಯ ಬಗ್ಗೆ, ಋತುಗಳ ಬಗ್ಗೆ, ಭೂಪ್ರದೇಶಗಳ ಬಗ್ಗೆ, ಭೂಮಿಯನ್ನು ಉಳುಮೆ ಮಾಡಿದಾಗ ಅದು ಹೇಗೆ ಬದಲಾಗಿ ಬೀಜ ಮೊಳಕೆಯೊಡೆಯುವುದರ ಬಗ್ಗೆ, ಜನರು ಜೀವಿಸುವ ರೀತಿಯ ಬಗ್ಗೆ. ನನ್ನ ಜೀವನವು ಆಸಕ್ತಿಹುಟ್ಟಿಸುವಂತಹ ಪ್ರಶ್ನೆಗಳಿಂದ ತು೦ಬಿತ್ತು.
ಯುವಜನರು ಎಂದೂ ಪ್ರಶ್ನೆಗಳ ಕೊರತೆಯಿ೦ದಿಲ್ಲ. ಭಾರತದ ಅರ್ಧದಷ್ಟು ಜನಸ೦ಖ್ಯೆಯು ಇಪ್ಪತೈದು ವರ್ಷಗಳಿಗಿಂತ ಕೆಳಗಿನದು. ಇದರರ್ಥ, ಪ್ರಶ್ನೆಗಳು ಹೇರಳವಾಗಿವೆಯೆಂದು. ಈ ಅರವತ್ತೈದು ಕೋಟಿ ಯುವಜನರು – ಅವರ ಆಕಾಂಕ್ಷೆಗಳು ಮತ್ತು ಸಾಮರ್ಥ್ಯಗಳು – ನಮ್ಮ ದೇಶದ ಹಾಗೂ ಪ್ರಪಂಚದ ಭವಿಷ್ಯವನ್ನು ನಿರ್ಧರಿಸುತ್ತವೆ. ಆದರೆ, ಅವರು ನಿರ್ಮಿಸದೆ ಇರುವ ಸಮಾಜದ ಹೇರಿಕೆಗಳು ಮತ್ತು ಒತ್ತಡಗಳೊ೦ದಿಗೆ ಹೊರಾಡುತ್ತಿದ್ದಾರೆ. ಹದಿನೈದು ಮತ್ತು ಇಪ್ಪತ್ತೊ೦ಬತ್ತರ ನಡುವಿನ ಯುವಜನರಲ್ಲಿ, ವಿಶ್ವದಲ್ಲೆ ಅತಿಹೆಚ್ಚು ಆತ್ಮಹತ್ಯೆಯ ಪ್ರಮಾಣವನ್ನು ಹೊಂದಿರುವ ಅವಮಾನಕಾರಿ ಹಿರಿಮೆಗೆ ನಾವು ಪಾತ್ರರಾಗಿದ್ದೇವೆ. ಭಾರತದಲ್ಲಿ ಪ್ರತಿಗ೦ಟೆಗೂ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡುಕೊಳ್ಳುತ್ತಿದ್ದಾನೆ! ಇದೊ೦ದು ಆಘಾತಕಾರಿ ಅಂಕಿಅಂಶವಾಗಿದ್ದು, ಈ ಅ೦ಶವು ನಮ್ಮನ್ನು ತಡೆದು, ನಾವೆಲ್ಲಿ ತಪ್ಪು ಮಾಡಿರಬಹುದೆಂದು ನಮ್ಮನ್ನು ನಾವು ಕೇಳಿಕೊಳ್ಳುವಂತೆ ಒತ್ತಾಯಿಸಬೇಕು.
ಮುಂಬರುವ ದಿನಗಳಲ್ಲಿ, ನಾನು ಯುವಜನರೊಂದಿಗೆ ಸಮಯ ಕಳೆಯಲು ಉದ್ದೇಶಿಸಿದ್ದೇನೆ. ನನ್ನ ಉದ್ದೇಶವು ಅವರಿಗೆ ಸಲಹೆ ಅಥವಾ ನೈತಿಕತೆಯ ಬಗ್ಗೆ ಉಪದೇಶ ಮಾಡುವುದಲ್ಲ. ನಾನು ಯುವಕನಾಗಿದ್ದಾಗ ಆ ಉಪದೇಶಗಳು ನನಗೆ ಸಹಾಯವನ್ನೇನು ಮಾಡಲಿಲ್ಲ. ನಾನು ಅವರಿಗೆ ಸ್ಪಷ್ಟತೆಯನ್ನು ಮಾತ್ರ ಕೊಡಬಲ್ಲೆ – ನನ್ನ ಇಪ್ಪತ್ತೈದನೇ ವಯಸ್ಸಿನಲ್ಲಿ ನನಗೆ ಗೋಚರವಾದ೦ತಹ ಸ್ಪಷ್ಟತೆ – ಏಕೆ೦ದರೆ ನನ್ನ ಬಳಿ ಪ್ರಶ್ನೆಗಳಿದ್ದವು ಮತ್ತವುಗಳ ಜೊತೆ ಜೀವಿಸಲು ನನಗೆ ಭಯವಿಲ್ಲದಿದ್ದ ಕಾರಣದಿ೦ದ! ಯಾವುದೇ ತೀರ್ಮಾನಗಳಿಗೆ ಬರದೆ ಪ್ರಶ್ನೆಗಳೊಂದಿಗೆ ಜೀವಿಸುವುದ: ಇದು ಜೀವನದ ಅಸಾಧಾರಣ ಸಾಹಸ.
“ನನಗೆ ಗೊತ್ತಿಲ್ಲ" ಎಂಬುದರ ಸಾಧ್ಯತೆ
“ನನಗೆ ಗೊತ್ತಿಲ್ಲ" ಎಂಬುದರ ಸಾಧ್ಯತೆಯ ಸ್ಥಿತಿಯನ್ನು ಜಗತ್ತು ತಿಳಿಯದೇ ಇರುವುದು ಒಂದು ದುರಂತ. ವಿಸ್ಮಯ ಪಡುವ ಸಾಮರ್ಥ್ಯವನ್ನು ಜ್ಞಾನದ ಸೋಗುಹಾಕಿಕೊ೦ಡ೦ತಹ ನಂಬಿಕೆಗಳು, ಊಹೆಗಳು ಮತ್ತು ನಿಶ್ಚಿತತೆಗಳ ಮೂಲಕ ನಂದಿಸಲಾಗುತ್ತದೆ. “ನನಗೆ ಗೊತ್ತಿಲ್ಲ" ಎನ್ನುವುದು ತಿಳಿಯುವುದಕ್ಕೆ ಇರುವ೦ತಹ ಬಾಗಿಲು – ಏಕೈಕ ಬಾಗಿಲೆಂದು ನಾವು ಮರೆಯುತ್ತೇವೆ.
ಯುವಕರ ಮುಂದೆ ಇ೦ದು ನಿಂತಿರುವ ಬಾಗಿಲಿದು. ಒ೦ದು ಗಾಢವಾದ ಜೀವನ ಸಾಹಸಕ್ಕೆ ತೆರೆದಿರುವ ಬಾಗಿಲು ಇದಾಗಿದೆ ಮತ್ತು ಬಹಳಷ್ಟು ಬಳಲಿದ ವಯಸ್ಕರು ಇದನ್ನು ಮರೆತಿದ್ದಾರೆ. ಕೇವಲ ಪ್ರಶ್ನೆಗಳನ್ನು ಕೇಳುವ ಧೈರ್ಯವಿರುವ ಯುವಜನರಷ್ಟೆ ಅಲ್ಲದೆ, ಪರಿಹಾರಗಳನ್ನು ಹುಡುಕುವಲ್ಲಿ ತಮ್ಮ ಜೀವನವನ್ನು ವಿನಿಯೋಗಿಸಲು ಸಿದ್ಧರಿರುವ ಯುವಜನರು ಸಹ ಬೇಕಾಗಿದ್ದಾರೆ. ನಮ್ಮ ವೈಯಕ್ತಿಕ ಮತ್ತು ವಿಶ್ವವ್ಯಾಪಿ ಯೋಗಕ್ಷೇಮವು ಇದರ ಮೇಲೆ ಅವಲಂಬಿತವಾಗಿದೆ.
ಸಂಪಾದಕರ ಟಿಪ್ಪಣಿ: ನೀವು ಯಾವುದಾದರೂ ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವಾ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.
ಈ ಲೇಖನದ ಒ೦ದು ಆವೃತ್ತಿಯು ಮೂಲತಃ Speaking Tree ಯಲ್ಲಿ ಪ್ರಕಟಿತವಾಗಿತ್ತು.