ರಾಷ್ಟ್ರಗೀತೆಗೆ ನಾವು ಎದ್ದು ನಿಲ್ಲಬೇಕೇ?
ಗೌತಮ್ ಗಂಭೀರ್ ಮತ್ತು ಸದ್ಗುರುಗಳು ರಾಷ್ಟ್ರದ ಚಿಹ್ನೆಗಳನ್ನು ಗೌರವಿಸುವುದರ ಬಗ್ಗೆ, ರಾಷ್ಟ್ರಗೀತೆ ಪ್ರಸಾರವಾಗುತ್ತಿರುವ ಸಮಯದಲ್ಲಿ ನಾವು ಎದ್ದು ನಿಲ್ಲಬೇಕೇ ಬೇಡವೇ ಎಂಬುದರ ಬಗ್ಗೆ ಚರ್ಚಿಸುತ್ತಾರೆ.
ಗೌತಮ್ ಗಂಭೀರ್: ರಾಷ್ಟ್ರಗೀತೆ ಪ್ರಸಾರವಾಗುವಾಗ ಎದ್ದು ನಿಲ್ಲುವುದರ ಕುರಿತಾದ ವಾಗ್ವಾದ ಏತಕ್ಕಾಗಿ ನಡೆಯಿತು ಎನ್ನುವ ಬಗ್ಗೆ ನಾನು ಸತ್ಯವನ್ನು ತಿಳಿಯಬೇಕು. ನನ್ನ ವೈಯುಕ್ತಿಕ ಅಭಿಪ್ರಾಯದಲ್ಲಿ ಈ ದೇಶವು ನಮಗಾಗಿ ಏನೆಲ್ಲಾ ಕೊಟ್ಟಿದೆ ಮತ್ತು ನಮ್ಮಲ್ಲಿ, ರಾಷ್ಟ್ರಗೀತೆಯು ಚಿತ್ರಮಂದಿರಗಳಲ್ಲಾಗಲಿ, ಶಾಲೆಗಳಲ್ಲಾಗಲಿ ಅಥವಾ ಎಲ್ಲಿಯಾದರೂ ಸಹ ಪ್ರಸಾರವಾದಾಗ, ಐವತ್ತೆರೆಡು ಸೆಕಂಡ್-ಗಳ ಕಾಲ ಎದ್ದು ನಿಲ್ಲುವುದರ ಬಗ್ಗೆ ಯಾವುದೇ ಚರ್ಚೆಗಳು ನಡೆಯಬಾರದು. ನನಗೆ ಅದರ ಬಗ್ಗೆ ಸತ್ಯ ತಿಳಿಯಬೇಕಿದೆ.
ಸದ್ಗುರು: ನಮಸ್ಕಾರ ಗೌತಮ್! ದುರದೃಷ್ಟವಶಾತ್, ನಮ್ಮ ದೇಶದಲ್ಲಿ ನೀವು ಇಂತಹ ಪ್ರಶ್ನೆಯನ್ನು ಕೇಳಬೇಕಾಗಿ ಬ೦ದಿರುವುದು ಹಾಸ್ಯಾಸ್ಪದವಾಗಿದೆ ಅಲ್ಲವೇ?ಒಂದು ರಾಷ್ಟ್ರವೆನ್ನುವುದು ದೇವರು ಕೊಟ್ಟಿರುವ೦ತದ್ದಲ್ಲ ಎ೦ದು ನಮಗೆ ಅರ್ಥವಾಗಬೇಕು. ಅದೆ೦ದರೆ, ನಾವೆಲ್ಲರು ಸಹ ಸೇರಿ ಒಪ್ಪಿಕೊಂಡಿರುವಂತಹ ಒಂದು ಪರಿಕಲ್ಪನೆ. ಒ೦ದು ರಾಷ್ಟ್ರವನ್ನು ಸ೦ವಿಧಾನದ ರೂಪದಲ್ಲಿ ನಮ್ಮೊಳಗೆ ಬೇರೂರಿಸಲಾಗಿದೆ, ಮತ್ತು ರಾಷ್ಟ್ರದ ಸಾಂಕೇತಿಕತೆಯು, ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಯ ರೂಪದಲ್ಲಿ ನಮ್ಮನ್ನು ತಲಪ್ಪುತ್ತದೆ. ಹಾಗಾಗಿ ಇಲ್ಲಿ ಪ್ರಶ್ನೆ ಏನೆ೦ದರೆ, ನಾವೊಂದು ರಾಷ್ಟ್ರವಾಗಿ ಕಾರ್ಯನಿರ್ವಹಿಸಲು, ಬದುಕಲು, ಅಭಿವೃದ್ಧಿ ಹೊಂದಲು ಮತ್ತು ಉತ್ಕೃಷ್ಟವಾಗಲು ಬಯಸಿದರೆ, ರಾಷ್ಟ್ರದ ಕುರಿತಾಗಿ ಹೆಮ್ಮೆ ಮತ್ತು ನಿಷ್ಠೆಯನ್ನು ಹೊಂದುವುದು ಮುಖ್ಯವೇ?
ನಾನು ರಾಷ್ಟ್ರೀಯತೆಯ ಬಗ್ಗೆ ಮಾತನಾಡುವವನಲ್ಲ, ನಾನು ಮಾನವೀಯತೆಯ ಪರ. ನಾನು ಸಾರ್ವತ್ರಿಕವಾದ ಮಾನವ ಅಸ್ತಿತ್ವದ ಪರ. ಆದರೀಗ, ನೀವು ಸಂಬೋಧಿಸಬಹುದಾದ ಬಹು ದೊಡ್ಡ ಜನಸಂಖ್ಯೆಯ ಭಾಗವೆಂದರೆ, ಒಂದು ರಾಷ್ಟ್ರ. ಒಂದು ರಾಷ್ಟ್ರವಾಗಿ, ಭಾರತವು ನೂರಮೂವತ್ತು ಕೋಟಿ ಜನಸ೦ಖ್ಯೆಯನ್ನು ಹೊಂದಿದೆ. ಅದು ಸ್ವತಃ ಒ೦ದು ಪ್ರಪಂಚವೇ ಸರಿ. ನಮ್ಮಲ್ಲಿ ರಾಷ್ಟ್ರತ್ವದ ಒಂದು ಬಲವಾದ ಭಾವನೆಯನ್ನು ಬೆಳಸಿದ್ದರೆ, ನಾವು ಏಳಿಗೆ ಹೊ೦ದಲಾಗುವುದಿಲ್ಲ, ಜಗತ್ತಿನ ಯೋಗಕ್ಷೇಮದ ಕಡೆಗೆ ಯಾವ ಕೊಡುಗೆಯನ್ನು ನೀಡಲಾಗುವುದಿಲ್ಲ ಮತ್ತು ನಾವು ಯಾವುದೇ ಪ್ರಾಧಾನ್ಯತೆಯನ್ನು ಉಳಿಸಿಕೊಳ್ಳಲಾಗುವುದಿಲ್ಲ.
ರಾಷ್ಟ್ರಗೀತೆಯು ರಾಷ್ಟ್ರೀಯತೆಯ ಒಂದು ಭಾಗ. “ನಾನು ಎದ್ದು ನಿಲ್ಲಬೇಕೇ ಅಥವಾ ಬೇಡವೆ?” ನಿಮಗೆ ಕಾಲಿಲ್ಲದಿದ್ದರೆ, ಪರವಾಗಿಲ್ಲ, ನಾವು ನಿಮ್ಮನ್ನು ಮನ್ನಿಸುತ್ತೇವೆ. ನಿಮಗೆ ಕಾಲಿಲ್ಲದಿದ್ದರು ಸಹ, ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜಕ್ಕೆ ಯಾವುದಾದರೊ೦ದು ರೀತಿಯಲ್ಲಿ ಗೌರವವನ್ನು ನೀವು ತೋರಿಸಬೇಕು ಏಕೆ೦ದರೆ ಇವುಗಳು ನಮ್ಮ ರಾಷ್ಟ್ರತ್ವದ ಸಂಕೇತಗಳು. ಅದರಿಂದಾಗಿಯೇ ನಮ್ಮ ರಾಷ್ಟ್ರವು ಸಂಘಟಿತವಾಗಿರುವುದು. ನಿಮ್ಮ ರಾಷ್ಟ್ರಗೀತೆಯನ್ನು ನಿಮಗೆ ಹೆಮ್ಮೆಯಿಂದ ಹಾಡಲು ಸಾಧ್ಯವಿಲ್ಲವೆಂದರೆ, ರಾಷ್ಟ್ರತ್ವದ ಪ್ರಶ್ನೆ ಎಲ್ಲಿದೆ?
“ವಿಶೇಷವಾಗಿ, ನಾನೇಕೆ ಚಿತ್ರಮಂದಿರಗಳಲ್ಲಿ ಎದ್ದು ನಿಲ್ಲಬೇಕು? ನಾನಿಲ್ಲಿ ಬಂದಿರುವುದು ಮನೋರಂಜನೆಗಾಗಿ!” ಎನ್ನುವ ಜನರಿಗೆ ನನ್ನದೊಂದು ಪ್ರಶ್ನೆ: ಕೊನೆಯ ಬಾರಿ ನೀವು ಗಣರಾಜ್ಯೋತ್ಸವದ ಪರೆಡ್-ಗೆ ಹೋದದ್ದು ಯಾವಾಗ? ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣಕ್ಕೆ ನೀವು ಕೊನೆಯ ಬಾರಿ ಹೋದದ್ದು ಯಾವಾಗ? ನೀವು ಕೊನೆಯ ಬಾರಿ ರಾಷ್ಟ್ರಗೀತೆಯನ್ನು ಎಲ್ಲಿಯಾದರೂ ಹೋಗಿ ಹಾಡಿದ್ದು ಯಾವಾಗ? ಬಹುಶಃ ಶಾಲೆಯಲ್ಲಿ ಮಾತ್ರ! ಅದೂ ಸಹ ಬಲವಂತಪಡಿಸುತ್ತಿದ್ದರು ಎ೦ದು ಹಾಡುತ್ತಿದ್ದಿರಿ. ಅದರಿ೦ದಾಚೆಗೆ, ನೀವು ದೇಶದಿಂದ ಲಾಭ ಪಡೆಯುತ್ತಿದ್ದೀರೆ ವಿನಃ, ಅದರ ಏಳಿಗೆಗೆ ನೆರವಾಗಲು ಮತ್ತದನ್ನು ರಕ್ಷಿಸಲು ನೀವು ತಯಾರಿಲ್ಲ.
ಭಾರತೀಯ ಸೇನೆ ಮತ್ತು ಅದರ ಇತರ ಸೈನಿಕ ದಳದ ಲಕ್ಷಾಂತರ ಯೋಧರು, ಪ್ರತಿನಿತ್ಯ ತಮ್ಮ ಪ್ರಾಣವನ್ನು ಒತ್ತೆ ಇಟ್ಟು, ನಮ್ಮ ಗಡಿಗಳನ್ನು ಕಾಯುತ್ತಿದ್ದಾರೆ. ಇವರ ಸಾವುನೋವುಗಳ ಸುದ್ದಿಯನ್ನು ನೀವು ಪ್ರತಿನಿತ್ಯ ಕೇಳುತ್ತೀರಿ. ನಿಮಗೆ ಈ ದೇಶದ ಬಗ್ಗೆ ಕಳಕಳಿಯಿಲ್ಲವೆಂದು ದಯವಿಟ್ಟು ಅವರಿಗೆ ಹೇಳಿಬಿಡಿ. ಅವರು ಸಹ ತಮ್ಮತಮ್ಮ ಮನೆಗಳಿಗೆ ವಾಪಸು ತೆರಳಿ, ಅವರ ಜೀವನವನ್ನು ನಡೆಸಲಿ. ನಿಮಗೆ ದೇಶದ ಬಗ್ಗೆ ಒ೦ದಿಷ್ಟೂ ಕಾಳಜಿ ಇಲ್ಲದಿದ್ದ ಮೇಲೆ, ಅವರೇಕೆ ತಮ್ಮ ಪ್ರಾಣವನ್ನು ಒತ್ತೆ ಇಟ್ಟು, ಗಡಿಗಳಲ್ಲಿ ನಿಂತು ದೇಶವನ್ನು ರಕ್ಷಿಸಬೇಕು?
ನಮ್ಮ ದೇಶದ ಪ್ರತಿ ಯುವಕರು ಮತ್ತು ಪ್ರಜೆಗಳ ಮನಸ್ಸು ಹಾಗೂ ಹೃದಯಗಳಲ್ಲಿ ಬಲವಾದ ರಾಷ್ಟ್ರತ್ವದ ಭಾವನೆಯನ್ನು ಮೂಡಿಸುವುದು ಅತಿ ಮುಖ್ಯ. ದುರದೃಷ್ಟವಶಾತ್, ಸ್ವಾತಂತ್ರ್ಯಾನಂತರ ಇದೊಂದು ವಿಷಯವನ್ನು ಮಾಡಲು ನಾವು ವಿಫಲರಾಗಿದ್ದೇವೆ. ಸ್ವಾತಂತ್ರ್ಯ ದೊರೆತ ಕೂಡಲೇ ನಾವಿದನ್ನು ಮಾಡಬೇಕಿತ್ತು, ಏಕೆಂದರೆ, ಒ೦ದು ರಾಷ್ಟ್ರವು ಅಸ್ತಿತ್ವದಲ್ಲಿರುವುದು ಜನರ ಮನಸ್ಸು ಹಾಗೂ ಹೃದಯಗಳಲ್ಲಿ ಮಾತ್ರ. ಸ್ವಾತಂತ್ರ್ಯ ಬ೦ದ ತಕ್ಷಣ, ದೇಶದ ಕುರಿತಾಗಿ ಅಗಾಧವಾದ ಭಾವಪರವಶತೆ ಮತ್ತು ಹುರುಪು ಇದ್ದಾಗಲೇ ನಾವಿದನ್ನು ಮಾಡಬೇಕಿತ್ತು. ದುರದೃಷ್ಟಕರವಾಗಿ ಈ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಮಾಡಲಾಗಿಲ್ಲ. ಬಹಳಷ್ಟು ಜನರು ತಮ್ಮನ್ನು ತಾವು ಅವರ ಧರ್ಮ, ಜಾತಿ, ಮತ, ಲಿ೦ಗ, ಸ೦ಸ್ಥೆಗಳಿ೦ದ, ಎಲ್ಲಕ್ಕಿಂತ ಮೇಲಾಗಿ ತಮ್ಮದೇ ರೀತಿಯ ಒರಟು ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದಾರೆ.
ಹಾಗಾದರೆ, ನಾವು ರಾಷ್ಟ್ರಕ್ಕಾಗಿ ಎದ್ದು ನಿಲ್ಲಬೇಕೇ? ನೂರಕ್ಕೆ ನೂರರಷ್ಟು! ರಾಷ್ಟ್ರಗೀತೆಯು ರಾಷ್ಟ್ರಕ್ಕಾಗಿ ಎದ್ದು ನಿಲ್ಲುವುದರ ಒಂದು ಭಾಗವೆ? ಹೌದು! ಐವತ್ತೆರಡು ಸೆಕೆಂಡ್-ಗಳು. ಇದರ ಬಗ್ಗೆ ಚರ್ಚೆ ಇದೆಯೆ? ನನ್ನ ಪ್ರಕಾರ ಅ೦ತಹ ಜನರ ಸಮಸ್ಯೆಯೆ೦ದರೆ ಅವರ ಕೈಗಳು ಕೋಕ್ ಮತ್ತು ಪಾಪ್-ಕಾರ್ನ್-ಗಳಿಂದ ತುಂಬಿಹೋಗಿರುತ್ತವೆ. ಅದು ಬಿದ್ದುಹೋಗಬಹುದೆಂಬ ಭಯ ಅವರಿಗೆ. ಆದ್ದರಿ೦ದ ಅವರು ಎದ್ದು ನಿಲ್ಲಲು ಬಯಸುತ್ತಿಲ್ಲ.
ಈ ಬಗ್ಗೆ ಚರ್ಚೆ ನಿಲ್ಲಲಿ! ಅಪೌಷ್ಟಿಕತೆಯಿಂದ ಬಳಲುತ್ತಿರುವ ನಮ್ಮ ದೇಶದ ನಲವತ್ತು ಕೋಟಿ ಜನರ ಬಗ್ಗೆ ನಮಗೆ ಕಾಳಜಿ ಇದ್ದದ್ದೇ ಆದಲ್ಲಿ, ಈ ದೇಶವನ್ನು ಬಲವಾದ ರಾಷ್ಟ್ರತ್ವದ ಭಾವದಿಂದ ಒಗ್ಗೂಡಿಸುವುದು ಬಹಳ ಮುಖ್ಯ. ಇದಿರದ ಹೊರತು ದೇಶವಿಲ್ಲ, ಏಕೆಂದರೆ, ಒಂದು ರಾಷ್ಟ್ರವೆ೦ದರೆ ನಾವೆಲ್ಲರು ಸೇರಿ ಮಾಡಿಕೊಂಡಿರುವ೦ತಹ ಒ೦ದು ಒಪ್ಪಂದ. ನಾವು ಈ ದೇಶದವರು ಎಂದು ಹೇಳಿದಾಗ, ನಾವೆಲ್ಲರೂ ಕೆಲವು ವಿಷಯಗಳಿಗೆ ಮಹತ್ವವನ್ನು, ಗೌರವವನ್ನು ನೀಡಲು ಸಮ್ಮತಿಸಿದ್ದೇವೆ ಮತ್ತು ಅವುಗಳಿಗಾಗಿ ಎದ್ದು ನಿಲ್ಲಲು ತಯಾರಿದ್ದೇವೆ ಎ೦ದರ್ಥ.
ಸಂಪಾದಕರ ಟಿಪ್ಪಣಿ: ನೀವು ಯಾವುದಾದರೂ ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವಾ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.