ಯೋಗದ ವಿಧಗಳು: ನಾಲ್ಕು ಅವಶ್ಯಕ ಪಥಗಳ ಅರ್ಥ
ಯೋಗಿ ಹಾಗೂ ದಾರ್ಶನಿಕರಾದ ಸದ್ಗುರುಗಳು, ಯೋಗದ ವಿವಿಧ ರೀತಿಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರ ಕೊಡುತ್ತ, ನೀವು ಮಾಡುವ ಯಾವುದೇ ಯೋಗವು, ಈ ನಾಲ್ಕು ಅವಶ್ಯಕ ಪಥಗಳಡಿಯಲ್ಲಿ ಬರುತ್ತದೆಯೆಂದು ವಿವರಿಸುತ್ತಾರೆ.
ಪ್ರಶ್ನೆ: ಸದ್ಗುರುಗಳೆ, ಯೋಗದ ಹಲವು ವಿಧಗಳಿವೆ. ಯಾವ ರೀತಿಯ ಯೋಗವು ನನಗೆ ಉತ್ತಮ ಎಂದು ನನಗೆ ಹೇಗೆ ಗೊತ್ತಾಗುತ್ತದೆ?
ಸದ್ಗುರು: ಸದ್ಯಕ್ಕೆ, ನಿಮ್ಮ ಅನುಭವವಿರುವುದು ನಿಮ್ಮ ದೇಹ, ಮನಸ್ಸು ಮತ್ತು ನಿಮ್ಮ ಭಾವನೆಗಳು ಮಾತ್ರ. ಅವುಗಳ ಬಗ್ಗೆ ನಿಮಗೆ ಸ್ವಲ್ಪ ತಿಳುವಳಿಕೆಯಿದೆ. ಇವು ಮೂರು ನಡೆಯುತ್ತಿರುವ ರೀತಿಯಲ್ಲಿ ನಡೆಯುವುದಕ್ಕೆ ಯಾವುದೋ ಒಂದು ತರಹದ ಶಕ್ತಿ ಇರಬೇಕು ಎಂದು ನೀವು ತೀರ್ಮಾನಕ್ಕೆ ಬಂದಿರಬಹುದು. ಶಕ್ತಿಯಿಲ್ಲದೆ, ಇದ್ಯಾವುದೂ ಸಂಭವಿಸುವುದಿಲ್ಲ. ನಿಮ್ಮಲ್ಲಿ ಕೆಲವರು, ಇದನ್ನು ಅನುಭವಿಸಿರಬಹುದು. ಇನ್ನಿತರರು ಇವು ಮೂರು ತಮ್ಮ ಕಾರ್ಯವನ್ನು ಮಾಡಲು, ಇದರ ಹಿಂದೆ ಯಾವುದೋ ಒಂದು ಶಕ್ತಿಯಿರಬೇಕೆಂದು ಸುಲಭವಾಗಿ ತೀರ್ಮಾನಿಸಿರಬಹುದು. ಉದಾಹರಣೆಗೆ, ನಿಮಗೆ ಗೊತ್ತಿರುವ ಹಾಗೆ, ಮೈಕ್ರೊಫೋನ್ (ಮೈಕ್) ವ್ಯಕ್ತಿಯ ಧ್ವನಿ ವರ್ಧಿಸುತ್ತದೆ. ನಿಮಗೆ ಮೈಕ್ರೊಫೋನ್ ಬಗ್ಗೆ ಏನೂ ತಿಳಿದಿಲ್ಲದ್ದಿದ್ದರೂ, ಅದು ಕೆಲಸ ಮಾಡಲು ಯಾವುದೋ ಒಂದು ಶಕ್ತಿ ಬೇಕೆಂದು ನಿಮಗೆ ಗೊತ್ತಾಗಿರುತ್ತದೆ.
೪ ಅಂಶಗಳಿಗಾಗಿ ಯೋಗದ ೪ ವಿಧಗಳು
ನಿಮ್ಮ ಜೀವನದಲ್ಲಿರುವ ಕೇವಲ ಈ ನಾಲ್ಕು ಸತ್ಯತೆಗಳಿವೆ: ದೇಹ, ಮನಸ್ಸು, ಭಾವನೆ ಮತ್ತು ಪ್ರಾಣಶಕ್ತಿ. ನಿಮ್ಮ ಬದುಕಿನಲ್ಲಿ ಏನಾದರೂ ಮಾಡಬೇಕೆಂದು ನೀವು ಇಚ್ಛಿಸಿದರೆ ಅದು ಈ ಮೇಲಿನ ನಾಲ್ಕು ಹಂತಗಳಲ್ಲೇ ಇರಬೇಕು - ನಿಮ್ಮ ದೇಹ, ಮನಸ್ಸು, ಭಾವನೆ ಮತ್ತು ಜೀವ ಶಕ್ತಿಗಳಿಂದ ಮಾತ್ರ ಮಾಡಬಹುದು. ನಿಮ್ಮ ಭಾವನೆಗಳನ್ನು ಉಪಯೋಗಿಸಿ, ನಿಮ್ಮ ಪರಮ ಸತ್ಯವನ್ನು ತಲುಪಲು ಪ್ರಯತ್ನಿಸಿದರೆ, ಅದನ್ನು ಭಕ್ತಿ ಯೋಗವೆಂದು ಕರೆಯುತ್ತೇವೆ, ಇದು ಭಕ್ತಿಯ ಮಾರ್ಗವಾಗಿದೆ. ನಿಮ್ಮ ಬುದ್ಧಿ ಶಕ್ತಿಯನ್ನು ಬಳಸಿ ನಿಮ್ಮ ಪರಮ ಸತ್ಯವನ್ನು ತಲುಪಲು ಪ್ರಯತ್ನಿಸಿದರೆ, ಅದನ್ನು ಜ್ಞಾನ ಯೋಗವೆಂದು ಕರೆಯುತ್ತೇವೆ. ಇದು ಜ್ಞಾನದ ಮಾರ್ಗವಾಗಿದೆ. ನಿಮ್ಮ ಪರಮ ಸತ್ಯವನ್ನು ತಲುಪಲು ನಿಮ್ಮ ದೇಹ ಅಥವಾ ಭೌತಿಕ ಕ್ರಿಯೆಯನ್ನು ಉಪಯೋಗಿಸಿದರೆ, ಅದನ್ನು ಕರ್ಮ ಯೋಗವೆಂದು ಕರೆಯುತ್ತೇವೆ. ಇದು ಕರ್ಮದ ಮಾರ್ಗ. ನಿಮ್ಮ ಶಕ್ತಿಯನ್ನು ರೂಪಾಂತರಗೊಳಿಸಿ ನಿಮ್ಮ ಪರಮ ಸತ್ಯವನ್ನು ತಲುಪಲು ಪ್ರಯತ್ನಿಸಿದರೆ, ಇದನ್ನು ಕ್ರಿಯಾ ಯೋಗವೆಂದು ಕರೆಯುತ್ತೇವೆ, ಇದರರ್ಥ, ಆಂತರಿಕ ಕ್ರಿಯೆಯ ಮಾರ್ಗವೆಂದು.
ಈ ನಾಲ್ಕರಿಂದ ಮಾತ್ರವೇ ನೀವು ಎಲ್ಲಿಯಾದರೂ ಹೋಗಲು ಸಾಧ್ಯ: ಕರ್ಮ, ಜ್ಞಾನ, ಭಕ್ತಿ ಅಥವಾ ಕ್ರಿಯೆಯ ಮೂಲಕ - ದೇಹ, ಮನಸ್ಸು, ಭಾವನೆ, ಅಥವಾ ಪ್ರಾಣಶಕ್ತಿಯ ಮೂಲಕ. "ಇಲ್ಲ, ಇಲ್ಲ, ನಾನು ಶ್ರದ್ಧೆಯ ಹಾದಿಯಲ್ಲಿದ್ದೇನೆ, ನಾನು ಬೇರೇನೂ ಮಾಡಬೇಕಾಗಿಲ್ಲ." ಯಾರಿಗಾದರೂ ತಲೆ ಮಾತ್ರ ಇದ್ದು, ಹೃದಯ, ಕೈಗಳು ಮತ್ತು ಪ್ರಾಣಶಕ್ತಿ ಇಲ್ಲದೆ ಇರವುದನ್ನು ನೋಡಿದ್ದೀರ? ಯಾರಿಗಾದರೂ ಬೇರಾವುದು ಇಲ್ಲದೇ, ಹೃದಯ ಮಾತ್ರ ಇದ್ದದ್ದನ್ನು ಕಂಡಿದ್ದೀರ? ಈ ನಾಲ್ಕರ ಸಮ್ಮಿಲನವೇ “ನೀವು”. ವ್ಯಕ್ತಿಯಲ್ಲಿ ಹೃದಯವು ಪ್ರಬಲವಾಗಿರಬಹುದಷ್ಟೆ, ಇನ್ನೊಬ್ಬರಲ್ಲಿ ಬುದ್ಧಿಯು ಪ್ರಬಲವಾಗಿರಬಹುದು, ಮತ್ತೊಬ್ಬರಲ್ಲಿ ಕೈಗಳು ಪ್ರಬಲವಾಗಿರಬಹುದು, ಅದರೆ, ಎಲ್ಲರೂ, ಈ ನಾಲ್ಕರ ಸಮ್ಮಿಲನವೇ. ಆದ್ದರಿಂದ ನಿಮಗೆ ಈ ನಾಲ್ಕರ ಸಮ್ಮಿಲನವು ಬೇಕು. ಅದು ಸರಿಯಾದ ರೀತಿಯಲ್ಲಿ ಸಂಯೋಜಿಸಿದರಷ್ಟೆ, ನಿಮಗಾಗಿ ಅದು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ನಾವು ನಿಮಗಾಗಿ ಒಂದು ರೀತಿಯ ಸಂಯೋಜನೆಯನ್ನು ಹೇಳಿದರೆ, ಅದು ಬೇರೆಯವರಿಗೆ ಕೆಲಸ ಮಾಡದೆ ಇರಬಹುದು. ಅದಕ್ಕಾಗಿಯೇ ಆಧ್ಯಾತ್ಮಿಕ ಹಾದಿಯಲ್ಲಿ, ಒಬ್ಬ ಜೀವಂತ ಗುರುವಿಗೆ ಅಷ್ಟು ಮಹತ್ವ ಕೊಡುವುದು. ಸರಿಯಾದ ರೀತಿಯಲ್ಲಿ ಮಿಶ್ರ ಮಾಡಿಡಬೇಕು, ಇಲ್ಲದಿದ್ದರೆ, ಅದು ನಿಮಗೆ ಉಪಯೋಗವಾಗುವುದಿಲ್ಲ.
ನಾಲ್ಕು ಪಥಗಳು ಸೇರಿದಾಗ
ಒಮ್ಮೆ, ನಾಲ್ವರು ಕಾಡಿನಲ್ಲಿ ನಡೆದು ಹೋಗುತ್ತಿದ್ದರು. ಮೊದಲನೆಯವ ಜ್ಞಾನಯೋಗಿ; ಎರಡನೆಯವ ಭಕ್ತಿ ಯೋಗಿ; ಮೂರನೆಯವ ಕರ್ಮ ಯೋಗಿ; ಕೊನೆಯವ ಕ್ರಿಯಾ ಯೋಗಿ. ಸಾಮಾನ್ಯವಾಗಿ, ಈ ನಾಲ್ವರು ಎಂದೂ ಒಟ್ಟಿಗೆ ಇರಲಾರರು. ಜ್ಞಾನಯೋಗಿಗೆ, ಬೇರೆಲ್ಲ ವಿಧದ ಯೋಗದ ಮೇಲೆ ಅಸಡ್ಡೆ. ಅವನದು ಬುದ್ಧಿಶಕ್ತಿಯ ಯೋಗ. ಸಾಧಾರಣವಾಗಿ, ಬುದ್ಧಿಜೀವಿಯು ಬೇರೆಯವರೆಲ್ಲರ ಕುರಿತು ಅಸಡ್ಡೆಯನ್ನು ಹೊಂದಿರುತ್ತಾನೆ, ವಿಶೇಷತಃ ಭಕ್ತಿ ಮಾರ್ಗದಲ್ಲಿ ಇರುವವರ ಬಗ್ಗೆ – ಯಾರು ಮೇಲೆ ನೋಡಿ ಯಾವಾಗಲೂ ದೇವರನ್ನ ಜಪಿಸುತ್ತ ಇರುವರೋ, ಅವನಿಗೆ ಅಂತವರು ಮೂರ್ಖರ ತರಹ ಕಾಣುವರು.
ಆದರೆ ಭಕ್ತಿ ಯೋಗಿಯ ಒಬ್ಬ ಭಕ್ತ; ಈ ಜ್ಞಾನ, ಕರ್ಮ ಹಾಗೂ ಕ್ರಿಯಾ, ಇವೆಲ್ಲವೂ ಸಮಯವನ್ನು ವ್ಯರ್ಥ ಮಾಡುತ್ತದೆ ಎಂದು ಅವನ ಅನಿಸಿಕೆ. ದೇವರು ಇಲ್ಲಿಯೇ ಇರುವುದನ್ನು ನೋಡದ ಬೇರೆಯವರನ್ನು ಕಂಡು ಕನಿಕರ ಪಡುತ್ತಾನೆ – ದೇವರ ಕೈ ಹಿಡಿದು ನಡಿಯಬೇಕಷ್ಟೆ. ಈ ತಲೆ ಕೆಡಿಸೋ ವೇದಾಂತ, ಮೈಮೂಳೆಯನ್ನು ಬಗ್ಗಿಸೋ ಯೋಗದ ಅಗತ್ಯವಿಲ್ಲ. ದೇವರು ಎಲ್ಲಾ ಕಡೆಯೂ ಇರುವ ಕಾರಣ ಅವನು ಇಲ್ಲಿಯೂ ಇದ್ದಾನೆ ಎಂದು ಅವನ ಎಣಿಕೆ.
ಕರ್ಮ ಯೋಗಿಯೋ, ಕಾಯಕವೇ ಕೈಲಾಸ ಎನ್ನುವವನು. ಖಯಾಲಿ ತತ್ವಗಳನ್ನು ಹೊಂದಿರುವ ಬೇರೆ ಎಲ್ಲ ರೀತಿಯ ಯೋಗಿಗಳು ಅವನ ಪ್ರಕಾರ ಸೋಮಾರಿಗಳು.
ಆದರೆ, ಬೇರೆಯವರೆಲ್ಲರಿಗಿಂತ, ಕ್ರಿಯಾ ಯೋಗಿಗೆ ಬಹಳ ಅಸಡ್ಡೆ –ಎಲ್ಲರನ್ನು ನೋಡಿ ನಗುತ್ತಿರುತ್ತಾನೆ. ಈ ಸಂಪೂರ್ಣ ಅಸ್ತಿತ್ವವು ಒಂದು ಶಕ್ತಿ ಎಂದು ಅವರಿಗೆಲ್ಲ ತಿಳಿದಿಲ್ಲವೆ? ದೇವರಿಗಾದರೂ ಹಾತೊರೆಯಿರಿ, ಬೇರೆ ಇನ್ಯಾವುದಕ್ಕಾದರೂ ಹಾತೊರೆಯಿರಿ, ನಿಮ್ಮ ಶಕ್ತಿಯನ್ನು ರೂಪಾಂತರಿಸದಿದ್ದರೆ, ಏನು ಆಗುವುದಿಲ್ಲ. ಯಾವ ಪರಿವರ್ತನೆಯೂ ನಡೆಯುವುದಿಲ್ಲ ಎಂದು ಅವನ ಎಣಿಕೆ.
ಸಾಮಾನ್ಯವಾಗಿ, ಈ ನಾಲ್ಕು ಜನರು ಹೊಂದಿಕೊಂಡು ಹೋಗಲಾರರು. ಆದರೆ ಕಾಡಿನಲ್ಲಿ ಒಟ್ಟಾಗಿ ನಡೆದುಕೊಂಡು ಬರುತ್ತಿದ್ದಾಗ, ಚಂಡಮಾರುತ ಶುರುವಾಯಿತು. ಅದರ ಅಬ್ಬರ ಜೋರಾಗಿ, ಮಳೆ ಹೊಡೆಯುವುದಕ್ಕೆ ಆರಂಭಿಸಿತು. ಆಶ್ರಯಕ್ಕಾಗಿ ಹುಡುಕುತ್ತ ಅವರುಗಳು ಓಡಲು ಪ್ರಾರಂಭಿಸಿದರು.
ಭಕ್ತಿ ಯೋಗಿ ಹೇಳಿದ, "ಈ ದಿಕ್ಕಿನಲ್ಲಿ ಒಂದು ಪುರಾತನವಾದ ದೇವಾಲಯವಿದೆ, ಅಲ್ಲಿಗೆ ಹೋಗೋಣ" ಎಂದು ಹೇಳಿದರು. ಭಕ್ತನಲ್ಲವೇ? ದೇವಸ್ಥಾನಗಳು ಎಲ್ಲೆಲ್ಲಿ ಇದೆಯೆಂದು ಅವರು ಚೆನ್ನಾಗಿ ತಿಳಿದುಕೊಂಡಿರುತ್ತಾರೆ!
ಅವರೆಲ್ಲರೂ ಆ ದಿಕ್ಕಿನಲ್ಲಿ ಓಡಿದರು; ಪುರಾತನ ದೇವಾಲಯಕ್ಕೆ ಬಂದರು. ಗೋಡೆಗಳು ಬಹಳ ಹಿಂದೆಯೇ ಕುಸಿದುಹೋಗಿದ್ದವು; ಕೇವಲ ಛಾವಣಿ ಮತ್ತು ನಾಲ್ಕು ಕಂಬಗಳು ಮಾತ್ರ ಉಳಿದಿದ್ದವು. ದೇವಸ್ಥಾನದ ಒಳಗೆ ಧಾವಿಸಿದರು; ದೇವರ ಮೇಲಿನ ಪ್ರೀತಿಯಿಂದಲ್ಲ, ಮಳೆಯಿಂದ ತಪ್ಪಿಸಿಕೊಳ್ಳಲು ಮಾತ್ರ.
ಮಧ್ಯಭಾಗದಲ್ಲಿ ದೇವರ ಮೂರ್ತಿ ಇತ್ತು. ಅವರು ಅದರ ಕಡೆಗೆ ಓಡಿದರು. ಮಳೆಯು ಎಲ್ಲ ಕಡೆಯಿಂದಲೂ ಬರುತ್ತಿತ್ತು. ಹೋಗಲು ಬೇರೆ ಯಾವುದೇ ಸ್ಥಳವಿಲ್ಲದ ಕಾರಣ ಅವರುಗಳು ವಿಗ್ರಹದ ಹತ್ತಿರ ಹತ್ತಿರ ಹೋದರು. ಕೊನೆಯಲ್ಲಿ, ಯಾವುದೇ ಪರ್ಯಾಯವಿಲ್ಲದೆ ದೇವರನ್ನು ತಬ್ಬಿಕೊಂಡು ಕುಳಿತರು.
ಯಾವ ಕ್ಷಣದಲ್ಲಿ ಇವರುಗಳು ದೇವರ ಮೂರ್ತಿಯನ್ನು ಅಪ್ಪಿಕೊಂಡರೋ, ಅವರಿಗೆ ಇನ್ನೊಂದು ದೊಡ್ಡ ಅಸ್ತಿತ್ವದ ಇರುವಿಕೆಯ ಅರಿವಾಯಿತು. ತಕ್ಷಣ, ದೇವರು ಪ್ರತ್ಯಕ್ಷನಾದ.
ಅವರೆಲ್ಲರ ಮನಸ್ಸಿನಲ್ಲಿ ಒಂದೇ ಪ್ರಶ್ನೆ ಹುಟ್ಟಿತು: ಈಗೇಕೆ? “ಅನೇಕ ತತ್ವಗಳನ್ನು ಪ್ರತಿಪಾದಿಸಿದ್ದೇವೆ, ಅನೇಕ ಪೂಜೆಗಳನ್ನು ಮಾಡಿದ್ದೇವೆ, ಅನೇಕ ಜನರಿಗೆ ಸೇವೆ ಮಾಡಿದ್ದೇವೆ, ಮೈ ಮುರಿಯುವ ಯೋಗಾಭ್ಯಾಸವನ್ನು ಮಾಡಿದ್ದೇವೆ – ಆದರೆ ನೀನು ಪ್ರತ್ಯಕ್ಷನಾಗಲಿಲ್ಲ. ಈಗ ನಾವು ಮಳೆಯನ್ನು ತಪ್ಪಿಸಿಕೊಳ್ಳುತ್ತಿರುವಾಗ ಪ್ರತ್ಯಕ್ಷನಾದೆ, ಯಾಕೆ?”
ದೇವರು ಹೇಳಿದ, “ಕೊನೆಗೂ, ನೀವು ನಾಲ್ಕು ಮೂರ್ಖರು ಒಟ್ಟಿಗೆ ಬಂದರಲ್ಲ!"
ಈ ಆಯಾಮಗಳು ಒಟ್ಟಾಗಿರದಿದ್ದರೆ, ಮನುಷ್ಯನ ವ್ಯವಸ್ಥೆಯು ಒಂದು ದೊಡ್ಡ ಅವ್ಯವಸ್ಥೆಯಾಗುತ್ತದೆ. ಇದೀಗ, ಹೆಚ್ಚಿನ ಜನರಿಗೆ, ಈ ಆಯಾಮಗಳು ವಿವಿಧ ದಿಕ್ಕುಗಳಿಗೆ ತಲೆಮಾಡಿದೆ. ನಿಮ್ಮ ಮನಸ್ಸು ಒಂದು ರೀತಿಯಲ್ಲಿ ಯೋಚಿಸುತ್ತಿದ್ದರೆ, ನಿಮ್ಮ ಭಾವನೆ, ನಿಮ್ಮ ಭೌತಿಕ ದೇಹವು ಮತ್ತೊಂದು ರೀತಿಯಲ್ಲಿ ಯೋಚಿಸುತ್ತಿರುತ್ತದೆ, ಹಾಗೂ ನಿಮ್ಮ ಪ್ರಾಣಶಕ್ತಿಯು ಮಗದೊಂದು ರೀತಿಯಲ್ಲಿ ಯೋಚಿಸುತ್ತಿರುತ್ತದೆ. ಯೋಗ ಎಂದರೆ ಈ ಮೂರೂ ಆಯಾಮಗಳನ್ನು ಸಾಲುಗೂಡಿಸುವ ವಿಜ್ಞಾನ.
ಯೋಗ – ಆಖೈರಾದ ಒಗ್ಗೂಡುವಿಕೆ
ಯೋಗ ಎಂದು ಹೇಳಿದಾಗ, ನಿಮ್ಮಲ್ಲಿ ಹಲವರು ಅದನ್ನು ಮಾಡಲಸಾಧ್ಯವಾದ ದೈಹಿಕ ಭಂಗಿಗಳೆಂದು ಅರ್ಥೈಸುತ್ತಾರೆ. ನಾವು ಮಾತನಾಡುತ್ತಿರುವುದು ಅದರ ಬಗ್ಗೆ ಅಲ್ಲ. ಯೋಗವೆಂದರೆ, ಒಂದು ಉತ್ತಮವಾದ ಸಂಯೋಜನೆಯಷ್ಟೆ. ನೀವು ಯೋಗದ ಸ್ಥಿತಿಯಲ್ಲಿರುವಾಗ, ನಿಮ್ಮ ದೇಹ, ಮನಸ್ಸು,ಪ್ರಾಣಶಕ್ತಿ ಮತ್ತು ಅಸ್ತಿತ್ವವು ಸಂಪೂರ್ಣವಾಗಿ ಸಾಮರಸ್ಯದಲ್ಲಿರುತ್ತವೆ.
ನಿಮ್ಮ ದೇಹ, ಮನಸ್ಸು, ಶಾಂತವಾದ ಸ್ಥಿತಿಯಲ್ಲಿದ್ದು ಹಾಗೂ ಒಂದು ಮಟ್ಟದ ಆನಂದವನ್ನು ಹೊಂದಿದ್ದಾಗ, ನಿಮ್ಮನ್ನು ಪೀಡಿಸುವ ಅನೇಕ ಕಾಯಿಲೆಗಳಿಂದ ಮುಕ್ತರಾಗಬಹುದು. ತಲೆ ನೋಯುತ್ತಿದ್ದಾಗ, ನೀವು office ಗೆ ಹೋದಿರಿ ಎನ್ನೊಣ. ತಲೆ ನೋವು ಅಂತ ದೊಡ್ಡ ಕಾಯಿಲೆಯೇನಲ್ಲ, ಆದರೆ ಕೆಲಸ ಮಾಡುವ ಉತ್ಸಾಹ ಹಾಗೂ ಸಾಮರ್ಥ್ಯವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ಆದರೆ ಯೋಗಾಭ್ಯಾಸದೊಂದಿಗೆ, ನಿಮ್ಮ ದೇಹ ಮತ್ತು ಮನಸ್ಸನ್ನು ಉಚ್ಛತಮ ಮಟ್ಟದಲ್ಲಿರಿಸಲು ಸಾಧ್ಯ.
"ಯೋಗ" ಎಂಬ ಪದದ (ಅಕ್ಷರಶಃ) ಅರ್ಥ "ಒಗ್ಗೂಡುವಿಕೆ” ಎಂದು. ಎಲ್ಲವೂ ಒಂದೇ ಎಂದು ನಿಮ್ಮ ಅರಿವಿನಲ್ಲಿ ಅನುಭವವಾದಾಗ, ನೀವು ಯೋಗದಲ್ಲಿರುವಿರಿ. ಅಂತಹ ಒಗ್ಗೂಡುವಿಕೆಯನ್ನು ತಲುಪಲು ಹಲವಾರು ಮಾರ್ಗಗಳಿವೆ. ಉದಾಹರಣೆಗೆ, ಹಠ ಯೋಗ. ಹಠ ಯೋಗದಲ್ಲಿ ನೀವು ದೇಹದಿಂದ ಆರಂಭಿಸುವಿರಿ. ದೇಹವು ತನ್ನದೇ ಆದ ವರ್ತನೆ, ಪ್ರತಿಷ್ಠೆ, ಹಾಗೂ ಪ್ರಕೃತಿಯನ್ನು ಹೊಂದಿದೆ. ನಿಮ್ಮ ದೇಹವು ತನ್ನದೇ ಆದ ಅಹಂಕಾರವನ್ನು ಹೊಂದಿದೆ ಎಂದರೆ ಒಪ್ಪುತ್ತೀರಾ? "ನಾಳೆ, ನಾನು ಬೆಳಿಗ್ಗೆ ಐದು ಗಂಟೆಗೆ ಎದ್ದು, ಕಡಲ ತೀರದಲ್ಲಿ ನಡೆಯಬೇಕು” ಎಂದು ಎಣಿಸಿ, alarm-ಅನ್ನು ಇಡುವಿರಿ. ಬೆಳಿಗ್ಗೆಯಾದಾಗ ಏಳಲು ಪ್ರಯತ್ನಿಸಿದರೆ, ನಿಮ್ಮ ದೇಹವು “ತೆಪ್ಪಗೆ ಮಲ್ಕೋ” ಎಂದು ಹೇಳುತ್ತದೆ.
ಆದ್ದರಿಂದ ನಾವು ದೇಹದೊಂದಿಗೆ ಪ್ರಾರಂಭಿಸುತ್ತೇವೆ. ದೇಹವನ್ನು ಉಪಯೋಗಿಸಿ ಕೆಲಸ ಮಾಡುವ, ದೇಹವನ್ನು ಕಟ್ಟುನಿಟ್ಟಾಗಿಸುವ, ಶುದ್ಧೀಕರಿಸುವ ಹಾಗೂ ದೇಹವನ್ನು ಉನ್ನತ ಮಟ್ಟದ ಚೈತನ್ಯಕ್ಕೆ ಸಿದ್ಧಗೊಳಿಸುವ ವಿಧಾನವೇ, ಹಠ ಯೋಗದ ವಿಧಾನ. ನಾವೆಲ್ಲರೂ ಜೀವಂತವಾಗಿರುವವರು, ನಾವೆಲ್ಲರೂ ಮನುಷ್ಯರೇ. ಆದರೆ, ನಮ್ಮ ಪ್ರಾಣಶಕ್ತಿಯು ಒಂದೆ ತರಹ ಇಲ್ಲದ ಕಾರಣ, ನಾವುಗಳು ಜೀವನವನ್ನು ಒಂದೆ ತೀಕ್ಷ್ಣತೆಯೊಂದಿಗೆ ಅನುಭವಿಸುವುದಿಲ್ಲ - ಜನರು ವಿವಿಧ ಮಟ್ಟದ ತೀಕ್ಷ್ಣತೆಯೊಂದಿಗೆ ಅನುಭವಿಸುತ್ತಾರೆ.
ಉದಾಹರಣೆಗೆ, ಮರ. ಅದೊಂದು ಮರವಷ್ಟೆ. ಹೆಚ್ಚಿನ ಜನರು ಅದನ್ನು ನೋಡುವುದು ಕೂಡ ಇಲ್ಲ. ಕೆಲವರು, ಈ ಮರವನ್ನು ಹೆಚ್ಚು ಸೂಕ್ಷ್ಮವಾಗಿ ನೋಡುತ್ತಾರೆ. ಒಬ್ಬ ಕಲಾವಿದ ಪ್ರತಿಯೊಂದು ಬಣ್ಣದ ಸಾಂದ್ರತೆಯನ್ನು ನೋಡುತ್ತಾನೆ. ಇನ್ನು ಕೆಲವರು, ಮರವನ್ನಷ್ಟೆ ನೋಡದೆ, ಅದರಲ್ಲಿ ದೈವತ್ವವನ್ನು ಕಾಣುತ್ತಾರೆ. ಜೀವನವನ್ನು ಅನುಭವಿಸುವ ತೀವ್ರತೆಯ ಮಟ್ಟ ಎಲ್ಲರದೂ ಒಂದೇ ಅಲ್ಲದ ಕಾರಣ, ಎಲ್ಲರು ಮರವನ್ನು ಒಂದೇ ರೀತಿಯಲ್ಲಿ ನೋಡುವುದಿಲ್ಲ.
ತಿಳಿದಿರುವ ವಿಷಯಗಳಿಂದ, ಅಜ್ಞಾತ ವಿಷಯಗಳೆಡೆ ಕೊಂಡೊಯ್ಯುವುದೇ ಯೋಗದ ಪ್ರಕ್ರಿಯೆ. ಯೋಗ ವಿಜ್ಞಾನವೂ ಕೂಡ ಬಹುತೇಕ ಭೌತಿಕ ವಿಜ್ಞಾನವಂತೆಯೇ ಮಾಡಿರುವೆವು. ನೀವು ಎರಡು ಭಾಗ ಜಲಜನಕ (hydrogen) ಹಾಗೂ ಒಂದು ಭಾಗ ಆಮ್ಲಜನಕವನ್ನು ಬೆರೆಸಿದರೆ, ನಿಮಗೆ ಸಿಗುವುದು ನೀರು. ಒಬ್ಬ ಮಹಾನ್ ವಿಜ್ಞಾನಿಯು ಅವೆರಡನ್ನು ಒಟ್ಟಿಗೆ ಸೇರಿಸಿದಾಗಲೂ ಅದು ನೀರೇ, ಒಬ್ಬ ಮೂರ್ಖನು ಒಟ್ಟಿಗೆ ಸೇರಿಸಿದಾಗಲೂ ಉತ್ಪನ್ನವಾಗುವುದು ನೀರೇ. ಅಂತೆಯೇ, ಯೋಗದಲ್ಲಿ ಕೂಡ, ಮಹಾನ್ ಯೋಗಿಯೋ, ಅಜ್ಞಾನಿಯೋ, ಅದು ಪ್ರಸ್ತುತವಾಗಿರುವುದಿಲ್ಲ. ಅವರು ಅಭ್ಯಾಸ ಹಾಗೂ ಸಾಧನೆಗಳನ್ನು ಸರಿಯಾಗಿ ಮಾಡಿದರೆ, ಫಲಿತಾಂಶವನ್ನು ಕಾಣಬಹುದು.
ಯೋಗದಲ್ಲಿ ಈ ವ್ಯವಸ್ಥೆಗಳನ್ನು ಮೊದಲಿನಿಂದಲೆ ಗುರುತಿಸಲಾಗಿದೆ. ಆರಂಭಿಸಲು, ನೀವು ದೇಹದೊಂದಿಗೆ ಕೆಲಸ ಮಾಡಿ, ನಂತರ ಉಸಿರಾಟ, ಅದರ ನಂತರ ಮನಸ್ಸು, ತದನಂತರ ಆಂತರಿಕ ಮನಸ್ಸು- ಈ ರೀತಿಯಲ್ಲಿ ಅನೇಕ ಹಂತಗಳನ್ನು ರಚಿಸಲಾಗಿದೆ. ಅವು ಕೇವಲ ವಿಭಿನ್ನ ಅಂಶಗಳಾಗಿವೆಯಷ್ಟೆ. ಅವಗಳು ವಿವಿಧ ರೀತಿಯ ಯೋಗಗಳೇನಲ್ಲ. ವಾಸ್ತವವಾಗಿ, ನಾವು ಎಲ್ಲವನ್ನೂ ಒಂದೇ ಬಾರಿಗೆ ಪರಿಹರಿಸುತ್ತೇವೆ. ಒಂದು ಸಮತೋಲಿತ ರೀತಿಯಲ್ಲಿ ಎಲ್ಲವನ್ನೂ ಒಂದು ಘಟಕವಾಗಿ (ಭಾಗವಾಗಿ), ಏಕಕಾಲದಲ್ಲಿ ನಿಭಾಯಿಸುವುದು ಮುಖ್ಯವಾಗಿದೆ. ಆದ್ದರಿಂದ, ಅಂತಹ ಯಾವುದೇ ವಿಭಾಗಗಳಿಲ್ಲ. ಯೋಗವು ಇವುಗಳ ಒಗ್ಗೂಡಿಕೆಯಾಗಿದೆ.
ಸಂಪಾದಕರ ಟಿಪ್ಪಣಿ: "Mystic’s Musings" ತಂತ್ರ, ಚಕ್ರ ಮತ್ತು ಕುಂಡಲಿನಿಯ ಕುರಿತಾದ ಸದ್ಗುರು ಅವರ ಹೆಚ್ಚಿನ ಒಳನೋಟಗಳನ್ನು ಒಳಗೊಂಡಿದೆ. ಉಚಿತ ನಮೂನೆಯನ್ನು ಓದಿ (pdf ಪ್ರತಿ) ಅಥವಾ E-book ಖರೀದಿಸಿ.