ಯೋಗದಲ್ಲಿ ಅನೇಕ "ನಿಯಮಗಳು" ಏಕೆ?
"ಯೋಗಾಭ್ಯಾಸದಲ್ಲಿ ಬಹಳಷ್ಟು ನಿಯಮಗಳನ್ನು ಅನುಸರಿಸುವ ಅಗತ್ಯವಿದೆಯೇ," ಎಂಬ ಪ್ರಶ್ನೆಗೆ ಸದ್ಗುರುಗಳು, "ಯೋಗ ಎಂಬುದು ನಿಯಮಗಳ ಬಗ್ಗೆ ಅಲ್ಲ, ಬದಲಾಗಿ ಮಾನವ ದೇಹದ ವ್ಯವಸ್ಥೆ(ಜ್ಯಾಮಿತಿ)ಯನ್ನು ಅರ್ಥಮಾಡಿಕೊಳ್ಳುವ ಬಗ್ಗೆ" ಎನ್ನುತ್ತಾರೆ.
ಹೊಸದಾಗಿ ಅಭ್ಯಾಸ ಮಾಡುವವರಿಗೆ, ಯೋಗದ ಜೀವನಶೈಲಿಯು ಅನೇಕ ಹೊಸ ನಿಯಮಗಳ ಜೊತೆ ಬಂದಂತೆ ಅನಿಸಿದರೂ, ಮಾನವ ದೇಹದ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವ ಬಗೆಗಳು ಮಾನವನಿಂದ ನಿರ್ಮಿಸಲಾದ ನಿಯಮಗಳಲ್ಲ, ಬದಲಾಗಿ ಜೀವನವನ್ನು ಕನಿಷ್ಠ ಪ್ರಮಾಣದ ಘರ್ಷಣೆಯೊಂದಿಗೆ ನಡೆಸುವ ವಿಧಾನವಾಗಿದೆ ಎಂದು ಸದ್ಗುರುಗಳು ವಿವರಿಸುತ್ತಾರೆ.
ಪ್ರಶ್ನೆ: ನಾನು ಹಠ ಯೋಗ ಶಿಕ್ಷಕರ ತರಬೇತಿಯಲ್ಲಿದ್ದೇನೆ. ಇಲ್ಲಿ, ಹೇಗೆ ಮತ್ತು ಏನನ್ನು ತಿನ್ನಬೇಕು, ಹೇಗೆ ಉಸಿರಾಡಬೇಕು, ಸರಿಯಾಗಿ ಕುಳಿತುಕೊಳ್ಳುವುದು ಹೇಗೆ ಎಂಬುದನ್ನು ಒಳಗೊಂಡಂತೆ ಪ್ರತಿಯೊಂದು ಅಂಶವನ್ನೂ ನಾವು ಅತ್ಯಂತ ವಿವರವಾಗಿ ಗಮನಿಸುತ್ತೇವೆ. ಈ ಹೊಸ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಲು ಪ್ರಯತ್ನಿಸುವ ಮೂಲಕ ನಮ್ಮನ್ನು ಸಂತೋಷವಾಗಿಟ್ಟುಕೊಳ್ಳುವುದು ಅಥವಾ ಶೋಚನೀಯರನ್ನಾಗಿ ಮಾಡಿಕೊಳ್ಳುವುದು, ಇವೆರಡರ ನಡುವಿನ ವ್ಯತ್ಯಾಸವನ್ನು ಹೇಗೆ ಕಾಣುವುದು?
ಸದ್ಗುರು: ಮೊದಲನೆಯದಾಗಿ, ಇವು ಯಾವುದೂ ಹೊಸ ನಿಯಮ ಅಥವಾ ನಿಬಂಧನೆಗಳಲ್ಲ. ಖಂಡಿತವಾಗಿಯೂ ಇವನ್ನು ನಿಬಂಧನೆಗಳನ್ನಾಗಿ ನೋಡುವಂತಿಲ್ಲ. ಸ್ವಲ್ಪ ಮಟ್ಟಿಗೆ ಅವನ್ನು ನಿಯಮಗಳೆಂದು ಕರೆಯಬಹುದು. ಭಾರತೀಯ ಸಂಸ್ಕೃತಿಯಲ್ಲಿ, ಎಂದಿಗೂ ಬೋಧನೆಗಳು ಇರಲಿಲ್ಲ, ಮತ್ತು ಇಲ್ಲಿ ದೇವರು ಯಾವುದೇ ಆಜ್ಞೆಗಳನ್ನು ವಿಧಿಸಿಲ್ಲ. ಏಕೆಂದರೆ, ಭಾರತೀಯರು ಬಹಳ ವಾದಿಸುತ್ತಾರೆ. ಎಲ್ಲದಕ್ಕೂ ಹತ್ತುಹಲವು ಪ್ರಶ್ನೆಗಳನ್ನು ಕೇಳುತ್ತಾರೆ. ನಾವು ಕೈಲಾಸ ಯಾತ್ರೆಯಲ್ಲಿದ್ದಾಗ, ಯಾತ್ರೆಯಲ್ಲಿ ಪಾಲ್ಗೊಂಡ ಭಾರತೀಯನೊಬ್ಬ ಕಠಿಣ ಪ್ರಶ್ನೆಗಳನ್ನು ಕೇಳುತ್ತಿದ್ದ. ಅದಕ್ಕೆ ನಾನು, “ನೋಡಿ, ಇದು ಭಾರತೀಯ ಸಮಸ್ಯೆ. ಹೆಚ್ಚು ಹೆಚ್ಚು ಕಠಿಣವಾದ ಪ್ರಶ್ನೆಗಳೊಂದಿಗೆ ಹೇಗೆ ಬರಬೇಕೆಂದು ನೀವು ಯೋಚಿಸುತ್ತಿರುತ್ತೀರಿ” ಎಂದೆ. ನಾನಿನ್ನೂ ಮಾತನಾಡುತ್ತಿರುವಾಗಲೇ ಇನ್ನೊಬ್ಬ ವಿದೇಶೀ ಮಹಿಳೆ ಅದಕ್ಕೆ ಸಹಮತ ವ್ಯಕ್ತಪಡಿಸಿ, “ಹೌದು! ನಾನು ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡುತ್ತೇನೆ. ಅಲ್ಲಿಯೂ ಭಾರತೀಯರು ಮಾತ್ರ ಏಕೆ ಎಲ್ಲದಕ್ಕೂ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ನನಗೆ ಯಾವಾಗಲೂ ಆಶ್ಚರ್ಯವಾಗುತ್ತದೆ” ಎಂದರು. ಎಲ್ಲವನ್ನೂ ಪ್ರಶ್ನಿಸುವ ದೀರ್ಘ ಸಂಪ್ರದಾಯ ನಮ್ಮಲ್ಲಿದೆ.
ದೇವರು ಬೇರೆಲ್ಲಾ ಸ್ಥಳಗಳಿಗೆ ತನ್ನ ದೂತರನ್ನು ಅಥವಾ ತನ್ನ ಮಗನನ್ನೂ ಕಳುಹಿಸಿದ. ಇದರ ಕಾರಣ, ಜನರು ತಮ್ಮ ನಿಯಮಗಳನ್ನು ದೇವರೇ ಕೊಟ್ಟಿದ್ದಾನೆಂದು ವಾದಿಸಬಹುದಿತ್ತು ಮತ್ತು ಅದನ್ನು ಮರುಪ್ರಶ್ನಿಸಲು ಯಾರಿಗೂ ಧೈರ್ಯವಿರಲಿಲ್ಲ. ಆದರೆ, ಇಲ್ಲಿಗೆ ಮಾತ್ರ ದೇವರು ತಾನೇ ಬಂದ ಮತ್ತು ಇಲ್ಲಿ ಯಾರೊಂದಿಗೆ ಮಾತನಾಡಬೇಕೆಂಬುದನ್ನೂ ಅವನು ಎಚ್ಚರಿಕೆಯಿಂದ ಆಯ್ಕೆ ಮಾಡಿದ. ಅದರ ಹೊರತಾಗಿಯೂ, ಜನರಲ್ಲಿ ಅಂತ್ಯವಿಲ್ಲದ ಪ್ರಶ್ನೆಗಳು ಇದ್ದವು. ಅರ್ಜುನನು ಕೃಷ್ಣನನ್ನು ಎಷ್ಟು ಪ್ರಶ್ನೆಗಳನ್ನು ಕೇಳಿದನೆಂದು ನಿಮಗೇ ತಿಳಿದಿದೆ! ಅರ್ಜುನನಿಗೆ ಆಜ್ಞಾಪಿಸಲು ಕೃಷ್ಣನಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ, ಅರ್ಜುನನಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಲೇ ಇದ್ದರೂ, ಅರ್ಜುನನು ಅನೇಕ ಪ್ರಶ್ನೆಗಳಿಂದ ತುಂಬಿದ್ದನು.
ಭಾರತೀಯ ಸಂಸ್ಕೃತಿಯಲ್ಲಿ, ಯಾವುದು ಜೀವನವನ್ನು "ನಡೆಸು"ತ್ತದೆಯೋ ಅದನ್ನು ಧರ್ಮ ಎಂದು ನಾವು ಉಲ್ಲೇಖಿಸುತ್ತೇವೆ. ಗೌತಮ ಬುದ್ಧ ಇದನ್ನು "ಧಮ್ಮ" ಎಂದು ಕರೆದ. ದುರದೃಷ್ಟವಶಾತ್, ಇಂದು ಜನರು ಸಾಮಾನ್ಯವಾಗಿ ಧರ್ಮವನ್ನು ಜಾತಿ ಅಥವಾ ಪಂಗಡ ಎಂದು ತಪ್ಪಾಗಿ ಅರ್ಥೈಸುತ್ತಾರೆ, ಆದರೆ ಧರ್ಮ ಎಂದರೆ ನಿಯಮ – ಅದು ಬೋಧನೆಯೋ, ತತ್ವಶಾಸ್ತ್ರವೋ, ನಂಬಿಕೆ ವ್ಯವಸ್ಥೆಯೋ¸ ಜಾತಿ ಅಥವಾ ಪಂಗಡವೋ ಅಲ್ಲ.
ಅಸ್ತಿತ್ವದ ನಿಯಮಗಳು
ಸಮಾಜದ ಮತ್ತು ಪ್ರಪಂಚದ ವಿವಿಧ ಅಂಶಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಾನವ ನಿರ್ಮಿತ ನಿಯಮ ಅಥವಾ ಕಾನೂನುಗಳಿವೆ. ಇದರಿಂದಲೇ ಸಾಮಾಜಿಕ ವ್ಯವಸ್ಥೆ ತಕ್ಕ ಮಟ್ಟಿಗೆ ಸರಾಗವಾಗಿ ಕಾರ್ಯನಿರ್ವಹಿಸುತ್ತದೆ. ಉದಾಹರಣೆಗೆ, ಭಾರತದಲ್ಲಿ, ನೀವು ರಸ್ತೆಯ ಎಡಭಾಗದಲ್ಲಿ ವಾಹನ ಚಲಾಯಿಸಬೇಕು. ಇದೇನು ಪರಮ ಸತ್ಯವಲ್ಲ, ಆದರೆ ಸಂಚಾರ ಸುಗಮವಾಗಿ ನಡೆಯಲು ಮಾಡಿಕೊಂಡ ಒಡಂಬಡಿಕೆ ಮತ್ತು ವಾಹನಗಳನ್ನು ಅದಕ್ಕೆ ಪೂರಕವಾಗಿ ನಿರ್ಮಿಸಲಾಗಿದೆ. ಅಂತೆಯೇ, ಸಮಾಜವನ್ನು ನಿಯಂತ್ರಿಸುವ ಅನೇಕ ಕಾನೂನುಗಳು ಮತ್ತು ವ್ಯವಸ್ಥೆಗಳಿವೆ, ಇದರಿಂದ ನಾವು ಪರಸ್ಪರ ಘರ್ಷಣೆಗೊಳಗಾಗುವುದಿಲ್ಲ. ಆದರೆ ಸಮಾಜ ಮತ್ತು ಮಾನವ ನಿರ್ಮಿತ ಕಾನೂನುಗಳು ಬರುವ ಮೊದಲು ಕೂಡ ಜೀವನ ಸುಗಮವಾಗಿ ನಡೆಯುತ್ತಿತ್ತು ಮತ್ತು ವಿಕಸನಗೊಳ್ಳುತ್ತಿತ್ತು. ಹಾಗೆ ನಡೆಯಬೇಕಿದ್ದರೆ, ಅದನ್ನು "ನಡೆ"ಸುವ ಕೆಲವು ಮೂಲಭೂತ ನಿಯಮಗಳು ಇದ್ದಿರಲೇಬೇಕು.
ಒಂದು ಉದಾಹರಣೆ ಕೊಡುವುದಾದರೆ, ನೀವು ಕಾಡಿಗೆ ಹೋದರೆ, ಅಲ್ಲಿನ ಕಾನೂನು ಅಥವಾ ನಿಯಮಗಳನ್ನು ತಿಳಿಯುವುದು ಸಾಧ್ಯವಾಗದಿರಬಹುದು. ಆದರೂ, ಕಾಡು ಲಕ್ಷಾಂತರ ವರ್ಷಗಳಿಂದ ಅಸ್ತಿತ್ವದಲ್ಲಿದೆ. ಕಾಡಿನ ನಾಶವಾಗದೆ, ಅಲ್ಲಿನ ಜೀವಸಂತತಿಗಳ ನಾಶವಾಗದೆ ದೀರ್ಘ ಕಾಲ ಉಳಿಯಲು, ಅದನ್ನು ನಿಯಂತ್ರಿಸುವ ಕೆಲವು ಕಾನೂನು ಅಥವಾ ನಿಯಮಗಳು ಇರಲೇಬೇಕು. ಈ ಸಂಸ್ಕೃತಿಯಲ್ಲಿ, ಬ್ರಹ್ಮಾಂಡ, ನಮ್ಮ ಆಂತರಿಕ ಸ್ವಭಾವ ಮತ್ತು ಸೃಷ್ಟಿಯ ಪ್ರಕ್ರಿಯೆಯನ್ನು "ನಡೆ"ಸುವ ಈ ನಿಯಮಗಳು ಯಾವುವು ಎಂಬುದರ ಬಗ್ಗೆ ಜನರು ತೀವ್ರ ಗಮನ ಹರಿಸುತ್ತಾ ಬಂದಿದ್ದಾರೆ. ಜನರು ಇದನ್ನು ಕೇವಲ ಕಲ್ಪನೆಯಿಂದಲೋ ಅಥವಾ ನಂಬಿಕೆಯಿಂದಲೋ ಅಲ್ಲದೆ, ಜೀವನದ ವಿವಿಧ ಆಯಾಮಗಳನ್ನು ಸಂಪೂರ್ಣವಾಗಿ ಗಮನಿಸುವುದರ ಮೂಲಕ ಕಂಡುಕೊಂಡಿದ್ದಾರೆ.
ಹೇಗೆ ಕಳಿತುಕೊಳ್ಳಬೇಕು ಎಂಬುದು ನಾನು ಕಂಡುಹಿಡಿದ ವಿಷಯವಲ್ಲ. ಮಾನವ ದೇಹವು ಒಂದು ನಿರ್ದಿಷ್ಟ ರೀತಿಯಲ್ಲಿ ರಚಿಸಲ್ಪಟ್ಟಿದೆ. ಧ್ಯಾನಲಿಂಗದ ಮುಂದೆ ಇರುವ "ನಂದಿ" ಕುಳಿತಿರುವ ರೀತಿ ಒಂದು ಎತ್ತಿಗೆ ಸರಿಯಾದ ರೀತಿ. ಆದರೆ ನೀವಿಲ್ಲಿ ಮನುಷ್ಯರಾಗಿ ಬಂದಿದ್ದೀರ, ಆದ್ದರಿಂದ ನಿಮ್ಮ ದೇಹದ ಜ್ಯಾಮಿತಿ ಅಥವಾ ರಚನೆ ವಿಭಿನ್ನವಾಗಿರುತ್ತದೆ. ಜೀವನದ ಎಲ್ಲಾ ಭೌತಿಕ ವಸ್ತುಗಳು ಮತ್ತು ಭೌತಿಕ ಅಂಶಗಳು ತನ್ನದೇ ಜ್ಯಾಮಿತೀಯ ಆಧಾರವನ್ನು ಹೊಂದಿವೆ. ಅದು ಮಾನವ ದೇಹವೇ ಆಗಲಿ, ಎತ್ತು ಅಥವಾ ವಸ್ತುವೇ ಆಗಿರಲಿ – ಅದರ ಭೌತಿಕ ಜ್ಯಾಮಿತಿಯನ್ನು ನೀವು ಅರ್ಥಮಾಡಿಕೊಂಡರೆ ಅದನ್ನು ಅತ್ಯುನ್ನತ ರೀತಿಯಲ್ಲಿ ಹೇಗೆ ಬಳಸುವುದು ಎಂದು ನಿಮಗೆ ತಿಳಿಯುತ್ತದೆ.
ಭೂಮಿಯ ಮೇಲಿನ ಪ್ರತಿಯೊಂದು ಜೀವಿಯೂ ತನ್ನ ದೇಹದ ಜ್ಯಾಮಿತಿಯನ್ನು ಮತ್ತು ಅದನ್ನು ಪೂರ್ಣ ಪ್ರಮಾಣದಲ್ಲಿ ಹೇಗೆ ಬಳಸುವುದು ಎಂಬುದನ್ನು ಕಂಡುಕೊಂಡಿವೆ. ಮನುಷ್ಯ ಮಾತ್ರ ಅದನ್ನು ಮಾಡುತ್ತಿಲ್ಲ, ಏಕೆಂದರೆ ಅವರು ತಮ್ಮನ್ನು ಹೊರತುಪಡಿಸಿ ಎಲ್ಲದರ ಬಗ್ಗೆಯೂ ಗಮನ ಹರಿಸುತ್ತಿದ್ದಾರೆ. ಆದ್ದರಿಂದ ಈಶಾ ಹಠ ಯೋಗದಲ್ಲಿನ ಸೂಚನೆಗಳು ಹೊಸ ನಿಯಮಗಳಲ್ಲ. ನಿಮ್ಮ ದೇಹದ ಜ್ಯಾಮಿತಿಗೆ ನೀವು ಗಮನ ನೀಡಿದರೆ, ನಿಮ್ಮ ದೇಹವು ಕನಿಷ್ಠ ಶಕ್ತಿ ಮತ್ತು ಗರಿಷ್ಠ ಪ್ರಭಾವದಿಂದ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ, ಕುಳಿತುಕೊಳ್ಳುವುದು ಮತ್ತು ನಿಲ್ಲುವುದನ್ನೂ ಕೂಡಾ ನೀವೊಂದು ನಿರ್ದಿಷ್ಟ ಬಗೆಯಲ್ಲಿ ಮಾಡುತ್ತೀರಿ. ನಿಮ್ಮ ಭೌತಿಕ ಅಸ್ತಿತ್ವದ ದಕ್ಷತೆ, ನಿಮ್ಮ ಜ್ಯಾಮಿತಿಯ ಬಗ್ಗೆ ಎಷ್ಟು ತಿಳುವಳಿಕೆ ಹೊಂದಿದ್ದೀರಿ ಎಂಬುದರ ಮೇಲೆ ಅವಲಂಬಿಸಿರುತ್ತದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ನೀವು ಸಾಮಾಜಿಕ ಅನುಕರಣೆಯಿಂದ ದೂರವಾಗಿ ಅರಿವಿನ ಹಾದಿಯಲ್ಲಿ ಸಾಗುತ್ತೀರಿ.
ನಾವು ಎಲ್ಲಾ ಪೀಠೋಪಕರಣಗಳನ್ನು ತೆಗೆದುಹಾಕಿದರೆ, ನಿಮ್ಮ ದೇಹದ ಜ್ಯಾಮಿತಿಯನ್ನು ನೀವು ಕಂಡುಕೊಳ್ಳುವಿರಿ. ಆಹಾರದ ವಿಷಯದಲ್ಲಿಯೂ ಅದೇ ಅನ್ವಯಿಸುತ್ತದೆ. ಮಾನವ ವ್ಯವಸ್ಥೆಯನ್ನು ನಿರ್ದಿಷ್ಟ ರೀತಿಯ ಆಹಾರಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಆದರೆ ಬದುಕುಳಿಯುವ ಅನ್ವೇಷಣೆಯಲ್ಲಿ, ಅಥವಾ ಸಾಂಸ್ಕೃತಿಕ ಪ್ರಭಾವದಿಂದಾಗಿ, ಜನರು ಎಲ್ಲಾ ರೀತಿಯ ವಸ್ತುಗಳನ್ನು ಸೇವಿಸಿರಬಹುದು. ಮೂಲತಃ, ಯಾರಾದರೂ ಪ್ರಪಂಚದ ಕೆಲವು ಭಾಗಗಳಲ್ಲಿ ಮಾಂಸವನ್ನು ತಿನ್ನುತ್ತಿದ್ದರೆ, ಅದು ಬದುಕುಳಿಯುವುದಕ್ಕಾಗಿ ಅಷ್ಟೇ, ಆಯ್ಕೆಯಿಂದಲ್ಲ. ಬಹುಶಃ ಅವರು ಆ ಪ್ರದೇಶದಲ್ಲಿ ಏನನ್ನೂ ಬೆಳೆಯಲು ಸಾಧ್ಯವಾಗದ ಕಾರಣ, ಅಥವಾ ಅವರಿಗೆ ವ್ಯವಸಾಯದ ಬಗ್ಗೆ ತಿಳಿದಿರದ ಕಾರಣ ಆ ರೀತಿ ಇದ್ದಿರಬಹುದು. ನಂತರದ ಸಮಯದಲ್ಲಷ್ಟೇ, ಇದು ಒಂದು ಆಯ್ಕೆಯಾಯಿತು, ಅಥವಾ ಅವರ ಸಂಸ್ಕೃತಿಯ ಭಾಗವಾಯಿತು ಎಂದು ಹೇಳಬಹುದು. ಇದು ಬದುಕುಳಿಯುವ ಪ್ರಶ್ನೆಯಾಗಿದ್ದರೆ, ಅದು ಸರಿ. ಇದು ನೈತಿಕ ವಿಷಯದ ಪ್ರಶ್ನೆಯಲ್ಲ. ನೀವು ತಪ್ಪಾದ ಇಂಧನವನ್ನು ವ್ಯವಸ್ಥೆಗೆ ಹಾಕಿದರೆ, ನೀವು ಅದರಿಂದ ದಕ್ಷತೆಯನ್ನು ನಿರೀಕ್ಷಿಸಲಾಗುವುದಿಲ್ಲ.
ಒಂದು ದಕ್ಷ ಜೀವ
ದಕ್ಷತೆ ಎಂದರೆ ಕೇವಲ ಒಂದು ನಿರ್ದಿಷ್ಟ ಕೆಲಸವನ್ನು ಚೆನ್ನಾಗಿ ಮಾಡುವುದು ಎಂದರ್ಥವಲ್ಲ. ಒಮ್ಮೆ ನೀವು ಮನುಷ್ಯರಾಗಿ ಹುಟ್ಟಿದ ಮೇಲೆ, ಈ ಜಗತ್ತಿನಲ್ಲಿ ಅಗತ್ಯವಾದುದ್ದನ್ನು ಮಾಡಲು ಅವಶ್ಯಕವಾದ ಬುದ್ಧಿವಂತಿಕೆಯೊಡನೆ ಬಂದಿದ್ದೀರಿ. ಅದಕ್ಕಿಂದ ಹೆಚ್ಚಾಗಿ, ಮಾನವನಾಗಿರುವ ಸಂಪೂರ್ಣ ಆಳ ಮತ್ತು ಆಯಾಮವನ್ನು ಅನುಭವಿಸುವ ಸಾಧ್ಯತೆಯನ್ನು ಹೊಂದಿದ್ದೀರಿ. ಮಾನವ ಜೀವನವನ್ನು ಫಲಪ್ರದವಾಗಿಸಲು, ವೈವಿಧ್ಯಮಯ ಕೆಲಸಗಳನ್ನು ಮಾಡುವ ಸಾಧ್ಯತೆಯನ್ನು ಬಳಸಿಕೊಳ್ಳಲು, ಎಲ್ಲಕ್ಕಿಂತ ಹಚ್ಚಾಗಿ ನೀವು ಮನುಷ್ಯರಾಗಿರುವ ಪ್ರತಿಯೊಂದು ಆಯಾಮವನ್ನು ಅನುಭವಿಸುವಂತಹ ಸೂಕ್ಷ್ಮತೆಯನ್ನು ತರಲು - ನಿಮ್ಮ ಆಹಾರ ಪದ್ಧತಿ, ನಿಮ್ಮ ಶರೀರ ಭಂಗಿ, ನಿಮ್ಮ ಮನಸ್ಥಿತಿಗಳು ಅನುವು ಮಾಡಿಕೊಡದಿದ್ದರೆ, ಅಂತಹ ಜೀವವನ್ನು ನಾನು ಅಸಮರ್ಥ ಎನ್ನುತ್ತೇನೆ. ಸರಿಯಾದ ಕೆಲಸಗಳನ್ನು ಮಾಡುವುದು ನೈತಿಕತೆ, ಸ್ವರ್ಗಕ್ಕೊಂದು ಮಾರ್ಗ ಅಥವಾ ಸಾಮಾಜಿಕ ಅನುಮೋದನೆಯ ಬಗ್ಗೆ ಅಲ್ಲ. ಸರಿಯಾದ ಕೆಲಸಗಳನ್ನು ಮಾಡುವುದು ಒಬ್ಬರ ಜೀವನದಲ್ಲಿ ಗರಿಷ್ಠ ಫಲಿತಾಂಶಗಳನ್ನು ನೀಡುವುದರ ಬಗ್ಗೆ. ಮತ್ತು ಬೇರೆ ಬೇರೆ ಜನರು ಅದನ್ನು ಬೇರೆ ಬೇರೆ ರೀತಿಯಲ್ಲಿ ನೋಡುತ್ತಾರೆ. ಆದರೆ ಅಂತಿಮವಾಗಿ, ಜೀವನವು ಯಾವ ನಿಯಮಗಳಿಂದ ನಿಯಂತ್ರಿಸಲ್ಪಡುತ್ತಿದೆ ಎಂಬುದನ್ನು ನೀವು ಕಂಡುಹಿಡಿಯದ ಹೊರತು, ನೀವು ನಿಮ್ಮಿಂದ ಸಾಧ್ಯವಾಗುವಷ್ಟೂ ಪರಿಣಾಮಕಾರಿಯಾಗಿರುವುದಿಲ್ಲ.
ಮೊದಲ ನೋಟದಲ್ಲಿ, ಸುಳ್ಳು ಸಂಗತಿಗಳೂ ಸಹ ಫಲಿತಾಂಶಗಳನ್ನು ನೀಡುತ್ತಿದೆ ಎಂದು ತೋರುತ್ತದೆ. ಒಮ್ಮೆ ಎರಡು ಕಾರುಗಳು ಒಂದಕ್ಕೊಂದು ಅಪ್ಪಳಿಸಿದವು. ಒಂದು ಕಾರನ್ನು ವೈದ್ಯ ಓಡಿಸುತ್ತಿದ್ದನು, ಮತ್ತೊಂದನ್ನು ವಕೀಲ ಓಡಿಸುತ್ತಿದ್ದನು. ಅಪಘಾತದ ನಂತರ, ಅವರು ಕಾರುಗಳಿಂದ ಹೇಗೋ ಹೊರಬಂದರು. ವಕೀಲ ತನ್ನ ಕಾರಿನಿಂದ ವಿಸ್ಕಿಯ ಬಾಟಲಿಯನ್ನು ಹೊರತೆಗೆದು, “ದೊಡ್ಡ ಅಪಘಾತ ಸಂಭವಿಸಿದ ಹೊರತಾಗಿಯೂ ನಾವಿಬ್ಬರೂ ಗಾಯಗೊಂಡಿಲ್ಲ. ಬನ್ನಿ ಸಂಭ್ರಮಿಸೋಣ! ” ಎಂದು ವೈನ್ ಬಾಟಲಿಯನ್ನು ಡಾಕ್ಟರ್ ಗೆ ಕೊಟ್ಟ. ಅಪಘಾತದಿಂದ ಸ್ವಲ್ಪ ನಡುಗಿ ಹೋಗಿದ್ದ ವೈದ್ಯ ಬಾಟಲಿಯನ್ನು ಮೇಲೆತ್ತಿ ಗಟಗಟನೆ ಕುಡಿದು, ಉಳಿದುದನ್ನು ವಕೀಲನಿಗೆ ನೀಡಿದ. ವಕೀಲ ಅದನ್ನು ಮತ್ತೆ ಕಾರಿನಲ್ಲಿ ಇಟ್ಟುಕೊಂಡ. “ನೀನು ಕುಡಿಯುವುದಿಲ್ಲವೇ?” ಎಂದು ವೈದ್ಯ ಕೇಳಲು. ವಕೀಲ, "ಪೊಲೀಸರು ಬಂದು ಹೋದ ನಂತರ." ಎಂದ.
ಕೆಲವೊಮ್ಮೆ, ಕುತಂತ್ರಗಳು ಸರಿಯಾಗಿಯೇ ಕೆಲಸ ಮಾಡುತ್ತವೆ. ಆದರೆ ನೀವು ಈ ರೀತಿಯ ಕುತಂತ್ರ ಕೆಲಸಗಳನ್ನು ನಿಯಮಿತವಾಗಿ ಮಂದುವರೆಸುತ್ತಾ ಹೋದರೆ, ಇತರರು ಅದಕ್ಕನಗುಣವಾಗಿ ಏನು ಮಾಡಬೇಕೆಂದು ಅರಿಯುತ್ತಾರೆ, ಮತ್ತು ಜೀವನವು ಕೂಡಾ ನಿಮ್ಮೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಅರಿತುಕೊಳ್ಳುತ್ತದೆ. ನೀವು ಜೀವನವನ್ನು ನಿಯಂತ್ರಿಸುವ ನಿಯಮಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ, ಜೀವನದ ಪ್ರಕ್ರಿಯೆಯಿಂದ ನೀವು ಏಕರೂಪವಾಗಿ ಆಕ್ರಮಣಕ್ಕೊಳಗಾಗುತ್ತೀರಿ. ಹೆಚ್ಚಿನ ಜನರಿಗೆ, ಜೀವನದಲ್ಲಿ ಯಾವುದೇ ದೊಡ್ಡ ಅನಾಹುತಗಳು ಸಂಭವಿಸಿಲ್ಲ. ಹೊರಗಡೆಯಿಂದ ಜೀವನ ಅವರಿಗೆ ದಯೆ ತೋರಿರಬಹುದು, ಆದರೆ ಕೊನೆಯಲ್ಲಿ, ಅವರನ್ನು ಒಳಗಿನಿಂದ ಬಗ್ಗುಬಡಿಯುತ್ತದೆ. ಜೀವನವನ್ನು ನಿಯಂತ್ರಿಸುವ ನಿಯಗಳೊಂದಿಗೆ ಹೊಂದಾಣಿಕೆಯ ಕೊರತೆಯಿಂದ ಇದು ಸಂಭವಿಸುವುತ್ತದೆಯೇ ಹೊರತು ಬೇರಾವ ಕಾರಣಕ್ಕೂ ಅಲ್ಲ. ಪರಿಣಾಮವಾಗಿ, ಘರ್ಷಣೆ ಏರ್ಪಡುತ್ತದೆ. ನಿಮ್ಮೊಳಗಿನ ಘರ್ಷಣೆಯಿಂದಾಗಿಯೇ, ನೋವು, ಸಂಕಟ, ಆತಂಕ, ಉದ್ವೇಗ, ಒತ್ತಡ, ದುಃಖ, ಹುಚ್ಚು ಇಂತವುಗಳು ಇರುತ್ತದೆ. ಘರ್ಷಣೆಯ ಪ್ರಮಾಣವು ಎಷ್ಟರ ಮಟ್ಟಿಗೆ ಇರುತ್ತದೆಯೋ ಅಷ್ಟರವರಗೂ ನೀವು ಜೋಲು ಮುಖ ಹೊಂದಿರುತ್ತೀರಿ. ನಿಮ್ಮಲ್ಲಿ ಯಾವುದೇ ರೀತಿಯ ಘರ್ಷಣೆ ಇಲ್ಲದಿದ್ದರೆ, ನಿಮ್ಮ ಮುಖವು ನಗುಮುಖವಾಗಿರುತ್ತದೆ.
ಮಾನವ ಕುಲಕ್ಕೆ ತೆರೆದಿರುವ ಎಲ್ಲಾ ಸಾಧ್ಯತೆಗಳು, ಪ್ರಕೃತಿಯು ಕಾರ್ಯನಿರ್ವಹಿಸುವ ನಿಯಮಗಳ ಒಂದು ನಿರ್ದಿಷ್ಟ ಚೌಕಟ್ಟಿನಿಂದಾಗಿ ಮಾತ್ರ ಸಾಧ್ಯವಾಗಿದೆ. ಅದು ಈ ರೀತಿ ಕಾರ್ಯನಿರ್ವಹಿಸುತ್ತಾ ಬಂದಿರುವುದರಿಂದಲೇ, ನೀವು ಮಾನವರೆನಿಸಿಕೊಂಡಿದ್ದೀರಿ. ಅದು ಬೇರೆಯದೇ ರೀತಿ ಕಾರ್ಯನಿರ್ವಹಿಸಿದ್ದರೆ, ನೀವೂ ಕೂಡ ಒಂದು ಪ್ರಾಣಿಯೋ ಅಥವಾ ಮರಗಳಂತೆಯೋ ಹುಟ್ಟುತ್ತಿದ್ದಿರಿ.
ಮಾನವ ವ್ಯವಸ್ಥೆಯು ತನ್ನಿಂದ ತಾನೇ ರೂಪುಗೊಂಡಿದ್ದು ಹೇಗೆ ಮತ್ತು ಏಕೆ ಎಂಬುದರ ಬಗ್ಗೆ ನೀವು ಗಮನ ಹರಿಸಿ ಅರ್ಥಮಾಡಿಕೊಂಡು, ಈ ನಿಯಮಗಳನ್ನು ಅನುಸರಿಸಿ ಮತ್ತು ಅವಕ್ಕೆ ಹೊಂದಿಕೊಂಡರೆ, ನಿಮ್ಮ ವ್ಯವಸ್ಥೆಯು ಕನಿಷ್ಠ ಪ್ರಮಾಣದ ಘರ್ಷಣೆಯೊಂದಿಗೆ ಕಾರ್ಯನಿರ್ವಹಿಸುತ್ತದೆ. ಯಾವುದೇ ಘರ್ಷಣೆ ಇಲ್ಲದಿದ್ದರೆ, ನೀವು ಶೋಚನೀಯ ಸ್ಥಿತಿ ಅಥವಾ ಒತ್ತಡಕ್ಕೆ ಒಳಗಾಗುವುದಿಲ್ಲ. ನೀವು ಪ್ರತಿದಿನವೂ ದುಃಖವನ್ನು ಉತ್ಪಾದಿಸುವುದಿಲ್ಲ. ನಿಮ್ಮ ವ್ಯವಸ್ಥೆಯನ್ನು ಹೇಗೆ ಹೊಂದಿಸುವುದು ಎಂದು ನಿಮಗೆ ತಿಳಿದಿಲ್ಲದಿದ್ದರೆ, ಕನಿಷ್ಠ ನೀವು ಅದನ್ನು ಅನುಗ್ರಹಕ್ಕೆ ಪಾತ್ರರಾಗುವ ಮೂಲಕ ನಯಗೊಳಿಸಬೇಕು. ನೀವು ಅದ್ಭುತವಾದ ಯಂತ್ರವನ್ನು ಹೊಂದಿದ್ದರೂ ಸಹ, ಅಗತ್ಯವಾದ ಕೀಲೆಣ್ಣೆ ಇಲ್ಲದೆ ಹೋದರೆ, ಅದು ಕರ್ಕಶ ಶಬ್ದಗಳನ್ನು ಮಾಡುತ್ತದೆ. ಅನುಗ್ರಹದ ಮುಖ್ಯತ್ವ ಇಲ್ಲಿ ಕಾಣುತ್ತದೆ. ನಿಮ್ಮ ಯಂತ್ರ ಇನ್ನೂ ಸರಿಯಾಗಿ ಹೊಂದಿಸಿಕೊಂಡಿಲ್ಲ ಎಂದರೂ, ಅನುಗ್ರಹ ಅದರಿಂದಾಗುವ ಘರ್ಷಣೆಯಿಂದ ಮುಕ್ತಗೊಳಿಸುತ್ತದೆ.
ಸಂಪಾದಕರ ಟಿಪ್ಪಣಿ: ಈಶಾ ಹಠ ಯೋಗ ಕಾರ್ಯಕ್ರಮಗಳು ಶಾಸ್ತ್ರೀಯ ಹಠ ಯೋಗದ ವ್ಯಾಪಕ ಪರಿಶೋಧನೆಯಾಗಿದ್ದು, ಇದು ಇಂದು ಜಗತ್ತಿನಲ್ಲಿ ಹೆಚ್ಚಾಗಿ ಇಲ್ಲದಿರುವ ಈ ಪ್ರಾಚೀನ ವಿಜ್ಞಾನದ ವಿವಿಧ ಆಯಾಮಗಳನ್ನು ಪುನರುಜ್ಜೀವನಗೊಳಿಸುತ್ತದೆ. ಈ ಕಾರ್ಯಕ್ರಮಗಳು ಉಪ - ಯೋಗ, ಅಂಗಮರ್ದನ, ಸೂರ್ಯ ಕ್ರಿಯಾ, ಸೂರ್ಯ ಶಕ್ತಿ, ಯೋಗಾಸನ ಮತ್ತು ಭೂತ ಶುದ್ಧಿಯನ್ನು ಅನ್ವೇಷಿಸಲು ಸಾಟಿಯಿಲ್ಲದ ಅವಕಾಶವನ್ನು ಇತರ ಪ್ರಬಲ ಯೋಗಾಭ್ಯಾಸಗಳಲ್ಲಿ ನೀಡುತ್ತವೆ.