ಲೈಂಗಿಕತೆಯ ಬಗ್ಗೆ ಬಹಳವಾಗಿ ಯೋಚಿಸುವುದು ಸಾಮಾನ್ಯವೆ? – ಸದ್ಗುರುಗಳು ಉತ್ತರಿಸುತ್ತಾರೆ
ಲೈಂಗಿಕತೆಯ ಬಗೆಗಿನ ಯೋಚನೆಗಳು ಸದಾ ಕಾಲ ಮನಸ್ಸನ್ನು ಆಕ್ರಮಿಸಿಕೊಳ್ಳುವುದರ ಕುರಿತಾಗಿರುವ ಪ್ರಶ್ನೆಯೊಂದಕ್ಕೆ ಸದ್ಗುರುಗಳು ಉತ್ತರಿಸುತ್ತಾರೆ. ಮಾನವತೆಯು ಬಹುಪಾಲು ಭಾಗವು, ಒಂದೋ ಲೈಂಗಿಕತೆಯ ಹಿಂದೆ ಓಡುತ್ತಿದೆ ಅಥವಾ ಅದರಿಂದ ದೂರ ಇರುತ್ತಿದೆ – ಇದು ಹೀಗೇಕೆ ಎಂಬುದರ ಬಗ್ಗೆ ಮಾತನಾಡುತ್ತಾರೆ.
ಪ್ರಶ್ನೆ: ಲೈಂಗಿಕತೆ ಮತ್ತು ಲೈಂಗಿಕತೆಯ ಬಗ್ಗೆ ಯೋಚಿಸುತ್ತ, ನಾನು ನನ್ನ ಸಮಯ ಮತ್ತು ಶಕ್ತಿಯನ್ನು ತುಂಬಾ ಹಾಳುಮಾಡುತ್ತಿದ್ದೇನೆ ಎಂದು ತೋರುತ್ತದೆ. ನಾನೇನು ವಿಚಿತ್ರ ಸ್ವಭಾವದವನೋ ಎಂದು ನನಗೆ ತಿಳಿಯದು, ಆದರೆ, ಬಹಳಷ್ಟು ಜನರು ಹೀಗೆಯೇ ಯೋಚಿಸುತ್ತಾರೆಂದು ನನ್ನ ಭಾವನೆ. ಹೀಗಿದ್ದರೂ ಸಹ, ನನ್ನ ತಂದೆತಾಯಿಗಳು ಮತ್ತು ಹಿರಿಯರು ಇದನ್ನು ನಿಷಿದ್ಧ ವಿಷಯವೆಂದು ಪರಿಗಣಿಸುವಂತೆ ತೋರುತ್ತದೆ. ಇದರ ಕುರಿತು ನೀವೇನು ಹೇಳುತ್ತೀರಿ?
ಸದ್ಗುರು: ನಿಮಗೊಂದು ಜೋಕ್ ಹೇಳ್ತೀನಿ, ಕೇಳಿ. ಆರು ವರ್ಷದ ಬಾಲಕಿಯೊಬ್ಬಳು ಶಾಲೆಯಿಂದ ಬಂದು, ತನ್ನ ತಾಯಿಯನ್ನು ಕೇಳಿದಳು, “ಅಮ್ಮ, ನಾನು ಹುಟ್ಟಿದ್ದು ಹೇಗೆ?" ಇದನ್ನು ಕೇಳಿ ಆ ತಾಯಿಗೆ ಮುಜುಗರವಾಯಿತು. "ನಿನ್ನನ್ನು ಒಂದು ಕೊಕ್ಕರೆ ಬೀಳಿಸಿಹೋಯಿತು.” ಎಂದು ಹೇಳಿದಳು. ಬಾಲಕಿಯು, ಅದನ್ನು ತನ್ನ ಪುಸ್ತಕದಲ್ಲಿ ಬರೆದುಕೊಂಡಳು.ಅವಳು ಪುನಃ ಕೇಳಿದಳು, “ಅಮ್ಮ, ನೀನು ಹುಟ್ಟಿದ್ದು ಹೇಗೆ?"
“ನನ್ನನ್ನೂ ಕೂಡ ಒಂದು ಕೊಕ್ಕರೆ ಬೀಳಿಸಿಹೋಯಿತು.”
“ಅಮ್ಮ, ಅಜ್ಜಿ ಹುಟ್ಟಿದ್ದು ಹೇಗೆ?"
“ಅವಳನ್ನೂ ಕೂಡ ಒಂದು ಕೊಕ್ಕರೆ ಬೀಳಿಸಿಹೋಯಿತು.”
ಇದನ್ನೆಲ್ಲ ಕೇಳಿದ ಆ ಬಾಲಕಿಯು ಗಂಭೀರಳಾದಳು. ತನ್ನ ಕೋಣೆಯಲ್ಲಿ ಕುಳಿತು ಹೋಮ್-ವರ್ಕ್ ಪುಸ್ತಕದಲ್ಲಿ ಏನನ್ನೋ ಬರೆಯಲು ಆರಂಭಿಸಿದಳು. ಆ ತಾಯಿಗೆ ಇನ್ನೂ ಇರುಸುಮುರುಸಾಗುತ್ತಿತ್ತು, ಮಗಳು ತನ್ನ ಹೋಮ್-ವರ್ಕ್ ಮುಗಿಸಿದ ನಂತರ, ಹೋಗಿ ಪುಸ್ತಕವನ್ನು ಎತ್ತಿಕೊಂಡಳು. ಮಗಳ ಪ್ರಬಂಧವು ಕುಟುಂಬ ವೃಕ್ಷದ ಬಗ್ಗೆಯಾಗಿತ್ತು. ಅದರಲ್ಲಿ, “ಮೂರು ತಲೆಮಾರುಗಳ ಕಾಲ, ನನ್ನ ಕುಟುಂಬದಲ್ಲಿ ಯಾರೂ ಸ್ವಾಭಾವಿವಾಗಿ ಜನಿಸಿಲ್ಲ.” ಎಂದು ಬರೆದಿದ್ದಳು.
ಲೈಂಗಿಕತೆ ಸ್ವಾಭಾವಿಕವಾದುದು, ಲೈಂಗಿಕತೆಯು ಬಗ್ಗೆ ಯೋಚಿಸುವುದು ಆವಿಷ್ಕರಣಗೊಂಡಿದ್ದು
ಹಾಗಾಗಿ, ಅದರಲ್ಲಿ ವಿಚಿತ್ರ ಅಂತೇನಿಲ್ಲ. ನಿಮ್ಮ ಬುದ್ಧಿಯನ್ನು ನಿಮ್ಮ ಹಾರ್ಮೋನುಗಳು ಸ್ವಾಧೀನಪಡಿಸಿಕೊಂಡಿದೆಯೆಷ್ಟೆ. ಇದೊಂದು ಅನಿಯಂತ್ರಿತ ನಡುವಳಿಕೆಯಷ್ಟೆ. ನೀವು ಮಗುವಾಗಿದ್ದಾಗ, ಯಾರಿಗೆ ಯಾವ ಜನನಾಂಗಗಳಿವೆ ಎಂಬುದು ನಿಮಗೆ ಗಣ್ಯವಾಗಿರಲಿಲ್ಲ. ಆದರೆ, ಯಾವ ಕ್ಷಣದಲ್ಲಿ ನಿಮ್ಮ ಹಾರ್ಮೋನುಗಳು ನಿಮ್ಮೊಂದಿಗೆ ಆಟವಾಡಲು ಆರಂಭಿಸುತ್ತದೆಯೋ, ನಿಮಗೆ, ಅದನ್ನು ಬಿಟ್ಟು ಬೇರಾವುದನ್ನೂ ಯೋಚಿಸಲಾಗದು. ನಿಮ್ಮ ಸಮಸ್ತ ಬುದ್ಧಿಶಕ್ತಿಯು ಹಾರ್ಮೋನುಗಳ ಸ್ವಾಧೀನದಲ್ಲಿರುತ್ತದೆ.
ಲೈಂಗಿಕತೆ ಅನ್ನುವುದೊಂದು ಸ್ವಾಭಾವಿಕವಾದ ವಿಷಯ - ಅದು ಭೌತಿಕವಾದದ್ದು, ಅದು ದೇಹದಲ್ಲಿರುವಂತದ್ದು. ಆದರೆ, ಲೈಂಗಿಕತೆ ಅನ್ನುವುದು ನಿಮ್ಮಿಂದ ಆವಿಷ್ಕರಿಸಿ, ರಚಿಸಲ್ಪಟ್ಟಿದ್ದು. ಇದು ಮಾನಸಿಕವಾದದ್ದು. ಇಂದಿನ ದಿನಗಳಲ್ಲಿ ಇದು ಜಗತ್ತನ್ನು ವ್ಯಾಪಿಸುತ್ತಿದೆ ಮತ್ತು ಹಲವು ರೀತಿಯಲ್ಲಿ ಇದು ಶೋಚನೀಯವಾಗಿದೆ. ಯಾಕೆಂದರೆ, ಲೈಂಗಿಕತೆ ದೇಹದಲ್ಲಿದ್ದರೆ, ಅದರಿಂದ ತೊಂದರೆಯಿಲ್ಲ – ಅದರ ಸ್ವಾಭಾವಿಕ ಸ್ಥಾನ ಯಾವುದೋ, ಅದು ಅಲ್ಲಿಗೆ ಬಂದು ನಿಲ್ಲುತ್ತದೆ. ಯಾವ ಕ್ಷಣದಲ್ಲದು ನಿಮ್ಮ ಮನಸ್ಸನ್ನು ಪ್ರವೇಶಿಸುತ್ತದೋ, ಅದೊಂದು ವಿಕೃತಿಯಾಗುತ್ತದೆ. ನಿಮ್ಮ ಮನಸ್ಸಿನಂದಿಗೆ ಸೆಕ್ಸ್-ಗೆ ಯಾವ ವ್ಯವಹಾರವೂ ಇಲ್ಲ.
ಮನುಷ್ಯರ ಮನಸ್ಸಿನಲ್ಲಿ ಲೈಂಗಿಕತೆಯು ದೊಡ್ಡ ಪ್ರಶ್ನೆಯಾಗಿದ್ದರೂ, ನಿಜಸ್ಥಿತಿಯಲ್ಲಿ ನೋಡುವುದಾದರೆ ಅದೊಂದು ಬಹಳ ಚಿಕ್ಕ ಪ್ರಶ್ನೆ. ಭೌತಿಕ ಶರೀರದ ಚೌಕಟ್ಟನ್ನು ಮೀರಿ ಸ್ವಲ್ಪ ಮುಂದೆ ಹೋದರೆ, ಗಂಡು ಮತ್ತು ಹೆಣ್ಣು ಎನ್ನುವುದು ಇರುವುದಿಲ್ಲ. ಯಾರಾದರೂ ಗಂಡು ಮತ್ತು ಹೆಣ್ಣು ಆಗಿರುವುದು ಶರೀರದ ಮಟ್ಟದಲ್ಲಿ ಮಾತ್ರ. ಸಂತಾನೋತ್ಪತ್ತಿಗೆ ಅನುಕೂಲ ಮಾಡಿಕೊಟ್ಟು, ಮಾನವ ಜಾತಿಯನ್ನು ಮುಂದುವರೆಸುವ ಸಲುವಾಗಿ ಇವರಿಬ್ಬರಲ್ಲಿ ಒಂದು ಚಿಕ್ಕ ವ್ಯತ್ಯಾಸವಿದೆ. ಈ ವ್ಯತ್ಯಾಸಕ್ಕೆ ನೆರವಾಗಲು ಕೆಲವು ದೈಹಿಕ ಭಿನ್ನತೆಗಳಿವೆ. ಆದರೆ, ಇಬ್ಬರಿಗೂ ಅದೇ ಕಣ್ಣು, ಮೂಗು, ಬಾಯಿ – ಎಲ್ಲವೂ ಒಂದೇ – ಸಂತಾನೋತ್ಪತ್ತಿಯ ಜನನಾಂಗಗಳು ವಿಭಿನ್ನವಾಗಿರುತ್ತದೆಯಷ್ಟೆ.
ದೇಹದ ಈ ಚಿಕ್ಕ ಭಾಗಗಳಗೆ ನಾವೇಕೆ ನಮ್ಮ ಮನಸ್ಸಿನಲ್ಲಿ ಇಷ್ಟು ಪ್ರಾಮುಖ್ಯತೆಯನ್ನು ನೀಡಿದ್ದೇವೆ? ದೇಹದ ಯಾವುದಾದರೊಂದು ಭಾಗಕ್ಕೆ ಪ್ರಾಮುಖ್ಯತೆ ನೀಡಬೇಕು ಅಂತಿದ್ದರೆ, ಅದು ನಿಮ್ಮ ಮಿದುಳಿಗೆ ಕೊಡಬೇಕೇ ವಿನಃ ಜನನಾಂಗಗಳಲ್ಲ!
ಲೈಂಗಿಕತೆಯ ದೃಷ್ಟಿಕೋನಗಳು / ತತ್ವಗಳು
ಎಲ್ಲೋ ಒಂದು ಕಡೆ, ನಾವು ನಮ್ಮ ಜೈವಿಕ ಕ್ರಿಯೆಯನ್ನು ಸರಿಯಾಗಿ ಒಪ್ಪಿಕೊಳ್ಳದಿದ್ದ ಕಾರಣ ಅದು ಇಷ್ಟು ದೊಡ್ಡದಾಗಿದೆ. ಇದೊಂದನ್ನು ಬಿಟ್ಟು ಬೇರೆಲ್ಲವನ್ನು ಒಪ್ಪಿಕೊಂಡೆವು. ನಿಮ್ಮ ಜನನಾಂಗಗಳು ನಿಮ್ಮ ಕೈ, ಕಾಲು ಮತ್ತು ಉಳಿದವುಗಳಂತೆಯೇ ಇರುವ ಒಂದು ಅಂಗ. ಆದರೆ, ನೀವು ಅದಕ್ಕೆ ಬೇರೆಯೇ ಅರ್ಥವನ್ನು ಕೊಟ್ಟಿರಿ. ಇದು ಹೆಚ್ಚಾಗುತ್ತಿದಂತೆಯೆ, ಜನರ ಮನಸ್ಸಿನಲ್ಲಿ ಬಹುದೊಡ್ಡ ವಿಷಯವಾಯಿತು.
“ಇದು ತಪ್ಪು” ಎಂದು ಯಾರೋ ಹೇಳಿದ ಕಾರಣಕ್ಕಾಗಿ ಇದು ನಿಮ್ಮ ತಲೆಯೊಳಗೆ ಬಂದಿದೆ. ಇದು “ಕೆಟ್ಟ ವಿಷಯ” ವಾಗಿರುವುದರಿಂದ ನಿಮಗಿದನ್ನು ಬಿಟ್ಟಿರಲಾಗದಂತಾಗಿದೆ. “ಕೆಟ್ಟದ್ದು” ಅಂದುಕೊಳ್ಳುವ ಯಾವುದನ್ನೂ ನಿಮ್ಮಿಂದ ಬಿಡಲಿಕ್ಕಾಗುವುದಿಲ್ಲ. ಅದು ನಿಮ್ಮನ್ನು ಎಲ್ಲಡೆ ಹಿಂಬಾಲಿಸಿಕೊಂಡು ಬರುತ್ತದೆ, ದಯವಿಟ್ಟು, ಅದನ್ನು ಗಮನಿಸಿ.
ಯಾವುದು ಸರಳ ಹಾಗೂ ಮೂಲಭೂತವಾದದ್ದೋ, ಅದನ್ನು ನಾವು ಸರಿ ಮತ್ತು ತಪ್ಪುಗಳಾಗಿ ಮಾಡಿದ್ದೀವಿ. ಈ ತಪ್ಪನ್ನು ಬಡಮೇಲು ಮಾಡಲು ನೀವೊಂದು ದೃಷ್ಟಿಕೋನವನ್ನು ಕಂಡುಹಿಡಿಯ ಬಯಸುತ್ತೀರಿ. ಜನರ ಲೈಂಗಿಕತೆಯನ್ನು ಬೆಂಬಲಿಸುವುದಕ್ಕಾಗಿಯೇ, ಅನೇಕ ತತ್ವಗಳನ್ನು ಪ್ರಸ್ತಾಪಿಸಲಾಗುತ್ತಿದೆ. ಸೆಕ್ಸ್-ಗಾಗಿ ಇಷ್ಟೆಲ್ಲ ತತ್ವಗಳು ಯಾಕೆ ಬೇಕೆಂದು ಗೊತ್ತಿಲ್ಲ. ಇದು ಜೈವಿಕ ಕ್ರಿಯೆಯಷ್ಟೆ. ಇದನ್ನು ಜಟಿಲಗೊಳಿಸುವುದು ಅನಗತ್ಯ. ಇದನ್ನು ಜಟಿಲಗೊಳಿಸಿದರೆ, ನಿಮ್ಮ ಜೀವನದಲ್ಲಿ, ಇದು ಅನಗತ್ಯವಾಗಿರುವ ದೊಡ್ಡ ಭಾಗವಾಗುತ್ತದೆ.
ಅಸಂಬದ್ಧವಾದ ವಿಚಾರಗಳ ಕಾರಣದಿಂದಾಗಿ, ಒಂದೋ ನಾವು ಏನನ್ನಾದರೂ ಉತ್ಪ್ರೇಕ್ಷೆಗೊಳಿಸುತ್ತೇವೆ ಅಥವಾ ಅದನ್ನು ಅನಗತ್ಯವಾಗಿ ಕಡೆಗಾಣಿಸುತ್ತೇವೆ. ಆಧುನಿಕ ಮಾನವ ಸಮಾಜಗಳನ್ನು ನೋಡಿದಾಗ, ಬಹುಶಃ, ಶೇ. ೯೦% ಮಾನವ ಶಕ್ತಿಯು, ಒಂದೋ ಲೈಂಗಿಕತೆಯ ಬೆನ್ನಟ್ಟುವುದಕ್ಕೆ ಅಥವಾ ಅದರಿಂದ ದೂರ ಇರುವುದಕ್ಕೆ ವ್ಯಯವಾಗುತ್ತದೆ ಎಂದು ನನಗನಿಸುತ್ತದೆ. ಲೈಂಗಿಕತೆಗೆ ನಿಮ್ಮ ಜೀವನದಲ್ಲಿ ಒಂದು ಪಾತ್ರವಿದೆ. ಅದನ್ನೇನಾದರೂ ನೀವು ದೊಡ್ಡದಾಗಿ ಮಾಡಿದರೆ, ಮನಸ್ಸಿನಲ್ಲಿ ನೀವು ವಿಕೃತರಾಗುತ್ತೀರಿ. ಅದನ್ನೇನಾದರೂ ನಿರ್ನಾಮಗೊಳಿಸಲು ಯತ್ನಿಸಿದರೆ, ಮನಸ್ಸಿನಲ್ಲಿ ನೀವು ಇನ್ನೂ ಹೆಚ್ಚಾಗಿ ವಿಕೃತರಾಗುತ್ತೀರಿ.
ನಿಮ್ಮ ದೇಹದೊಂದಿಗೆ ನಿಮ್ಮನ್ನು ನೀವು ಹೆಚ್ಚಾಗಿ ಗುರುತಿಸಿಕೊಳ್ಳುತ್ತಿದಂತೆ, ಲೈಂಗಿಕತೆಯು ನಿಮಗೆ ಹೆಚ್ಚು ಮುಖ್ಯವಾಗುತ್ತದೆ. ಆ ಗುರುತಿಸುಕೊಳ್ಳುವಿಕೆಯು ಕಡಿಮೆಯಾದಂತೆ, ಲೈಂಗಿಕತೆಯ ಪ್ರಾಮುಖ್ಯತೆಯೂ ಕಡಿಮೆಯಾಗುತ್ತದೆ. ಭೌದ್ಧಿಕ ಸ್ತರದಲ್ಲಿ ಯಾರಾದರೂ ಸಕ್ರಿಯವಾಗಿರುವುದನ್ನು ನೀವು ನೋಡಿದ್ದರೆ, ಅವರಲ್ಲಿ ಲೈಂಗಿಕತೆಯ ಅಗತ್ಯವೂ ಕಡಿಮೆಯಾಗಿರುತ್ತದೆ. ಆದರೆ, ಬಹಳಷ್ಟು ಜನರಿಗೆ ಯಾವುದೇ ಭೌದ್ಧಿಕ ಅಮಲು ಹಾಗೂ ಮನಸ್ಸಿನ ಮಾಧುರ್ಯ ತಿಳಿದಿಲ್ಲ; ಭಾವನೆಗಳ ಮಾಧುರ್ಯ ತಿಳಿದಿಲ್ಲ; ಶಕ್ತಿಯ ಮಾಧುರ್ಯವಂತೂ ತಿಳಿದಿರುವ ಪ್ರಶ್ನೆಯೇ ಇಲ್ಲ. ಅವರಿಗೆ ಅಮಲೇರಿಸುವ ಒಂದೇ ವಿಷಯವೆಂದರೆ, ಲೈಂಗಿಕತೆ. ದೇಹದ ಆ ಸಣ್ಣ ಪ್ರಮಾಣದ ಮಾಧುರ್ಯ – ಅವರ ಜೀವನದ ಏಕತಾನತೆಯಿಂದ ಒಂದು ಚಿಕ್ಕ ವಿರಾಮ ಕೊಡುವಂತಹದು, ಇದೊಂದೇ.
ಲೈ೦ಗಿಕ ಕ್ರಿಯೆಗಿ೦ತಲೂ ಹೆಚ್ಚಿನ ಪರಾಕಾಷ್ಠೆ
ನೀವು ಚುರುಕಾಗಿದ್ದು, ನಿಮ್ಮನ್ನು ಅಥವಾ ನಿಮ್ಮ ಸುತ್ತಲಿರುವ ಜನರನ್ನು ಗಮನಿಸಿ, ನಿಮ್ಮಲ್ಲಿ ಅಥವಾ ಬೇರೆಯವರಲ್ಲಿ ದೈಹಿಕ ಶಿಸ್ತು ಇಲ್ಲದಿರುವುದನ್ನು ನೀವು ಕಂಡರೆ, ಅವರು ಉತ್ಕಟವಾಗಿ ಸಂತೋಷದಿಂದಿರಲು ಪ್ರಯತ್ನಿಸುತ್ತಿರುವುದನ್ನು ನೀವು ನೋಡುತ್ತೀರಿ. ಆದರೆ, ಯಾವುದೇ ಸಂತೋಷವು ಉಳಿದಿರುವುದಿಲ್ಲ. ನೀವು ಹೆಚ್ಚು ಸಂತೋಷಭರಿತವಾಗಿದ್ದರೆ, ಸಂಭೋಗಸುಖದ ಅಗತ್ಯವು ನಿಮ್ಮ ಜೀವನದಲ್ಲಿ ಕಡಿಮೆಯಾಗುತ್ತದೆ. ನೀವು ಸಂತೋಷಭರಿತವಾಗಿಲ್ಲದಿದ್ದರೆ, ಯಾವಾಗಲೂ ನಿಲ್ಲದ ಚಟುವಟಿಕೆಗಳು ಇರುತ್ತವೆ – ಲೈಂಗಿಕತೆಯೂ ಅದರಲ್ಲೊಂದು. ನಮ್ಮ ಅಸ್ತಿತ್ವಕ್ಕೆ ಕಾರಣವಾಗಿರುವ ಮೂಲಭೂತವಾದ ಕ್ರಿಯೆಯನ್ನು ಕುರಿತಾಗಿ ನಾನು ಮಾತನಾಡುತ್ತಿಲ್ಲ. ನಾನು ಅದರ ವಿರುದ್ಧವಾಗಿ ಮಾತನಾಡುತ್ತಿಲ್ಲ, ಆದರೆ, ನಿಮ್ಮ ತಲೆಯಿಂದ ಅದನ್ನು ತೆಗೆದು ಹಾಕಲೇಬೇಕು.
ಜನರು ಈ ರೀತಿಯಾಗಿ ಹೇಳುವುದನ್ನು ನಾನು ಕೇಳಿದ್ದೇನೆ – “ಲೈಂಗಿಕತೆಯನ್ನು ಬಿಟ್ಟರೆ ಉತ್ತಮವಾಗಿರುವುದು ಇದೇ.” ಲೈಂಗಿಕತೆ ಅತ್ಯತ್ತಮವಾದ ವಿಷಯವಲ್ಲ. ಜಗತ್ತಿನಲ್ಲಿ ಅದು ಅತ್ಯಂತ ಜನಪ್ರಿಯ ವಿಷಯವಷ್ಟೆ, ಆದರೆ ಅದೇನು ಅತ್ಯತ್ತಮವಾದ ವಿಷಯವಲ್ಲ. ಜೀವನದ ಬೇರೆ ಆಯಾಮಗಳ ರುಚಿ ನೋಡಿದ್ದರೆ, ನೀವಿದನ್ನು ಅತ್ಯತ್ತಮವೆಂದು ಪರಿಗಣಿಸುತ್ತಿರಲಿಲ್ಲ. ನೀವು ಚಿಕ್ಕವರಿದ್ದಾಗ, ಕೆಲ ವಿಷಯಗಳು ನಿಮ್ಮನ್ನು ಬಹಳ ರೋಮಾಂಚನಗೊಳಿಸುತ್ತಿತ್ತು, ಆದರೆ, ದೊಡ್ಡವರಾಗುತ್ತಿದಂತೆ ಅದನ್ನು ನೀವು ಪ್ರಯತ್ನವಿಲ್ಲದೆಯೆ ಬಿಟ್ಟುಬಿಟ್ಟಿರಿ. ಸೆಕ್ಸ್ ಕೂಡ ಹಾಗೆ ಬಿದ್ದುಹೋಗಬೇಕು.
ನಿಮ್ಮ ಶಕ್ತಿಗಳು ಹೆಚ್ಚು ಸ್ಥಾಪಿತ ಹಾಗೂ ಸೂಕ್ಷ್ಮವಾಗುತ್ತಿದ್ದಂತೆ, ಅದು ಹಾಗೆಯೇ ಸುಂದರವಾಗುತ್ತದೆ – ನಿಮಗೆ ಬೇರೊಂದು ದೇಹದ ಜೊತೆ ಏನನ್ನೂ ಮಾಡುವ ಬಯಕೆಯಿರುವುದಿಲ್ಲ. ಅಲ್ಲೆ ನಿಮ್ಮಷ್ಟಕ್ಕೆ ಕುಳಿತಿರುವುದು ಲೈಂಗಿಕತೆಗಿಂತ ಹೆಚ್ಚಾದ ಉನ್ಮಾದತೆಯ ಪರಾಕಾಷ್ಠೆಯಾಗಿರುತ್ತದೆ. ನೀವೆಲ್ಲಿದ್ದರೂ, ಎಲ್ಲಾ ಸಮಯದಲ್ಲಿಯೂ, ಇದೊಂದು ಜೀವಂತ ವಾಸ್ತವತೆಯಾಗುತ್ತಿದಂತೆ, ಲೈಂಗಿಕತೆ ನಿಮ್ಮ ಜೀವನದಿಂದ ಕಣ್ಮರೆಯಾಗುತ್ತದೆ; ನೀವು ಅಸಮರ್ಥರಾಗಿದ್ದೀರಿ ಎಂದೋ ಅಥವಾ ನೀವದನ್ನು ತಪ್ಪು / ಅನೈತಿಕವೆಂದು ಭಾವಿಸಿದ್ದೀರೋ, ಆ ಕಾರಣಕ್ಕಾಗಲ್ಲ – ಬೇರೆ ಏನನ್ನೋ ಅಥವಾ ಬೇರೆ ಯಾರನ್ನೋ ಹಚ್ಚಿಕೊಂಡು, ಅದೇನೋ ದೊಡ್ಡದು ಎಂದೆಣಿಸುವುದು ಬಾಲಿಶವಾಗಿ ಕಾಣುವ ಕಾರಣಕ್ಕಾಗಿ.
ಲೈಂಗಿಕತೆಯು ಸರಿಯಾದದ್ದೇ, ಅದರಲ್ಲಿ ಸರಿ ತಪ್ಪು ಎಂದೇನು ಇಲ್ಲ, ಆದರೆ, ಜೀವನದ ಮೂಲಭೂತ ಅಂಶವಾಗಿದೆ, ಅಷ್ಟೆ. ಅದು ನಿಮ್ಮ ದೇಹದಲ್ಲಿದ್ದರೆ ಪರವಾಗಿಲ್ಲ, ಆದರೆ, ಅದು ನಿಮ್ಮ ತಲೆಯಲ್ಲಿದ್ದರೆ, ಅದು ತಪ್ಪಾದ ಸ್ಥಳದಲ್ಲಿದೆ. ಅದು ತಪ್ಪಾದ ಸ್ಥಳದಲ್ಲಿದ್ದರೆ, ನಿಮ್ಮ ಜೀವನವು ಅವ್ಯವಸ್ಥೆಯಾಗುತ್ತದೆ.
ಸಂಪಾದಕರ ಟಿಪ್ಪಣಿ: ನೀವು ಯಾವುದಾದರು ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.