ಸಂತೋಷವನ್ನು ಕಂಡುಕೊಳ್ಳುವುದು ಹೇಗೆ?
ಸಿನಿಮಾ ತಾರೆಯಾದ ವಿಜಯ್ ದೇವರಕೊಂಡರವರು ಸಂತೋಷವನ್ನು ಕಂಡುಕೊಳ್ಳುವುದರ ಬಗ್ಗೆ ಮತ್ತದನ್ನು ಹಾಗೆಯೇ ಉಳಿಸಿಕೊಂಡು ಹೋಗುವುದರ ಬಗೆಗಿನ ಸತ್ಯವನ್ನು ಸದ್ಗುರುಗಳಲ್ಲಿ ಕೇಳುತ್ತಾರೆ. ಸಂತೋಷವು ಸಹ, ಬೇರೆಲ್ಲಾ ಭಾವನೆಗಳ ಹಾಗೆಯೇ, ಕೇವಲ ಒಂದು ವಿಶಿಷ್ಟವಾದ ರಾಸಾಯನಿಕ ಕ್ರಿಯೆ ಎಂದು ಸದ್ಗುರುಗಳು ವಿವರಿಸುತ್ತಾರೆ. ನಮಗೆ ಬೇಕಾದ ರಸಾಯನವನ್ನು ನಾವೇ ಸೃಷ್ಟಿಸಿಕೊಳ್ಳಬಹುದಾದಂತಹ ತಂತ್ರಜ್ಞಾನದ ಬಗ್ಗೆ ಸದ್ಗುರುಗಳು ಚರ್ಚಿಸುತ್ತಾರೆ.
ವಿಜಯ್ ದೇವರಕೊಂಡ: ಹಾಯ್ ಸದ್ಗುರು! ಇಂದಿನ ದಿನಗಳಲ್ಲಿ, ನಾವೆಲ್ಲರೂ ಸಹ ಹಣದಿಂದ ಸಂತೋಷ ಸಿಗುತ್ತದೆ ಎಂದುಕೊಂಡು ಕಷ್ಟಪಟ್ಟು ದುಡಿಯುತ್ತೇವೆ. ಈ ಸಂತೋಷ ಅನ್ನುವುದು ತುಂಬಾ ಮಾರಾಟಗೊಳ್ಳುತ್ತಿರುವ ವಸ್ತುವಾಗಿದೆ. ಕುಡಿತದಿಂದ ಸಂತೋಷ ಸಿಗುತ್ತದೆ ಎಂದುಕೊಂಡು ನಾವು ಕುಡಿಯುತ್ತೇವೆ, ಒಬ್ಬ ಹುಡುಗಿಯ ಜೊತೆ ಇದ್ದರೆ, ಅವಳು ನಮ್ಮನ್ನು ಸಂತೋಷವಾಗಿಡುತ್ತಾಳೆ ಎಂದುಕೊಳ್ಳುತ್ತೇವೆ. ಆದರೆ, ನಮ್ಮನ್ನು ಯಾವುದು ಸಂತೋಷಪಡಿಸುತ್ತದೆ ಮತ್ತು ಸಂತೋಷವಾಗಿರಿಸುತ್ತದೆ? ನಾವು ಎಂತಹ ಸ್ಥಿತಿಯಲ್ಲಿದ್ದೇವೆಂದರೆ ನಮಗೆ ಸಂತೋಷ ಎಲ್ಲಿ ಸಿಗತ್ತದೆ ಎಂದು ತಿಳಿದಿಲ್ಲ. ಸಂತೋಷ ಎಂದರೇನು? ಸಂತೋಷವಾಗಿರುವವರು ಹೇಗಿರುತ್ತಾರೆ? ಸಂತೋಷವನ್ನು ನಿಮ್ಮೊಳಗೆ ಕಂಡುಕೊಳ್ಳಿ ಎಂದು ದಯವಿಟ್ಟು ಹೇಳಬೇಡಿ. ಆ ಉತ್ತರ ನನ್ನ ಬಳಿ ಕೆಲಸ ಮಾಡುವುದಿಲ್ಲ. ನಿಜ ಏನೆಂದು ಹೇಳಿ.
ಸದ್ಗುರು: ನಮಸ್ಕಾರ ವಿಜಯ್! ಸಂತೋಷದಿಂದಿರುವ ಮನುಷ್ಯ ಹೇಗೆ ಕಾಣುತ್ತಾನೆ? ನಿಮಗೆ ನಾನು ಹೇಗೆ ಕಾಣುತ್ತಿದ್ದೇನೆ? ನಾವು ಸಂತೋಷವೆನ್ನುವುದನ್ನು ಒಂದು ವಸ್ತುವಿನ ತರಹ ಅಥವಾ ಅದನ್ನೊಂದು ಸಾಧನೆಯ ತರಹ ನೋಡುತ್ತಿದ್ದೇವೆ. ಇಲ್ಲ. ನಿಮ್ಮ ಬದುಕು ಸಲೀಸಾಗಿದ್ದರೆ, ನೀವು ಸಲೀಸಾಗಿದ್ದರೆ, ಸಂತೋಷವೆನ್ನುವುದು ಒಂದು ಸಹಜವಾದ ಪರಿಣಾಮ. ಈ ಆರಾಮವನ್ನು ತಂದುಕೊಳ್ಳುವುದರ ಅರ್ಥವೇನು? ಇದನ್ನು ಹಲವಾರು ರೀತಿಗಳಲ್ಲಿ ನೋಡಬಹುದು. ಸಂತೋಷವನ್ನು “ಒಳಗೇ ಕಂಡುಕೊಳ್ಳಿ” ಎಂದು ಹೇಳಬೇಡಿ ಎಂದು ನೀವೀಗಾಗಲೇ ಷರತ್ತು ಹಾಕಿಬಿಟ್ಟಿದ್ದೀರಿ.ಮನುಷ್ಯನ ಪ್ರತಿಯೊಂದು ಅನುಭವಕ್ಕೂ ಒಂದು ರಾಸಾಯನಿಕ ತಳಹದಿ ಇದೆ ಎಂದು ವೈದ್ಯಕೀಯವಾಗಿಯು ಸಹ ಇಂದು ನಮಗೆ ತಿಳಿದಿದೆ. ನೀವು ಶಾಂತಿ ಎಂದು ಕರೆಯುವುದು ಒಂದು ರೀತಿಯ ರಾಸಾಯನಿಕ ಪ್ರಕ್ರಿಯೆ. ಸಂತೋಷ ಎನ್ನುವುದು ಇನ್ನೊಂದು ರೀತಿಯ ರಾಸಾಯನಿಕ ಪ್ರಕ್ರಿಯೆ, ಅದೇ ರೀತಿಯಲ್ಲಿ, ಖುಷಿ, ದುಃಖ, ನೋವು, ಆನಂದ ಎಲ್ಲವು.
ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ನೀವೊಂದು ಬಹಳ ಸಂಕೀರ್ಣವಾದ ರಸಾಯನಿಕ ಮಿಶ್ರಣ. ಪ್ರಶ್ನೆ ಏನೆಂದರೆ, ನೀವು ಅದ್ಭುತವಾದ ರಸಾಯನವೋ ಅಥವಾ ಕಳಪೆಯಾದ ರಸಾಯನವೋ ಎನ್ನುವುದು. ನೀವೊಂದು ಅದ್ಭುತವಾದ ರಸಾಯನವಾಗಿದ್ದರೆ, ನೀವು ಸವಿಯಾಗಿ ರುಚಿಸುತ್ತೀರಿ! ಮತ್ತೊಬ್ಬರಿಗಲ್ಲ, ಆದರೆ ನಿಮಗೆ ನೀವೆ ಚೆನ್ನಾಗಿ ರುಚಿಸುತ್ತೀರಿ. ನಿಮಗೆ ನೀವೇ ರುಚಿಕರವಾಗಿದ್ದರೆ, ನೀವಿಲ್ಲಿ ಕುಳಿತು ನಿಮ್ಮೊಳಗೆ ತುಂಬ ಹಿತವನ್ನು ಅನುಭವಿಸಿದರೆ, ಆಗ ಜನಗಳು ನೀವು ಸಂತೋಷವಾಗಿದ್ದೀರಿ ಎನ್ನುತ್ತಾರೆ. ನೀವು ಬಹಳ ಬಹಳ ಸವಿಯಾಗಿದ್ದರೆ, ನೀವು ಆನಂದದಿಂದಿರುವಿರಿ ಎನ್ನುತ್ತಾರೆ. ಸವಿ ಇನ್ನೂ ಹೆಚ್ಚಾದರೆ, ಪರಮಾನಂದದಲ್ಲಿರುವಿರಿ ಎನ್ನುತ್ತಾರೆ.
ಇನ್ನೂ ಸರಳವಾಗಿ ಹೇಳುವುದಾದರೆ, ನಿಮ್ಮ ರಸಾಯನ ಅಥವಾ ಕೆಮಿಸ್ಟ್ರಿಯನ್ನು ಬದಲಾಯಿಸಬೇಕಾಗಿದೆ. ನಿಮ್ಮ ಕೆಮಿಸ್ಟ್ರಿಯನ್ನು ನಿಮಗೆ ಬೇಕಾದ ಹಾಗೆ ನಿರ್ಮಿಸಬಹುದಾದ ಒಂದು ತಂತ್ರಜ್ಞಾನವೇ ಇದೆ. ನಿಮ್ಮ ಒಳಗೇ ಆನಂದದ ಕೆಮಿಸ್ಟ್ರಿಯನ್ನು ಉಂಟುಮಾಡುವುದು ಹೇಗೆಂದು ನಾನು ನಿಮಗೆ ಕಲಿಸಿದರೆ, ನೀವು ಆನಂದವಾಗಿರುವಿರಿ. ಆನಂದದಲ್ಲಿದ್ದಾಗ ನೀವು ಸಂತೋಷದ ಹುಡುಕಾಟದಲ್ಲಿರುವುದಿಲ್ಲ. ಸಂತೋಷವನ್ನು ಹುಡುಕಿಕೊಂಡು ಹೋಗುವುದು ಒಂದು ದೊಡ್ಡ ತಪ್ಪು. ನಿಮ್ಮ ಜೀವನವು ಆನಂದದ ಒಂದು ಅಭಿವ್ಯಕ್ತಿಯಾಗಬೇಕು. ನಿಮ್ಮ ಜೀವನವು ನಿಮ್ಮ ಅನುಭವದ ಅಭಿವ್ಯಕ್ತಿಯಾದಾಗ, ನಿಮ್ಮ ಬದುಕಿನ ಗುಣಮಟ್ಟವು ನೀವೇನು ಮಾಡುತ್ತೀರಿ, ಮಾಡುವುದಿಲ್ಲ ಎನ್ನುವುದರ ಮೇಲೆ ನಿರ್ಧಾರವಾಗುವುದಿಲ್ಲ. ನೀವು ನಿಮ್ಮೊಳಗೆ ಹೇಗಿದ್ದೀರಿ ಎನ್ನುವುದರ ಮೇಲೆ ನಿಮ್ಮ ಬದುಕಿನ ಗುಣಮಟ್ಟವು ನಿರ್ಧಾರವಾಗುತ್ತದೆ.
ಕ್ಷಮಿಸಿ “ನಿಮ್ಮ ಒಳಗೆ” ಎನ್ನುವ ಪದವನ್ನು ಮತ್ತೆ ಹೇಳಿದೆ! ಕೆಮಿಸ್ಟ್ರಿ ಅನ್ನುವುದು ಒಳಗಿಲ್ಲ, ಅದು ಇನ್ನೂ ನಿಮ್ಮ ಹೊರಗೆಯೇ ಇದೆ. ನಿಮಗೆ ಒಳ್ಳೆಯ ರಸಾಯನ ಮಾಡುವುದು ತಿಳಿದಿದ್ದಲ್ಲಿ, ಸಂತೋಷವಾಗಿರುವುದು ಒಂದು ಸಮಸ್ಯೆಯಾಗಿರುವುದಿಲ್ಲ, ಅದೊಂದು ಸಹಜವಾದ ಪರಿಣಾಮ. ನಾವು ನಿಮಗೆ ಒಂದು ತಂತ್ರಜ್ಞಾನವನ್ನು ಹೇಳಿಕೊಡಬಹುದು - ಒಂದು ಪ್ರಕ್ರಿಯೆಯನ್ನು ಹೇಳಿಕೊಡುತ್ತೇವೆ, ಇದರಿಂದ ನಿಮ್ಮೊಳಗೆ ಒಳ್ಳೆಯ ರಸಾಯನವನ್ನು ಹೇಗೆ ಮಾಡಿಕೊಳ್ಳುವುದೆಂದು ನಿಮಗೆ ತಿಳಿಯುತ್ತದೆ. ಇದನ್ನೇ ನಾನು “ಇನ್ನರ್ ಇಂಜಿನಿಯರಿಂಗ್” ಎಂದು ಕರೆಯುತ್ತಿರುವುದು. ನೀವು ನಿಮ್ಮ ಕೆಮಿಸ್ಟ್ರಿಯನ್ನು ಯಾವ ರೀತಿಯಲ್ಲಿ ಇಂಜಿನಿಯರ್ ಮಾಡಿಕೊಳ್ಳುವಿರೆಂದರೆ, ಅದು ತನ್ನ ಸಹಜ ಸ್ಥಿತಿಯಲ್ಲಿಯೇ ಆನಂದದಲ್ಲಿರುತ್ತದೆ. ಯಾವುದೋ ಕಾರಣದಿಂದಲ್ಲ. ನೀವು ಯಾರಿಂದಲೋ ಅಥವಾ ಯಾವುದರಿಂದಲೋ ಸಂತೋಷವನ್ನು ಹಿಂಡಿ ತೆಗೆಯುತ್ತೇನೆ ಎಂದು ತಿಳಿದಿದ್ದರೆ, ನೀವು ನಿರಾಶರಾಗುತ್ತೀರಿ. ನಿಮ್ಮೊಳಗೆ ಆನಂದದ ರಸಾಯನ ಇಲ್ಲದಿದ್ದರೆ, ಇವ್ಯಾವುವೂ ಸಹ ಕೆಲಸ ಮಾಡುವುದಿಲ್ಲ.
ಸಂಪಾದಕರ ಟಿಪ್ಪಣಿ: ನೀವು ಯಾವುದಾದರೂ ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವಾ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.