ಮೂಲಾಧರ ಚಕ್ರ - ಅತಿ ಮುಖ್ಯವಾದ ಚಕ್ರ
ಆಧ್ಯಾತ್ಮಿಕತೆಯಲ್ಲಿ ಮುಳುಗಿರುವ ಹೊಸ ಪೀಳಿಗೆಯ ಜನರು, ಯಾವಾಗಲೂ ಅನಾಹತ, ಸಹಸ್ರಾರ ಹಾಗೂ ಆಜ್ಞಾಚಕ್ರಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ಕೆಳಸ್ತರದಲ್ಲಿರುವ (ಕೆಳಗಿರುವ) ಮೂಲಾಧಾರ ಚಕ್ರ? ಇದು ಮುಖ್ಯವಾದುದಲ್ಲವೇ? ಸಾಮಾನ್ಯವಾಗಿ ಕಡೆಗಣಿಸಲ್ಪಡುವ ಈ ಚಕ್ರವು ಸಾಧಕರಿಗೆ ಏಕೆ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ ಎಂದು ಸದ್ಗುರುಗಳು ವಿವರಿಸುತ್ತಾರೆ.
ಸದ್ಗುರು: ಗರ್ಭಧಾರಣೆಯಾದ ನಂತರ, ನೀವು ಮಾನವ ದೇಹವನ್ನು ನೋಡಿದರೆ, ಅದು ಮಾಂಸದ ಒಂದು ಸಣ್ಣ ಚೆಂಡಷ್ಟೆ. ಆ ಮಾಂಸದ ಸಣ್ಣ ಚೆಂಡು ನಿಧಾನವಾಗಿ ಈಗಿರುವ ಸ್ಥಿತಿಗೆ ಬಂದಿದೆ. ಈ ನಿರ್ದಿಷ್ಟ ರೀತಿಯಲ್ಲಿ ತನ್ನನ್ನು ತಾನು ವ್ಯವಸ್ಥಿತಗೊಳಿಸಿಕೊಳ್ಳುವಂತೆ ಮಾಡಲು, ಪ್ರಾಣಾಮಯಕೋಶ ಅಥವಾ ಪ್ರಾಣಶಕ್ತಿ ಶರೀರ ಎಂದು ಕರೆಯಲಾಗುವ ಒಂದು ರೀತಿಯ ಸಾಫ್ಟ್ವೇರ್ (software) ಇದೆ. ಈ ಪ್ರಾಣ ಶಕ್ತಿಶರೀರವು ಮೊದಲು ರೂಪುಗೊಂಡು ನಂತರ ಭೌತಿಕ ಶರೀರವು ಅದರ ಮೇಲೆ ರಚನೆಯಾಗುತ್ತದೆ. ಪ್ರಾಣಶಕ್ತಿ ಶರೀರದಲ್ಲಿ ಏನಾದರೂ ವಿರೂಪಗಳಿದ್ದಲ್ಲಿ, ಅವುಗಳು ಭೌತಿಕ ಶರೀರದಲ್ಲಿ ಕೂಡ ಕಾಣಿಸಿಕೊಳ್ಳುತ್ತದೆ. ಈ ಕಾರಣದಿಂದಾಗಿಯೆ ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯು ಗರ್ಭಿಣಿಯಾಗಿದ್ದಾಗ, ದೇವಸ್ಥಾನಕ್ಕೆ ಹೋಗುವುದು ಮತ್ತು ಜನರಿಂದ ಆಶೀರ್ವಾದವನ್ನು ಪಡೆಯುವುದು - ಅವರು ಪ್ರಾಣಶಕ್ತಿ ಶರೀರದ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದರು. ಓರ್ವ ಗರ್ಭಿಣಿಯ ಜೀವ ತುಂಬಿಕೊಂಡ, ಉತ್ತಮವಾಗಿ ರಚನೆಗೊಂಡ ಪ್ರಾಣಶಕ್ತಿ ಶರೀರವನ್ನು ಹೊಂದಿದ್ದರೆ, ಅವಳು ಬಹಳ ಸಮರ್ಥವಾದ ಜೀವಿಗೆ ಜನ್ಮ ನೀಡುತ್ತಾಳೆ.
ಮೂಲಾಧಾರ – ಅಡಿಪಾಯವು ಮಹತ್ವಪೂರ್ಣವಾದುದು
ಮೂಲಾಧಾರ ಚಕ್ರವು ಪ್ರಾಣಶಕ್ತಿ ಶರೀರದ ಅಡಿಪಾಯವಾಗಿದೆ. ಇತ್ತೀಚಿನ ದಿನಗಳಲ್ಲಿ, ಇದು “ಕೆಳಸ್ತರದ ಚಕ್ರ” ಎಂದು ಜನರು ಭಾವಿಸಿ, ಅದರ ಮೇಲೆ ಕೆಲಸ ಮಾಡುವದೇನು ಮುಖ್ಯವಲ್ಲವೆಂದು ತಿಳಿದುಕೊಂಡಿದ್ದಾರೆ. ಅಡಿಪಾಯದ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲವೆಂದು ಯಾರು ಭಾವಿಸುತ್ತಾರೆಯೋ, ಅಂತಹವರು ನಿಜಕ್ಕೂ ಭ್ರಮೆಯಲ್ಲಿರುವರು .ತಳಹದಿಯು ಅತ್ಯಂತ ಮುಖ್ಯವಾದ ಸಂಗತಿಯಾಗಿದೆ. ಮೂಲಾಧಾರ ಚಕ್ರವು ಅತ್ಯಂತ ಮುಖ್ಯವಾದ ಸಂಗತಿಯಾಗಿದೆ. ನಾವು ಯೋಗದಲ್ಲಿ ನಿರತರಾಗಿದ್ದಾಗ, ಬೇರೆಲ್ಲಕ್ಕಿಂತಲೂ, ಮೂಲಾಧಾರದ ಮೇಲೆ ಹೆಚ್ಚು ಗಮನ ಹರಿಸುತ್ತೇವೆ– ನೀವು ಇದನ್ನು ಧೃಡಗೊಳಿಸಿದರೆ, ಉಳಿದಿದ್ದೆಲ್ಲವನ್ನು ರಚಿಸುವುದು ಸುಲಭ. ಕಟ್ಟಡದ ಅಡಿಪಾಯವೇ ಸಡಿಲವಾಗಿದ್ದು, ಅದನ್ನು ಹಿಡಿದಿಟ್ಟಿರಲು ಪ್ರಯತ್ನಿಸಿದರೆ, ಅದೊಂದು ದೈನಂದಿನ ಸರ್ಕಸ್ ಆಗಿರುತ್ತದೆ. ಮಾನವ ಜೀವಿತಕ್ಕೆ ಇದೇ ಆಗಿರುವುದು – ಹೆಚ್ಚಿನ ಜನರಿಗೆ, ಒಂದು ರೀತಿಯ ಸಮತೋಲನ ಹಾಗೂ ಆರೋಗ್ಯದಲ್ಲಿ ತಮ್ಮನ್ನು ತಾವು ಹಿಡಿದಿಟ್ಟುಕೊಳ್ಳುವುದು ಒಂದು ದೊಂಬರಾಟವೇ ಸರಿ. ಆದರೆ, ನಿಮ್ಮ ಮೂಲಾಧಾರವು ಸ್ಥಿರವಾಗಿದ್ದಲ್ಲಿ, ಜೀವನವೋ, ಮರಣವೋ, ನಿಮ್ಮ ಅಡಿಪಾಯ ಗಟ್ಟಿಯಾಗಿರುವುದರಿಂದ, ನೀವು ಗಟ್ಟಿಯಾಗಿರುವಿರಿ – ಬೇರೆಲ್ಲ ವಿಷಯಗಳನ್ನು ನಂತರ ಸರಿಪಡಿಸಬಹುದು. ಆದರೆ ಆದಿಪಾಯವೇ ಅಸ್ಥಿರವಾಗಿದ್ದಾಗ ಆತಂಕ ಸಹಜವೇ.
ಅನುಭವಗಳ ಹುಡುಕಾಟದ ಗಂಡಾಂತರಗಳು
ಅನುಗ್ರಹವು ತಾನೇ ಪ್ರಸರಣಗೊಳ್ಳಬೇಕಿದ್ದಲ್ಲಿ ನೀವು ತಕ್ಕುದಾದ ದೇಹವನ್ನು ಹೊಂದಿರಬೇಕು. ಯೋಗ್ಯವಾದ ದೇಹವನ್ನು ಹೊಂದಿಲ್ಲದಿದ್ದರೆ, ಅನುಗ್ರಹವು ನಿಮ್ಮ ಮೇಲೆ ಇಳಿದು ಬಂದರೆ, ನೀವು ಕರಗಿ ಕಪ್ಪಾಗಿ ಹೋಗುವಿರಿ. ಅನೇಕ ಜನರಿಗೆ ದೊಡ್ಡ ಅನುಭವಗಳು ಬೇಕು, ಆದರೆ, ಆ ಅನುಭವಗಳನ್ನು ಹೊಂದಲು ತಮ್ಮ ದೇಹವನ್ನು ರೂಪಾಂತರಿಸಲು ಅವರು ಸಿದ್ಧರಿರುವುದಿಲ್ಲ. ಹಾಗಾಗಿ, ಈ ಅನುಭವಗಳ ಹುಡುಕಾಟದ ಕಾರಣದಿಂದ ಅನೇಕರು ತಮ್ಮ ಮನಸ್ಸನ್ನು ಕಳೆದುಕೊಂಡಿದ್ದಾರೆ, ದೇಹವನ್ನು ಹಾಳು ಮಾಡಿಕೊಂಡಿದ್ದಾರೆ.
ಯೋಗದಲ್ಲಿ, ನೀವು ಅನುಭವವನ್ನು ಬೆನ್ನಟ್ಟುವುದಿಲ್ಲ, ನೀವು ಕೇವಲ ಅದಕ್ಕೆ ಸಿದ್ಧರಾಗುತ್ತೀರಿ. ಆದಿಯೋಗಿಯ ಮೊದಲ ಏಳು ಶಿಷ್ಯರಾದ ಸಪ್ತರ್ಷಿಗಳೊಂದಿಗೆ ಸಹ ಹೀಗೆಯೆ ಆಗಿತ್ತು. ಅವರುಗಳು ಕೇವಲ ತಯಾರಾಗುತ್ತಿದ್ದರು, ಏನನ್ನು ಅಪೇಕ್ಷಿಸಲಿಲ್ಲ. ಎಂಭತ್ತನಾಲ್ಕು ವರ್ಷಗಳ ಕಾಲ ಅವರು ಕೇವಲ ತಯಾರಾಗುತ್ತಿದ್ದರು. ಅವರೆಲ್ಲ ಇಷ್ಟು ಸರಿಯಾಗಿ ಸಿದ್ಧವಾಗಿದ್ದನ್ನು ನೋಡಿದ ಆದಿಯೋಗಿಗೆ ಏನನ್ನೂ ಹಿಡಿದಿಟ್ಟುಕೊಳ್ಳಲಾಗಲಿಲ್ಲ – ಎಲ್ಲವನ್ನೂ ಅವರಿಗೆ ಧಾರೆಯೆರೆದ. ಆದರೆ ಇಂದಿನ ಜಗತ್ತು ಈ ರೀತಿಯಾಗಿ ಮಾರ್ಪಟ್ಟಿದೆ - "ಸದ್ಗುರು, ನಾನು ಎರಡು ದಿನಗಳ ಕಾಲ ಇಲ್ಲಿದ್ದೇನೆ, ನೀವು ನನಗೆ ಜ್ಞಾನೋದಯವಾಗುವಂತೆ ಮಾಡಬಹುದೇ?”
ಯೋಗ ವಿಜ್ಞಾನವು ಎಂದಿಗೂ ಮೂಲಾಧಾರ ಚಕ್ರದಲ್ಲಿ ತನ್ನ ಗಮನವನ್ನು ಕೇಂದ್ರೀಕರಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಮಾತ್ರ ಸಾಧನೆ ಮಾಡಿರದ "ಯೋಗಿಗಳು" ಪುಸ್ತಕಗಳನ್ನು ಬರೆದು, ನೀವು ಮೇಲಿನ ಸ್ತರದ ಚಕ್ರಗಳ ಮೇಲೆ ಗಮನಹರಿಸಬೇಕು ಎಂದು ಹೇಳುತ್ತಾರೆ. ಈ, ಮೇಲೆ ಕೆಳಗಿನ ವ್ಯವಹಾರವೆಲ್ಲ ಪುಸ್ತಕಗಳನ್ನು ಓದುವ ಮನಸ್ಸಿನಲ್ಲಿ ಭದ್ರವಾಗಿ ನೆಲೆಗೊಂಡಿದೆ – ಆದರೆ ಜೀವನ ಹೀಗೆ ಕಾರ್ಯ ನಿರ್ವಹಿಸುವುದಿಲ್ಲ. ಕೆಲವು ವರ್ಷಗಳ ಹಿಂದೆ ನಾನು ಎರಡು-ಮೂರು ದಿನಗಳ ಹಠ ಯೋಗ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೆ. ಕೇವಲ ಆಸನಗಳನ್ನು ಮಾಡಿ, ಜನರು ಜೋರಾಗಿ ನಗುವುದು ಮತ್ತು ಅಳುವುದನ್ನು ಮಾಡುತ್ತಿದ್ದರು. ಅನೇಕ ಯೋಗಿಗಳು, ಕೆಲವು ಸರಳ ಭಂಗಿಗಳನ್ನು ಬಳಸಿ ತಮ್ಮ ಮಿತಿಗಳನ್ನು ಮುರಿಯುತ್ತಾರೆ. ಹಠ ಯೋಗವೆಂದರೆ ಇದೇ. ಹಠ ಯೋಗವೆಂದರೆ ಸಮತೋಲನ. ಸಮತೋಲನದ ಅರ್ಥ ಸ್ಥಿಮಿತತೆ ಎಂದೇನಲ್ಲ. ನಿಮ್ಮ ಜೀವನವು ಉತ್ಸಾಹಪೂರ್ಣವಾಗಿರಬೇಕಂದರೆ, ನಿಮ್ಮಲ್ಲಿ ಸ್ವಲ್ಪ ಮಟ್ಟದ ಉನ್ಮತ್ತತೆ ಇರಬೇಕು. ಆದರೆ, ಈ ಉನ್ಮಾದ ಅನಿಯಂತ್ರಿತವಾದರೆ, ನೀವು ಕೈ ತಪ್ಪಿ ಹೋದ ಹಾಗೆ.
ಸಮತೋಲನ ಎಂದಾಗ, ನಾವು ಸ್ಥಿಮಿತತೆಯ ಬಗ್ಗೆ ಮಾತನಾಡುತ್ತಿಲ್ಲ, ಸ್ಥಿಮಿತತೆ ಹಾಗೂ ಹುಚ್ಚುತನ - ಇವೆರಡರ ಮಧ್ಯೆ ಒಂದು ನೆಲೆ ಕಂಡುಕೊಂಡು, ಸಾಹಸದಿಂದ ಮುನ್ನುಗ್ಗುವ ಬಗ್ಗೆ ಮಾತನಾಡುತ್ತಿದ್ದೇವೆ. ಉನ್ಮತ್ತತೆ ಒಂದು ಸಾಹಸ. ನಿಯಂತ್ರಣದಲ್ಲಿರುವವರೆಗೂ ಇದೊಂದು ಅತ್ಯಂತ ಅದ್ಭುತವಾದ ವಿಷಯವಾಗಿದೆ. ನಿಯಂತ್ರಣ ಕಳೆದುಕೊಂಡರೆ ಇದು ಅಪಾಯಕರವಾಗುತ್ತದೆ. ಅಂತೆಯೇ, ಸ್ಥಿಮಿತತೆಯೂ ಸುಂದರವಾದದ್ದು ಆದರೆ ನೀವು ಸಂಪೂರ್ಣವಾಗಿ ಸ್ಥಿಮಿತರಾದರೆ, ನೀವು ಒಂದು ರೀತಿಯಲ್ಲಿ ಸತ್ತಂತೆ. ನಿಮ್ಮ ಮೂಲಾಧಾರವು ಉತ್ತಮವಾಗಿ ಸ್ಥಾಪಿತವಾಗಿದ್ದಲ್ಲಿ, ಯಾವುದೇ ಕ್ಷಣದಲ್ಲಿ, ನಿಮಗೆ ಬೇಕೆನಿಸ್ಸಿದ್ದಕ್ಕೆ, ಸಾಹಸದಿಂದ ಮುನ್ನುಗ್ಗುವ ಸಾಮರ್ಥ್ಯವನ್ನು ನೀವು ಹೊಂದಿರುತ್ತೀರಿ.
ಸಂಪಾದಕರ ಟಿಪ್ಪಣಿ: "Mystic’s Musings" ತಂತ್ರ, ಚಕ್ರ ಮತ್ತು ಕುಂಡಲಿನಿಯ ಕುರಿತಾದ ಸದ್ಗುರು ಅವರ ಹೆಚ್ಚಿನ ಒಳನೋಟಗಳನ್ನು ಒಳಗೊಂಡಿದೆ. ಉಚಿತ ನಮೂನೆಯನ್ನು ಓದಿ (pdf ಪ್ರತಿ) ಅಥವಾ E-book ಖರೀದಿಸಿ.