ಲೈಂಗಿಕತೆ: ಪವಿತ್ರವೋ ಅಥವಾ ಪಾಪವೋ?
ಮಾನವನ ಲೈಂಗಿಕತೆಯು ಪಾಪವೋ ಅಥವಾ ಪವಿತ್ರವಾದದ್ದೋ? ಲೈಂಗಿಕತೆಯು ಭೌತಿಕ ಅಸ್ತಿತ್ವದ ಅವಶ್ಯಕವಾದ ಭಾಗವಾಗಿರುವುದರಿಂದ, ಅದರಲ್ಲಿ ಸರಿ ಅಥವಾ ತಪ್ಪು ಎನ್ನುವುದಿಲ್ಲ, ಆದರೆ ಅದು ಸೀಮಿತ ಪಾತ್ರವನ್ನು ಹೊಂದಿದೆ ಎಂದು ಸದ್ಗುರುಗಳು ಹೇಳುತ್ತಾರೆ. ಲೈಂಗಿಕ ಪ್ರವೃತ್ತಿಯನ್ನು ಅಂಗೀಕರಿಸುವುದು ಮುಖ್ಯವಾಗಿದ್ದು, ಅದನ್ನು ಜವಾಬ್ದಾರಿಯುತವಾಗಿ ನಡೆಸಬೇಕಿರುವುದು ಕೂಡ ಅಷ್ಟೇ ಮುಖ್ಯ ಎಂದು ಸದ್ಗುರುಗಳು ವಿವರಿಸುತ್ತಾರೆ.
ನಮ್ಮ ಜೈವಿಕತೆಯು ಪಾಪವೆಂದು ಮತಧರ್ಮಗಳು ಮತ್ತು ನೀತಿಪಾಠದ ಶಿಕ್ಷಕರು ನಮಗೆ ಹೇಳಿರುವುದು ಬಹು ದೊಡ್ಡ ಸಮಸ್ಯೆಯಾಗಿದೆ. ಇದು ಕಾಲಾಂತರಗಳಿಂದ, ವಿವರಿಸಲಾಗದಂತಹ ಅಪರಾಧಿ ಭಾವ ಮತ್ತು ದುಃಖವನ್ನು ಸೃಷ್ಟಿಸಿದೆ. ನೀವು ಏನನ್ನಾದರೂ ನಿರಾಕರಿಸಿದರೆ, ಮನಸ್ಸಿನಲ್ಲದು ಅಸಾಮಾನ್ಯವಾದ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಈ ನಿಗ್ರಹವು, ಮಾನವನ ಮನಸ್ಸಿನ ಮೇಲೆ ಹೇಳಲಾರದಷ್ಟು ಹಾನಿಯನ್ನು ಉಂಟುಮಾಡಿದೆ.
ಅದೇ ಸಮಯದಲ್ಲಿ, ನಾವು ದೇಹದ ರಾಸಾಯನಿಕ ಪ್ರಕ್ರಿಯೆಗಳ ಕೈಗೊಂಬೆಗಳಷ್ಟೆಯೇ? ಖಂಡಿತವಾಗಿಯೂ ಇಲ್ಲ. ಮಾನವನ ಜೀವನದಲ್ಲಿ ಲೈಂಗಿಕತೆಗೆ ಪಾತ್ರವಿದೆ, ಆದರೆ ಅದು ಮೂಲಭೂತವಾಗಿ ಸೀಮಿತವಾದದ್ದು. ಮನಸ್ಸಿನ ಮೇಲೆ ಹೆಚ್ಚು ಗಮನವನ್ನು ಹರಿಸುವವರು, ಈ ಪ್ರಚೋದನೆಯ ಒತ್ತಡವು ಕಡಿಮೆಯಾಗುವುದನ್ನು ಕಂಡುಕೊಳ್ಳುತ್ತಾರೆ. ಒಮ್ಮೆ ನೀವು ಮನಸ್ಸಿಗಿಂತ ಹೆಚ್ಚು ಆಳವಾದ ಸಂತೋಷಗಳನ್ನು ಕಂಡುಕೊಂಡರೆ, ಲೈಂಗಿಕತೆಯು ಗಮನಾರ್ಹವಾಗಿ ಹಿಂದೆಸರಿಯುತ್ತದೆ .
ಲೈಂಗಿಕತೆಗೆ ಅದರ ಸ್ಥಾನವನ್ನು ಕಂಡುಕೊಳ್ಳಲು ಸಹಕರಿಸುವುದು
ಲೈಂಗಿಕತೆಯ ಸಾಂಪ್ರದಾಯಿಕ, ಧಾರ್ಮಿಕ ಭಯಾನಕತೆಗೆ ಪ್ರತಿಕ್ರಯಿಸುತ್ತಾ, ಪಾಶ್ಚಾತ್ಯರು, ಇತ್ತೀಚಿನ ದಿನಗಳಲ್ಲಿ, ತಮ್ಮ ದೇಹದೊಂದಿಗೆ ತಮ್ಮನ್ನು ತಾವು ಹೆಚ್ಚಾಗಿ ಗುರುತಿಸಿಕೊಳ್ಳುವುದರ ಕಡೆಗೆ ವಾಲುತ್ತಿದ್ದಾರೆ. ನಾವಿದನ್ನು ಅನುಕರಿಸುವುದು ದುರದೃಷ್ಟಕರವಾಗುತ್ತದೆ. ನಮ್ಮ ಮೂಲಭೂತವಾದ ಜೈವಿಕ ಕ್ರಿಯೆಯನ್ನು ಮೂಲೆಗುಂಪಾಗಿಸುವುದು ಬೇಡ, ಆದರೆ ಅದನ್ನು ವೈಭವೀಕರಿಸಬೇಕಾದ ಅಗತ್ಯವೂ ಇಲ್ಲ. ಬಾಲ್ಯದಿಂದ ಹದಿಹರೆಯದವರೆಗೂ ನಿಮ್ಮ ಬೆಳವಣಿಗೆಯನ್ನು ನೀವು ಗಮನಿಸಿದರೆ, ಅದು ನಿಮ್ಮ ಕುತೂಹಲವನ್ನು ಕೆರಳಿಸಬೇಕೇ ವಿನಃ ನಿಮ್ಮನ್ನು ನಿಯಂತ್ರಿಸಬಾರದು. ನಾವು ನಮ್ಮ ಹಾರ್ಮೋನುಗಳ ಗುಲಾಮರಲ್ಲವೆಂದು ನಮ್ಮ ಸ್ವಭಾವಜನ್ಯ ಬುದ್ಧಿಶಕ್ತಿಯು ನಮಲ್ಲಿ ಅರಿವನ್ನು ಮೂಡಿಸುತ್ತದೆ. ಪ್ರಾಣಿಗಳ ತರಹ, ಮನುಷ್ಯರು ಅವರ ರಾಸಾಯನಿಕ ಕ್ರಿಯೆಯ ಹಿಡಿತದಲ್ಲಿಲ್ಲ. ಮಾನವರ ಭಾವನಾತ್ಮಕ ಮತ್ತು ಬೌದ್ಧಿಕ ಸಹಭಾಗಿತ್ವದ ಅವಶ್ಯಕತೆಯು ಅವರ ದೈಹಿಕ ಅಗತ್ಯಕ್ಕಿಂತಲೂ ಹೆಚ್ಚು ಪ್ರಬಲವಾಗಿದೆ.
ದುರದೃಷ್ಟವಶಾತ್, ಹಾರ್ಮೋನುಗಳ ಪ್ರಕ್ರಿಯೆಗೆ ತಮ್ಮ ಬುದ್ಧಿಶಕ್ತಿಯನ್ನು ನಿಯಂತ್ರಿಸುವ ಅವಕಾಶವನ್ನು ನೀಡುವವರು, ತಮ್ಮ ಆಂತರಿಕ ಸಮತೋಲನವನ್ನು ಕಳೆದುಕೊಳ್ಳುತ್ತಾರೆ. ಅನೇಕ ಯುವಜನರು ಎಲ್ಲಿಯೋ ಓದಿದ, ಅಂತರ್ಜಾಲ ಅಥವಾ ಸಿನೆಮಾಗಳಲ್ಲಿ ನೋಡಿದಂತಹ ವಿಷಯಗಳಿಗೆ ತಮ್ಮ ಬುದ್ಧಿಶಕ್ತಿಯನ್ನು ಕೈಗೊಂಬೆಯಾಗಿಸಿಕೊಂಡಿರುವುದು ಕರುಣಾಜನಕವಾಗಿದೆ. ಇದರ ಪರಿಣಾಮವಾಗಿ, ಅವರು ಲೈಂಗಿಕತೆಗೆ, ಅವರ ಆಂತರಿಕ ಅರಿವು ಮತ್ತು ಸಮತೋಲನವನ್ನು ಆಧರಿಸಿ ಪ್ರತಿಕ್ರಯಿಸುವ ಬದಲು, ಒಂದು ನಿರ್ದಿಷ್ಟ ಪೂರ್ವನಿರ್ಧಾರಿತ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಜನರು ಲೈಂಗಿಕತೆಯ ಪರ ಮತ್ತು ವಿರೋಧವಾಗಿ ಮಾತನಾಡುತ್ತಲೇ ಇರುತ್ತಾರೆ. ಅವೆರಡರ ಅಗತ್ಯವೂ ಇಲ್ಲ. ದೇಹ ಮತ್ತು ಮನಸ್ಸಿನಲ್ಲಿ ಒಂದು ನಿರ್ದಿಷ್ಟ ಆಂತರಿಕ ಸಮಚಿತ್ತತೆಯನ್ನು ಬೆಳೆಸುವುದು ಮುಖ್ಯವಾಗಿದೆ. ಹೀಗಾದಾಗ, ಲೈಂಗಿಕತೆಯು ತನ್ನ ಸಹಜವಾದ ಸ್ಥಾನವನ್ನು ಕಂಡುಕೊಳ್ಳುತ್ತದೆ. ಲೈಂಗಿಕ ಪ್ರವೃತ್ತಿಯನ್ನು ಅಂಗೀಕರಿಸುವುದು ಮತ್ತದನ್ನು ಜವಾಬ್ದಾರಿಯುತವಾಗಿ ನಡೆಸುವುದು ಮುಖ್ಯ.
ಕೆಲವು ಸರಳವಾದ ಯೋಗಾಭ್ಯಾಸವನ್ನು ಚಿಕ್ಕ ವಯಸ್ಸಿನಿಂದಲೇ ಪ್ರಾರಂಭಿಸಿದರೆ, ಅವರಿಗೆ ಅದು ಬಹಳ ಪ್ರಯೋಜನಕಾರಿಯಾಗಬಲ್ಲದು. ಯೋಗವು ಯಾವುದೇ ಬೋಧನೆಗಿಂತ ಹೆಚ್ಚು ಪರಿಣಾಮಕಾರಿಯಾಗಿ ದೇಹ ಮತ್ತು ಮನಸ್ಸನ್ನು ಸಮನ್ವಯಗೊಳಿಸುತ್ತದೆ.
ಸಂಪಾದಕರ ಟಿಪ್ಪಣಿ: ನೀವು ಯಾವುದಾದರೂ ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವಾ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.
A version of this article was originally published in Speaking Tree.